ಅವಳಿ ಜಿಲ್ಲೆಯಲ್ಲಿ ಮಳೆ ಅಬ್ಬರಕ್ಕೆ ಅಪಾರ ನಷ್ಟ
87427 ಹೆಕ್ಟೇರ್ ಖುಷ್ಕಿ ಭೂಮಿಯಲ್ಲಿ ಬಿತ್ತನೆಯ ಗುರಿ ಹೊಂದಲಾಗಿತ್ತು.
Team Udayavani, Sep 15, 2022, 6:35 PM IST
ಕೋಲಾರ: ಜಿಲ್ಲೆಯಲ್ಲಿ ಮಳೆ ಹಾನಿಯಿಂದ ಈ ವರೆವಿಗೂ ಕೃಷಿ ಮತ್ತು ತೋಟಗಾರಿಕೆ ಸೇರಿದಂತೆ ಒಟ್ಟು 790 ಹೆಕ್ಟೇರ್ ಬೆಳೆ ಹಾನಿಯಾಗಿದ್ದು, ಬೆಳೆ ಹಾನಿ ಅಂದಾಜು ಸರ್ವೆ ಮುಂದುವರಿದಿದೆ. ಸದ್ಯಕ್ಕೆ ಮಳೆಯಿಂದ 662 ಹೆಕ್ಟೇರ್ ತೋಟಗಾರಿಕೆ ಬೆಳೆ ಮತ್ತು 128 ಹೆಕ್ಟೇರ್ ಕೃಷಿ ಬೆಳೆ ಹಾನಿಯಾಗಿರುವ ಮಾಹಿತಿ ಲಭ್ಯವಾಗಿದೆ. ಜಿಲ್ಲೆಯಲ್ಲಿ 2022 ಜ. 1ರಿಂದ ಸೆ. 13 ರವರೆಗೂ ಸರಾಸರಿ 413 ಮಿ.ಮೀ ಮಳೆಯಾಗಬೇಕಾಗಿತ್ತು. ಆದರೆ, ಗುರಿ ಮೀರಿ ಶೇ.116 ಹೆಚ್ಚುವರಿ ಪ್ರಮಾಣದಲ್ಲಿ 891 ಮಿ.ಮೀ ಮಳೆಯಾಗಿರುವುದರಿಂದ ಕೃಷಿ ಮತ್ತು ತೋಟಗಾರಿಕೆ ಬೆಳೆಗೆ ಸಾಕಷ್ಟು ಹಾನಿ ಸಂಭವಿಸಿದೆ.
ಶೇ.78.77 ಕೃಷಿ ಬಿತ್ತನೆ: ಜಿಲ್ಲೆಯಲ್ಲಿ ಒಟ್ಟು ಕೃಷಿ ಭೂಮಿಯಲ್ಲಿ ಶೇ.78.77 ಪ್ರಮಾಣದಲ್ಲಿ ಬಿತ್ತನೆ ಕಾರ್ಯ ನಡೆದಿತ್ತು. ಮುಂಗಾರು ಹಂಗಾಮಿನಲ್ಲಿ 7334 ಹೆಕ್ಟೇರ್ ನೀರಾವರಿ ಹಾಗೂ 87427 ಹೆಕ್ಟೇರ್ ಖುಷ್ಕಿ ಭೂಮಿಯಲ್ಲಿ ಬಿತ್ತನೆಯ ಗುರಿ ಹೊಂದಲಾಗಿತ್ತು. ಇಲ್ಲಿಯವರೆವಿಗೂ ನೀರಾವರಿ ಯಲ್ಲಿ 2289 ಹೆಕ್ಟೇರ್ ಹಾಗೂ ಖುಷ್ಕಿಯಲ್ಲಿ 72352 ಹೆಕ್ಟೇರ್ ಬಿತ್ತನೆ ಕಾರ್ಯವು ಪೂರ್ಣಗೊಂಡಿತ್ತು. ಆದರೆ, ಅಕಾಲಿಕ ಮಳೆಯಿಂದಾಗಿ ಸುಮಾರು 1 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಗೆ ಹಾನಿಯಾಗಿದೆ.
ಕೃಷಿ ಬೆಳೆ ಹಾನಿ: ಜಿಲ್ಲೆಯಲ್ಲಿ ಈವರೆವಿಗೂ 128.91 ಹೆಕ್ಟೇರ್ ಕೃಷಿ ಬೆಳೆ ಹಾನಿಯಾಗಿದೆ. ಈ ಪೈಕಿ ಜಿಲ್ಲೆಯ ಪ್ರಮುಖ ಬೆಳೆಯೆಂದು ಗುರುತಿಸಿರುವ ರಾಗಿ 118.11 ಹೆಕ್ಟೇರ್, ಕಳ್ಳೇಕಾಯಿ 4 ಹೆಕ್ಟೇರ್, ಸಾಮೆ 1.4 ಹೆಕ್ಟೇರ್ ಮತ್ತು ತೊಗರಿ 2 ಹೆಕ್ಟೇರ್ ಪ್ರದೇಶದಲ್ಲಿ ಹಾನಿಯಾಗಿದೆ.
ತೋಟಗಾರಿಕೆ ಹಾನಿ: ಜಿಲ್ಲೆಯ ಹೆಚ್ಚು ರೈತರು ತೋಟಗಾರಿಕೆ ಬೆಳೆಗಳ ಮೇಲೆ ಅವಲಂಬಿತರಾಗಿದ್ದಾರೆ. ಅದರಲ್ಲೂ ಪ್ರತಿ ಗ್ರಾಮದಲ್ಲಿ ಟೊಮೆಟೋವನ್ನು
ತೋಟಗಾರಿಕೆ ಬೆಳೆಯನ್ನಾಗಿ ಬೆಳೆಯಲಾಗುತ್ತದೆ. ಆಗಸ್ಟ್‌ನಲ್ಲಿ ಒಟ್ಟು 343.70 ಹೆಕ್ಟೇರ್ ಬೆಳೆ ನಷ್ಟವಾಗಿದೆ. ಈ ಪೈಕಿ 176 ಹೆಕ್ಟೇರ್ ಟೊಮೆಟೋ ಮತ್ತು 44.58 ಹೂ ಬೆಳೆಗಳಾಗಿತ್ತು. ಸೆಪ್ಟೆಂಬರ್‌ನಲ್ಲಿ 318 ಹೆಕ್ಟೇರ್ ತೋಟಗಾರಿಕೆ ಬೆಳೆ ನಾಶವಾಗಿದೆ. ಇದರಲ್ಲಿ ಬಹುತೇಕ ಟೊಮೆಟೋ ಮತ್ತು ತರಕಾರಿ ಬೆಳೆಗಳಾಗಿವೆ.
ಮನೆಗಳ ಹಾನಿ: ಜಿಲ್ಲೆಯಲ್ಲಿ ಒಟ್ಟು 46 ಮನೆಗಳು ಮಳೆಯಿಂದ ಹಾನಿಯಾಗಿವೆ. ಕೋಲಾರ ತಾಲೂಕಿನಲ್ಲಿ8,ಬಂಗಾರಪೇಟೆಯಲ್ಲಿ 3, ಕೆಜಿಎಫ್ನಲ್ಲಿ 1, ಮಾಲೂರಿನಲ್ಲಿ 33 ಮತ್ತು ಶ್ರೀನಿವಾಸಪುರದಲ್ಲಿ 1 ಮನೆ ಹಾನಿಗೀಡಾಗಿದೆ. ಒಟ್ಟು ಹಾನಿಯಾಗಿರುವ 46 ಮನೆಗಳ ಪೈಕಿ 2 ಮನೆ ಶೇ.25 ರಿಂದ 75 ಹಾನಿಯಾಗಿದ್ದರೆ, 44 ಮನೆಗಳು ಶೇ.15 ರಿಂದ 25 ರಷ್ಟು ಹಾನಿಯಾಗಿವೆ.
ಜಂಟಿ ಸರ್ವೆ: ಸೂಕ್ತ ಪರಿಹಾರ: ಮಳೆ ಹಾನಿ ಕುರಿತು ಕೃಷಿ, ತೋಟಗಾರಿಕೆ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಜಂಟಿ ಸರ್ವೆಕಾರ್ಯವನ್ನು ಜಿಲ್ಲೆಯಾದ್ಯಂತ ಮಾಡುತ್ತಿದ್ದಾರೆ. ಈವರೆವಿಗೂ ಜಂಟಿ ಸರ್ವೆ ಕಾರ್ಯದ ಪ್ರಕಾರ 570 ಹೆಕ್ಟೇರ್ ಬೆಳೆ ಹಾನಿಯನ್ನು ದಾಖಲು ಮಾಡಿಕೊಳ್ಳಲಾಗಿದೆ. ಸರಕಾರದ ಪೋರ್ಟಲ್ ನಲ್ಲಿ ಕಂದಾಯ ಇಲಾಖೆಯ ಗ್ರಾಮ ಲೆಕ್ಕಿಗರು ನೋಂದಣಿ ಮಾಡಿಸಿದ ರೈತರಿಗೆ ಹಂತ ಹಂತವಾಗಿ ಪರಿಹಾರವನ್ನು ಸರ್ಕಾರದ ಹಂತದಲ್ಲಿ ರೈತರ ಖಾತೆಗೆ ವರ್ಗಾಯಿಸಲಾಗುತ್ತಿದೆ. ಜಿಲ್ಲೆಯಲ್ಲಿ ಸೆ.13 ರವರೆಗೂ 22.57 ಲಕ್ಷ ರೂ. ಪರಿಹಾರ ತಲುಪಿಸಲಾಗಿದೆ.
ಕೋಲಾರ ಜಿಲ್ಲೆಗೆ ಕೇಂದ್ರ ಸರ್ಕಾರದಿಂದ ಎರಡು ಹಂತಗಳಲ್ಲಿ ಒಮ್ಮೆ 5 ಕೋಟಿ ರೂ., ಇನ್ನೊಂದು ಹಂತದಲ್ಲಿ 2 ಕೋಟಿ ರೂ.ಗಳನ್ನು ಆಗಸ್ಟ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ಈ ಹಣದಲ್ಲಿ ಮನೆ ಹಾನಿ, ಜೀವ ಹಾನಿ, ಪಶು ಪ್ರಾಣಿ ಹಾನಿ ಪರಿಹಾರವಾಗಿ ಡಿಸಿ ಕಚೇರಿಯಿಂದ ಪರಿಹಾರವನ್ನು ಬಿಡುಗಡೆ ಮಾಡಲಾಗುತ್ತಿದೆ.
ಸಚಿವ, ಶಾಸಕರ ನಿರ್ಲಕ್ಷ್ಯ
ಕೋಲಾರದಲ್ಲಿ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ಬೆಳೆಗಳ ಹಾನಿಯಾಗಿದ್ದರೂ, ಬೆಳೆ ಹಾನಿ ಸಮೀಕ್ಷೆ ಮಾಡುವ ಜವಾಬ್ದಾರಿಯನ್ನು ಕೇವಲ ಅಧಿಕಾರಿಗಳು- ರೈತರೇ ಹೊತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಇತ್ತೀಚಿನ ದಿನಗಳಲ್ಲಿ ಒಮ್ಮೆ ಮಾತ್ರ ಶಾಸ್ತ್ರಕ್ಕೆಂಬಂತೆ ಪತ್ರಕರ್ತರನ್ನು ಹೊರಗಿಟ್ಟು ರಹಸ್ಯವಾಗಿ ಕೆಡಿಪಿ ಸಭೆ ನಡೆಸಿ ಹೋದವರು ಯಾವುದೇ ಬೆಳೆ ಹಾನಿಯನ್ನು ಪರಿಶೀಲಿಸಿ ರೈತರಿಗೆ ಸಾಂತ್ವಾನ ಹೇಳುವ ಕೆಲಸ ಮಾಡಿಲ್ಲ. ಅಥವಾ ಅಧಿಕಾರಗಳ ಹಂತದಲ್ಲಿ ವಿಳಂಬವಾಗಿ ನಡೆಸುತ್ತಿರುವ ಜಂಟಿ ಸರ್ವೆ ಕಾರ್ಯವನ್ನು ಚುರುಕುಗೊಳಿಸುವ ಕೆಲಸವನ್ನು ಮಾಡಿಲ್ಲ. ಶಾಸಕರೂ ಈ ಬಗ್ಗೆ ಕ್ರಮ ವಹಿಸಿಲ್ಲ.
ಕೋಲಾರ ಜಿಲ್ಲೆಯಲ್ಲಿ ಮಳೆ ಹಾನಿಯಿಂದಾಗಿ ಆಗಿರುವ ನಷ್ಟವನ್ನು ಜಂಟಿ ಸರ್ವೆ ಮೂಲಕ ಅಂದಾಜು ಮಾಡಲಾಗುತ್ತಿದೆ. ಹಾನಿಯಾಗಿರುವ ರಸ್ತೆಗಳ ಗುಂಡಿ ಮುಚ್ಚಿಸಲು ಕ್ರಮವಹಿಸಲಾಗಿದೆ. ನಗರೋತ್ಥಾನ ಯೋಜನೆಯಡಿ ನಗರದ ರಸ್ತೆಗಳ ರಸ್ತೆ ಅಭಿವೃದ್ಧಿಗೆ ಟೆಂಡರ್ ಕರೆಯಲಾಗುತ್ತಿದೆ.
● ಮನಿರತ್ನ, ಜಿಲ್ಲಾ ಉಸ್ತುವಾರಿ ಸಚಿವ.
ಕೋಲಾರ
ಮಳೆಹಾನಿಯಿಂದ ನಷ್ಟಕ್ಕೀಡಾಗಿರುವ ರೈತರ ಕಣ್ಣೊರೆಸಲು ಅಧಿಕಾರಿಗಳು ಜಂಟಿ ಸರ್ವೆ ಸಮೀಕ್ಷೆಯನ್ನು ನಡೆಸುತ್ತಿದ್ದಾರೆ. ಹಿಂದಿನ ವರ್ಷದಲ್ಲಿಯೇ ಮಳೆ ಹಾನಿಯ ಪರಿಹಾರ ರೈತರ ಕೈ ಸೇರಿಲ್ಲ. ಈ ಬಾರಿಯೂ ಯಾವೊಬ್ಬ ರೈತರಿಗೂ ಹಣ ಬಿಡುಗಡೆಯಾಗಿಲ್ಲ.
● ಕೆ.ಶ್ರೀನಿವಾಸಗೌಡ, ಜಿಲ್ಲಾ ಸಂಚಾಲಕ, ರೈತ ಸಂಘ
ಕೋಲಾರ ಜಿಲ್ಲೆಯಲ್ಲಿ ಆ. 28 ರಿಂದ ಸೆ. 5 ರವರೆಗೂ 494 ರೈತರಿಗೆ ಸೇರಿದ 343.70 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ ಸಂಭವಿಸಿದೆ. ಸುಮಾರು 218.77 ಲಕ್ಷ ರೂ. ನಷ್ಟವಾಗಿದೆ ಎಂದು ಅಂದಾಜು ಮಾಡಲಾಗುತ್ತಿದೆ. ಹಾನಿ ಸಮೀಕ್ಷೆಗೆ ಜಂಟಿ ಸರ್ವೆ ನಡೆದಿದೆ.
● ವೆಂಕಟ್ ರಾಜಾ, ಡಿಸಿ ಕೋಲಾರ.
*ಕೆ.ಎಸ್.ಗಣೇಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.