ಅಧ್ಯಕ್ಷ ಮಾಡದಿದ್ರೆ ರಾಜೀನಾಮೆ ಕೊಡ್ತೇನೆ!
ಕಾಂಗ್ರೆಸ್ ತೃತೀಯ ರಂಗಕ್ಕೆ ಶಾಸಕ ಕೆ.ವೈ.ನಂಜೇಗೌಡ ಸಡ್ಡು
Team Udayavani, May 26, 2019, 1:27 PM IST
ಕೋಲಾರ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಿ ಕೆ.ಎಚ್.ಮುನಿಯಪ್ಪರನ್ನು ಸೋಲಿಸಿದ ಕಾಂಗ್ರೆಸ್ ಮತ್ತು ಜೆಡಿಎಸ್ ಗುಂಪಿಗೆ ಸಡ್ಡು ಹೊಡೆದು ಕೋಚಿಮುಲ್ ಅಧ್ಯಕ್ಷರಾಗಿ ಪುನರಾಯ್ಕೆಯಾಗುವಲ್ಲಿ ಮಾಲೂರು ಶಾಸಕ ಕೆ.ವೈ.ನಂಜೇಗೌಡ ಯಶಸ್ವಿಯಾಗಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ತಮ್ಮ ಬಣಕ್ಕೆ ಬೆಂಬಲ ವ್ಯಕ್ತಪಡಿಸದೆ ಕೆ.ಎಚ್.ಮುನಿಯಪ್ಪ ಪರವಾಗಿ ನಿಂತರೆಂಬ ಕಾರಣಕ್ಕೆ ಅವಿಭಜಿತ ಕೋಲಾರ ಜಿಲ್ಲೆಯ ಬಹುತೇಕ ಶಾಸಕ, ಮಾಜಿ ಶಾಸಕರು ಕೆ.ವೈ.ನಂಜೇಗೌಡರನ್ನು ಕೋಚಿಮುಲ್ ಅಧ್ಯಕ್ಷರನ್ನಾಗಿಸಲು ವಿರೋಧ ವ್ಯಕ್ತಪಡಿಸಿದ್ದರು.
ಲೋಕಸಭಾ ಚುನಾವಣೆಯಲ್ಲಿ ಕೆ.ಎಚ್.ಮುನಿಯಪ್ಪರಿಗೆ ಸೋಲುಂಟಾದ ಹಿನ್ನೆಲೆಯಲ್ಲಿ ಅವರನ್ನು ಕೋಚಿಮುಲ್ ಅಧ್ಯಕ್ಷ ಸ್ಥಾನದ ಚಟುವಟಿಕೆಯಲ್ಲಿ ಮೂಲೆಗುಂಪು ಮಾಡಿ, ತಮ್ಮ ಬಣದ ಒಬ್ಬರಿಗೆ ಕೋಚಿಮುಲ್ ಅಧ್ಯಕ್ಷ ಪಟ್ಟ ಕಟ್ಟಬೇಕೆಂಬುದು ತೃತೀಯ ಬಣದ ಲೆಕ್ಕಾಚಾರವಾಗಿತ್ತು.
ತೃತೀಯ ರಂಗದ ಮುಖಂಡರ ಮಾತಿಗೆ ಕಿವಿಗೊಟ್ಟಿದ್ದ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ಹಾಗೂ ಚಿಕ್ಕಬಳ್ಳಾಪುರ ಉಸ್ತುವಾರಿ ಸಚಿವ ಎನ್.ಎಚ್.ಶಿವಶಂಕರರೆಡ್ಡಿಯವರಿಗೂ ಮಾಲೂರು ಶಾಸಕ ಕೆ.ವೈ.ನಂಜೇಗೌಡರನ್ನು ಕೋಚಿಮುಲ್ ಅಧ್ಯಕ್ಷರಾಗಿಸುವ ಬಗ್ಗೆ ಅರೆ ಮನಸ್ಸಿತ್ತು. ಆದರೆ, ಅಧ್ಯಕ್ಷ ಚುನಾವಣೆಗೆ ಮುನ್ನಾ ದಿನವೇ ಬೆಂಗಳೂರಿನಲ್ಲಿ ನಡೆದ ರಾಜಕೀಯ ಚಟುವಟಿಕೆಗಳಲ್ಲಿ ಕೆ.ಎಚ್.ಮುನಿಯಪ್ಪರ ಗುಂಪು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ವರಿಷ್ಠರ ಜೊತೆಯಲ್ಲಿ ನಡೆಸಿದ ಮಾತುಕತೆಯಲ್ಲಿ ಕೆ.ವೈ.ನಂಜೇಗೌಡರನ್ನೇ ಆಯ್ಕೆ ಮಾಡಬೇಕೆಂಬ ನಿರ್ಧಾರವನ್ನು ತೆಗೆದುಕೊಳ್ಳುವಂತೆ ಮಾಡುವಲ್ಲಿ ಸಫಲವಾಗಿದ್ದರು.
ಆದರೂ, ಶನಿವಾರ ಕೋಲಾರದಲ್ಲಿ ನಡೆದ ಬೆಳವಣಿಗೆಯಲ್ಲಿ ಕೆ.ವೈ.ನಂಜೇಗೌಡರ ವಿರುದ್ಧ ಬಂಡಾಯದ ಅಭ್ಯರ್ಥಿಯಾಗಿ ತೃತೀಯ ರಂಗದ ಬೆಂಬಲದಿಂದ ವಡಗೂರು ಹರೀಶ್ ನಾಮಪತ್ರ ಸಲ್ಲಿಸುತ್ತಾರೆಂಬ ಬಗ್ಗೆ ವದಂತಿಗಳು ಹರಡಿದ್ದವು. ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಬಹುತೇಕ ಶಾಸಕ ಮಾಜಿ ಶಾಸಕರಿಗೆ ಕೆ.ವೈ.ನಂಜೇಗೌಡರ ಕೋಚಿಮುಲ್ ಅಧ್ಯಕ್ಷರಾಗುವ ಬಗ್ಗೆ ವಿರೋಧ ಇದ್ದಿದ್ದರಿಂದ ನಂಜೇಗೌಡರ ಆಯ್ಕೆ ಜಟಿಲವಾಗುತ್ತದೆಯೆಂಬ ಭಾವನೆ ಮೂಡಿತ್ತು.
ಈ ಬಾರಿ ಚಿಕ್ಕಬಳ್ಳಾಪುರ ಭಾಗದವರಿಗೆ ಕೋಚಿಮುಲ್ ಅಧ್ಯಕ್ಷ ಸ್ಥಾನ ನೀಡಬೇಕೆಂಬ ಬಗ್ಗೆಯೂ ಪ್ರಸ್ತಾಪನೆಗಳು ಕೇಳಿ ಬಂದಿದ್ದವು. ಇದಕ್ಕಾಗಿಯೇ ಕೆ.ಎಚ್.ಮುನಿಯಪ್ಪರನ್ನು ಸೋಲಿಸಿದ್ದ ತಂಡ ಭಾರೀ ಉತ್ಸಾಹದಿಂದಲೇ ಕೆ.ವೈ.ನಂಜೇಗೌಡರಿಗೆ ಕೋಚಿಮುಲ್ ಅಧ್ಯಕ್ಷ ಸ್ಥಾನದ ವಿಚಾರದಲ್ಲಿ ಮುಖಭಂಗ ಮಾಡಬೇಕೆಂದು ತಂತ್ರಗಾರಿಕೆ ನಡೆಸಿತ್ತು. ಇದಕ್ಕಾಗಿ ತೃತೀಯ ರಂಗದ ನಾಯಕರೊಬ್ಬರು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹಾಗೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಜೊತೆ ಮಾತುಕತೆ ನಡೆಸಿದ್ದರು. ಆದರೆ, ಲೋಕಸಭಾ ಚುನಾವಣೆಯ ಹೀನಾಯ ಸೋಲಿನ ನಂತರ ಸರ್ಕಾರ ಉಳಿಸಿಕೊಳ್ಳುವುದೇ ಸಮಸ್ಯೆಯಾಗಿದ್ದು, ಶಾಸಕರಾಗಿರುವ ಕೆ.ವೈ.ನಂಜೇಗೌಡರಿಗೆ ಅವಕಾಶ ತಪ್ಪಿಸುವುದು ಸಾಧ್ಯವೇ ಇಲ್ಲವೆಂಬ ಉತ್ತರ ಎರಡೂ ಪಕ್ಷದ ಹೈಕಮಾಂಡ್‌ನಿಂದ ಕೇಳಿ ಬಂದಿದೆ. ಈ ಕುರಿತು ಸಾಕಷ್ಟು ಒತ್ತಡ ಹೇರಿದ್ದರೂ ಪ್ರಯೋಜನವಾಗಿಲ್ಲ.
ರಾಜೀನಾಮೆ ಬೆದರಿಕೆ: ಇದರ ಜೊತೆಗೆ ಮಾಲೂರು ಶಾಸಕ ಕೆ.ವೈ.ನಂಜೇಗೌಡರು ಕೋಚಿಮುಲ್ನಲ್ಲಿ ಈಗಾಗಲೇ ಘೋಷಣೆಯಾಗಿರುವ ಮೆಗಾಡೇರಿ ಮತ್ತಿತರ ಯೋಜನೆಗಳನ್ನು ಪೂರ್ಣಗೊಳಿಸಲು ತಾವೇ ಅಧ್ಯಕ್ಷರಾಗಬೇಕು ಎಂದು ಪ್ರತಿಪಾ ದಿಸಿದ್ದಾರೆ. ಒಂದು ಹಂತದಲ್ಲಿ ತಮಗೆ ಕೋಚಿಮುಲ್ ಅಧ್ಯಕ್ಷರಾಗಲು ಅವಕಾಶ ಕಲ್ಪಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿಯೇ ಬೆದರಿಕೆ ಹಾಕಿದ್ದರೆನ್ನಲಾಗಿದೆ.
ಇವೆಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ಶಾಸಕರನ್ನು ಹಿಡಿದಿಟ್ಟುಕೊಳ್ಳುವುದು ಅಗತ್ಯವಾಗಿದ್ದರಿಂದ ತೃತೀಯ ರಂಗದ ಮುಖಂಡರ ಮಾತಿಗೆ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಮತ್ತು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಿವಿಗೊಟ್ಟಿಲ್ಲ. ಇದರಿಂದ ತೃತೀಯ ರಂಗವು ನಿರಾಸೆಗೊಳಗಾಗಿದೆ. ಅಂತಿಮವಾಗಿ ತೃತೀಯ ರಂಗದ ನಾಯಕರೊಬ್ಬರು ಕೋಲಾರದಲ್ಲಿ ಕಾಯುತ್ತಿದ್ದ ಮುಖಂಡರಿಗೆ ಕರೆ ದೂರವಾಣಿ ಮಾಡಿ ಈಗಾಗಲೇ ಲೋಕಸಭಾ ಚುನಾವಣೆಯಲ್ಲಿ ತಮ್ಮ ಮೇಲೆ ಸಾಕಷ್ಟು ಅಪವಾದಗಳ ಹೊರೆ ಬಿದ್ದಿದೆ. ಇಂತ ಸಮಯದಲ್ಲಿ ಶಾಸಕರಾಗಿರುವ ಕೆ.ವೈ.ನಂಜೇಗೌಡರನ್ನು ವಿರೋಧಿಸುವುದರಿಂದ ಮತ್ತಷ್ಟು ಸಮಸ್ಯೆಗಳು ಉದ್ಭವವಾಗಲಿದೆ. ಹೈಕಮಾಂಡ್ ನಿರ್ಧಾರದಂತೆ ಕೆ.ವೈ.ನಂಜೇಗೌಡರು ಅಧ್ಯಕ್ಷರಾಗಲು ಅವಕಾಶ ಕಲ್ಪಿಸುವುದಷ್ಟೇ ಉಳಿದಿರುವ ದಾರಿ ಎಂದಿದ್ದಾರೆ.ಇದಾದ ನಂತರ, ನಿರಾಸೆಗೆ ಮುಳುಗಿದ ತೃತೀಯ ರಂಗದ ಹಾಲಿ ಮಾಜಿ ಶಾಸಕರು, ಉಸ್ತುವಾರಿ ಸಚಿವರುಗಳು ಕೆ.ವೈ.ನಂಜೇಗೌಡರಿಗೆ ಜೈ ಎಂದಿದ್ದಾರೆ.ಇವೆಲ್ಲಾ ಬೆಳವಣಿಗೆಗಳ ನಂತರ ಕೆ.ವೈ.ನಂಜೇಗೌಡ ಒಬ್ಬರೇ ನಾಮಪತ್ರ ಸಲ್ಲಿಸಿದ್ದು, ಅವಿರೋಧ ಆಯ್ಕೆಯೆಂದು ಸಾರಲಾಯಿತು. ಕೆ.ವೈ.ನಂಜೇಗೌಡರೇ ಅಧ್ಯಕ್ಷರಾಗುತ್ತಾರೆಂಬ ಕಾರಣದಿಂದ ಕೋಚಿಮುಲ್ ಸಮೀಪ ಬೆಂಬಲಿಗರು ಜೈಕಾರಗಳನ್ನು ಕೂ ಗುತ್ತಾ ನಂಜೇಗೌಡರ ಪುನರಾಯ್ಕೆಯನ್ನು ಸ್ವಾಗತಿಸಿದರು.
● ಕೆ.ಎಸ್.ಗಣೇಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.