ಕೆಜಿಎಫ್: 68 ನರ್ಸಿಂಗ್ ವಿದ್ಯಾರ್ಥಿಗಳಿಗೆ ಸೋಂಕು
ಮೂರನೇ ದಿನವೂ 15 ಮಂದಿಗೆ ಸೋಂಕು; ಹೊರರಾಜ್ಯದ ವಿದ್ಯಾರ್ಥಿಗಳ ರ್‍ಯಾಂಡಂ ತಪಾಸಣೆ: ಡೀಸಿ ಸೆಲ್ವಮಣಿ
Team Udayavani, Sep 1, 2021, 4:16 PM IST
ಸಾಂದರ್ಭಿಕ ಚಿತ್ರ.
ಕೋಲಾರ: ಜಿಲ್ಲೆಗೆ ಹೊರ ರಾಜ್ಯಗಳಿಂದ ಆಗಮಿಸುತ್ತಿರುವ ನರ್ಸಿಂಗ್ ವಿದ್ಯಾರ್ಥಿಗಳನ್ನು ರ್‍ಯಾಂಡಮ್ ಆಗಿ ಕೋವಿಡ್ ಪರೀಕ್ಷೆಗೆ
ಒಳಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಹೇಳಿದರು.
ಜಿಲ್ಲೆಯ ಕೆಜಿಎಫ್ ನಲ್ಲಿ ಕೇರಳದಿಂದ ಬಂದಿರುವ ನರ್ಸಿಂಗ್ ವಿದ್ಯಾರ್ಥಿನಿಯರಲ್ಲಿ 68 ಮಂದಿಗೆ ಕೋವಿಡ್ ಪಾಸಿಟಿವ್ ಕಂಡು ಬಂದಿರುವ ಹಿನ್ನೆಲೆಯಲ್ಲಿ ಕೆಜಿಎಫ್ ಗೆ ತೆರಳಿ ಪರಿಶೀಲಿಸಿದ ನಂತರ ತಮ್ಮ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಕೆಜಿಎಫ್ ಗೆ ಕೇರಳದಿಂದ ಆಗಮಿಸಿರುವ ವಿದ್ಯಾರ್ಥಿಗಳ ಪೈಕಿ ಮೊದಲ ದಿನ ಎರಡು ಪಾಸಿಟಿವ್ ಪತ್ತೆಯಾಗಿತ್ತು. ಆನಂತರ ಎರಡು ಮತ್ತು ಮೂರನೇ ದಿನವೂ ತಲಾ 15 ಮಂದಿಗೆ ಸೋಂಕು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ವಿವಿಧ ಸಂಸ್ಥೆಗಳಿಗೆ ಆಗಮಿಸಿರುವ ವಿದ್ಯಾರ್ಥಿಗಳ ಮೇಲೂ ನಿಗಾ ಇಡಲು ನಿರ್ಧರಿಸಲಾಗಿದೆ ಎಂದು ವಿವರಿಸಿದರು.
ವರದಿಗಳ ಸಾಚಾತನ ಪರಿಶೀಲನೆ: ಕೇರಳ ದಿಂದ ಕೆಜಿಎಫ್ ಗೆ 250 ವಿದ್ಯಾರ್ಥಿಗಳು ಆಗಮಿಸಿದ್ದು, ಹೀಗೆ ವಾಪಸ್ ಬಂದವರಲ್ಲಿ 68 ಮಂದಿಗೆ ಪಾಸಿಟಿವ್ ಪತ್ತೆಯಾಗುವ ಸಾಧ್ಯತೆ ಇದೆ. ಎಲ್ಲಾ 250 ಮಂದಿಯೂ ಒಂದು ಡೋಸ್ ಲಸಿಕೆ ಪಡೆದವರು ಹಾಗೂ ಕೋವಿಡ್ ನೆಗೆಟಿವ್ ಪ್ರಮಾಣ ಪತ್ರ ತಂದವರೇ ಆಗಿದ್ದಾರೆ. ಆದರೂ, ಈಗ ಪಾಸಿಟಿವ್ ಬಂದಿರುವ ಹಿನ್ನೆಲೆಯಲ್ಲಿ ಲಸಿಕೆ ಪಡೆದಿರುವ ಹಾಗೂ ನೆಗೆಟಿವ್ ಪ್ರಮಾಣ ಪತ್ರಗಳ ಸಾಚಾತನವನ್ನು ಪರೀಕ್ಷಿಸಲಾಗುತ್ತಿದೆ ಎಂದು ಹೇಳಿದರು. ಈ ವರದಿ ತ್ವರಿತವಾಗಿ ತಮ್ಮ ಕೈಸೇರಿಸುವಂತೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದರು.
ಇದನ್ನೂ ಓದಿ:ಭಾರೀ ಮಳೆಗೆ ದೆಹಲಿ ತತ್ತರ; ಟ್ರಾಫಿಕ್ ಜಾಮ್ ನಿಂದ ವಾಹನ ಸವಾರರ ಪರದಾಟ
ಸಿಸಿ ಕ್ಯಾಮೆರಾ ಅಳವಡಿಕೆ: ಪಾಸಿಟಿವ್ ಪತ್ತೆಯಾಗಿರುವ ಸಂಸ್ಥೆಯನ್ನು ಸೀಲ್‌ಡೌನ್ ಮಾಡಲಾಗಿದೆ. ಪಾಸಿಟಿವ್ ಬಂದಿರುವ ಎಲ್ಲಾ
ವಿದ್ಯಾರ್ಥಿಗಳನ್ನು ಹಾಸ್ಟೆಲ್‌ನಲ್ಲಿಟ್ಟು, ಹಾಸ್ಟೆಲ್ ಗೆ ಸಿಸಿ ಕ್ಯಾಮೆರಾ ಅಳವಡಿಸಿ ಬಂದು ಹೋಗುವವರ ಮೇಲೆ ನಿಗಾ ಇಡಲು ಸೂಚಿಸಲಾಗಿದೆ
ಎಂದು ವಿವರಿಸಿದರು.
ಪ್ರವಾಸ ಇತಿಹಾಸ ಪರಿಶೀಲನೆ: ವಿದ್ಯಾರ್ಥಿಗಳು ಬಹುತೇಕ ಬಸ್‌ಗಳ ಮೂಲಕವೇ ಕೇರಳದಿಂದ ಬಂದಿದ್ದಾರೆಂಬ ಮಾಹಿತಿ ಇದೆ. ವಿದ್ಯಾರ್ಥಿ ಗಳು ಯಾವ್ಯಾವ ಬಸ್‌ಗಳಲ್ಲಿ ಬಂದರು. ಬಸ್‌ನಲ್ಲಿ ಬಂದಿರುವ ಇತರರು ಕೋಲಾರ ಜಿಲ್ಲೆಯ ಯಾವ ಭಾಗದಲ್ಲಿದ್ದಾರೆ. ಇತ್ಯಾದಿ ಮಾಹಿತಿಗಳ ಮೇಲೂ ನಿಗಾ ಇಟ್ಟು ಕೋವಿಡ್ ಜಿಲ್ಲೆಯಲ್ಲಿ ಹರಡದಂತೆ ಎಚ್ಚರ ವಹಿಸಲಾಗಿದೆ ಎಂದು ವಿವರಿಸಿದರು.
ಮುಳಬಾಗಿಲು ತಾಲೂಕಿನ ಕೋಳಿಫಾರಂ ಒಂದರಲ್ಲಿಯೂ ಕೆಲಸ ಮಾಡುತ್ತಿದ್ದವರಿಗೆ ಕೋವಿಡ್ ಪಾಸಿಟಿವ್ ಪತ್ತೆಯಾಗಿದೆ. ಈ ಕೋಳಿ ಫಾರಂ ಅನ್ನು ಸೀಲ್‌ಡೌನ್ ಮಾಡಿ ಸ್ಯಾನಿಟೈಸ್ ಮಾಡಿಸಿ ಸಿಬ್ಬಂದಿಯನ್ನು ಸ್ಥಳಾಂತರಿಸಲಾಗಿದೆ ಎಂದು ಹೇಳಿದರು.
ಡೆಲ್ವಾ ಪರೀಕ್ಷೆ: ಎರಡೂ ಪ್ರಕರಣಗಳಲ್ಲಿ ಪಾಸಿಟಿವ್ ಬಂದಿರುವವರನ್ನು ಕ್ವಾರಂಟೈನ್‌ನಲ್ಲಿಟ್ಟು ಅವರ ಪ್ರವಾಸ ಇತಿಹಾಸ, ಪ್ರಥಮ ಮತ್ತು ದ್ವಿತೀಯ ಸಂಪರ್ಕಿತರ ಮೇಲೂ ನಿಗಾ ಇಡಲು ಸೂಚಿಸಲಾಗಿದೆ. ಜೊತೆಗೆ ಪತ್ತೆಯಾಗಿರುವ ಎಲ್ಲಾ ಪಾಸಿಟಿವ್ ವ್ಯಕ್ತಿಗಳ ಗಂಟಲ ದ್ರವ ಮಾದರಿಗಳನ್ನು ಡೆಲ್ಟಾ ಹಾಗೂ ಡೆಲ್ಟಾ ಪ್ಲಸ್ ವೇರಿಯಂಟ್‌ಗಳ ಎಂಬಂತೆ ಪರೀಕ್ಷಿಸಲು ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಹೇಳಿದರು.
ಜಿಲ್ಲೆಗೆ ಹೊರ ರಾಜ್ಯರಾಷ್ಟ್ರಗಳಿಂದ ಆಗಮಿಸುವರಿಗೆ ರಾಜ್ಯದ ಆದೇಶದ ಮತ್ತು ಮಾರ್ಗಸೂಚಿಗಳ ಪ್ರಕಾರ ಅಗತ್ಯ ತಪಾಸಣಾ ಕ್ರಮ ಕೈಗೊಳ್ಳಲಾಗುವುದು ಎಂದರು.
ಗಣೇಶೋತ್ಸವ ಸಭೆ: ಕೋಲಾರ ಜಿಲ್ಲೆಯಲ್ಲಿ ಗಣೇಶೋತ್ಸವ ಆಚರಿಸುವ ಕುರಿತು ಸಭೆ ಕರೆದು ಸರಕಾರದ ಮಾರ್ಗಸೂಚಿ ಪ್ರಕಾರ ಗಣೇಶೋತ್ಸವ ಆಚರಿಸುವ ಬಗ್ಗೆ ಕರಪತ್ರಗಳ ಬಿಡುಗಡೆ ಮಾಡಿ, ಕೆಲವು ಮುಂಜಾಗ್ರತಾ ಕ್ರಮಗಳು, ನಿರ್ಧಾರಗಳನ್ನು ತೆಗೆದುಕೊಳ್ಳುವುದಾಗಿ ತಿಳಿಸಿದರು.
ಕೆರೆ ನೀರು ಕಲುಷಿತ: ಮಾಲೂರು ಕೈಗಾರಿಕಾ ಪ್ರದೇಶದಲ್ಲಿ ಕೈಗಾರಿಕೆಯೊಂದರ ತ್ಯಾಜ್ಯ ನೀರು ಕೆರೆಯನ್ನು ಸೇರಿ ಅಂತರ್ಜಲವನ್ನು
ಕಲುಷಿತಗೊಳಿಸಿರುವ ಕುರಿತು ತಮ್ಮ ಗಮನಕ್ಕೆ ಬಂದಿಲ್ಲ, ಬಂದರೆ ಅಗತ್ಯ ಕ್ರಮವಹಿಸಲಾಗುವುದು. ಇದಕ್ಕೂ ಮೊದಲ ಕೈಗಾರಿಕೆಯೊಂದು
ಕೆರೆಯಲ್ಲಿ ತ್ಯಾಜ್ಯ ಸುರಿಯುತ್ತಿರುವ ಕುರಿತು ದೂರು ಬಂದಿತ್ತು. ಆ ಕೈಗಾರಿಕೆ ಮೇಲೆ ಕೇಸು ದಾಖಲಿಸಲು ಸೂಚಿಸಲಾಗಿದೆ. ನೀರು ಕಲುಷಿತ ಗೊಳಿಸುತ್ತಿರುವ ಕೈಗಾರಿಕೆ ಕುರಿತಂತೆ ಪರಿಸರ ನಿಯಂತ್ರಣ ಮಂಡಳಿಯೊಂದಿಗೆ ಚರ್ಚಿಸಿ ಮಾಹಿತಿ ಪಡೆದುಕೊಳ್ಳುವೆ ಎಂದು ಹೇಳಿದರು.
ಕೆಲವು ಮಕ್ಕಳಲ್ಲಿ ಮಾತ್ರ ಸೋಂಕು ಪತ್ತೆ: ಜಿಲ್ಲಾಧಿಕಾರಿ
ಶಾಲಾಕಾಲೇಜು ಆರಂಭವಾದ ಮೇಲೆ ಒಂದಷ್ಟು ವಿದ್ಯಾರ್ಥಿಗಳಲ್ಲಿ ಕೋವಿಡ್ ಸೋಂಕು ಇರುವುದು ಪತ್ತೆಯಾಗಿದೆ. ಆದರೆ,ಕೆಜಿಎಫ್ ನಂತೆ ದೊಡ್ಡ ಪ್ರಮಾಣದಲ್ಲಿ ಆಗಿಲ್ಲ. ಅಲ್ಲಲ್ಲಿ ಪತ್ತೆಯಾಗಿರುವ ಪ್ರಕರಣಗಳ ಸಂಬಂಧ ಅಗತ್ಯಕ್ರಮ ತೆಗೆದುಕೊಳ್ಳಲಾಗಿದೆ. ಉಳಿದಂತೆ ದೊಡ್ಡ ಪ್ರಮಾಣ ದಲ್ಲಿ ಮಕ್ಕಳು ಪಾಸಿಟಿವ್ ಆಗಿರುವುದು ಗಮನಕ್ಕೆ ಬಂದಿಲ್ಲ. ಒಂದೆರೆಡು ಪ್ರಕರಣಗಳು ಪತ್ತೆಯಾಗಿದೆ ಎಂದು ಜಿಲ್ಲಾಧಿಕಾರಿ ಸೆಲ್ವಮಣಿ ಹೇಳಿದರು.
ಸೆ.6 ರಿಂದ6 ರಿಂದ8ನೇ ತರಗತಿ ಶಾಲೆ ಆರಂಭವಾಗುವಕುರಿತು ಸರಕಾರದಿಂದ ಬರುವ ಎಲ್ಲಾ ಮಾರ್ಗಸೂಚಿಗಳನ್ನು ಕಡ್ಡಾಯ ವಾಗಿ ಪಾಲಿಸಲು ಸೂಚಿಸಲಾಗಿದೆ. ಶಾಲೆಗಳ ಸ್ಯಾನಿಟೈಸ್ ಮಾಡುವುದು, ಮಕ್ಕಳಕುಡಿಯುವ ನೀರು,ಊಟದ ವ್ಯವಸ್ಥೆ, ಶೌಚಾಲಯ ಇತ್ಯಾದಿ ಗಳನ್ನು ಪರಿಶೀಲಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು.
ಇಂದು ಜಿಲ್ಲೆಗೆ ಆರೋಗ್ಯ ಸಚಿವ ಭೇಟಿ
ಕೋಲಾರ ಜಿಲ್ಲೆಗೆ ಬುಧವಾರ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹಾಗೂ ಉಸ್ತುವಾರಿ ಸಚಿವ ಮುನಿರತ್ನ ಆಗಮಿಸುವರು, ಮೂರು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಉದ್ಘಾಟಿಸುವರು, ಮುಳಬಾಗಿಲು ಮತ್ತು ಶ್ರೀನಿವಾಸಪುರ ತಾಲೂಕು ಆಸ್ಪತ್ರೆಗಳಲ್ಲಿ ಆಮ್ಲಜನಕ ಉತ್ಪಾದನಾ ಘಟಕಗಳನ್ನು ಅನುಷ್ಠಾನಗೊಳಿಸಿದ್ದು, ಚಾಲನೆ ನೀಡಲಿದ್ದಾರೆ ಎಂದು ಡೀಸಿ ಸೆಲ್ವಮಣಿ ತಿಳಿಸಿದರು.
ಇದನ್ನೂ ಓದಿ:ಯಶವಂತಪುರದಲ್ಲಿ ಹೈಟೆಕ್ ಮಾರುಕಟ್ಟೆ ನಿರ್ಮಾಣಕ್ಕೆ ಕ್ರಮ : ಸಚಿವ ಅಶ್ವತ್ಥನಾರಾಯಣ
ನೆಗೆಟಿವ್ ವರದಿ ಸಾಚಾತನದ ಬಗ್ಗೆ ತನಿಖ
ಕೆಜಿಎಫ್: ನಗರದ ಆಂಡರಸನ್ ಪೇಟೆಯ ನೂರುನ್ನೀಸಾ ನರ್ಸಿಂಗ್ ಕಾಲೇಜಿನಲ್ಲಿ ಇದುವರೆಗೂ 63 ವಿದ್ಯಾರ್ಥಿನಿಯರು ಕೋವಿಡ್
ಪೀಡಿತರಾಗಿದ್ದಾರೆ. ಮೂವರು ಬಿಟ್ಟು ಉಳಿದವರನ್ನು ಬಿಜಿಎಂಎಲ್ ಆಸ್ಪತ್ರೆಗೆ ಸೇರಿಸಲಾಗಿದೆ.
ಕೇರಳದಿಂದ ಬಂದ ವಿದ್ಯಾರ್ಥಿನಿಯರು ಮರುದಿನವೇ ಕೋವಿಡ್ ಸೋಂಕಿತರಾಗಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿತ್ತು. ಜಿಲ್ಲಾಧಿಕಾರಿ ಆರ್. ಸೆಲ್ವಮಣಿ ಕಾಲೇಜಿಗೆ ಭೇಟಿ ನೀಡಿ ಪರಿಶೀಲಿಸಿದರು. ವಿದ್ಯಾರ್ಥಿಗಳು ನೀಡಿರುವ ಕೋವಿಡ್ ವರದಿಯನ್ನು ಪರಿಶೀಲಿಸಬೇಕು. ಬಾರ್ ಕೋಡ್‌ಗಳನ್ನು ಪರಿಶೀಲಿಸಿ, ವರದಿ ನಿಜವೇ ಇಲ್ಲವೇ ಬೋಗಸ್ ದಾಖಲೆಯೇ ಎಂಬುದನ್ನು ಪರಿಶೀಲಿಸಬೇಕು ಎಂದು ತಹಶೀಲ್ದಾರ್ ಕೆ.ಎನ್.ಸುಜಾತಾಗೆ ಸೂಚಿಸಿದರು. ವಿದ್ಯಾರ್ಥಿಗಳ ಕೋವಿಡ್ ನೆಗಟಿವ್ ವರದಿಯ ಪ್ರತಿಯನ್ನು ತೆಗೆದುಕೊಂಡಿರುವ ಕಂದಾಯ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳು ವರದಿಯ ಸಾಚಾತನದ ಬಗ್ಗೆ ತನಿಖೆ ಶುರು ಮಾಡಿದ್ದಾರೆ. ತಹಶೀಲ್ದಾರ್ ಕೆ.ಎನ್.ಸುಜಾತ, ತಾಲೂಕು ವೈದ್ಯಾಧಿಕಾರಿ ಡಾ.ಸುನಿಲ್ ಹಾಜರಿದ್ದರು.
ಕಾಲೇಜು ವಿರುದ್ಧ ತಹಶೀಲ್ದಾರ್ ಆಕ್ರೋಶ
ಕೆಜಿಎಫ್: ಕೋವಿಡ್ ಮಾರ್ಗಸೂಚಿಯನ್ನು ಸಮರ್ಪಕವಾಗಿ ಪಾಲಿಸದೇ ಇರುವ ಇಲ್ಲಿನ ಆಂಡರಸನ್ ಪೇಟೆ ನೂರುನ್ನೀಸಾ ನರ್ಸಿಂಗ್ ಕಾಲೇಜಿನ ಆಡಳಿತ ಮಂಡಳಿಗೆ ತಹಶೀಲ್ದಾರ್ ಕೆ.ಎನ್.ಸುಜಾತ ತರಾಟೆಗೆ ತೆಗೆದುಕೊಂಡರು. ಕೇರಳದಲ್ಲಿ ಕೋವಿಡ್ ಸಂಖ್ಯೆ ಹೆಚ್ಚುತ್ತಿರುವ ಸಂದರ್ಭದಲ್ಲಿ ಮುಂಜಾಗರೂಕತೆ ವಹಿಸದೆ, ವಿದ್ಯಾರ್ಥಿನಿಯರನ್ನು ಕರೆತಂದಿರುವುದು ಸಮಂಜಸವಲ್ಲ. ಕೋವಿಡ್ ನೆಗೆಟಿವ್ ವರದಿ ಇದೆ ಎಂದುಕರೆದುಕೊಂಡ ಬಂದ ವಿದ್ಯಾರ್ಥಿನಿಯರಿಗೆ ಈಗ ಏಕಾಏಕಿ ಸೋಂಕು ಇರುವುದು ಪತ್ತೆಯಾಗಿರುವುದರಿಂದ ವರದಿಯಲ್ಲಿ ಲೋಪ ವಿರಬೇಕು. ಅವರ ಪ್ರಮಾಣ ಪತ್ರವನ್ನು ಸೂಕ್ತವಾಗಿ ಪರಿಶೀಲಿಸಬೇಕು ಎಂದು ಹೇಳಿದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜಗದೀಶ್ ಕಾಲೇಜಿಗೆ ಭೇಟಿ ನೀಡಿ, ಕಾರಣ ಕೇಳುವ ನೋಟಿಸ್ ಜಾರಿ ಮಾಡಿದರು. ಬುಧವಾರದೊಳಗೆ ಉತ್ತರ
ನೀಡಲು ಕಾಲಾವಕಾಶ ನೀಡಿದ್ದಾರೆ. ನಗರಸಭೆ ಆಯುಕ್ತ ನವೀನ್ ಚಂದ್ರ, ತಾಲೂಕು ವೈದ್ಯಾಧಿಕಾರಿ ಡಾ.ಸುನೀಲ್ ಆಗಮಿಸಿದ್ದರು.
265 ವಿದ್ಯಾರ್ಥಿಗಳು
ಕಾಲೇಜಿನಲ್ಲಿ ಪುನಃ34 ವಿದ್ಯಾರ್ಥಿನಿಯರಿಗೆ ಸೋಂಕು ಕಾಣಿಸಿಕೊಂಡಿದೆ.ಕಾಲೇಜಿನಲ್ಲಿ ಒಟ್ಟು 265ಕೇರಳ ಮೂಲದ ವಿದ್ಯಾರ್ಥಿನಿಯರಿದ್ದು, ಸೋಂಕಿತರನ್ನು ಬಿಜಿಎಂಎಲ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು
Mulabagilu: ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲು ಪ್ರಕರಣ: ಶಿಕ್ಷಕರ ಅಮಾನತು
Cyclone Fengal: ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಶಾಲೆ, ಕಾಲೇಜಿಗೆ ಡಿ.2ರಂದು ರಜೆ
Kolar: ಧಾರ್ಮಿಕ ಮೆರವಣಿಗೆಯಲ್ಲಿ ಯಾಂತ್ರಿಕ ಆನೆ ಬಳಕೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.