ಸಿಇಒ ಫೋನ್ ಇನ್‌ಗೆ 25ಕ್ಕೂ ಹೆಚ್ಚು ದೂರು
ಕುಡಿವ ನೀರು, ವಸತಿ, ಸ್ವಚ್ಛತೆ ಬಗ್ಗೆ ದೂರು ದಾಖಲು | ಬಗೆಹರಿಸುವ ಭರವಸೆ ನೀಡಿದ ಜಗದೀಶ್
Team Udayavani, Jul 12, 2019, 11:44 AM IST
ಜಿಪಂ ಸಿಇಒ ಜಗದೀಶ್ ´ೋನ್ ಇನ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಾರ್ವಜನಿಕರ ಸಮಸ್ಯೆ ಆಲಿಸಿದರು. ಜಿಪಂ ಸಹಾಯಕ ಯೋಜನಾಧಿಕಾರಿ ಮುನಿರಾಜು ಮತ್ತಿತರರು ಇದ್ದರು.
ಕೋಲಾರ: ಜಿಪಂ ಸಿಇಒ ಜಿ.ಜಗದೀಶ್ ಸಾರ್ವಜನಿಕ ಕುಂದುಕೊರತೆ ಆಲಿಸಲು ನಡೆಸಿದ ಫೋನ್ ಇನ್ ಕಾರ್ಯಕ್ರಮದಲ್ಲಿ ವಿವಿಧ ತಾಲೂಕುಗಳಿಂದ ಕುಡಿಯುವ ನೀರು, ವಸತಿ, ಸ್ವಚ್ಛತೆ ಕೊರತೆ ಇನ್ನಿತರೆ ವಿಷಯಗಳಿಗೆ ಸಂಬಂಧಿಸಿದಂತೆ ಒಟ್ಟು 25ಕ್ಕೂ ಹೆಚ್ಚು ದೂರು ಬಂದವು.
ಗುರುವಾರ ಬೆಳಗ್ಗೆ 9ರಿಂದ 10 ಗಂಟೆವರೆಗೆ ನಡೆದ ಫೋನ್‌ಇನ್‌ನಲ್ಲಿ ಸಿಇಒ ಜಿ.ಜಗದೀಶ್ ವಿವಿಧ ತಾಲೂಕುಗಳಿಂದ ಬಂದಿದ್ದ ಕರೆ ಸ್ವೀಕರಿಸಿ ಕ್ರಮದ ಭರವಸೆ ನೀಡಿದರು.
ದೇಗುಲದಲ್ಲಿ ಸ್ವಚ್ಛತೆ ಇಲ್ಲ: ಮಾಸ್ತಿ ಸಮೀಪದ ಬಿಸ್ನಹಳ್ಳಿ ರಾಮಕೃಷ್ಣಪ್ಪ ಎಂಬವರು ಮೊದಲ ಕರೆ ಮಾಡಿ, ವಸತಿ ಮನೆ ನಿರ್ಮಿಸಿಕೊಂಡಿದ್ದರೂ ಬಿಲ್ ಪಾವತಿಯಾಗಿಲ್ಲ ಎಂದು ದೂರಿದರು. ಲಕ್ಕೂರಿನ ಕವಿತಾ ಗ್ರಾಮದಲ್ಲಿ ಶಿವನ ದೇವಸ್ಥಾನವಿದ್ದು ಸ್ವಚ್ಛತೆ ಇಲ್ಲ ಎಂದು ಗ್ರಾಪಂ ವಿರುದ್ಧ ದೂರು ನೀಡಿದರು.
ಕುಡಿವ ನೀರಿನ ಟ್ಯಾಂಕ್ ಬಳಕೆಯಾಗುತ್ತಿಲ್ಲ. ಸರ್ಕಾರಿ ಶಾಲೆ ಮುಂದೆ ದುರ್ವಾಸನೆಯುಕ್ತ ನೀರು ಹರಿಯುತ್ತಿದೆ ಎಂದು ಶ್ರೀನಿವಾಸಪುರ ಪುಲಗೂರಕೋಟೆ ಗ್ರಾಪಂ ವ್ಯಾಪ್ತಿಯ ಮುದ್ದೇಪಲ್ಲಿ ಗ್ರಾಮಸ್ಥರೊಬ್ಬರು ಮನವಿ ಮಾಡಿದರು.
ಬಾಕಿ ಹಣ ಬಂದಿಲ್ಲ: ಮುಳಬಾಗಿಲಿನ ಹನುಮನಹಳ್ಳಿ ಕೊತ್ತಮಂಗಲ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಕಳ್ಳರು ನುಗ್ಗಿ ಸಾಮಗ್ರಿ ಕಳವು ಮಾಡಿರುವ ಬಗ್ಗೆ ಶ್ರೀನಿವಾಸ್ ಎಂಬವರು ದೂರಿದರೆ, ಶೆಟ್ಟಿಹಳ್ಳಿ ಆನಂದ್ 2018ರಲ್ಲಿ ನರೇಗಾದಡಿ ಚರಂಡಿ ನಿರ್ಮಿಸಿರುವ ಬಿಲ್ ಬಾಬ್ತು 1 ಲಕ್ಷ ರೂ., ಬಾಕಿ ಇರುವ ಬಗ್ಗೆ ಸಿಇಒ ಗಮನಕ್ಕೆ ತಂದರು.
ಮುಳಬಾಗಿಲಿನ ಪಿಚ್ಚಗುಂಟ್ಲಹಳ್ಳಿಯಲ್ಲಿ ಕುಡಿವ ನೀರಿನ ಸಮಸ್ಯೆ ತಲೆದೋರಿರುವ ಕುರಿತು ಗಂಗಾಧರ್ ದೂರು ದಾಖಲಿಸಿದರೆ, ಮಾಲೂರಿನ ಚಿಕ್ಕಇಗ್ಗಲೂರಿನ ನಿವಾಸಿ ಅಂಬೇಡ್ಕರ್ ವಸತಿ ಯೋಜನೆಯಡಿ ರಾಜೀವ್‌ಗಾಂಧಿ ವಸತಿ ನಿಗಮದಿಂದ ತಮ್ಮ ಖಾತೆಗೆ 1 ರೂ., ಬಂದಿರುವುದಾಗಿ ದೂರಿದಾಗ ಸ್ಪಂದಿಸಿದ ಸಿಇಒ ಜಿ.ಜಗದೀಶ್, ಫಲಾನುಭವಿ ಖಾತೆ ಬಗ್ಗೆ ಅರಿಯಲು ಸ್ಯಾಂಪಲ್ ಆಗಿ ಹಣ ಜಮೆ ಮಾಡಿದ್ದಾರೆ. ಶೀಘ್ರ ಹಣ ಜಮೆ ಆಗುತ್ತದೆ ಎಂದು ಭರವಸೆ ನೀಡಿದರು.
ತಿಂಗಳಿಗೊಮ್ಮೆ ನೀರು: ಬಂಗಾರಪೇಟೆ ಹುಲಿಬೆಲೆ ಗ್ರಾಪಂನಲ್ಲಿ ಗ್ರಾಮಕ್ಕೆ ತಿಂಗಳಿಗೊಮ್ಮೆ ಕುಡಿವ ನೀರು ಸರಬರಾಜು ಆಗುತ್ತಿದೆ. ಗ್ರಾಪಂ ಅಧ್ಯಕ್ಷರು, ಸದಸ್ಯರು, ಪಿಡಿಒಗಳ ಗಮನಕ್ಕೆ ತಂದರೂ ಗಮನಹರಿಸುತ್ತಿಲ್ಲ ಎಂದು ಬೈರೇಗೌಡ, ಸಹಾಯಕ ಪ್ರಾಧ್ಯಾಪಕ ಪ್ರೊ.ರವಿಕುಮಾರ್ ದೂರಿದರು. ಸ್ಪಂದಿಸಿದ ಸಿಇಒ ಬಗೆಹರಿಸುವ ಭರವಸೆ ನೀಡಿದರು.
ಶ್ರೀನಿವಾಸಪುರದ ಗೌನಪಲ್ಲಿ ಬಸ್ ನಿಲ್ದಾಣದ ಬಳಿ ಪೆಟ್ಟಿಗೆ ಅಂಗಡಿಯಲ್ಲಿ ಮಾಂಸ ಮಾರಾಟದಿಂದ ದುರ್ವಾಸನೆ ಬೀರುವ ಕುರಿತು ದೂರು ನೀಡಿದ್ದರೂ ಕ್ರಮ ವಹಿಸಿಲ್ಲ ಎಂದು ನಜೀರ್ ಅಹಮದ್ ದೂರಿದರು.
ಕ್ರಮಕ್ಕೆ ಸೂಚನೆ: ಕೋಲಾರ ತಾಲೂಕಿನ ಮುದುವಾಡಿ ಗ್ರಾಮದ ಪರಿಶಿಷ್ಟರ ಕಾಲೋನಿಯಲ್ಲಿ ಸರ್ಕಾರಿ ರಸ್ತೆ ಒತ್ತುವರಿ ಮಾಡಿ ಮನೆ ನಿರ್ಮಿಸಿಕೊಂಡಿರುವ ಬಗ್ಗೆ ನಾಗೇಶ್ ದೂರಿದಾಗ ಈ ಬಗ್ಗೆ ತಾಪಂ ಇಒ ಅವರಿಗೆ ಸ್ಥಳ ತನಿಖೆ ನಡೆಸಿ ಕ್ರಮಕ್ಕೆ ಸೂಚಿಸುವುದಾಗಿ ಸಿಇಒ ನುಡಿದರು.
ಬಂಗಾರಪೇಟೆ ಕೆಸರನಹಳ್ಳಿ ಗ್ರಾಪಂ ನಲ್ಲಿ 15 ತಿಂಗಳಿನಿಂದ ಡಾಟಾ ಎಂಟ್ರಿ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದು, ಸಂಬಳದ ಚೆಕ್‌ಗೆ ಅಧ್ಯಕ್ಷರು-ಪಿಡಿಒ ಸಹಿ ಮಾಡುತ್ತಿಲ್ಲ ಎಂದು ರವಿಕುಮಾರ್ ದೂರಿದರು.
ಮುಳಬಾಗಿಲಿನ ವರಸಿದ್ಧಿ ವಿನಾಯಕ ಶಾಲೆಯಲ್ಲಿ ಕೊಠಡಿ – ಶೌಚಾಲಯದ ಕೊರತೆ ಇದೆ ಎಂದು ನಂಗಲಿ ಶ್ರೀನಿವಾಸ್ ದೂರಿದಾಗ, ಪರಿಶೀಲಿಸಿ ಕ್ರಮ ಕೈಗೊಳ್ಳಲು ಡಿಡಿಪಿಐಗೆ ಸೂಚಿಸಿದರು.
ಇಚ್ಛಾಶಕ್ತಿ ಕೊರತೆ: ಕಾರ್ಯಕ್ರಮದ ನಂತರ ಸುದ್ದಿಗಾರರ ಜತೆ ಮಾತನಾಡಿದ ಸಿಇಒ ಜಗದೀಶ್, ಜಿಲ್ಲೆಯ 3 ಕಡೆ ಕುಡಿವ ನೀರಿನ ಸಮಸ್ಯೆ, ಸ್ವಚ್ಛತೆ ಕೊರತೆ, ಕೋಲಾರ ಮತ್ತು ಮುಳಬಾಗಿಲು ನಗರಸಭೆ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಆಗದಿರುವುದು, ವಸತಿ, ಇ ಸ್ವತ್ತು ಸಂಬಂಧ ದೂರುಗಳು ಬಂದಿದೆ. ನೀರಿನ ಸಮಸ್ಯೆ ಉಂಟಾಗಿದ್ದರೆ ಅದು ಪಿಡಿಒ, ಎಂಜಿನಿಯರ್‌ಗಳ ಇಚ್ಛಾಶಕ್ತಿ ಕೊರತೆ. ತಕ್ಷಣ ಕ್ರಮಕ್ಕೆ ಸೂಚನೆ ನೀಡುವುದಾಗಿ ಹೇಳಿದರು.
ಜಿಪಂ ಸಹಾಯಕ ಯೋಜನಾಧಿಕಾರಿ ಮುನಿರಾಜು, ಡಿಡಿಪಿಐ ಕೆ.ರತ್ನಯ್ಯ, ತೋಟಗಾರಿಕೆ ಉಪನಿರ್ದೇಶಕ ಡಾ.ಕೆ.ವಿ.ಕೃಷ್ಣಮೂರ್ತಿ, ಬಿಸಿಎಂ ಅಧಿಕಾರಿ ರಾಜಣ್ಣ ಮತ್ತಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Byrathi Suresh: ಪವರ್ ಪಾಲಿಟಿಕ್ಸ್, ಶೇರಿಂಗ್, ಕೇರಿಂಗ್ ಯಾವುದೂ ಇಲ್ಲ
Kolara: ಹೈಕೋರ್ಟ್ ಅನುಮತಿ ಬಳಿಕ ಬಿಗಿ ಭದ್ರತೆಯಲ್ಲಿ ಆರೆಸ್ಸೆಸ್ ಪಥಸಂಚಲನ
Kolar: “ಗೃಹಲಕ್ಷ್ಮಿ’ಗೆ ಆಸಕ್ತಿ ತೋರದ 21 ಸಾವಿರ ಕೋಲಾರ ಸ್ತ್ರೀಯರು
Kolara: ಏಲಕ್ಕಿ ಬಾಳೆಕಾಯಿ ಬೆಲೆ ಕುಸಿತ: 3 ಎಕರೆ ಬೆಳೆ ಕಡಿದು ಹಾಕಿದ ರೈತ
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!