ನಿರ್ವಹಣೆ ಮಾಡಲು ಬಿಡ್ತಿಲ್ಲ, ಗಣನೆಗೆ ತೆಗೆದುಕೊಳ್ತಿಲ್ಲ
Team Udayavani, Nov 25, 2019, 3:15 PM IST
ಬಂಗಾರಪೇಟೆ: ತಾಲೂಕಿನ ಕಮ್ಮಸಂದ್ರದ ಶ್ರೀಕ್ಷೇತ್ರ ಕೋಟಿಲಿಂಗೇಶ್ವರ ದೇಗುಲದ ನಿರ್ವಹಣೆಗೆ ಸಂಬಂಧಪಟ್ಟಂತೆ ರಾಜ್ಯ ಹೈಕೋರ್ಟ್ ತೀರ್ಪಿನಂತೆ ಅಧಿಕಾರ ಪಡೆದಿರುವ ಕೆ.ವಿ.ಕುಮಾರಿ, ಶ್ರೀಗಳ ಪುತ್ರ ಕೆ.ಶಿವಪ್ರಸಾದ್‌ಗೆ ಆಡಳಿತ ನಡೆಸಲು ಬಿಡದೇ, ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಎರಡೂ ಕಡೆಯಿಂದ ಪೊಲೀಸ್ ಠಾಣೆಗೆ ದೂರುಗಳ ಸುರಿಮಳೆ ಆಗಿದೆ. ಈ ಮೂಲಕ ಭಿನ್ನಮತ ದಿನೇದಿನೆ ತೀವ್ರಗೊಳ್ಳುತ್ತಿದೆ.
ಕಾರ್ತೀಕ ಸೋಮವಾರದ ಕೊನೆಯ ದಿನವಾಗಿರುವ 25ರಂದು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರಲಿದ್ದಾರೆ. ಕೆ.ಶಿವಪ್ರಸಾದ್ ದೇಗುಲದ ಪ್ರತಿಯೊಂದು ಟಿಕೆಟ್ ಕೌಂಟರ್ ಬಳಿ ಅನಧಿಕೃತವಾಗಿ ತನ್ನ ಬೆಂಬಲಿಗರನ್ನು ನೇಮಿಸಿಕೊಂಡು, ಉಸ್ತುವಾರಿ ಕೆ.ವಿ.ಕುಮಾರಿ ಆಡಳಿತ ನಿರ್ವಹಣೆ ಮಾಡಲು ಬಿಡುತ್ತಿಲ್ಲ ಎಂಬ ದೂರು ಬಂದಿದ್ದು, ಹಲವು ಬಾರಿ ತಹಶೀಲ್ದಾರ್ ಕೆ.ರಮೇಶ್ ಹಾಗೂ ಪೊಲೀಸ್ ಡಿವೈಎಸ್‌ಪಿ ಬಿ.ಎಲ್.ಶ್ರೀನಿವಾಸಮೂರ್ತಿ ಶಾಂತಿಸಭೆ ಮಾಡಿ ಇವರಿಬ್ಬರಿಗೂ ಸೂಚನೆ ನೀಡಿದ್ದರೂ ಪ್ರಯೋಜನ ಆಗಿಲ್ಲ.
ಉಸ್ತುವಾರಿ ನಿರ್ವಹಣೆಗೆ ಅಡ್ಡಿ: ಕಮ್ಮಸಂದ್ರದ ಶ್ರೀಕೋಟಿಲಿಂಗೇಶ್ವರ ದೇಗುಲ ನಿರ್ವಹಣೆಯನ್ನು ಸರ್ಕಾರವು ಕೆ.ವಿ.ಕುಮಾರಿಗೆ ವಹಿಸಿಲ್ಲ. ಇದರ ಬದಲಾಗಿ ರಾಜ್ಯ ಹೈಕೋರ್ಟ್ ತೀರ್ಪು ನೀಡಿದ್ದರೂ ಕೆ. ಶಿವಪ್ರಸಾದ್ ಹಾಗೂ ಈತನ ಬೆಂಬಲಿಗರು ಪಾಲನೆ ಮಾಡದೇ ಅನಗತ್ಯವಾಗಿ ಕೆ.ವಿ.ಕುಮಾರಿ ಆಡಳಿತ ನಿರ್ವಹಣೆಗೆ ಅಡ್ಡಿಪಡಿಸುತ್ತಿದ್ದಾರೆ. ಎರಡೂ ಕಡೆಯವರಿಂದ ಬೇತಮಂಗಲ ಪೊಲೀಸ್ ಠಾಣೆಗೆ ಪ್ರತ್ಯೇಕವಾಗಿ ದೂರುಗಳನ್ನು ನೀಡಿದ್ದಾರೆ. ಎರಡೂ ಕಡೆಯ ದೂರುದಾರರಿಗೆ ಎನ್‌ಸಿಆರ್ ಕೊಟ್ಟು ಪೊಲೀಸರು ಕೈತೊಳೆದುಕೊಂಡಿದ್ದಾರೆ ಎನ್ನಲಾಗಿದೆ.
ಆದಾಯ ಬಹಿರಂಗ: ಜಿಲ್ಲಾಡಳಿತವು ಕೆಜಿಎಫ್ ತಹಶೀಲ್ದಾರ್ ಮೂಲಕ 49 ದಿನಗಳ ಕಾಲ ಶ್ರೀಕೋಟಿಲಿಂಗೇಶ್ವರ ದೇಗುಲ ನಿರ್ವಹಣೆ ಮಾಡಿತ್ತು. ಆಗ ಬ್ಯಾಂಕ್‌ನಲ್ಲಿ 43 ಲಕ್ಷ ರೂ. ಆದಾಯ ಸಂಗ್ರಹವಾಗಿತ್ತು. ಜಿಲ್ಲಾಡಳಿತ ಕೇವಲ ಹೆಸರಿಗೆ ಮಾತ್ರ ಇತ್ತು. ಆಡಳಿತ ನಿರ್ವಹಣೆಗೆ ಜಿಲ್ಲಾಡಳಿತ ಯಾವುದೇ ಸಿಬ್ಬಂದಿಯನ್ನು ನೇಮಿಸಿದೇ, ಶಿವಪ್ರಸಾದ್ ಬೆಂಬಲಿಗರನ್ನು ಇಟ್ಟುಕೊಂಡೇ ನಿರ್ವಹಣೆ ಮಾಡಿತ್ತು. ದೇಗುಲಕ್ಕೆ ಪ್ರತಿದಿನ ಎಷ್ಟೆಷ್ಟು ಆದಾಯ ಬರುತ್ತಿದೆ ಎಂಬ ಗುಟ್ಟು ಜಿಲ್ಲಾಡಳಿತ ಉಸ್ತುವಾರಿ ವಹಿಸಿಕೊಂಡ ನಂತರ ಬಹಿರಂಗವಾಗಿದೆ.
ಹಣ ಎಲ್ಲಿ ಹೋಯ್ತು: ಜಿಲ್ಲಾಡಳಿತಕ್ಕೆ ದೇಗುಲದಲ್ಲಿ ಬರುವ ದರ್ಶನ ಟಿಕೆಟ್ ಹಾಗೂ ನೂತನ ಶಿವಲಿಂಗ ಪ್ರತಿಷ್ಠಾಪನೆಯಿಂದ ಬರುವ ಆದಾಯ ಮಾತ್ರ ಲೆಕ್ಕ ಕೊಟ್ಟಿದ್ದಾರೆ. ದೇಗುಲದ ಆವರಣದಲ್ಲಿ ಒಟ್ಟು 53 ಅಂಗಡಿಗಳಿದ್ದು, ಪ್ರತಿ ದಿನ 30 ಸಾವಿರ ರೂ. ಬಾಡಿಗೆ, ಲಡ್ಡು, ಪಾರ್ಕಿಂಗ್ ಶುಲ್ಕ ಜಿಲ್ಲಾಡಳಿತದ ಕೈಗೆ ಹೋಗಲೇ ಇಲ್ಲ. ಜಿಲ್ಲಾಡಳಿತ ದೇಗುಲ ವಶಕ್ಕೆ ಪಡೆದ ಮೇಲೆ ಎಲ್ಲಿ ಹೋಯಿತು ಎನ್ನುವುದು ಇನ್ನೂ ಯಕ್ಷ ಪ್ರಶ್ನೆಯಾಗಿಯೇ ಉಳಿದಿದೆ.
ವಸೂಲಿ ಕಡಿಮೆ: ಕಮ್ಮಸಂದ್ರದ ಶ್ರೀಕೋಟಿಲಿಂಗ ದೇಗುಲಕ್ಕೆ ಹಬ್ಬ ಹರಿದಿನಗಳು, ಶನಿವಾರ, ಭಾನುವಾರ, ಸರ್ಕಾರಿ ರಜೆ ದಿನಗಳಲ್ಲಿ ಅಂದಾಜಿಗೂ ಮೀರಿ ಭಕ್ತರು ಆಗಮಿಸುತ್ತಾರೆ. ದೇವರ ದರ್ಶನಕ್ಕೆ ಉಚಿತ ಪ್ರವೇಶವಿಲ್ಲ. ಪ್ರತಿಯೊಬ್ಬರಿಗೂ 20 ರೂ. ಟಿಕೆಟ್ ಇದೆ. ವಾಹನಗಳ ಪಾರ್ಕಿಂಗ್ ಪ್ರತಿವರ್ಷ 20 ಲಕ್ಷ ರೂ. ಹರಾಜು ಆಗುತ್ತಿದ್ದರೂ ಜಿಲ್ಲಾಡಳಿತದ ಆಡಳಿತ ನಿರ್ವಹಣೆ ಅವಧಿಯಲ್ಲಿ ಇವುಗಳಿಂದ ವಸೂಲಿಯಾಗಿರುವುದು ಭಾರೀ ಕಡಿಮೆ ಮೊತ್ತವಾಗಿದೆ. ರಾಜ್ಯ ಹೈಕೋರ್ಟ್ ತೀರ್ಪು ಅನ್ನು ಬದಲಾಯಿಸಿ ಕೆ.ವಿ.ಕುಮಾರಿ ಜೊತೆಗೆ ನನಗೂ ಅಧಿಕಾರ ನೀಡಬೇಕು. ದೇಗುಲ ಆದಾಯವನ್ನು ಜಂಟಿ ಖಾತೆಯಲ್ಲಿ ಹಾಕಬೇಕೆಂದು ಪ್ರತಿಭಟನೆಯನ್ನೂ ಶಿವಪ್ರಸಾದ್ ಮಾಡಿದ್ದಾರೆ. ಪ್ರತಿ ದಿನ ವಸೂಲಿಯಾಗುವ ಅಂಗಡಿಗಳ ಬಾಡಿಗೆದಾರರಿಂದ ಬಾಡಿಗೆ ಹಾಗೂ ಪಾರ್ಕಿಂಗ್ ಹಣವನ್ನು
ಕೆ.ವಿ.ಕುಮಾರಿ ವಶಕ್ಕೆ ನೀಡದೇ ನನ್ನ ವಶಕ್ಕೆ ನೀಡಬೇಕೆಂದು ಕೆ.ಶಿವಪ್ರಸಾದ್ ಪ್ರತಿಭಟನೆ ಮಾಡಿದ್ದಾರೆ. ಶಿವಪ್ರಸಾದ್ ಬೇಡಿಕೆಗಳ ಬಗ್ಗೆ ರಾಜ್ಯ ಹೈಕೋರ್ಟ್ ತೀರ್ಪಿನಲ್ಲಿ ಅಂಶಗಳೇ ಇಲ್ಲವಾಗಿದ್ದರೂ ಸಹ ಬೇಡಿಕೆಗಳಿನ್ನಿಟ್ಟುಕೊಂಡು ಹೋರಾಟ ಮಾಡುತ್ತಿದ್ದಾರೆ ಎಂದು ದೂರಲಾಗಿದೆ.
ಶನಿವಾರ ಶಿವಪ್ರಸಾದ್ ಬೆಂಬಲಿಗರು ವಸೂಲಿಯಾಗಿದ್ದ ದರ್ಶನದ ಟಿಕೆಟ್ ಹಣವನ್ನು ತೆಗೆದುಕೊಂಡು ಹೋಗಿರುವ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಹೀಗಾಗಿ ಡಿವೈಎಸ್‌ಪಿ ಬಿ.ಎಲ್.ಶ್ರೀನಿವಾಸಮೂರ್ತಿ ನೇತೃತ್ವದಲ್ಲಿ ಶಿವಪ್ರಸಾದ್ ಹಾಗೂ ಕೆ.ವಿ.ಕುಮಾರಿ ಅವರನ್ನು ಕರೆಯಿಸಿ ರಾಜ್ಯ ಹೈಕೋರ್ಟ್ ತೀರ್ಪುನ್ನು ಎಲ್ಲರೂ ಪಾಲಿಸಬೇಕು. ತಪ್ಪಿದ್ದಲ್ಲಿ ಪೊಲೀಸ್ ಇಲಾಖೆ ಸೂಕ್ತ ಕ್ರಮಕೈಗೊಳ್ಳಲಿದೆ. ಶಿವಪ್ರಸಾದ್ ಬೇಡಿಕೆ ಹೈಕೋರ್ಟ್ ತೀರ್ಪಿನಲ್ಲಿ ಇಲ್ಲದೇ ಇರುವುದರಿಂದ ಏನೂ ಮಾಡಲು ಸಾಧ್ಯವಿಲ್ಲ ಎಂದು ತಿಳಿವಳಿಕೆ ನೀಡಿದ್ದಾರೆ ಎನ್ನಲಾಗಿದೆ.
ಪೊಲೀಸ್ ಇಲಾಖೆಗೆ ನಿರ್ದೇಶನ: ಭಕ್ತರ ಹಿತದೃಷ್ಟಿಯಿಂದ ಕಮ್ಮಸಂದ್ರದ ಕೋಟಿಲಿಂಗ ದೇಗುಲ ಆಡಳಿತ ನಿರ್ವಹಣೆಯಲ್ಲಿ ಯಾವುದೇ ಸಮಸ್ಯೆಯಾದರೂ ಪೊಲೀಸ್ ಇಲಾಖೆ ಮಧ್ಯಪ್ರವೇಶಿಸಿ ದೇಗುಲಕ್ಕೆ ರಕ್ಷಣೆ ನೀಡಬೇಕು ಎಂದು ರಾಜ್ಯ ಹೈಕೋರ್ಟ್, ತನ್ನ ತೀರ್ಪಿನ ಕೊನೆ ಸಾಲಿನಲ್ಲಿ ಸಂಬಂಧಪಟ್ಟ ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಿದೆ.
ಹೈಕೋರ್ಟ್ ತೀರ್ಪಿನಂತೆ ಶ್ರೀಕೋಟಿಲಿಂಗೇಶ್ವರ ದೇಗುಲದಲ್ಲಿ ಆಡಳಿತ ನಿರ್ವಹಣೆ ಮಾಡಲು ಶಿವಪ್ರಸಾದ್ ಹಾಗೂ ಅವರ ಬೆಂಬಲಿಗರು ಬಿಡುತ್ತಿಲ್ಲ. ಜಿಲ್ಲಾಡಳಿತವೇ ದೇಗುಲದ ಆಡಳಿತದ ನಿರ್ವಹಣೆ ನನಗೆ ವಹಿಸಿದೆ. ಅದನ್ನು ಬೇಕಾದಲ್ಲಿ ಕೋರ್ಟ್‌ನಲ್ಲಿ ಪ್ರಶ್ನೆ ಮಾಡಲಿ. ವಿನಾಕಾರಣ ಆಡಳಿತ ನಿರ್ವಹಣೆಗೆ ತನ್ನ ಬೆಂಬಲಿಗರನ್ನು ಕಳುಹಿಸಿ ಬೆದರಿಸುವುದು ಹಾಗೂ ನನ್ನ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡಿದರೆ ಹೈಕೋರ್ಟ್ ಗಮನಕ್ಕೆ ತರಲಾಗುವುದು. ಶಿವಪ್ರಸಾದ್ ಹಾಗೂ ಅವರ ಬೆಂಬಲಿಗರು ಅನವಶ್ಯಕವಾಗಿ ತೊಂದರೆ ನೀಡುತ್ತಿರುವುರಿಂದ ಪೊಲೀಸ್ ಇಲಾಖೆ ರಕ್ಷಣೆ ನೀಡಬೇಕು ಹಾಗೂ ಅಡ್ಡಿಪಡಿಸುವವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕಾಗಿದೆ. -ಕೆ.ವಿ.ಕುಮಾರಿ, ದೇಗುಲ ಆಡಳಿತದ ಉಸ್ತುವಾರಿ,
ಶ್ರೀಕೋಟಿಲಿಂಗ
-ಎಂ.ಸಿ.ಮಂಜುನಾಥ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.