Kolar: ಸರ್ಕಾರ ಬಂದ್ರೂ ಒಗ್ಗೂಡದ ಕಾಂಗ್ರೆಸ್ ಬಣ!
Team Udayavani, Nov 27, 2023, 4:08 PM IST
ಕೋಲಾರ: ತೆಲಂಗಾಣ ಚುನಾವಣಾ ಪ್ರಚಾರಕ್ಕೆ ಕೋಲಾರ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಗುಂಪು ಗುಂಪುಗಳಾಗಿ ತೆರಳಿ ಪ್ರಚಾರ ನಡೆಸುತ್ತಿದ್ದರೂ, ಕೋಲಾರ ಕಾಂಗ್ರೆಸ್ ಗುಂಪುಗಾರಿಕೆಯ ಪ್ರತಿಬಿಂಬ ಪ್ರತ್ಯೇಕ ಬಣಗಳಾಗಿ ಅಲ್ಲಿಯೂ ಕಾಣಿಸುತ್ತಿದೆ.
ಕೋಲಾರದಿಂದಲೇ ಪ್ರತ್ಯೇಕವಾಗಿ ತೆಲಂಗಾಣಕ್ಕೆ ತೆರಳಿರುವ ಕೋಲಾರ ಕಾಂಗ್ರೆಸ್ ಮುಖಂಡರು ಮುಖಾಮುಖೀಆಗದಂತೆ ಎಚ್ಚರವಹಿಸುತ್ತಾ ಪ್ರಚಾರ ನಡೆಸುತ್ತಿರುವುದು ಕಂಡು ಬರುತ್ತಿದೆ.
ಪ್ರತ್ಯೇಕ ಪ್ರಚಾರ: ರಾಜ್ಯದಲ್ಲಿ ಮಂತ್ರಿ ಯಾಗಿರುವ ಕೆ.ಎಚ್. ಮುನಿಯಪ್ಪ ತೆಲಂ ಗಾಣ ಚುನಾವಣಾ ಉಸ್ತುವಾರಿ ಹೊತ್ತು ಕೊಂಡು ತಮ್ಮ ಕೋಲಾರ ಬೆಂಬಲಿಗರನ್ನು ಅಲ್ಲಿಗೆ ಕರೆಯಿಸಿಕೊಂಡು ಪ್ರಚಾರದಲ್ಲಿ ತೊಡಗಿದ್ದಾರೆ. ಸೋತ ನಂತರ ಸರ್ಕಾರಿ ಮತ್ತು ಪಕ್ಷದ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳದ ರಮೇಶ್‌ಕುಮಾರ್ ತೆಲಂಗಾಣಕ್ಕೆ ತೆರಳದಿದ್ದರೂ, ಅವರ ಕೋಲಾರದ ಶಿಷ್ಯ ಪಡೆ ತೆಲಂಗಾಣಕ್ಕೆ ಪ್ರತ್ಯೇಕವಾಗಿ ತೆರಳಿ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದೆ. ತಮಗಿಷ್ಟವಾದ ಅಭ್ಯರ್ಥಿ ಹೋರಾಟಗಾರ್ತಿ ಬರ್ರೆಲಕ್ಕ ಪರವಾಗಿ ಪ್ರಚಾರದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಎರಡೂ ಪಡೆಗಳು ಪ್ರತ್ಯೇಕವಾಗಿ ಪ್ರಚಾರ ನಡೆಸುತ್ತಾ ಕಾಂಗ್ರೆಸ್ ಪಕ್ಷಕ್ಕೆ ಮತ ಯಾಚಿಸು ತ್ತಿದ್ದರೂ, ಅಪ್ಪಿತಪ್ಪಿಯೂ ಮುಖಾಮುಖಿಯಾಗುತ್ತಿಲ್ಲ. ಕಾಂಗ್ರೆಸ್ ಪಕ್ಷದ ಕೆಲಸವನ್ನು ಎರಡೂ ಬಣಗಳು ಮಾಡುತ್ತಿದ್ದರೂ, ತಮ್ಮ ಕೋಲಾರದ ಗುಂಪುಗಾರಿಕೆ ಯನ್ನ ಮಾತ್ರ ಬಿಟ್ಟುಕೊಡಲು ತಯಾರಾಗುತ್ತಿಲ್ಲ.
ಬಣಗಳ ಸೃಷ್ಟಿ: ಕೋಲಾರ ಕಾಂಗ್ರೆಸ್‌ನಲ್ಲಿ ಮಾಜಿ ಸ್ಪೀಕರ್ ರಮೇಶ್‌ಕುಮಾರ್ ಹಾಗೂ ಮಾಜಿ ಕೇಂದ್ರ ಸಚಿವ, ಹಾಲಿ ರಾಜ್ಯ ಆಹಾರ ಸಚಿವ ಕೆ.ಎಚ್.ಮುನಿ ಯಪ್ಪ ನಾಯಕತ್ವದ ಬಣಗಳು ಸೃಷ್ಟಿಯಾಗಿ ವರ್ಷಗಳು ಉರುಳಿವೆ. ಕಳೆದ ಲೋಕಸಭಾ ಚುನಾವಣಾ ಸಂದರ್ಭದಲ್ಲಿ ತಾರಕ್ಕೇರಿದ್ದ ಬಣ ರಾಜಕೀಯ ಮೇನಲ್ಲಿ ನಡೆದ ವಿಧಾನಸಭಾ ಚುನಾವಣೆ ಯಲ್ಲಿಯೂ ಅಷ್ಟೇ ತೀವ್ರಗತಿಯಲ್ಲಿ ಮುಂದುವರಿಯಿತು. ಇದರಿಂದ ಸಿದ್ದರಾಮಯ್ಯರೇ ಕೋಲಾರ ಸ್ಪರ್ಧೆಯಿಂದ ಹಿಂದಕ್ಕೆ ಸರಿಯುವಂತ ವಾತಾವರಣ ನಿರ್ಮಾಣವಾಗಿತ್ತು. ಸಿದ್ದರಾಮಯ್ಯರು ಕೋಲಾರಕ್ಕೆ ಆಗಮಿಸಿದ ಸಂದರ್ಭದಲ್ಲಿ ವೇದಿಕೆಯ ಎಡ ಬಲಗಳಲ್ಲಿ ಬಣಗಳ ನಾಯಕರು ಕೂತಿದ್ದಷ್ಟೇ ಸಾಧನೆ ಎಂಬಂತಾಯಿತು. ಸಿದ್ದರಾಮಯ್ಯ ಕೋಲಾರದಿಂದ ತೆರಳಿದ ನಂತರ ಮತ್ತದೇ ಬಣ ರಾಜಕೀಯವನ್ನು ಎರಡೂ ಕಡೆಗಳಿಂದ ದೊಡ್ಡದಾಗಿಸುವ ಪ್ರಯತ್ನವನ್ನು ಮಾಡಲಾಯಿತು.
ಸಿದ್ದರಾಮಯ್ಯ, ಹೈಕಮಾಂಡ್ ವಿಫಲ: ಸಿದ್ದರಾಮಯ್ಯರು ಕೋಲಾರದಿಂದ ಚುನಾವಣೆಗೆ ಸ್ಪರ್ಧಿಸುವ ಮುನ್ನ ಕೋಲಾರದ ಬಣ ರಾಜಕೀಯವನ್ನು ಇತ್ಯರ್ಥ ಪಡಿಸಿ ಎರಡೂ ಬಣಗಳ ನಾಯಕತ್ವವಹಿಸಿರುವ ನಾಯಕರನ್ನು ಒಂದುಗೂಡಿಸಬೇಕು. ಆನಂತರ ಚು ನಾವಣೆಗೆ ಸ್ಪರ್ಧಿಸಬೇಕೆಂಬ ಕರಾರನ್ನು ಕೆ.ಎಚ್. ಮುನಿಯಪ್ಪ ಬಣ ಹಾಕಿತ್ತು. ರಮೇಶ್‌ಕುಮಾರ್ ಬಣಕ್ಕೆ ಇದು ಇಷ್ಟವಿರಲಿಲ್ಲ. ಚುನಾವಣಾ ತಯಾರಿಯಲ್ಲಿದ್ದ ಸಿದ್ದರಾಮಯ್ಯ ಅನಗತ್ಯ ಕೆಲಸಕ್ಕೆ ಸಮಯ ವ್ಯರ್ಥ ಮಾಡಲು ಇಚ್ಛಿಸದೆ ತಮ್ಮ ಸ್ಪರ್ಧೆಯನ್ನು ವರುಣಾ ಕ್ಷೇತ್ರಕ್ಕೆ ಮಿತಿಗೊಳಿಸಿಕೊಂಡರು. ಅಷ್ಟರಮಟ್ಟಿಗೆ ಕೋಲಾರ ಕಾಂಗ್ರೆಸ್ ಗುಂಪುಗಾರಿಕೆಯಿಂದ ದೂರ ಸರಿ ದರು. ಆನಂತರವೂ ಕೋಲಾರ ಜಿಲ್ಲೆಯಲ್ಲಿ ಕಾಂಗ್ರೆಸ್ ಎರಡು ಬಣಗಳಾಗಿಯೇ ಉಳಿದುಕೊಂಡಿತು. ಕಾಂಗ್ರೆಸ್ ಪಕ್ಷದ ಹೈಕಮಾಂಡ್‌ಗೂ ಕೋಲಾರ ಕಾಂಗ್ರೆಸ್‌ನ ಭಿನ್ನಮತ ಗೊತ್ತಿತ್ತು. ಆದರೂ, ಎರಡೂ ಬಣಗಳ ಮುಖಂಡರನ್ನು ದೆಹಲಿಗೆ ಕರೆಯಿಸಿ ಕಿವಿಹಿಂಡುವ ಕೆಲಸ ಮಾಡಲೇ ಇಲ್ಲ. ಕೋಲಾರದಲ್ಲಿ ಗುಂಪುಗಳನ್ನು ಒಗ್ಗೂಡಿಸುವ ಬದಲು ಸಿದ್ದರಾಮಯ್ಯರ ಕ್ಷೇತ್ರವನ್ನೇ ಬದಲಾಯಿಸುವ ಸಲಹೆ ನೀಡಿ ಸುಮ್ಮನಾಯಿತು.
ಮುಂದಿನ ಲೋಕಸಭೆಗೂ ಮುಂದುವರಿಯುವ ಸಾಧ್ಯತೆ: ಹಿಂದಿನ ಮೂರು ನಾಲ್ಕು ಚುನಾವಣೆಗಳಲ್ಲಿಯೂ ಕೋಲಾರ ಕಾಂಗ್ರೆಸ್ ಅಭ್ಯರ್ಥಿ ತನ್ನ ಎದುರಾಳಿ ಬಿಜೆಪಿ, ಜೆಡಿಎಸ್ ಜೊತೆಗೆ ತನ್ನದೇ ಪಕ್ಷದ ಮತ್ತೂಂದು ಗುಂಪಿನ ಜೊತೆಗೂ ಸೆಣಸಾಡುವುದು ಸಾಮಾನ್ಯವಾಗಿದೆ. 2024ರ ಲೋಕಸಭಾ ಚುನಾವಣೆಯಲ್ಲಿಯೂ ಇದು ಮುಂದುವರಿಯುವ ಸಾಧ್ಯತೆ ಇದೆ. ಕೆ.ಎಚ್.ಮುನಿಯಪ್ಪ ಮತ್ತೇ ಕೋಲಾರದಿಂದಲೇ ಸ್ಪರ್ಧಿಸುವ ಇರಾದೆ ತೋರಿಸುತ್ತಿದ್ದಾರೆ. ಇಲ್ಲವೇ ತಾವು ಸೂಚಿಸಿದವರೇ ಅಭ್ಯರ್ಥಿಯಾಗಬೇಕೆಂಬ ಷರತ್ತು ಹಾಕಿದ್ದಾರೆನ್ನಲಾಗಿದೆ. ಸಹಜವಾಗಿ ಕೋಲಾರದ ಮತ್ತೂಂದು ಗುಂಪು ಈ ಷರತ್ತಿಗೆ ಸೊಪ್ಪು ಹಾಕದೆ ತಮ್ಮದೇ ಅಭ್ಯ ರ್ಥಿಗಳ ಹುಡುಕಾಟದಲ್ಲಿದೆ. ಇತ್ತೀಚಿಗೆ ಕೋಲಾರ ಶಾಸಕ ಕೊತ್ತೂರು ಮಂಜುನಾಥ್ ತಮ್ಮ ಪಕ್ಷದ ಅಭ್ಯರ್ಥಿ ಸಿದ್ಧವಾಗಿದ್ದಾರೆಂಬ ಹೇಳಿಕೆ ನೀಡಿದ್ದು, ಲೋಕಸಭಾ ಚುನಾವಣೆಗೆ ತಯಾರಿಆಗುತ್ತಿರುವ ಕೆ.ಎಚ್.ಮುನಿಯಪ್ಪ ವಿರುದ್ಧವೇ ಎನ್ನುವುದನ್ನು ಜನ ಅರ್ಥ ಮಾಡಿಕೊಂಡಿದ್ದಾರೆ.
ಒಗ್ಗೂಡುವ ನಿರೀಕ್ಷೆ ಹುಸಿ: ಕೆ.ಆರ್.ರಮೇಶ್‌ಕುಮಾರ್ ಶ್ರೀನಿವಾಸಪುರ ಕ್ಷೇತ್ರದಿಂದ ಸೋಲನ್ನಪ್ಪಿದರು. ದೇವನಹಳ್ಳಿಯಿಂದ ಸ್ಪರ್ಧಿಸಿದ್ದ ಕೆ.ಎಚ್.ಮುನಿಯಪ್ಪ ಆಯ್ಕೆಯಾಗಿ ರಾಜ್ಯ ರಾಜಕಾರಣಕ್ಕೆ ಧುಮುಕಿದರು. ಹಿರಿತನದ ಆಧಾರದ ಮೇಲೆ ಮಂತ್ರಿಗಿರಿಯನ್ನು ಪಡೆದುಕೊಂಡು ಬಿಟ್ಟರು. 2019ರ ಲೋಕಸಭಾ ಚುನಾವಣೆಯ ಸೇಡು ಕೊಂಚ ಮಟ್ಟಿಗೆ ತೀರಿದ ಹಿನ್ನೆಲೆಯಲ್ಲಿ ಹಾಗೂ ರಾಜ್ಯದಲ್ಲಿ ಸಿದ್ದರಾಮಯ್ಯರ ಕಾಂಗ್ರೆಸ್ ಸರ್ಕಾರವೇ ಅಧಿಕಾರಕ್ಕೆ ಬಂದ ಕಾರಣ ಹಾಗೂ ಕೋಲಾರದ ಎರಡೂ ಗುಂಪುಗಳ ಬಗ್ಗೆ ಅರಿವಿದ್ದ ಸಿದ್ದರಾಮಯ್ಯ ಇವರನ್ನು ಒಂದುಗೂಡಿಸುತ್ತಾರೆಂಬ ನಿರೀಕ್ಷೆ ಇತ್ತು. ಆದರೆ, ಗ್ಯಾರಂಟಿ ಭರವಸೆಗಳ ಅನುಷ್ಠಾನ ಮತ್ತು ಆಡಳಿತದಲ್ಲಿ ಮಗ್ನರಾದ ಸಿದ್ದರಾಮಯ್ಯ ಕೋಲಾರಕ್ಕೆ ಯರಗೋಳ್ ಉದ್ಘಾಟನೆಗೆ ಮಾತ್ರ ಬಂದು ಹೋದರಷ್ಟೆ ಹೊರತು, ಗುಂಪುಗಳ ಬಗ್ಗೆ ಚಕಾರವೆತ್ತಲಿಲ್ಲ. ಎರಡೂ ಗುಂಪುಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಅವರು ಕೋಲಾರ ಬಣ ರಾಜಕೀಯವನ್ನು ಕೋಲಾರಕ್ಕಷ್ಟೇ ಸೀಮಿತಗೊಳಿಸಿ ತಮ್ಮ ತಲೆಬಿಸಿಯನ್ನು ಕಡಿಮೆ ಮಾಡಿಕೊಂಡಿದ್ದಾರೆ.
ಬಣ ರಾಜಕೀಯಕ್ಕೆ ತಿಲಾಂಜಲಿ ಯಾವಾಗ?: ಬಣ ರಾಜಕೀಯಕ್ಕೆ ತಿಲಾಂಜಲಿ ಹಾಡುವುದು ಯಾವಾಗ ಇಂತಹದ್ದೊಂದು ಪ್ರಶ್ನೆ ಕೋಲಾರ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರ ವಲಯದಲ್ಲಿ ಕೇಳಿ ಬರುತ್ತಿದೆ. ಏಕೆಂದರೆ, ಬಣ ರಾಜಕೀಯದಲ್ಲಿ ಬಡವಾಗಿರುವವರು ತಟಸ್ಥವಾಗಿರುವ ಮುಖಂಡರು ಹಾಗೂ ಕಾರ್ಯಕರ್ತರು. ಇವರೊಂದಿಗಿದ್ದರೆ ಅವರಿಗೆ ಕೋಪ, ಅವರೊಂದಿಗೆ ಗುರುತಿಸಿಕೊಂ ಡರೆ ಇವರಿಗೆ ಕೆಂಗಣ್ಣು ಎಂಬಂತ ಪರಿಸ್ಥಿತಿಯಲ್ಲಿ ಪಕ್ಷ ಕಟ್ಟಬೇಕಾದ ಅನಿವಾರ್ಯ ತೆಯಲ್ಲಿ ದ್ದಾರೆ. ಕೋಲಾರದ ಬಣ ರಾಜಕೀಯವನ್ನು ಬಗೆಹರಿಸುವ ಆಸಕ್ತಿ ರಾಜ್ಯದ ಮುಖಂಡರಿಗೂ ಇಲ್ಲ, ಹೈಕಮಾಂಡ್ ನಾಯಕರಿಗೂ ಇಲ್ಲವಾಗಿದೆ. ತೆಲಂಗಾಣ ಪ್ರಚಾವಿರಲಿ, ಕೋಲಾರ ಡಿಸಿಸಿ ಬ್ಯಾಂಕಿಗೆ ಚುನಾವಣೆ ನಡೆಸುವ ವಿಚಾರವಿರಲಿ ತಾವು ಒಂದಾಗುವುದಿಲ್ಲ ಎಂಬ ಸಂದೇಶವನ್ನು ಎರಡೂ ಗುಂಪು ರವಾನಿಸಿ ಬಿಟ್ಟಿದೆ. ಬೆಕ್ಕಿಗೆ ಗಂಟೆ ಕಟ್ಟುವರಾರು ಎಂಬಂತೆ ಕೋಲಾರ ಕಾಂಗ್ರೆಸ್ ಬಣ ರಾಜಕೀಯಕ್ಕೆ ಅಂತ್ಯ ಹಾಡುವವರು ಯಾರು ಎಂಬುದೇ ಉತ್ತರ ಸಿಗದ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.
ತೆಲಂಗಾಣ ಪ್ರಚಾರ: ಕೋಲಾರ ಜಿಲ್ಲೆಯವರಿಗೆ ತೆಲುಗು ಭಾಷೆ ಗೊತ್ತಿರುವುದರಿಂದ ಜಿಲ್ಲೆಯ ರಾಜಕಾರಣಿಗಳು, ಜನಪ್ರತಿನಿಧಿಗಳಿಗೆ ಕಾಂಗ್ರೆಸ್ ಹೆಚ್ಚು ಪ್ರಚಾರದ ಜವಾಬ್ದಾರಿಯನ್ನು ಕೊಟ್ಟಿದೆ. ಇದರಂತೆ ಕೋಲಾರ ಶಾಸಕ ಕೊತ್ತೂರು ಮಂಜುನಾಥ್, ಮಾಲೂರು ಶಾಸಕ ಕೆ.ವೈ.ನಂಜೇಗೌಡ, ಸಚಿವ ಕೆ.ಎಚ್.ಮುನಿಯ ಪ್ಪರ ಬೆಂಬಲಿಗರು ಹಾಗೂ ರಮೇಶ್‌ಕುಮಾರ್ ಬೆಂಬಲಿಗರು ತಮಗಿಷ್ಟವಾದ ತೆಲಂಗಾಣ ರಾಜ್ಯದ ಕ್ಷೇತ್ರಗಳಲ್ಲಿ ಪ್ರತ್ಯೇಕವಾಗಿಯೇ ಪ್ರವಾಸದಲ್ಲಿ ತೊಡಗಿಸಿಕೊಂಡಿದ್ದಾರೆ. ಎಲ್ಲರೂ ಕಾಂಗ್ರೆಸ್ ಪರವಾಗಿಯೇ ಮತಯಾಚಿಸುತ್ತಿದ್ದರೂ, ಕೋಲಾರದ ತಮ್ಮ ಬಣ ರಾಜಕೀಯವನ್ನು ಕಿಂಚಿತ್ತೂ ಸರಿಪಡಿಸಿಕೊಳ್ಳುವಲ್ಲಿ ಮಾತ್ರ ಮನಸು ಮಾಡುತ್ತಿಲ್ಲ
-ಕೆ.ಎಸ್. ಗಣೇಶ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.