ನಿರಾಸೆಯೇ ಹಿಂದಿನ 5 ಬಜೆಟ್‌ನ ಕೊಡುಗೆ
Team Udayavani, Feb 1, 2019, 7:04 AM IST
ಕೋಲಾರ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಿಂದೆ ನಾಲ್ಕು ವರ್ಷಗಳಲ್ಲಿ ಪ್ರಕಟಿಸಿದ್ದ ಬಜೆಟ್‌ನಲ್ಲಿ ಜಿಲ್ಲೆಗೆ ಯಾವುದೇ ವಿಶೇಷ ಯೋಜನೆ ಪ್ರಕಟಿಸಿಲ್ಲವಾದ್ದರಿಂದ ಕೊನೆ ಬಜೆಟ್ ಬಗ್ಗೆ ನಿರೀಕ್ಷೆಗಳು ನಿರಾಶಾದಾಯಕವಾಗಿವೆ.
ಈಡೇರದ ರೈಲ್ವೆ ಬೇಡಿಕೆ: ಈ ಹಿಂದಿನ ಯುಪಿಎ ಸರ್ಕಾರದಲ್ಲಿ ಜಿಲ್ಲೆಗೆ ಘೋಷಿಸಿದ್ದ ರೈಲ್ವೆ ಕೋಚ್ ಕಾರ್ಖಾನೆ ಸೇರಿದಂತೆ ಇನ್ನಿತರ ರೈಲ್ವೆ ಯೋಜನೆಗಳ ಕುರಿತಂತೆ ಕಳೆದ 4 ವರ್ಷಗಳ ಕೇಂದ್ರ ಬಜೆಟ್‌ನಲ್ಲಿ ಮೋದಿ ಸರ್ಕಾರ ಯಾವುದೇ ಅನುದಾನ ಘೋಷಿ ಸಲಿಲ್ಲ. ಈಗ, ಅವಧಿಯ ಕೊನೆಯ 6ನೇ ಬಜೆಟ್ ಮಂಡಿಸುತ್ತಿದ್ದು ಜಿಲ್ಲೆಯ ಜನತೆ ನಿರೀಕ್ಷೆ ಹೆಚ್ಚಾಗಿದೆ.
ರೈಲ್ವೆ ರಾಜ್ಯ ಸಚಿವರಾಗಿದ್ದ ಕೆ.ಎಚ್.ಮುನಿ ಯಪ್ಪ ಬಜೆಟ್‌ನಲ್ಲಿ ಪ್ರಕಟಿಸಿದ್ದ ಯಾವುದೇ ಯೋಜ ನೆಗೂ ಚಾಲನೆ ಸಿಗಲಿಲ್ಲ. ರೈಲ್ವೆ ಕೋಚ್ ತಯಾ ರಿಕಾ ಕಾರ್ಖಾನೆ ಕೈಗೆಟುಕದ ಗಗನ ಕುಸುಮ ವಾಗಿದೆ. ಶ್ರೀನಿವಾಸಪುರ ಸಿಟಿಎಂ ನಿಲ್ದಾಣ ಸಂಪರ್ಕಿ ಸುವ ಕಾಮಗಾರಿ ದಶಕಗಳಿಂದಲೂ ನನೆಗುದಿಗೆ ಬಿದ್ದಿದೆ. ಬ್ರಾಡ್‌ಗೇಜ್ ಆಗಿ ಪರಿವರ್ತನೆಗೊಂಡ ಬಂಗಾರಪೇಟೆ, ಕೋಲಾರ, ಶ್ರೀನಿವಾಸಪುರ, ಚಿಂತಾಮಣಿ, ಶಿಡ್ಲಘಟ್ಟ, ಚಿಕ್ಕಬಳ್ಳಾಪುರ ಮಾರ್ಗದಲ್ಲಿ ದೊಡ್ಡ ರೈಲುಗಳ ಸಂಚಾರ ಆರಂಭವಾಗಬೇಕೆಂಬ ಕನಸು ಕನಸಾಗಿಯೇ ಉಳಿದಿದೆ.
ಯುಪಿಎ ಸರ್ಕಾರದಲ್ಲಿ ಆರಂಭವಾಗಿದ್ದ ಮುಳಬಾಗಿಲು, ಕೋಲಾರ ಮೇ ಲೆ ಹಾದು ಹೋಗಬೇಕಾಗಿದ್ದ ಕಡಪಾ-ವೈಟ್ಫೀಲ್ಡ್ ರೈಲ್ವೆ ಮಾರ್ಗ ಅಳವಡಿಸುವ ಕಾಮಗಾರಿ ಸರ್ವೇ ಕಾರ್ಯಕ್ಕೆ ಸ್ಥಗಿತಗೊಂಡಿದೆ. ಎಲ್ಲಾ ರೈಲ್ವೆ ನಿಲ್ದಾಣಗಳಿಗೆ ಎಸ್ಕಲೇಟರ್ ಅಳವಡಿಕೆಯೆಂದು ಬಜೆಟ್ನಲ್ಲಿ ಘೋಷಿಸಲಾಗಿತ್ತು. ಆದರೆ, ಜಿಲ್ಲೆಯ ಯಾವುದೇ ರೈಲ್ವೆ ನಿಲ್ದಾಣಕ್ಕೆ ಎಸ್ಕಲೇಟರ್‌ಗಳ ಅಳವಡಿಕೆಯಾಗಿಲ್ಲ.
ಹೈನು, ಪಶು ,ರೇಷ್ಮೆಗೆ ಸಹಕಾರಿಯಾಗಲಿಲ್ಲ: ಜಿಲ್ಲೆಯ ರೈತರು ಹೆಚ್ಚಾಗಿ ಅವಲಂಬಿಸಿರುವ ಹೈನುಗಾರಿಕೆ, ಪಶುಪಾಲನೆ, ರೇಷ್ಮೆ ಕೃಷಿಯೂ ಕೇಂದ್ರ ಸರ್ಕಾರದಿಂದ ಹೆಚ್ಚಿನ ಪ್ರೋತ್ಸಾಹ ದೊರೆಯಲಿಲ್ಲ. 2018 ನೇ ಕೇಂದ್ರ ಬಜೆಟ್‌ನಲ್ಲಿ ಹೈನುಗಾರಿಕೆ, ಆಹಾರ ಸಂಸ್ಕರಣೆ, ಪಶುಪಾಲನೆಗೆ ಸಾವಿರಾರು ಕೋಟಿ ರೂ.,ಗಳ ಯೋಜನೆ ಪ್ರಕಟಿಸಿತ್ತು. ಆದರೆ, ಜಿಲ್ಲೆಯಲ್ಲಿ ಯಾವುದೇ ಹೊಸ ಯೋಜನೆ ಆರಂಭವಾಗಲೇ ಇಲ್ಲ. ಟೊಮೆಟೋ, ಈರುಳ್ಳಿ, ಆಲೂಗಡ್ಡೆಗೆ ಫುಡ್‌ಪಾರ್ಕ್ ನಿರ್ಮಾಣವನ್ನು ಹಿಂದಿನ ಬಜೆಟ್‌ನಲ್ಲಿ ಘೋ ಷಿಸಲಾಗಿತ್ತು. ಆದರೆ, ಜಿಲ್ಲೆಗೆ ಈ ಫುಡ್ ಪಾರ್ಕ್‌ಗಳು ದಕ್ಕಲೇ ಇಲ್ಲ. ಶಾಶ್ವತ ನೀರಾವರಿ ಯೋಜನೆಗೆ ಗಮನ ಹರಿಸಿಲ್ಲ. ಪ್ರತಿ ವರ್ಷ ಕೇಂದ್ರ ತಂಡದಿಂದ ಬರ ಅಧ್ಯ ಯನ ನಡೆದರೂ ವಿಶೇಷ ಯೋಜನೆ ಇಲ್ಲ.
ಬಾರದ ವೈದ್ಯಕೀಯ ಕಾಲೇಜು: ಪ್ರತಿ ಸಂಸದೀಯ ಕ್ಷೇತ್ರದಲ್ಲೂ ಒಂದು ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸುವುದಾಗಿ ಹಿಂದಿನ ಬಜೆಟ್‌ನಲ್ಲಿ ಘೋಷಿಸಲಾಗಿತ್ತು. ಆದರೆ, ಈ ಬಗ್ಗೆ ಇದುವರೆಗೂ ಯಾವುದೇ ಚಕಾರ ಎತ್ತಿಲ್ಲ. ಪ್ರಕ್ರಿಯೆ ಆರಂಭವಾಗಿಲ್ಲ. ಆಯುಷ್ಮಾನ್ ಭಾರತ ಯೋಜನೆ ಆರೋಗ್ಯ ಕರ್ನಾಟಕ ಯೋಜನೆಯಡಿ ಮಿಳಿತವಾಗಿ ಜಾರಿಗೆ ಬಂದಿದ್ದರೂ, ಇಂದಿಗೂ ಜಿಲ್ಲೆಯ ಎಲ್ಲಾ ಜನತೆಗೂ ಆರೋಗ್ಯ ಕಾರ್ಡ್ ಸಿಕ್ಕಿಲ್ಲ. ಕಾರ್ಡ್ ನೋಂದಣಿಗೆ ಈಗಲೂ ಜನತೆ ಕೋಲಾರದ ಎಸ್‌ಎನ್‌ಆರ್ ಆಸ್ಪತ್ರೆಗೆ ಬರಬೇಕಾಗಿದೆ.
ಉದ್ಯೋಗ ಸೃಷ್ಟಿ, ಸಾಲ ಮನ್ನಾ ಇಲ್ಲ: ಜಿಲ್ಲೆಯಡಿ ಹಲವೆಡೆ ಕೈಗಾರಿಕಾ ವಲಯ ಆರಂಭಿಸಲಾಗಿದೆ. ಆದರೆ, ಸ್ಥಳೀಯರಿಗೆ ಉದ್ಯೋಗಾವಕಾಶ ನಿರೀಕ್ಷಿಸಿದಂತೆ ಸಿಗಲಿಲ್ಲ. ನೋಟ್ ಬ್ಯಾನ್‌ನಿಂದ ಸಣ್ಣ ಮತ್ತು ಮಧ್ಯಮ ವರ್ಗದ ಉದ್ಯಮಗಳು ಮುಚ್ಚಿದ್ದರಿಂದ ಉದ್ಯೋಗ ಕಡಿಮೆಯಾಗುವಂತಾಯಿತು. ಇನ್ನು ಕೇಂದ್ರ ಸರ್ಕಾರ ಸಾಲ ಮನ್ನಾ ಮಾಡುತ್ತದೆ ಎಂದು ನಿರೀಕ್ಷಿಸಿದ್ದರು. ಆದರೆ, ಸಾಲ ಮನ್ನಾ ಮಾಡದಿರುವುದಕ್ಕೆ ಅಸಮಾಧಾನವಿದೆ.
ನೋಟ್ ಬ್ಯಾನ್, ಜಿಎಸ್‌ಟಿ: ಕೇಂದ್ರ ಸರ್ಕಾರದ ನೋಟ್ ಬ್ಯಾನ್‌ನಿಂದಾಗಿ ಜಿಲ್ಲೆಯ ಸಾಮಾನ್ಯ ಜನತೆ ಇಂದಿಗೂ ಅನಾನುಕೂಲಪಡುತ್ತಿದ್ದಾರೆ. ಶಾಶ್ವತ ಬರ ಪೀಡಿತ ಹಾಗೂ ಹಿಂದುಳಿದ ಜಿಲ್ಲೆಗೆ ಜಿಎಸ್‌ಟಿ ತೆರಿಗೆ ಪದ್ಧತಿ ಫಲಗಳು ತಕ್ಷಣಕ್ಕೆ ದೊರೆತಿಲ್ಲ. ಇವೆಲ್ಲಾ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಚುನಾವಣಾ ವರ್ಷದ ಬಜೆಟ್ನಿಂದಾಗಿ ಜಿಲ್ಲೆ ಉದ್ಧಾರವಾಗಿ ಬಿಡು ತ್ತದೆಯೆಂಬ ಭ್ರಮೆ ಜಿಲ್ಲೆಯ ಜನರಲ್ಲಿ ಇಲ್ಲವಾಗಿದೆ.
ಪುನರಾರಂಭಗೊಳ್ಳದ ಕೆಜಿಎಫ್ ಚಿನ್ನದ ಗಣಿ: ಕೋಲಾರ ಜಿಲ್ಲೆಯಲ್ಲಿ19 ವರ್ಷಗಳ ಹಿಂದೆ ಮುಚ್ಚಲ್ಪಟ್ಟ ಚಿನ್ನದ ಗಣಿಯನ್ನು ಪುನಾರಂಭಿಸಲು ಸುಪ್ರಿಂ ಕೋರ್ಟ್ ಹಸಿರು ನಿಶಾನೆ ತೋರಿಸಿದರೂ, ಚಿನ್ನದ ಗಣಿ ಪುನಶ್ಚೇತನಗೊಳಿಸಲು ಕೇಂದ್ರ ಸರ್ಕಾರ ಯಾವುದೇ ವಿಧದಲ್ಲೂ ಪ್ರಯತ್ನಿಸಲಿಲ್ಲ. ಇಡೀ 4 ವರ್ಷ ರಾಜ್ಯ-ಕೇಂದ್ರ ಸರ್ಕಾರಗಳು ಬಿಜಿಎಂಎಲ್‌ನ ಆಸ್ತಿಯನ್ನು ಸರ್ವೇ ಮಾಡಿಸಿ ಪಟ್ಟಿ ಮಾಡಿಸಿದ್ದೇ ಸಾಧನೆ ಎನ್ನುವಂತಾಗಿದೆ. ಮೂರೂವರೆ ಸಾವಿರ ಕಾರ್ಮಿಕ ಕುಟುಂಬಗಳು ಇಂದಿಗೂ ಕೆಲಸಕ್ಕಾಗಿ ಬೆಂಗಳೂರಿಗೆ ನಿತ್ಯ ಪ್ರಯಾಣಿಸಬೇಕಾಗಿದೆ.
ಗಣಿ ಕಾರ್ಮಿಕರಿಗೆ ಪುನರ್ವಸತಿ ಯೋಜನೆ ಘೋಷಿಸಿ ಅನುಷ್ಠಾನಕ್ಕೆ ತರುವಲ್ಲಿ ಕೇಂದ್ರ ಸರ್ಕಾರ ದಿವ್ಯ ನಿರ್ಲಕ್ಷ್ಯ ತೋರಿಸುತ್ತಿರುವುದು ಜಿಲ್ಲೆಯ ಜನರ ಆಕ್ರೋಶಕ್ಕೆ ಕಾರಣ. ಇನ್ನು ಕೆಜಿಎಫ್ನಲ್ಲಿರುವ ಬೆಮೆಲ್ ಕಾರ್ಖಾನೆಯನ್ನು ಖಾಸಗಿ ಸಂಸ್ಥೆಗೆ ಒಪ್ಪಿಸುವ ಕಾರ್ಯಕ್ಕೆ ಕೇಂದ್ರ ಸರ್ಕಾರ ಕೈಹಾಕುವ ಮೂಲಕ ಅಲ್ಲಿನ ಕಾರ್ಮಿಕ ವರ್ಗದ ಕೆಂಗಣ್ಣಿಗೆ ಗುರಿಯಾಗಿತ್ತು. ಈ ಕುರಿತು ಪ್ರತಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಬೆಮೆಲ್ ಖಾಸಗೀಕರಣದ ಪ್ರಯತ್ನ ನಿಂತಿಲ್ಲವಾದರೂ ಕೊಂಚ ವಿಳಂಬವಾಗುವಂತಾಗಿದೆ.
* ಕೆ.ಎಸ್.ಗಣೇಶ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.