ಮುಚ್ಚದ ಆಹಾರ ಮುಗಿ ಬಿದ್ದು ತಿನ್ನುವ ಜನ!
Team Udayavani, Feb 23, 2020, 3:00 AM IST
ಕೋಲಾರ: ಜಿಲ್ಲಾ ಕೇಂದ್ರ ಕೋಲಾರದಲ್ಲಿ ಸಾವಿರಕ್ಕೂ ಹೆಚ್ಚು ಬೀದಿ ಬದಿಯಲ್ಲಿ ಆಹಾರ ಪದಾರ್ಥಗಳ ಮಾರಾಟ ಮಾಡುವ ಅಂಗಡಿಗಳಿದ್ದು, ಆಹಾರದ ಗುಣಮಟ್ಟ, ಸ್ವಚ್ಛತೆ, ಸುರಕ್ಷತೆ, ಸಾಂಕ್ರಾಮಿಕ ರೋಗಗಳ ಹರಡುವಿಕೆ, ನೀರು ಶುದ್ಧವಾಗಿದೆಯೇ, ಇತ್ಯಾದಿ ವಿಚಾರಗಳ ಬಗ್ಗೆ ತಲೆಕೆಡಿಸಿಕೊಳ್ಳದೆ, ಬೀದಿ ಬದಿ ಅಂಗಡಿಗಳಲ್ಲಿ ಧೂಳಿನ ವಾತಾವರಣದಲ್ಲಿಯೇ ತಯಾರಾದ ಮುಚ್ಚದ ಆಹಾರವನ್ನು ಜನ ಮುಗಿ ಬಿದ್ದು ತಿನ್ನುವ ದೃಶ್ಯ ಸಾಕಷ್ಟು ಕಾಣಿಸುತ್ತದೆ.
ಬೀದಿ ಬದಿಯ ಹೋಟೆಲ್‌ಗಳೇ ಜನಪ್ರಿಯ!: ಕೋಲಾರದಂತ ಪುಟ್ಟ ನಗರದಲ್ಲಿ ಬಡವರು ಹಾಗೂ ಮಧ್ಯಮ ವರ್ಗದವರ ಸಂಖ್ಯೆಯೇ ಹೆಚ್ಚು. ಹೋಟೆಲ್‌ನಲ್ಲಿ ತಿಂದು ಜಿಎಸ್‌ಟಿ ಸೇರಿಸಿ ಬಿಲ್ ಪಾವತಿಸುವುದು ಈ ವರ್ಗಕ್ಕೆ ಒಗ್ಗದ ವಿಚಾರವೇ ಆಗಿದೆ. ಇದರ ಜೊತೆಗೆ ಬೀದಿ ಬದಿ ನಿಂತು ತಿನ್ನುವುದು ಮೇಲ್ಮಧ್ಯಮ ವರ್ಗದವರಿಗೆ ಫ್ಯಾಷನ್ ಆಗಿರುವುದರಿಂದ ಎಲ್ಲಾ ವರ್ಗದ ಜನರು ಬೀದಿ ಬದಿಯ ಆಹಾರಕ್ಕೆ ಜೋತು ಬೀಳುತ್ತಿದ್ದಾರೆ.
ಇದರಿಂದ ಜಿಲ್ಲಾ ಕೇಂದ್ರದ ಯಾವುದೇ ಪ್ರಮುಖ ರಸ್ತೆಯಲ್ಲಿ ಹೆಜ್ಜೆಗೊಂದು ಬೀದಿ ಬದಿಯ ಹೋಟೆಲ್‌ಗಳಿವೆ. ಈ ಹೋಟೆಲ್‌ಗಳಲ್ಲಿ ತರಾವರಿ ತಿಂಡಿ, ಊಟ, ವೆಜ್, ನಾನ್‌ವೆಜ್ ತಿನಿಸುಗಳು ಕೈಗೆಟುಕುವ ಧರದಲ್ಲಿ ಜನತೆಗೆ ಸಿಗುತ್ತಿರುವುದರಿಂದ ಇತ್ತೀಚಿನ ದಿನಗಳಲ್ಲಿ ಬೀದಿ ಬದಿಯ ಹೋಟೆಲ್ ಉದ್ಯಮ ವಿಪುಲವಾಗಿಯೇ ಬೆಳೆದಿದೆ. ಸುಸಜ್ಜಿತ ಕಟ್ಟಡದಲ್ಲಿ ಹೋಟೆಲ್ ನಡೆಸುವವರು ಸಂಜೆ ವೇಳೆ ಬೀದಿ ಬದಿಯ ಗ್ರಾಹಕರನ್ನು ಆಕರ್ಷಿಸಲು ತಮ್ಮ ಹೋಟೆಲ್ ಮುಂದೆಯೇ ಬೀದಿ ಬದಿ ತಿನಿಸು ತಯಾರಿಸುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ.
ತರಹೇವಾರಿ ತಿಂಡಿ, ಊಟ: ಕೋಲಾರ ನಗರದಲ್ಲಿಯೇ ಬೆಳಗ್ಗೆ 6 ರಿಂದ ಮಧ್ಯರಾತ್ರಿಯವರೆಗೂ ಬೀದಿ ಬದಿಯಲ್ಲಿಯೇ ಇಡ್ಲಿ ದೋಸೆ, ಅನ್ನದ ವೈವಿಧ್ಯಮಯ ಬಾತ್‌ಗಳಿಂದ ಹಿಡಿದು ಮೊಟ್ಟೆ ಆಮ್ಲೆಟ್, ಕಬಾಬ್, ಮೀನು, ಬಿರಿಯಾನಿ ಊಟದವರೆಗೂ ಎಲ್ಲವೂ ಬೀದಿ ಬದಿಯಲ್ಲಿಯೇ ಸಿಗುತ್ತದೆ. ಇದರ ಜೊತೆಗೆ ಸಂಜೆ ವೇಳೆ ಮಾತ್ರವೇ ತೆರೆಯುವ ಬೊಂಡಾ, ಬಜ್ಜಿ, ವಡೆ, ಸಮೋಸ, ಜಿಲೇಬಿಯಂತ ಸಿಹಿ ತಿನಿಸುಗಳು, ಪಾನೀಪೂರಿ, ಮಸಾಲೆ ಪೂರಿ ಅಂಗಡಿಗಳು ಲೆಕ್ಕವಿಡದಷ್ಟು ಸಂಖ್ಯೆಯಲ್ಲಿವೆ.
ಶುಚಿತ್ವ ಮಾಯ: ಬೀದಿ ಬದಿಯ ಹೋಟೆಲ್‌ಗಳಲ್ಲಿ ಶುಚಿತ್ವಕ್ಕೆ ಆದ್ಯತೆ ಇಲ್ಲ. ಕಸದ ತೊಟ್ಟಿಯ ಪಕ್ಕದಲ್ಲಿಯೇ ದೋಸೆ, ಇಡ್ಲಿ ಮಾಡಿಕೊಟ್ಟರೂ ಜನರು ತುಟಿಪಿಟಕೆನ್ನದೆ ತಿನ್ನುವುದು ವಿಶೇಷ. ಆಹಾರ ತಯಾರಿಕೆಗೆ ಬಳಸುವ ಆಹಾರ ಪದಾರ್ಥಗಳ ಗುಣಮಟ್ಟದ ಬಗ್ಗೆಯೂ ಚಕಾರವೆತ್ತುವರಿಲ್ಲ. ಇಲ್ಲಿ ರುಚಿಯೊಂದಕ್ಕೆ ಮಾತ್ರವೇ ಆದ್ಯತೆ. ಬಾಯಿಗೆ ರುಚಿ ಸಿಕ್ಕಿತೆಂದರೆ ಜನ ಇನ್ಯಾವ ವಿಚಾರವನ್ನು ಲೆಕ್ಕಿಸದೆ ತಿನ್ನುವುದು ರೂಢಿ ಮಾಡಿಕೊಳ್ಳುತ್ತಾರೆ.
ನೀರು ಬಳಕೆ: ಕೋಲಾರ ಜಿಲ್ಲಾ ಕೇಂದ್ರ ಸೇರಿದಂತೆ ಇಡೀ ಜಿಲ್ಲೆಯಲ್ಲಿ ಭೂಮೇಲ್ಮಟ್ಟದ ನೀರಿನ ಮೂಲಗಳಿಲ್ಲ. ಈ ಕಾರಣದಿಂದ ಕೊಳವೆ ಬಾವಿಯ ನೀರನ್ನು ಶುದ್ಧೀಕರಿಸಿ ಕುಡಿಯುವುದು ಅನಿವಾರ್ಯ. ಬೀದಿ ಬದಿಯ ಹೋಟೆಲ್ ಮಾಲಿಕರು ಶುದ್ಧ ನೀರಿನ ಘಟಕಗಳಿಂದ ನೀರಿನ ಕ್ಯಾನ್‌ಗಳನ್ನು ತಂದೇ ಆಹಾರ ತಯಾರಿಕೆ ಹಾಗೂ ಸಾರ್ವಜನಿಕರಿಗೂ ಕುಡಿಯಲು ನೀಡುತ್ತಾರೆ. ಏಕೆಂದರೆ, ನೀರು ಶುದ್ಧವಾಗಿಲ್ಲವೆಂದರೆ ಗ್ರಾಹಕರನ್ನು ಕಳೆದುಕೊಳ್ಳುವ ಭೀತಿ ವ್ಯಾಪಾರಿಗಳನ್ನು ಕಾಡುತ್ತಿದೆ. ನೀರಿನ ಶುದ್ಧತೆ ಹೊರತುಪಡಿಸಿದರೆ ಉಳಿದ್ಯಾವ ವಿಚಾರಗಳಿಗೂ ವ್ಯಾಪಾರಿಗಳು ತಲೆಕೆಡಿಸಿಕೊಳ್ಳುವುದಿಲ್ಲ.
ಸುರಕ್ಷತೆ ಖೋತಾ: ಆಹಾರ ತಯಾರಿಕೆಗೆ ಗುಣಮಟ್ಟದ ಆಹಾರ ಪದಾರ್ಥ, ಉತ್ತಮ ಗುಣಮಟ್ಟದ ಎಣ್ಣೆ, ಆಹಾರ ಪೊಟ್ಟಣ ಕಟ್ಟಲು ಪ್ಲಾಸ್ಟಿಕ್ ರಹಿತ ವ್ಯವಸ್ಥೆ ಇತ್ಯಾದಿಗಳು ಆಹಾರ ತಯಾರಿಕರಿಗಾಗಲಿ ಗ್ರಾಹಕರಿಗಾಗಲಿ ಆದ್ಯತೆಯ ವಿಚಾರವಾಗಿಲ್ಲ. ಇದರಿಂದ ಪ್ಲಾಸ್ಟಿಕ್ ಹಾಳೆ, ಅಲ್ಯುಮಿನಿಯಂ ಲೇಪಿತ ಹಾಳೆಗಳಲ್ಲಿ ಆಹಾರ ತಿನ್ನಲು ನೀಡುವುದು ಸಾಮಾನ್ಯವಾಗಿದೆ. ಪೊಟ್ಟಣ ಕಟ್ಟುವಾಗಲೂ ಪ್ಲಾಸ್ಟಿಕ್ ಹೇರಳವಾಗಿ ಬಳಸಲಾಗುತ್ತಿದೆ. ಹೀಗೆ ತಿಂದ ಪ್ಲೇಟ್‌ಗಳನ್ನು ಎಂಜಲು ನೀರಿನ ಬಕೆಟ್‌ಗಳಲ್ಲಿಯೇ ಅದ್ದಿ ಮತ್ತೂಮ್ಮೆ ತಿನ್ನಲು ರೆಡಿ ಮಾಡಲಾಗುತ್ತಿದೆ. ಕೆಲವರು ಮಾತ್ರವೇ ಪ್ರತಿ ದಿನದ ವ್ಯಾಪಾರಕ್ಕಾಗುವಷ್ಟು ತಟ್ಟೆಗಳನ್ನು ತಂದು ಮನೆಗೆ ಕೊಂಡೊಯ್ದು ತೊಳೆಯುತ್ತಾರೆ.
ಧೂಳುಮಯ ಆಹಾರ: ಕೋಲಾರದಲ್ಲಿ ಸದ್ಯಕ್ಕೆ ಅಮೃತಸಿಟಿ ಯೋಜನೆಯ ಯುಜಿಡಿ ಕಾಮಗಾರಿ, ಯರಗೋಳ್ ಪೈಪ್‌ಲೈನ್ ಹಾಕುವ ಕಾಮಗಾರಿ ನಡೆಯುತ್ತಿದ್ದು, ಬಹುತೇಕ ರಸ್ತೆಗಳು ಧೂಳುಮಯವಾಗಿದೆ. ಬೀದಿ ಬದಿಯ ಆಹಾರ ತಯಾರಿಸುವರಿಗೆ ಮತ್ತು ತಿನ್ನುವರಿಗೆ ಈ ಧೂಳು ಲೆಕ್ಕವೇ ಇಲ್ಲ. ಧೂಳಿನಲ್ಲಿಯೇ ಆಹಾರ ತಯಾರಿಕೆ, ತಿನ್ನುವುದು ಯಥೇಚ್ಛವಾಗಿ ಸಾಗಿದೆ. ಕೆಲವೆಡೆ ತಯಾರಿಸಿ ಬೊಂಡಾ, ಬಡ್ಡಿ, ವಡೆ, ಕಬಾಬ್, ಮೀನು ಮಸಾಲೆ, ಬೇಯಿಸಿದ ಮೊಟ್ಟೆ ಇತ್ಯಾದಿಗಳನ್ನು ಧೂಳಿನಲ್ಲಿಯೇ ತೆರೆದಿಡುವ ಸಂಪ್ರದಾಯವು ಇದೆ. ಆದರೆ, ಗ್ರಾಹಕರು ಇದ್ಯಾವುದನ್ನು ಪ್ರಶ್ನಿಸದೆ ಖರೀದಿಸಿ ತಿನ್ನುತ್ತಾರೆನ್ನುವುದೇ ಸೋಜಿಗ.
ಕಸ ಉತ್ಪತ್ತಿ: ಕೋಲಾರ ನಗರದ ಬಹುತೇಕ ಬೀದಿ ಬದಿಯ ಹೋಟೆಲ್‌ಗಳು ಪ್ರತ್ಯೇಕವಾಗಿ ಕಸ ಸಂಗ್ರಹಿಸಲು ಡ್ರಮ್ ಅಥವಾ ಪೆಟ್ಟಿಗೆಗಳನ್ನು ಇಡಬೇಕಾಗುತ್ತದೆ. ಕೆಲವರು ಡ್ರಮ್‌ಗಳನ್ನು ಇಟ್ಟಿದ್ದಾರೆ. ಕೆಲವರು ಬೀದಿ ಬದಿಯ ಕಸದ ರಾಶಿಗೆ ಎಸೆಯುವ ವ್ಯವಸ್ಥೆ ಇಟ್ಟುಕೊಂಡಿದ್ದಾರೆ. ಕಸ ಸಂಗ್ರಹಿಸಲು ಡ್ರಮ್ ಅಥವಾ ಬಾಕ್ಸ್‌ಗಳನ್ನು ಇಟ್ಟವರು ಸಹ ವ್ಯಾಪಾರ ಮುಗಿದ ಮೇಲೆ ರಸ್ತೆ ಬದಿಯಲ್ಲಿಯೇ ಅದನ್ನು ಸುರಿದು ಹೋಗುತ್ತಿದ್ದಾರೆ. ನಗರಸಭೆ ಪ್ರತಿ ನಿತ್ಯ ಬೆಳಗ್ಗೆ ಇಂತ ಕಸವನ್ನು ಆದ್ಯತೆ ಮೇರೆಗೆ ತೆಗೆಯುವಂತೆ ಪೌರಕಾರ್ಮಿಕರಿಗೆ ಬೀದಿ ಬದಿಯ ಹೋಟೆಲ್ ಮಾಲಿಕರು ಪ್ರತ್ಯೇಕ ಹಣ ನೀಡುವ ವ್ಯವಸ್ಥೆಯೂ ಕೋಲಾರದಲ್ಲಿದೆ.
ನಾಯಿ ಕಾಟ: ಬೀದಿ ಬದಿಯ ವ್ಯಾಪಾರಿಗಳು ಹೀಗೆ ಎಸೆಯುವ ಕಸದ ರಾಶಿಯ ಸುತ್ತಮುತ್ತಲು ನಾಯಿಗಳ ದಂಡೇ ರೂಪುಗೊಂಡಿರುತ್ತದೆ. ನಾಯಿಗಳು ಹೀಗೆ ಆಹಾರ ಎಸೆಯುವುದನ್ನೇ ಕಾದಿದ್ದು, ಕಸವನ್ನು ಎಳೆದಾಡಿ ರಸ್ತೆಯುದ್ದಕ್ಕೂ ಹರಡುವುದು, ಆಹಾರ ತಿನ್ನುವ ಸಂದರ್ಭದಲ್ಲಿ ಅಡ್ಡ ಬಂದವರನ್ನು ಕಚ್ಚುವ ಪ್ರಕರಣ ನಡೆದಿದೆ. ಮಾಂಸದ ವ್ಯಾಪಾರಿಗಳಿರುವ ಜಾಗದಲ್ಲಿ ಇಂತ ನಾಯಿಗಳ ಹಾವಳಿ ವಿಪರೀತ ಎನಿಸಿದೆ.
ಎಷ್ಟು ಅಂಗಡಿಗಳಿವೆ: ಕೋಲಾರ ನಗರಸಭೆಯು ಇತ್ತೀಚಿಗೆ ಬೀದಿ ಬದಿಯ ಹೋಟೆಲ್ ವ್ಯಾಪಾರಿಗಳನ್ನು ಗುರುತಿಸಿ ಗುರುತಿನ ಚೀಟಿ ನೀಡುವ ಕೆಲಸ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೋಲಾರ ನಗರದಲ್ಲಿ ಸದಸ್ಯಕ್ಕೆ 669 ಮಂದಿ ಬೀದಿ ಬದಿಯ ವ್ಯಾಪಾರಿಗಳು ತಮ್ಮ ವ್ಯಾಪಾರವನ್ನು ನೋಂದಾಯಿಸಿಕೊಂಡು ಗುರುತಿನ ಚೀಟಿ ಪಡೆದುಕೊಂಡಿದ್ದಾರೆ. ನೋಂದಣಿ ಕಡ್ಡಾಯವಾಗಿದ್ದರೂ ಕೋಲಾರ ನಗರದಲ್ಲಿ ಸಾಕಷ್ಟು ಮಂದಿ ನೋಂದಾಯಿಸದೆ ವ್ಯಾಪಾರ ಮಾಡುತ್ತಿದ್ದಾರೆ.
ಕಾಯ್ದೆಯಲ್ಲಿ ಏನಿದೆ: ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006 ಮತ್ತು ನಿಬಂಧನೆಗಳು-2011 ಕರ್ನಾಟಕ ರಾಜ್ಯದಲ್ಲಿ ಜಾರಿಯಲ್ಲಿದೆ. ಈ ಕಾಯ್ದೆಯಡಿ ಆಹಾರ ಮತ್ತು ಆಹಾರ ಪದಾರ್ಥಗಳು ತಯಾರಕ, ವಿತರಕ, ಸಂಗ್ರಹಣೆ ಮತ್ತು ಸಗಟು, ಚಿಲ್ಲರೆ ಮಾರಾಟಗಾರರು, ಆಹಾರ ನೋಂದಣಿ ಆಹಾರ ಪರವಾನಗಿ ಪಡೆಯುವ ವ್ಯಾಪಾರ ವಹಿವಾಟು ನಡೆಸುವುದು ಕಡ್ಡಾಯವಾಗಿದೆ. ಈಗಾಗಲೇ ಕೋಲಾರ ಜಿಲ್ಲೆಯ ತಾಲೂಕು ಮಟ್ಟದಲ್ಲಿ ಆಹಾರ ಸುರಕ್ಷತೆ ಅಧಿಕಾರಿಗಳು ಹಾಗೂ ಜಿಲ್ಲಾ ಮಟ್ಟದಲ್ಲಿ ಅಂಕಿತ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಬೀದಿ ಬದಿ ಆಹಾರ ಮತ್ತು ಆಹಾರ ಪದಾರ್ಥಗಳನ್ನು ಮಾರಾಟಮಾಡುವವರು ವಾರ್ಷಿಕ 12 ಲಕ್ಷ ರೂ.ಗಿಂತ ಕಡಿಮೆ ವಹಿವಾಟು ನಡೆಸುತ್ತಿದ್ದರೆ ಕಾಯ್ದೆಯಡಿ ನೋಂದಣಿ ಮಾಡಿಸಿಕೊಳ್ಳಬೇಕಾಗಿದೆ.
ಸುದ್ದಿ ಪತ್ರಿಕೆ ಬಳಕೆ ನಿಷೇಧ: ರಸ್ತೆ ಬದಿ ಆಹಾರ ಮಾರಾಟಮಾಡುವವರು ಧೂಳು ಬರದಂತೆ, ಅಡುಗೆ ಮಾಡುವವರು ಮತ್ತು ಸರಬರಾಜು ಮಾಡುವವರು ಏಫ್ರಾನ್, ತಲೆಗೆ ಟೋಪಿ, ಮಾಸ್ಕ್, ಗ್ಲೌಸ್ ಧರಿಸುವುದು, ಪ್ಲಾಸ್ಟಿಕ್ ಪ್ಲೇಟ್‌ಗಳಲ್ಲಿ ಸ್ಟೀಲ್ ಪ್ಲೇಟುಗಳಲ್ಲಿ ಆಹಾರ ನೀಡುವುದು, ತೆಳುವಾದ ಪ್ಲಾಸ್ಟಿಕ್ ಪೇಪರ್, ಸುದ್ದಿಪತ್ರಿಕೆಗಳಲ್ಲಿ ಆಹಾರ ಕಟ್ಟಿಕೊಡುವುದು ನಿಷೇಧಿಸಲಾಗಿದೆ. ಪ್ಲೇಟುಗಳನ್ನು ಬಿಸಿ ನೀರಿನಲ್ಲಿ ಬಳಸಲು ಕ್ರಮವಹಿಸಬೇಕಾಗುತ್ತದೆ. ಕತ್ತರಿಸಿದ ಹಣ್ಣುಗಳನ್ನು ಗಾಜಿನ ಬಾಕ್ಸ್‌ನಲ್ಲಿಟ್ಟು ಮಾರಾಟ ಮಾಡಬೇಕಾಗುತ್ತದೆ. ತ್ಯಾಜ್ಯ ವಿಲೇವಾರಿಗೆ ಹಸಿ ಮತ್ತು ಒಣ ಕಸ ಸಂಗ್ರಹಿಸಲು ಪ್ರತ್ಯೇಕ ಪೆಟ್ಟಿಗೆಗಳನ್ನು ಇಡಬೇಕಾಗುತ್ತದೆ. ಗೋಬಿ ಮಂಚೂರಿ ಇತ್ಯಾದಿಗಳಿಗೆ ನಿಷೇಧಿತ ಬಣ್ಣ ಬಳಸದಂತೆ ಕ್ರಮ ವಹಿಸಬೇಕಾಗುತ್ತದೆ.
ಶುಚಿತ್ವಕ್ಕೆ ಆದ್ಯತೆ ನೀಡಬೇಕು: ಅಡುಗೆಗೆ ಅಧಿಕೃತ ಪೊಟ್ಟಣದ ಎಣ್ಣೆಯನ್ನೇ ಬಳಸಬೇಕಾಗುತ್ತದೆ. ಒಮ್ಮೆ ಬಳಸಿದ ಅಡುಗೆ ಎಣ್ಣೆಯನ್ನು ಮರು ಬಳಸದಂತೆ ಕ್ರಮವಹಿಸಬೇಕಾಗುತ್ತದೆ. ಬಳಸಿದ ಎಣ್ಣೆಯನ್ನು ಬಯೋ ಡೀಸೆಲ್ ತಯಾರಕರಿಗೆ ನೀಡಬೇಕಾಗುತ್ತದೆ. ಬಳಸಿದ ನೀರನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಿ, ಜಿರಲೆ, ನೊಣ, ಸೊಳ್ಳೆ ಅಥವಾ ಇತರೇ ಕ್ರಿಮಿಗಳು ಬರದಂತೆ ಕ್ರಿಮಿನಾಶಕ ಸಿಂಪಡಿಸಬೇಕಾಗುತ್ತದೆ. ಶುಚಿತ್ವ, ವೈಯಕ್ತಿಕ ಶುಚಿತ್ವದ ಕಡೆ ಮತ್ತು ಆಹಾರ ಗುಣಮಟ್ಟದ ಬಗ್ಗೆ ಕ್ರಮ ವಹಿಸಬೇಕಾಗುತ್ತದೆ. ಇದು ಕಾಯ್ದೆ ಪ್ರಮುಖಾಂಶಗಳಾಗಿವೆ.
ಕಾಯ್ದೆ ಉಲ್ಲಂಘಿಸುವುದೇ ಹೆಚ್ಚು: ಕೋಲಾರ ನಗರದ ಬಹುತೇಕ ಬೀದಿ ಬದಿಯ ವ್ಯಾಪಾರಿಗಳಿಗೆ ಈ ಕಾಯ್ದೆ ಕುರಿತು ನಗರಸಭೆ ಮತ್ತು ಸರ್ವೇಕ್ಷಣಾ ಇಲಾಖೆಯ ವೈದ್ಯಾಧಿಕಾರಿಗಳು ಮಾಹಿತಿ ನೀಡಿ, ಉಲ್ಲಂ ಸಿದರೆ ದಂಡ ವಿಧಿಸುವ ಎಚ್ಚರಿಕೆ ನೀಡುತ್ತಲೇ ಇದ್ದಾರೆ. ಆದರೆ, ಇದನ್ನು ಕಟ್ಟುನಿಟ್ಟಾಗಿ ಪಾಲಿಸುವ ಬೀದಿ ಬದಿಯ ಅಂಗಡಿ ವ್ಯಾಪಾರಿಗಳು ಕಾಣ ಸಿಗುತ್ತಲೇ ಇಲ್ಲ.
ಮಾನವೀಯತೆಯಿಂದ ದಂಡ ವಿಧಿಸಿಲ್ಲ: ಕಾಯ್ದೆಯನ್ನು ಉಲ್ಲಂ ಸುವ ವ್ಯಾಪಾರಿಗಳಿಗೆ ಆಗಾಗ್ಗೆ ಆರೋಗ್ಯ ಇಲಾಖೆಯ ಸರ್ವೇಕ್ಷಣಾ ಅಧಿಕಾರಿಗಳು ತಲಾ ನೂರು ರೂ. ದಂಡ ವಿಧಿಸಿ ಚುರುಕು ಮುಟ್ಟಿಸುವ ಪ್ರಯತ್ನವನ್ನು ಮಾಡಿದ್ದಾರೆ. ನಗರಸಭೆಯಿಂದ ಬೀದಿ ಬದಿಯ ವ್ಯಾಪಾರಿಗಳಿಗೆ ಮಾನವೀಯ ದೃಷ್ಟಿಯಿಂದ ಇದುವರೆಗೂ ಯಾವುದೇ ದಂಡ ವಿಧಿಸಿಲ್ಲ.
ನಗರಸಭೆಯ ಈ ಉದಾರತೆಯನ್ನು ದುರ್ಬಳಕೆ ಮಾಡಿಕೊಂಡಿರುವ ವ್ಯಾಪಾರಿಗಳು ತಮ್ಮಿಷ್ಟದಂತೆ ವ್ಯಾಪಾರ ನಡೆಸುತ್ತಲೇ ಇದ್ದಾರೆ. ಜನತೆ ಇಂತ ಅಂಗಡಿಗಳಿಗೆ ಮುಗಿ ಬಿದ್ದು ವ್ಯಾಪಾರ ಮಾಡುತ್ತಲೇ ಇದ್ದಾರೆ. ಸದ್ಯಕ್ಕೆ ಬೀದಿ ಬದಿಯ ಹೋಟೆಲ್‌ಗಳಿಂದ ಯಾವುದೇ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಘಟನೆಗಳು ನಡೆದಿಲ್ಲ, ಬೀರುತ್ತಿರುವ ಸಣ್ಣ ಪುಟ್ಟ ಆರೋಗ್ಯ ಪರಿಣಾಮಗಳನ್ನು ಸಾರ್ವಜನಿಕರು ಹೊಟ್ಟೆಗೆ ಹಾಕಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬೀದಿ ಬದಿಯ ವ್ಯಾಪಾರಕ್ಕೆ ಗುಣಮಟ್ಟ ಮತ್ತು ಶುದ್ಧತೆ ಸುರಕ್ಷತೆಯ ಹೊದಿಕೆ ಹಾಕುವುದು ಸಾರ್ವಜನಿಕರಿಗೂ ಬೇಡದ ಕೆಲಸವಾಗಿದೆ.
ಆಹಾರ ಸುರಕ್ಷತೆ ಕಾಯ್ದೆ ಪ್ರಕಾರ ನಿಯಮಿತವಾಗಿ ಬೀದಿ ಬದಿಯ ಆಹಾರ ತಯಾರಕರಿಗೆ ಶುದ್ಧತೆ ಪಾಲಿಸುವ ಸೂಚನೆಗಳನ್ನು ನೀಡಲಾಗುತ್ತಿದೆ. ನಿಯಮ ಉಲ್ಲಂ ಸಿದವರಿಗೆ ನೂರು ರೂ. ದಂಡ ವಿಧಿಸಲಾಗುತ್ತಿದೆ. ಬೇಸಿಗೆ ಹಿನ್ನೆಲೆಯಲ್ಲಿ ಈ ರೀತಿಯ ದಾಳಿಗಳನ್ನು ಹೆಚ್ಚಿಸಿ ವ್ಯಾಪಾರಿಗಳಿಗೆ ಚುರುಕು ಮುಟ್ಟಿಸಲು ಯೋಜಿಸಲಾಗಿದೆ.
-ಡಾ.ಚಾರಿಣಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ, ಕೋಲಾರ
ಬೀದಿ ಬದಿಯ ಆಹಾರ ತಯಾರಿಸುವರು ಕಡ್ಡಾಯವಾಗಿ ನೋಂದಣಿ ಮಾಡಿಸುವಂತೆ ಸೂಚಿಸಲಾಗಿದೆ. ಸ್ವಚ್ಛತೆ ಕಾಪಾಡುವಂತೆ ಆದೇಶಿಸಲಾಗುತ್ತಿದೆ. ಕಾಯ್ದೆ ಉಲ್ಲಂ ಸಿದ ಯಾವ ಬೀದಿ ಬದಿಯ ಹೋಟೆಲ್‌ಗಳಿಗೂ ಸದ್ಯಕ್ಕೆ ನಗರಸಭೆಯಿಂದ ದಂಡ ವಿಧಿಸಿಲ್ಲ. ವ್ಯಾಪಾರಿಗಳಿಗೆ ಅರಿವು ಮೂಡಿಸಲಾಗುತ್ತಿದೆ.
-ಶ್ರೀಕಾಂತ್, ಪೌರಾಯುಕ್ತ, ಕೋಲಾರ ನಗರಸಭೆ
ವ್ಯಾಪಾರಿಗಳು ಬಳಸುವ ಪ್ಲಾಸ್ಟಿಕ್ ಕಸವಾಗಿ ಚರಂಡಿ ಸೇರಿ ನೀರು ನಿಂತು ಸಾಂಕ್ರಾಮಿಕ ರೋಗಗಳಿಗೆ ಕಾರಣವಾಗುತ್ತಿದೆ. ಬೀದಿ ಬದಿ ಕಸ ಹಾಕುವುದನ್ನು ಪ್ಲಾಸ್ಟಿಕ್ ಬಳಸುವುದನ್ನು ನಿರ್ದಾಕ್ಷಿಣ್ಯವಾಗಿ ದಂಡ ವಿಧಿಸುವ ಮೂಲಕ ನಿಯಂತ್ರಿಸಿದರೆ ಮಾತ್ರವೇ ಸ್ವಚ್ಛ ಸೌಂದರ್ಯ ಕೋಲಾರ ಸಾಧ್ಯ.
-ಅಂಬರೀಶ್, ನಗರಸಭೆ ಸದಸ್ಯ, ಕೋಲಾರತಿನಿಸು.
* ಕೆ.ಎಸ್.ಗಣೇಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolar: “ಗೃಹಲಕ್ಷ್ಮಿ’ಗೆ ಆಸಕ್ತಿ ತೋರದ 21 ಸಾವಿರ ಕೋಲಾರ ಸ್ತ್ರೀಯರು
Kolara: ಏಲಕ್ಕಿ ಬಾಳೆಕಾಯಿ ಬೆಲೆ ಕುಸಿತ: 3 ಎಕರೆ ಬೆಳೆ ಕಡಿದು ಹಾಕಿದ ರೈತ
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು
Mulabagilu: ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲು ಪ್ರಕರಣ: ಶಿಕ್ಷಕರ ಅಮಾನತು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Chhattisgarh: ಗುತ್ತಿಗೆದಾರನ ಭ್ರಷ್ಟಾಚಾರ ಬಯಲಿಗೆಳೆದ ಯೂಟ್ಯೂಬರ್ ಶವವಾಗಿ ಪತ್ತೆ!
Unique Achiever: ಗಡಿನಾಡಿನ ಅನನ್ಯ ಸಾಧಕ ಪ್ರೊ| ಪಿ. ಶ್ರೀಕೃಷ ಭಟ್
Sydney: ಮೈದಾನ ತೊರೆದು ಆಸ್ಪತ್ರೆಗೆ ಹೊರಟ ಬುಮ್ರಾ; ಟೀಂ ಇಂಡಿಯಾ ಪಾಳಯದಲ್ಲಿ ಆತಂಕ| Video
Groundwater Quality: ಅಂತರ್ಜಲ ಗುಣಮಟ್ಟ ವೃದ್ಧಿಗೆ ವೈಜ್ಞಾನಿಕ ಮಾರ್ಗೋಪಾಯ ಅಗತ್ಯ
Guns and Roses Review: ನೆತ್ತರ ಹಾದಿ ಪ್ರೇಮ್ ಕಹಾನಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.