ಸ್ವಾಧೀನ ಭೂಮಿಗೆ ಸೂಕ್ತ ಪರಿಹಾರ ಕೊಡಿ
ಪವರ್ ಗ್ರಿಡ್, ತಾಲೂಕು ಆಡಳಿತದ ವಿರುದ್ಧ ರೈತ ಸಂಘ ಆಕ್ರೋಶ • ವಿದ್ಯುತ್ ಕಂಬಗಳ ಬಳಿ ಪ್ರತಿಭಟನೆ
Team Udayavani, Aug 3, 2019, 1:56 PM IST
ವಿದ್ಯುತ್ ಮಾರ್ಗಕ್ಕೆ ಸ್ವಾಧೀನಪಡಿಸಿಕೊಂಡಿರುವ ಜಮೀನಿಗೆ ಸೂಕ್ತ ಪರಿಹಾರ ನೀಡಿ ಎಂದು ಮಾಸ್ತಿ ಸಮೀಪದ ಕುಪ್ಪೂರು ಗ್ರಾಮದಲ್ಲಿ ಅಳವಡಿಸಿರುವ ಕಂಬಗಳ ಬಳಿ ಪ್ರತಿಭಟಿಸಿದ ರೈತರು ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.
ಮಾಸ್ತಿ: ಹೋಬಳಿ ಸೇರಿ ಮಾಲೂರು ತಾಲೂಕಲ್ಲಿ ವಿದ್ಯುತ್ ಮಾರ್ಗಕ್ಕೆ ರೈತರಿಂದ ಸ್ವಾಧೀನಪಡಿಸಿಕೊಂಡ ಜಮೀನಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಕುಪ್ಪೂರು ಗ್ರಾಮದಲ್ಲಿ ರೈತ ಸಂಘ ಹಾಗೂ ಹಸಿರುಸೇನೆ ಕಾರ್ಯಕರ್ತರು ಭೂಮಿ ಕಳೆದುಕೊಂಡ ರೈತರೊಂದಿಗೆ ಪ್ರತಿಭಟನೆ ನಡೆಸಿದರು.
ಗ್ರಾಮದ ಡಾ.ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಬೈಕ್ ಮೂಲಕ ಹಸಾಂಡಹಳ್ಳಿ ಮಾರ್ಗವಾಗಿ ಪ್ರತಿಭಟನೆ ನಡೆಸಲು ಉದ್ದೇಶಿಸಿದ್ದ ಕುಪ್ಪೂರು ಗ್ರಾಮದವರೆಗೆ ರ್ಯಾಲಿ ನಡೆಸಿದ ಸಂಘದ ಕಾರ್ಯಕರ್ತರು, ರೈತ ರಾಮಕೃಷ್ಣಪ್ಪ ಜಮೀನಿನಲ್ಲಿ ಅಳವಡಿಸಿದ್ದ ವಿದ್ಯುತ್ ಕಂಬಗಳ ಬಳಿ ಪ್ರತಿಭಟನೆ ನಡೆಸಿದರು.
ಭೂಮಿ ವಾಪಸ್‌ಕೊಡಿ: ಪವರ್‌ಗ್ರಿಡ್ ಅಧಿಕಾರಿಗಳು ಹಾಗೂ ತಾಲೂಕು ಆಡಳಿತದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕಂಬ ಅಳವಡಿಸಿರುವ ಜಾಗಕ್ಕೆ 25 ಲಕ್ಷ ರೂ., ತಂತಿ ಹಾದುಹೋಗಿರುವ ಜಮೀನಿಗೆ 15 ಲಕ್ಷ ರೂ. ಪರಿಹಾರ ನೀಡಬೇಕು. ಇಲ್ಲದಿದ್ದಲ್ಲಿ ನಮ್ಮ ಭೂಮಿ ವಾಪಸ್ ನೀಡಿ ಎಂದು ಆಗ್ರಹಿಸಿದರು.
ರೈತರು ಬೀದಿಪಾಲು: ಪ್ರತಿಭಟನೆ ನೇತೃತ್ವ ವಹಿಸಿದ್ದ ಸಂಘದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ಸರ್ಕಾರ ಅಭಿವೃದ್ಧಿ ಹೆಸರಿನಲ್ಲಿ ರೈತರ ಕೃಷಿ ಜಮೀನನ್ನು ರಸ್ತೆ, ಕೈಗಾರಿಕೆ, ಸೋಲಾರ್ ಮತ್ತು ವಿದ್ಯುತ್ ಮಾರ್ಗಕ್ಕೆ ಭೂಮಿ ವಶಪಡಿಸಿಕೊಂಡು ವಂಚಿಸುತ್ತಿದೆ. ಭೂಮಿ ನಂಬಿಕೊಂಡ ರೈತರು ಬೀದಿಪಾಲಾಗುತ್ತಿದ್ದಾರೆ ಎಂದು ಹೇಳಿದರು.
ತಮಿಳುನಾಡಿನಿಂದ ಬರುವ ಪವರ್‌ಗ್ರಿಡ್ ವಿದ್ಯುತ್ ಮಾರ್ಗ ಮಾಲೂರು ವ್ಯಾಪ್ತಿಯ ತೊಳಸನದೊಡ್ಡಿ, ಹಸಾಂಡಹಳ್ಳಿ, ಕುಪ್ಪೂರು, ತಿಪ್ಪಸಂದ್ರ, ಮುತ್ತೇನಹಟ್ಟಿ, ತೀರ್ಥಬಂಡಹಟ್ಟಿ ಮತ್ತಿತರ ಗ್ರಾಮಗಳ 100ಕ್ಕೂ ಹೆಚ್ಚು ರೈತರ ಜಮೀನಿನಲ್ಲಿ ಹಾದುಹೋಗುತ್ತದೆ. ಕಂಬದ ಜೊತೆಗೆ ಹಾದು ಹೋಗುವ ತಂತಿ ಕೆಳಗಿನ ಜಮೀನಲ್ಲಿ ಗಿಡಮರ ಬೆಳೆಸಲು ಆಗುವುದಿಲ್ಲ ಎಂದರು.
ರೈತರಿಗೆ ಬೆದರಿಕೆ: ಪ್ರತಿ ಗುಂಟೆಗೆ 5 ಸಾವಿರ ರೂ., ಪ್ರತಿ ಮರಕ್ಕೆ 8 ಸಾವಿರ ರೂ.ನಂತೆ ಪರಿಹಾರ ನೀಡಿ ಕೈ ತೊಳೆದುಕೊಳ್ಳಲಾಗುತ್ತಿದೆ. ಅದರಲ್ಲೂ ಏಕರೂಪದ ಪರಿಹಾರ ನೀಡದೇ ಅಮಾಯಕ ರೈತರನ್ನು ಎಂಜಿನಿಯರ್ ಮೂರ್ತಿ ವಂಚಿಸುತ್ತಿದ್ದಾರೆ. ಕೇಳಿದರೆ ರೈತರ ಮೇಲೆ ಕಾನೂನು ಅಸ್ತ್ರ ಉಪಯೋಗಿಸಿ ಬೆದರಿಕೆ ಹಾಕುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ರೈತರು ಪವರ್‌ಗ್ರಿಡ್ ಕಂಬಗಳ ನೆಟ್ಟು, ಬೋಲ್r ಬಿಚ್ಚಲು ಪ್ರಯತ್ನಿಸಿದಾಗ, ಮಾಸ್ತಿ ಪಿಎಸ್‌ಐ ವಸಂತ್, ರೈತರ ಮನವೋಲಿಸಿದರು.
ಪರಿಹಾರದ ಭರವಸೆ: ವಿಷಯ ತಿಳಿದು ತಹಶೀಲ್ದಾರ್ ನಾಗರಾಜ್ ಸ್ಥಳಕ್ಕೆ ಆಗಮಿಸಿ, ನನ್ನ ಖಾತೆಯಲ್ಲಿ 1.40 ಕೋಟಿ ರೂ. ಇದೆ. ಈ ಕೂಡಲೇ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಪವರ್‌ಗ್ರಿಡ್ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಲಾಗುತ್ತಿದೆ.
ಮೂರು ದಿನಗಳೊಳಗೆ ಅವರು ರೈತರ ಸಮಸ್ಯೆಗಳಿಗೆ ಸ್ಪಂದಿಸದೇ ಹೋದರೆ, ತಾಲೂಕು ಆಡಳಿತದಿಂದ ಪರಿಹಾರ ನೀಡುವ ಜೊತೆಗೆ ಕಾವåಗಾರಿ ಮಾಡುವಾಗ ನಷ್ಟವಾಗುವ ಬೆಳೆಗಳಿಗೆ ಪರಿಹಾರ ನೀಡುವ ಭರವಸೆಯನ್ನು ನೀಡಿದರು.
ವಾರದೊಳಗೆ ಸಮಸ್ಯೆ ಬಗೆಹರಿಸದಿದ್ದಲ್ಲಿ ಕಂಬಗಳ ನೆಟ್ಟು, ಬೋಲ್r ಬಿಚ್ಚಲಾಗುವುದು. ಇದರಿಂದ ಅನಾಹುತ ಸಂಭವಿಸಿದ್ರೆ ಅಧಿಕಾರಿಗಳೇ ನೇರ ಹೊಣೆ ಎಂದು ಎಚ್ಚರಿಕೆ ನೀಡಿದರು.
ಈ ಪ್ರತಿಭಟನೆಯಲ್ಲಿ ಸಂಘದ ಸಂಚಾಲಕ ಕೆ.ಶ್ರೀನಿವಾಸಗೌಡ, ಜಿಲ್ಲಾಧ್ಯಕ್ಷ ಮರಗಲ್ ಶ್ರೀನಿವಾಸ್, ತಾಲೂಕು ಅಧ್ಯಕ್ಷ ಹೊಸಹಳ್ಳಿ ವೆಂಕಟೇಶ್, ಕುಪ್ಪೂರು ಗೋಪಾಲಪ್ಪ, ಕ್ಯಾಸಂಬಳ್ಳಿ ಪ್ರತಾಪ್, ವಡ್ಡಹಳ್ಳಿ ಮಂಜುನಾಥ್, ವಕ್ಕಲೇರಿ ಹನುಮಯ್ಯ, ಮಂಗಸಂದ್ರ ನಾಗೇಶ್, ತಿಮ್ಮಣ್ಣ, ವೆಂಕಟೇಶಪ್ಪ, ನಾರಾಯಣಪ್ಪ, ಹುಲ್ಕೂರು ಹರಿಕುಮಾರ್, ರಾಮಸ್ವಾಮಿ, ಶ್ರೀನಿವಾಸ್‌ರೆಡ್ಡಿ, ವೆಂಕಟರಾಮಪ್ಪ, ಮುತ್ತಪ್ಪ, ಚವನ ದೊಡ್ಡಪ್ಪ, ಕೊಮ್ಮೇನಹಳ್ಳಿ ಚಂದ್ರು, ಜಿಲ್ಲಾ ಲಕ್ಷ್ಮೀಸಾಗರ ಮೀಸೆ ವೆಂಕಟೇಶಪ್ಪ, ರಾಮಕೃಷ್ಣಪ್ಪ, ದೊಡ್ಡ ಮುನಿಯಪ್ಪ, ನಾರಾಯಣಸ್ವಾಮಿ, ರೂಪೇಶ್, ಮಾ.ವೇ.ಪ್ರಕಾಶ್, ಹರ್ಷ, ಚಂದ್ರಪ್ಪ, ವೆಂಕಟರಮಣಪ್ಪ ಇತರರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.