ಬಾಲಕನ ಮೇಲೆ ಅತ್ಯಾಚಾರ: ಮಹಿಳೆ ಸೆರೆ
Team Udayavani, Nov 12, 2017, 11:25 AM IST
ಕೆಜಿಎಫ್: ಬಾಲಕನ ಮೇಲೆ ಅತ್ಯಾಚಾರ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಆಂಡರಸನ್‌ಪೇಟೆ ಪೊಲೀಸರು ಮಹಿಳೆಯೊಬ್ಬಳನ್ನು ಬಂಧಿಸಿದ್ದಾರೆ.
ಆಲಿಕುಂಟೆ ಕದಿರೇನಹಳ್ಳಿಯ 17 ವರ್ಷದ ಬಾಲಕನನ್ನು 24 ವರ್ಷದ ಮಹಿಳೆ ನಳಿನಿಪ್ರಿಯಾ ಕಳೆದ ತಿಂಗಳು ಅಪಹರಿಸಿ, ತಮಿಳುನಾಡಿನ ವೇಲಾಂಗಣಿಯಲ್ಲಿ ಇರಿಸಿದ್ದಳು. ಈ ಮಾಹಿತಿ ಪಡೆದ ಪೊಲೀಸರು ಬಾಲಕ ಹಾಗೂ ಮಹಿಳೆಯನ್ನು ವೇಲಾಂಗಣಿಯಲ್ಲಿ ಪತ್ತೆ ಹಚ್ಚಿ ಕರೆತಂದಿದ್ದಾರೆ. ನಂತರ ನ್ಯಾಯಾಲಯದ ಮುಂದೆ ಹಾಜರುಪಡಿಸಿದಾಗ, ಆಕೆಯನ್ನು ಪೋಸ್ಕೋ ಕಾಯ್ದೆಯಡಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ಕಳೆದ ತಿಂಗಳು ತನ್ನ ಮಗ ಬೈಕ್ ತರುತ್ತೇನೆಂದು 50 ಸಾವಿರ ರೂ. ತೆಗೆದುಕೊಂಡು ಹೋಗಿದ್ದಾನೆ. ಆದರೆ, ಆತನನ್ನು ಯಾರೋ ಅಪಹರಣ ಮಾಡಿದ್ದಾರೆಂದು ಬಾಲಕನ ತಂದೆ ಆಂಡರಸನ್‌ಪೇಟೆ ಪೊಲೀಸರಿಗೆ ದೂರು ನೀಡಿದ್ದರು.
ಆರೋಪಿ ವಿವಾಹಿತೆ: ಆರೋಪಿ ಮಹಿಳೆ ಈಗಾಗಲೇ ವಿವಾಹವಾಗಿದ್ದು, ಚಾಂಪಿಯನ್‌ರಿàಪ್ಸ್‌ನಲ್ಲಿ ಸಂಸಾರ ನಡೆಸುತ್ತಿದ್ದಾರೆ. ನೀರಿನ ಟ್ಯಾಂಕರ್ ಚಾಲಕ ರವಿ ಎಂಬಾತನ ಜೊತೆ ಪರಿಚಯವಾಗಿ ಆತನ ಜೊತೆ ವಾಸಿಸತೊಡಗಿದ್ದಳು. ನಂತರ ರವಿ ಮನೆಯಲ್ಲಿ ಟ್ಯಾಂಕರ್ ಓಡಿಸುತ್ತಿದ್ದ ಬಾಲಕನ ಮೇಲೆ ಪ್ರೇಮಾಂಕುರವಾಗಿ ಆತನ ಜೊತೆಗೆ ವೇಲಾಂಗಣಿಗೆ ಹೋಗಿದ್ದಳೆಂದು ಪೊಲೀಸರು ತಿಳಿಸಿದ್ದಾರೆ. ಆಂಡರಸನ್‌ಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ