ಡಿ.ಕೆ.ರವಿ ಸಾವಿನ ಪ್ರಕರಣದ ಮರು ತನಿಖೆ: ಬಿಎಸ್‌ವೈ
Team Udayavani, Jan 15, 2018, 3:35 PM IST
ಮುಳಬಾಗಿಲು: ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಕೂಡಲೇ ದಕ್ಷ ಐಎಎಸ್ ಅಧಿಕಾರಿ ಡಿ.ಕೆ.ರವಿ ಸಾವಿನ ಪ್ರಕರಣದ ಮರು ತನಿಖೆ ನಡೆಸಲಾಗುವುದು. ಕೇಂದ್ರದಿಂದ 1 ಲಕ್ಷ ಕೋಟಿ ರೂ. ತಂದು ಎಲ್ಲಾ ನೀರಾವರಿ ಯೋಜನೆಗಳನ್ನು ಜಾರಿಗೊಳಿಸಲಾಗುವುದೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಘೋಷಿಸಿದರು.
ನಗರದಲ್ಲಿ ಬಿಜೆಪಿ ಏರ್ಪಡಿಸಿದ್ದ ಪರಿವರ್ತನಾ ರ್ಯಾಲಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಪ್ರಪಂಚದ ಮೂರನೇ ಅತ್ಯಂತ ಪ್ರಭಾವಶಾಲಿ ವ್ಯಕ್ತಿಯಾಗಿದ್ದಾರೆ. ಸಣ್ಣ ಮಕ್ಕಳಿಂದ ಹಿಡಿದು ಪ್ರತಿಯೊಬ್ಬರೂ ಮೋದಿ ಮೋದಿ ಎನ್ನುವಂತೆ ವಿಶ್ವವೇ ಭಾರತದತ್ತ ನೋಡುವಂತೆ ಉತ್ತಮ ಕೆಲಸ ನಿರ್ವಹಿಸುತ್ತಿದ್ದಾರೆ. ಕೇಂದ್ರದಲ್ಲಿ 50 ವರ್ಷ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರ ಲಕ್ಷಾಂತರ ಕೋಟಿ ರೂ.ಲೂಟಿ ಮಾಡಿ ಜನರ ವಿಶ್ವಾಸ ಕಳೆದುಕೊಂಡಿದೆ ಎಂದು ಆರೋಪಿಸಿದರು.
ಭ್ರಷ್ಟ ಕಾಂಗ್ರೆಸ್ ಸರ್ಕಾರ ಕಿತ್ತೂಗೆಯಿರಿ: ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಮೂರೂವರೆ ವರ್ಷದಲ್ಲಿ 19 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ತಂದಿದ್ದಾರೆ. ಆದ್ದರಿಂದ, ಕರ್ನಾಟಕದ ಭ್ರಷ್ಟಕಾಂಗ್ರೆಸ್ ಸರ್ಕಾರವನ್ನು ಕಿತ್ತೂಗೆಯಲು ಪ್ರತಿಯೊಬ್ಬರೂ ಪಣ ತೊಡಬೇಕೆಂದರು.
ಬಿಜೆಪಿ ಯಾತ್ರೆ ನೋಡಿ ಸಿಎಂಗೆ ನಡುಕ: ರಾಜ್ಯ ಕಾಂಗ್ರೆಸ್ ಸರ್ಕಾರ ನಾಲ್ಕೂವರೆ ವರ್ಷಗಳಲ್ಲಿ ಬಜೆಟ್‌ನ ಶೇ.75 ಭಾಗ ಖರ್ಚು ಮಾಡಿಲ್ಲ. ಇನ್ನುಳಿದಿರುವ 1 ತಿಂಗಳಲ್ಲಿ ಏನು ಅಭಿವೃದ್ಧಿ ಮಾಡಲು ಸಾಧ್ಯವೇ? ನಮ್ಮ ಯಾತ್ರೆಯ
ಜನಸಂದಣಿ ನೋಡಿ ಸಿಎಂ ಸಿದ್ಧರಾಮಯ್ಯರಲ್ಲಿ ನಡುಕ ಹುಟ್ಟಿದೆ. ನವಕರ್ನಾಟಕ ನಿರ್ಮಾಣ ಯಾತ್ರೆಯ ಮುಖಾಂತರ ಪ್ರತಿ ಜಿಲ್ಲೆ, ತಾಲೂಕು ಸಮಾವೇಷಗಳಲ್ಲಿ 100, 200 ಕೋಟಿ ರೂ. ವೆಚ್ಚದ ಕಾಮಗಾರಿಗಳ ಶಂಕುಸ್ಥಾಪನೆ ಮಾಡುವ ಮೂಲಕ ಗೋಸುಂಬೆ ರಾಜಕಾರಣ ಮಾಡುತ್ತಿದ್ದಾರೆಂದು ಆರೋಪಿಸಿದರು.
ಕೇಂದ್ರದ ಅನ್ನಭಾಗ್ಯ ನಮ್ಮದೆನ್ನುತ್ತಾರೆ: ಅನ್ನಭಾಗ್ಯ ಯೋಜನೆ ನೀಡಿದ್ದೇನೆಂದು ಹೇಳಿಕೊಳ್ಳುವ ಸಿದ್ಧರಾಮಯ್ಯ ಅವರು ವಿತರಣೆ ಮಾಡುವ ಅನ್ನಭಾಗ್ಯ ಯೋಜನೆಗೆ ಕೇಂದ್ರ ಸರ್ಕಾರ 33 ರೂ.ಗೆ ಅಕ್ಕಿ, 22 ರೂ.ಗೆ ಗೋಧಿ ಕೊಂಡುಕೊಂಡು ರಾಜ್ಯ ಸರ್ಕಾರಕ್ಕೆ ಕೇವಲ 3 ರೂ.ಗೆ ನೀಡುತ್ತಿದೆ. ಅದನ್ನು ಬಳಸಿಕೊಂಡು ಅನ್ನಭಾಗ್ಯ ಯೋಜನೆ ನಮ್ಮದೆಂದು ಹೇಳಿಕೊಳ್ಳಲು ನಿಮಗೆ ನಾಚಿಕೆಯಾಗುವುದಿಲ್ಲವೇ? ರಾಜ್ಯದ ಗೋದಾಮುಗಳಲ್ಲಿ 45 ಸಾವಿರ ಕ್ವಿಂಟಲ್ ಅಕ್ಕಿ, ಗೋಧಿ ಕೊಳೆಯುತ್ತಿದೆ. ಅದನ್ನು ಸರಿಯಾದ ರೀತಿಯಲ್ಲಿ ವಿತರಣೆ ಮಾಡುತ್ತಿಲ್ಲ ಎಂದು ಕಿಡಿಕಾರಿದರು.
ನಾವು ಅಧಿಕಾರಕ್ಕೆ ಬಂದರೆ ಜಿಲ್ಲೆಯ ಕೆರೆಗಳಲ್ಲಿನ ಹೂಳು ತೆಗೆದು ನೀರು ನಿಲ್ಲುವಂತಹ ಯೋಜನೆಗಳನ್ನು ತರುತ್ತೇವೆ. ಕೆಜಿಎಫ್ನ ಗಣಿಯನ್ನು ಪುನಃಶ್ಚೇತನಗೊಳಿಸುತ್ತೇವೆ ಎಂದರು.
ಹಗರಣವಿಲ್ಲದ ಕೇಂದ್ರ ಸರ್ಕಾರ: ಮಾಜಿ ಡಿಸಿಎಂ ಆರ್.ಅಶೋಕ್ ಮಾತನಾಡಿ, ಕೇಂದ್ರದ ನರೇಂದ್ರ ಮೋದಿ ಸರ್ಕಾರ ಯಾವುದೇ ಹಗರಣವಿಲ್ಲದೇ ಮೂರೂವರೇ ವರ್ಷ ಪೂರೈಸಿದೆ. ನಮ್ಮ ರಾಜ್ಯ ಸರ್ಕಾರದಲ್ಲಿ ಹಗರಣಗಳ ಮೇಲೆ ಹಗರಣ ಮಾಡಿದ್ದೀರಿ. ಅದರಲ್ಲೂ ಮುಖ್ಯವಾಗಿ ಜಾತಿ, ಧರ್ಮಗಳ ಮಧ್ಯೆ ವಿಷಬೀಜ ಬಿತ್ತಿ 224 ಹಿಂದೂ ಕಾರ್ಯಕರ್ತರ ಹತ್ಯೆಗೆ ಕಾರಣರಾಗಿದ್ದೀರಿ. ಹಿಂದೂ ಕಾರ್ಯಕರ್ತರು ಸತ್ತರೆ ಪರಿಹಾರವಿಲ್ಲ. ದನ ಕಳವು ಮಾಡುವ ವ್ಯಕ್ತಿ ಸತ್ತರೆ 25 ಲಕ್ಷ ರೂ.ಪರಿಹಾರ ನೀಡುತ್ತೀರಿ. ಕರ್ನಾಟಕದ ಸಾರ್ವಜನಿಕರ ದುಡ್ಡಿನಲ್ಲಿ ಮೋಜು ಮಾಡುತ್ತಿದ್ದೀರೆಂದು ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಜೆಡಿಎಸ್‌ನ ಸರಳ ನವೀನ್ ಕುಮಾರ್ ಬಿಜೆಪಿಗೆ ಸೇರ್ಪಡೆಗೊಂಡರು.
ಮುಖಂಡರಾದ ಚಿ.ನಾ.ರಾಮು, ಅಬ್ದುಲ್ ಅಜೀಂ, ಸಚ್ಚಿದಾನಂದ ಮೂರ್ತಿ, ವೈ. ಸುರೇಂದ್ರಗೌಡ, ನಟ ಶಿವಕೃಷ್ಣ, ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಪಿ.ವೆಂಕಟಮುನಿಯಪ್ಪ, ತಾಲೂಕು ಅಧ್ಯಕ್ಷ ನಾಗಾರ್ಜುನ, ನಗರಾಧ್ಯಕ್ಷ ಟಿ.ಎಂ.ಶ್ರೀನಿವಾಸ್, ಎಂ.ಪ್ರಸಾದ್, ವಾಸುದೇವ್, ಜಂಗಮಬಸಾಪುರ ಮಧುಸೂದನ್, ಪ್ರಭಾಕರ್ ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Organ Donation: ಸಾವಿನ ನಂತರವೂ ನೆರವಾದ ಜೀವ
Anandapura: ಸಾಲದ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ
Maharashtra Election: ಅಮಿತ್ ಶಾ ಅವರ ಬ್ಯಾಗ್ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು
Bengaluru: ವೈದ್ಯೆಗೆ ಲೈಂಗಿಕ ಕಿರುಕುಳ: ಪಿಎಸ್‌ಐ ವಿರುದ್ದ ಪೊಲೀಸ್ ಆಯುಕ್ತರಿಗೆ ದೂರು
Bengaluru: ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಜೀವ ಉಳಿಸಿದ ಸಂಚಾರ ಪೊಲೀಸರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.