ಯರಗೋಳ್ ಡ್ಯಾಂ ಕಾಮಗಾರಿ ನೆನಗುದಿಗೆ
Team Udayavani, Apr 5, 2018, 4:52 PM IST
ಬಂಗಾರಪೇಟೆ: ತಾಲೂಕಿನ ಪ್ರತಿಷ್ಠಿತ ಯರಗೋಳ್ ಡ್ಯಾಂ ನಿರ್ಮಾಣ ಕಾರ್ಯ ಕಳೆದ 13 ವರ್ಷಗಳಿಂದ ನೆನಗುದಿಗೆ ಬಿದ್ದಿದೆ. ಈ ಅವಧಿಯಲ್ಲಿ ಆಡಳಿತ ನಡೆಸಿದ ಬಿಜೆಪಿ, ಜೆಡಿಎಸ್ ಮತ್ತು ಕಾಂಗ್ರೆಸ್ ಸರಕಾರಗಳು ಜಿಲ್ಲೆಗೆ ಶಾಶ್ವತ ಕುಡಿಯುವ ನೀರಿನ ಯೋಜನೆ ರೂಪಿಸುವಲ್ಲಿ ವಿಫಲವಾಗಿವೆ. ಬಿಜೆಪಿ, ಜೆಡಿಎಸ್ ಸಮ್ಮಿಶ್ರ ಸರಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್.ಡಿ. ಕುಮಾರಸ್ವಾಮಿ ಅಧಿಕಾರದಿಂದ ಕೆಳಗಿಳಿಯುವ ಕೊನೆಯ ದಿನಗಳಲ್ಲಿ ಯರಗೋಳ್ ಡ್ಯಾಂ ನಿರ್ಮಾಣ ಕಾಮಗಾರಿಗೆ ತರಾತುರಿಯಲ್ಲಿ ಕೋಲಾರದಿಂದಲೇ ಚಾಲನೆ ನೀಡಿದ್ದರು.
ಆದರೆ, ಆ ಸರಕಾರದ ಆರ್ಥಿಕ ಸಚಿವರಾಗಿದ್ದ ಬಿ.ಎಸ್.ಯಡಿಯೂರಪ್ಪ ಯರಗೋಳ್ ಯೋಜನೆಗೆ ಅನುದಾನ ಬಿಡುಗಡೆ ಮಾಡಲು ಒಪ್ಪಿಗೆ ನೀಡಲಿಲ್ಲ. ಹೀಗೆ ಯರಗೋಳ್ ಡ್ಯಾಂ ನಿರ್ಮಾಣ ಕಾರ್ಯಕ್ಕೆ ಆರಂಭದಲ್ಲಿಯೇ ವಿಘ್ನ ಉಂಟಾಯಿತು.
ಸರ್ಕಾರಗಳ ನಿರ್ಲಕ್ಷ್ಯ: ಕುಮಾರಸ್ವಾಮಿ ಅವರ ಮುಖ್ಯಮಂತ್ರಿ ಅವಧಿ ಮುಗಿದ ನಂತರ ಆಡಳಿತ ನಡೆಸಿದ ಬಿಜೆಪಿ ಸರಕಾರ ಕಾಮಗಾರಿಗೆ ಅನುದಾನ ಬಿಡುಗಡೆ ಮಾಡಿ ಡ್ಯಾಂ ನಿರ್ಮಾಣ ಮಾಡದೇ, ಕೇಂದ್ರ ಸರಕಾರದ ಅನುದಾನ ಸದ್ಬಳಕೆ ಮಾಡಿಕೊಳ್ಳಲು ಪೈಪ್‌ಲೈನ್ ಹಾಕಿಸಿ, ಮೇಲ್ಮಟ್ಟದ ಬೃಹತ್ ಟ್ಯಾಂಕ್‌ಗಳನ್ನು ನಿರ್ಮಿಸಿ ನೆನಗುದಿಗೆ ಬೀಳುವಂತೆ ಮಾಡಿತು. ನಂತರ ಆಡಳಿತಕ್ಕೆ ಬಂದ ಕಾಂಗ್ರೆಸ್ ಸರ್ಕಾರವು ಸಹ ಯರಗೋಳ್ ಯೋಜನೆಗೆ ತೀವ್ರ ನಿರ್ಲಕ್ಷ್ಯವಹಿಸಿತು.
ಭೂಮಿ ಸ್ವಾಧೀನ ಸಮಸ್ಯೆ: ಇದರ ನಡುವೆ ಅಣೆಕಟ್ಟೆಗೆ ಬೇಕಾದ ಭೂಮಿ ಅರಣ್ಯ ಇಲಾಖೆಗೆ ಸೇರಿದ್ದೆಂಬ ತಗಾದೆಗಳು ಉದ್ಭವವಾಗಿ ಯರಗೋಳ್ ಯೋಜನೆಯನ್ನು ಮತ್ತಷ್ಟು ಮೂಲೆ ಗುಂಪು ಮಾಡಿದವು.
ಸರ್ಕಾರಕ್ಕೆ ತಪ್ಪುಮಾಹಿತಿ: ಜಿಲ್ಲೆಯ ಜನರ ಒತ್ತಡದ ಮೇರೆಗೆ ಯರಗೋಳ್ ಡ್ಯಾಂ ನಿರ್ಮಾಣಕ್ಕೆ ಟೆಂಡರ್ ಪಡೆದ ಗುತ್ತಿಗೆದಾರರು ಕಾಮಗಾರಿ ಪ್ರಾರಂಭಿಸಲು ಪ್ರಯತ್ನ ನಡೆಸಿದರಾದರೂ, ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದಲ್ಲಿ ನಗರ ನೀರು ಸರಬರಾಜು ಸಚಿವರಾಗಿದ್ದ ವಿನಯಕುಮಾರ್ ಸೊರಕೆ ಸ್ಥಳಕ್ಕೆ ಭೇಟಿ ನೀಡಿ ಯರಗೋಳ್ ಡ್ಯಾಂಗೆ ನೀರೇ ಬರುವುದಿಲ್ಲ ಎಂದು ಹೇಳಿ ಸರ್ಕಾರಕ್ಕೆ ತಪ್ಪುಮಾಹಿತಿ ನೀಡಿದ್ದರು. ಇದು, ಕಾಮಗಾರಿ ಹಿನ್ನಡೆಗೆ ಪ್ರಮುಖ ಕಾರಣವಾಯಿತು. ಇದುವರಿಗೂ ಕನಿಷ್ಠ ಪಾಯ ಹಂತಕ್ಕೆ ಕೆಲಸ ಮಾಡದೇ ನಿರ್ಲಕ್ಷ್ಯವಹಿಸಲಾಗಿದೆ. ಡ್ಯಾಂ ನಿರ್ಮಾಣವಾಗಿ ಒಂದು ಬಾರಿ ತುಂಬಿದರೆ ಎರಡು ವರ್ಷ ಮಳೆಯಾಗದಿದ್ದರೂ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತಿರಲಿಲ್ಲ.
ಸ್ಥಳಕ್ಕೆ ಭೇಟಿ ನೀಡದ ಸಚಿವರು: ಐದು ತಿಂಗಳ ಹಿಂದೆ ತಾಲೂಕಿನಲ್ಲಿ ಭಾರಿ ಮಳೆ ಸುರಿಯಿತು. ಆಗ ಯರಗೋಳ್ ಕಣಿವೆಯಿಂದ ಅಪಾರ ಪ್ರಮಾಣದ ನೀರು ತಮಿಳುನಾಡಿಗೆ ಹರಿದು ಹೋಯಿತು. ಅಣೆಕಟ್ಟು ನಿರ್ಮಾಣವಾಗಿದ್ದರೆ ಕೋಲಾರ ಜಿಲ್ಲೆಯ ಅರ್ಧ ಭಾಗಕ್ಕೆ ಎರಡೂಮೂರು ವರ್ಷಗಳ ಕಾಲ ಕುಡಿಯುವ ನೀರು ಸರಬರಾಜು ಮಾಡಬಹುದಾಗಿತ್ತು. ನೀರು ಹರಿದು ಹೋದ ಮೇಲಾದರೂ ಗಮನ ಹರಿಸುವೆ ಎಂದು ಭರವಸೆ ನೀಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಕುಮಾರ್ ಯರಗೋಳ್ ಅಣೆಕಟ್ಟು ಪ್ರದೇಶಕ್ಕೆ ಭೇಟಿ ನೀಡಲೇ ಇಲ್ಲ ಕೋಲಾರ ಜಿಲ್ಲೆಯಲ್ಲಿ ಸತತ 13 ವರ್ಷ ಬರಗಾಲ ಆವರಿಸಿದ್ದರಿಂದ ಡ್ಯಾಂ ನಿರ್ಮಾಣಕ್ಕೆ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯವಹಿಸಿ
ದ್ದಾರೆ. ಯರಗೋಳ್ ಡ್ಯಾಂ ನಿರ್ಮಾಣದ ಜವಾಬ್ದಾರಿ ಹೊತ್ತ ಗುತ್ತಿಗೆದಾರರು ಸಮರ್ಪಕವಾಗಿ ಕೆಲಸ ಮಾಡದೇ ನಿರ್ಲಕ್ಷ್ಯ ವಹಿಸಿದ್ದಾರೆ.
2007ರಲ್ಲಿ ರಾಜ್ಯದಲ್ಲಿ ಆಡಳಿತ ನಡೆಸಿದ ಬಿಜೆಪಿ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರ ಗುತ್ತಿಗೆ ನೀಡುವಲ್ಲಿ ಕಾನೂನಿನ ಪರಿಪಾಲನೆ ಮಾಡಿಲ್ಲ. ಇದರಿಂದ ಡ್ಯಾಂ ನಿರ್ಮಾಣ ನೆನಗುದಿಗೆ ಬಿದ್ದಿದೆ.
ಕೆ.ಚಂದ್ರಾರೆಡ್ಡಿ, ಅಧ್ಯಕ್ಷರು, ಜಿಲ್ಲಾ ಕಾಂಗ್ರೆಸ್ ಸಮಿತಿ
ಬಂಗಾರಪೇಟೆ ತಾಲೂಕಿನ ಯರಗೋಳ್‌ಡ್ಯಾಂ ನಿರ್ಮಾಣಕ್ಕೆ ನಾನು ಶಾಸಕನಾಗಿದ್ದಾಗ 2006-07ರಲ್ಲಿ ಗುದ್ದಲಿ ಪೂಜೆ ನೆರವೇರಿಸಲಾಗಿತ್ತು. ನಂತರ ಬಿಜೆಪಿ ಅಧಿಕಾರಾವಧಿಯಲ್ಲಿ ಕೇಂದ್ರದ ಯುಪಿಎ ಸರ್ಕಾರ ಅರಣ್ಯ ಇಲಾಖೆ ಭೂಮಿಯನ್ನು ರಾಜ್ಯ ಸರ್ಕಾರದ ವಶಕ್ಕೆ ನೀಡಲು ಹಿಂದೇಟು ಹಾಕಿತು. ನಂತರ ರಾಜ್ಯದಲ್ಲಿ ಆಡಳಿತಕ್ಕೆ ಬಂದ ಕಾಂಗ್ರೆಸ್ ಸರ್ಕಾರದ ಸಚಿವ ವಿನಯಕುಮಾರ್ ಸೊರಕೆ ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿ, ಡ್ಯಾಂ ಕಾಮಗಾರಿ ರದ್ದುಗೊಳಿಸಲು ಶಿಫಾರಸು ಮಾಡಿದ್ದರಿಂದ ಡ್ಯಾಂ ನಿರ್ಮಾಣ ಕಾಮಗಾರಿ ನಿಂತಿದೆ.
ಬಿ.ಪಿ.ವೆಂಕಟಮುನಿಯಪ್ಪ, ಬಿಜೆಪಿ ಜಿಲ್ಲಾಧ್ಯಕ್ಷರು
ರಾಜ್ಯ ಹಾಗೂ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಮತ್ತು ಬಿಜೆಪಿ ಸರ್ಕಾರಗಳು ಕೋಲಾರ ಜಿಲ್ಲೆಗೆ ಯಾವುದೇ
ಒಳ್ಳೆಯ ಕೆಲಸ ಮಾಡಿಲ್ಲ. ಮಾಡುವುದೂ ಇಲ್ಲ. ಯರಗೋಳ್ ಡ್ಯಾಂ ನಿರ್ಮಾಣಕ್ಕೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಮುಖ್ಯ ಮಂತ್ರಿ ಆಗಿದ್ದಾಗ ಗುದ್ದಲಿ ಪೂಜೆ ನೆರವೇರಿಸಿದ್ದು, 2018ರ ಚುನಾವಣೆ ನಂತರ ಜೆಡಿಎಸ್ ಸರ್ಕಾರದ ಮೂಲಕ ಕುಮಾರಸ್ವಾಮಿ ಅವರೇ ಡ್ಯಾಂ ಕಾಮಗಾರಿ ಪೂರ್ಣಗೊಳಿಸುತ್ತಾರೆ. ಕೋಲಾರ ಜಿಲ್ಲೆಗೆ ಕುಮಾರಸ್ವಾಮಿ ಬಿಟ್ಟರೇ ಬೇರೆ ಯಾರೂ
ಶಾಶ್ವತ ನೀರಾವರಿ ಯೋಜನೆ ರೂಪಿಸುವುದಿಲ್ಲ.
ಎಂ.ಮಲ್ಲೇಶ್‌ಬಾಬು, ಜೆಡಿಎಸ್ ಅಭ್ಯರ್ಥಿ, ಬಂಗಾರಪೇಟ
ಯರಗೋಳ್ ಪ್ರದೇಶದ ಎರಡು ಬೆಟ್ಟಗಳ ನಡುವೆ ಅಣೆಕಟ್ಟು ನಿರ್ಮಾಣ ಮಾಡಿದರೆ ಸುಮಾರು 600 ಎಕರೆ ಭೂ ಪ್ರದೇಶದಲ್ಲಿ ಮಳೆ ನೀರು ಸಂಗ್ರ ಹವಾಗುತ್ತದೆ ಎಂದು ಸಣ್ಣ ನೀರಾವರಿ ಇಲಾಖೆಯ ಕೆಲವು ಎಂಜಿನಿಯರ್‌ಗಳ ಅಭಿಪ್ರಾಯವಾಗಿತ್ತು.
ಎಂ.ಸಿ.ಮಂಜುನಾಥ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolara: ಹೈಕೋರ್ಟ್ ಅನುಮತಿ ಬಳಿಕ ಬಿಗಿ ಭದ್ರತೆಯಲ್ಲಿ ಆರೆಸ್ಸೆಸ್ ಪಥಸಂಚಲನ
Kolar: “ಗೃಹಲಕ್ಷ್ಮಿ’ಗೆ ಆಸಕ್ತಿ ತೋರದ 21 ಸಾವಿರ ಕೋಲಾರ ಸ್ತ್ರೀಯರು
Kolara: ಏಲಕ್ಕಿ ಬಾಳೆಕಾಯಿ ಬೆಲೆ ಕುಸಿತ: 3 ಎಕರೆ ಬೆಳೆ ಕಡಿದು ಹಾಕಿದ ರೈತ
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.