ಗ್ರಾಮೀಣ ಜೀವನ ಶೈಲಿಯಲ್ಲಿ ವಿಜ್ಞಾನ ಹಬ್ಬ
Team Udayavani, Dec 14, 2019, 3:58 PM IST
ಬಂಗಾರಪೇಟೆ: ತಾಲೂಕಿನ ಬೂದಿಕೋಟೆ ಗ್ರಾಮದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ಭಾರತ ವಿಜ್ಞಾನ ಸಮಿತಿ ಹಮ್ಮಿಕೊಂಡಿರುವ ಎರಡು ದಿನಗಳ ಕಾಲ ಕ್ಲಸ್ಟರ್ ಮಟ್ಟದ ಮಕ್ಕಳ ವಿಜ್ಞಾನ ಹಬ್ಬ ವಿಶೇಷವಾಗಿ ಗಮನ ಸೆಳೆಯುತ್ತಿದೆ. ಪೂರ್ವಜರು ಬಳಕೆ ಮಾಡುತ್ತಿದ್ದ ಹಾಗೂ ಅಳಿದುಳಿದ ವಸ್ತುಗಳನ್ನು ಇಲ್ಲಿ ಪ್ರದರ್ಶಿಸಿದ್ದು, ಶಿಕ್ಷಕರು, ವಿದ್ಯಾರ್ಥಿಗಳ ಕಣ್ಮನ ಸೆಳೆಯುತ್ತಿವೆ.
ಗರಿಕೆ ಸಾಂಸ್ಕೃತಿಕ ಕೇಂದ್ರವು ಶಾಲೆಯ ಆವರಣದಲ್ಲಿ ವಿಜ್ಞಾನದ ಜೊತೆಗೆ ಜಾನಪದ ಹಾಗೂ ಹಿಂದೆ ಹಳ್ಳಿಯ ಜನರು ಬಳಸುತ್ತಿದ್ದ ಸಂಗೀತ ವಾಧ್ಯಗಳು, ವ್ಯವಸಾಯ ಉಪಕರಣಗಳು ಹಾಗೂ ನಿತ್ಯ ಬಳಕೆಗೆ ಬಳಸುತ್ತಿದ್ದ ವಸ್ತುಗಳನ್ನು ಮಕ್ಕಳಿಗೆ ಪರಿಚಯಿಸುವ ಪ್ರಯತ್ನವೂ ನಡೆಯಿತು.
ವೇದಿಕೆಯ ಪಕ್ಕದಲ್ಲಿ ಪುರಾತನ ಕಾಲದಲ್ಲಿ ತಾಂತ್ರಿಕತೆಯ ಮುಕ್ತವಾಗಿ ವಾಸವಾಗಿದ್ದ ಜನರ ಜೀವನ ಮಟ್ಟವನ್ನು ಪರಿಚಯಿಸುವ ಒಂದು ಗುಡಿಸಲನ್ನು ನಿರ್ಮಾಣ ಮಾಡಿ, ಅದರ ಒಳಗೆ ಹಸುವೊಂದನ್ನು ಕಟ್ಟಿ ಪಕ್ಕದಲ್ಲಿಯೇ ಮೇಕೆ, ಕೋಳಿಗಳನ್ನು ಬಿಟ್ಟು ಒಂದು ಹಳ್ಳಿಯ ವಾತಾವರಣ ನಿರ್ಮಾಣ ಮಾಡಲಾಗಿದೆ. ಹಬ್ಬಕ್ಕೆ ಬಂದಿದ್ದ ಸಾವಿರಾರು ಮಕ್ಕಳು ಗುಡಿಸಲಿನ ಅಟ್ಟ ಏರಿ ಖುಷಿಪಟ್ಟರು.
ದನಗಳ ಅಲಂಕಾರಿಕ ವಸ್ತುಗಳು: ಪುರಾತನ ಕಾಲದಲ್ಲಿ ಈ ಹಿಂದೆ ಬಳಸುತ್ತಿದ್ದ ಅಡುಗೆ ಮನೆಯ ಉಪಕರಣಗಳಾದ ಮಣ್ಣಿನ ಒಲೆ, ಮಡಕೆ, ತಾಮ್ರದ ತಟ್ಟೆ, ಚಂಬು, ಬೆಳಕಿನ ದೀಪ, ಒನಕೆ, ರಾಗಿಕಲ್ಲು, ಹೊರಳು ಕಲ್ಲು, ನಸೆಗೋಲು, ಸಲಗುತ್ತಿ ಇತ್ಯಾದಿ ವಸ್ತುಗಳು. ದನಗಳ ಅಲಂಕಾರಿಕ ವಸ್ತುಗಳಾದ ಕಾಲ್ಗೆಜ್ಜೆ, ಕುಂಚ, ಬಗೆ ಬೆಗೆಯ ಮೂಗುದಾರಗಳು, ಸಿಕ್ಕುಗಳು, ಗಂಟೆಗಳು, ಚಾಟಿ ಕೋಲು, ಕೊರಳಿನ ಗಂಟೆ ಸರಗಳು ಇತ್ಯಾದಿಗಳು ನೋಡಿ ಮನಸೂರೆಗೊಂಡವು.
ಗಮನ ಸೆಳೆದ ಆಟ ಸಾಮಾನು: ಪ್ರಾಚೀನ ಕಾಲದಲ್ಲಿ ಯಾವುದೇ ತಾಂತ್ರಿಕತೆ ಇಲ್ಲದೇ ಕೃಷಿ ಚಟುವಟಿಕೆಗಳನ್ನು ನಿರ್ವಹಣೆ ಮಾಡುತ್ತಿದ್ದ ರೈತರಿಗೆ ಚಿರಪರಿಚಿತವಾಗಿರುವ ಕೃಷಿ ಉಪಕರಣಗಳಾದ ಮಂಕರಿ, ಹಲುಬೆ, ಗಡಾರಿ, ಕೂರಿಗೆ ಇತ್ಯಾದಿಗಳು. ಅಳತೆ ಮಾಪನಗಳಾದ ಶೇರು, ಇಬ್ಬಳಿಗೆ, ಪಾವು ಮಕ್ಕಳ ಆಟದ ವಸ್ತುಗಳಾದ ಅಚ್ಚಕಲ್ಲು, ಪಗಡೆ ದಾಳಗಳು, ಚಿಣ್ಣಿ ದಾಂಡು, ಲಗೋರಿ ಚಕ್ಕೆ ಮತ್ತು ಚೆಂಡು, ಗೋಲಿಗಳು, ಸಂಗೀತ ವಾದ್ಯಗಳಾದ ತಂಬೂರಿ, ಚರ್ಮದ ತಮಟೆ, ಚಕ್ಕೆ ರೈತರಿಗೆ ಹಾಗೂ ವಿದ್ಯಾರ್ಥಿಗಳಿಗೆ ಆಕರ್ಷಣೆಯಾಗಿದ್ದವು.
ಗತಕಾಲದ ವಸ್ತುಗಳ ಪ್ರದರ್ಶನ: ಪ್ರಾಚೀನ ಗ್ರಾಮೀಣ ಉಪಕರಣಗಳಾದ ಕಬ್ಬಿಣದ ಪೆಟ್ಟಿಗೆ, ಕಂಬಳಿ, ಮಣ್ಣಿನ ದೀಪ, ಮರದ ತೊಟ್ಟಿಲು, ಸುಣ್ಣದ ಡಬ್ಬಿ, ಕೋಳಿ ಪಂಜರ, ಊರುಗೋಲು ಇತ್ಯಾದಿಗಳನ್ನು ಪ್ರದರ್ಶನಕ್ಕೆ ಇಟ್ಟು ಗತಕಾಲದ ಹಾಗೂ ಇಂದಿನ ಜೀವನದ ಶೈಲಿಯ ಬಗ್ಗೆ ಮಕ್ಕಳಿಗೆ ವಿವರಣೆ ನೀಡಲಾಯಿತು.
ಗತಕಾಲದ ವಸ್ತುಗಳ ಪ್ರದರ್ಶನ: ಸಿರಿ ಧಾನ್ಯಗಳಾದ ಸಾಮೆ, ಆರ್ಕಾ, ನವಣೆ, ಕೊರಲೆ ಇತ್ಯಾದಿಗಳನ್ನು ಇಟ್ಟು ಸಿರಿಧಾನ್ಯಗಳ ಹಾಗೂ ಅದರ ಪ್ರಯೋಜನಗಳ ಬಗ್ಗೆ ಮಕ್ಕಳು ಮಾಹಿತಿ ಪಡೆದರು. ಗರಿಕೆ ಸಾಂಸ್ಕೃತಿಕ ಕೇಂದ್ರ ನೂತನವಾಗಿ ಆಯೋಜಿಸಿದ್ದ ಗತಕಾಲದ ಹಲವು ವಸ್ತುಗಳ ಪ್ರದರ್ಶನದಿಂದ ಮತ್ತೂಮ್ಮೆ ಗತವೈಭವಕ್ಕೆ ಹೋದ ಅನುಭವ ಸಿಕ್ಕಂತಾಯಿತು ಎಂದು ಶಿಕ್ಷಕರು ಹಾಗೂ ಮಕ್ಕಳು ಸಂತಸ ವ್ಯಕ್ತಪಡಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.