Ramesh Kumar: ರಾಜಕೀಯ ಶಕ್ತಿ ಕೇಂದ್ರವಾಗಿರುವ ಅಡ್ಡಗಲ್!
Team Udayavani, Feb 10, 2024, 5:13 PM IST
ಕೋಲಾರ: ಲೋಕಸಭಾ ಚುನಾವಣೆಯ ತಯಾರಿ ಹಿನ್ನೆಲೆಯಲ್ಲಿ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಅಡ್ಡಗಲ್ ತೋಟದ ಮನೆ ರಾಜಕೀಯ ನಿಲುವುಗಳ ಶಕ್ತಿ ಕೇಂದ್ರವಾಗಿ ಮಾರ್ಪಟ್ಟಿದೆ.
ವಿಧಾನಸಭಾ ಚುನಾವಣೆ ನಡೆದು 9 ತಿಂಗಳಾದರೂ, ಶ್ರೀನಿವಾಸಪುರ ಕ್ಷೇತ್ರದಿಂದ ಸೋತ ನಂತರ ಜಿಲ್ಲೆಯ ಹಿರಿಯ ರಾಜಕಾರಣಿ ರಮೇಶ್ ಕುಮಾರ್ ರಾಜಕೀಯ ವೇದಿಕೆಗಳಲ್ಲಿ ಕಾಣಿಸಿಕೊಂಡಿದ್ದು ಕಡಿಮೆ. ಆದರೂ, ಅವರ ತೋಟದ ಮನೆ ಮೇಲೆ ಪ್ರತಿಯೊಬ್ಬರ ಕಣ್ಣು ನೆಟ್ಟಿದೆ. ಏಕೆಂದರೆ, ಅದು ಪ್ರಮುಖ ರಾಜಕೀಯ ನಿರ್ಧಾರಗಳ ಶಕ್ತಿ ಕೇಂದ್ರವಾಗಿ ಹೊರ ಹೊಮ್ಮಿದೆ.
ಜಾತಿ ರಾಜಕಾರಣಕ್ಕೆ ಅಪವಾದ ಸ್ವಾಮಿ: ನೆರೆಯ ಆಂಧ್ರಪ್ರದೇಶದ ಛಾಪನ್ನು ಮೈಮೇಲೆ ಹೊತ್ತುಕೊಂಡಿರುವ ಶ್ರೀನಿವಾಸಪುರ ಕ್ಷೇತ್ರದಲ್ಲಿ ಪಾಳೇಗಾರಿಕೆಯ ಕುರುಹುಗಳು ಇಂದಿಗೂ ಕಾಣಿಸುತ್ತವೆ. ಇದರ ಪ್ರಭಾವವಾಗಿ ಕೋಲಾರ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳ ರಾಜಕಾರಣದಲ್ಲಿ ಜಾತಿ ರಾಜಕಾರಣ ವಿಜೃಂಭಿಸುತ್ತದೆ. ಇದಕ್ಕೆ ಸ್ಪಷ್ಟ ಅಪವಾದ ಶ್ರೀನಿವಾಸಪುರ ಕ್ಷೇತ್ರದ ರಮೇಶ್‌ಕುಮಾರ್. ಸ್ವಾಮಿ ಎಂದೇ ಕ್ಷೇತ್ರದಲ್ಲಿ ಜನಪ್ರಿಯವಾಗಿರುವ ರಮೇಶ್‌ಕುಮಾರ್ ತನ್ನದೇ ಜಾತಿಯ ನಾಲ್ಕೈದು ಸಾವಿರ ಮತಗಳನ್ನಿಟ್ಟುಕೊಂಡಿದ್ದರೂ, ಜನರ ಪ್ರೀತಿ ವಿಶ್ವಾಸ ಗಳಿಸುತ್ತಾ ಭರ್ಜರಿ ಜನ ಪ್ರೀತಿಯನ್ನು ಸಂಪಾದಿಸಿದ್ದಾರೆ. ಶ್ರೀ ನಿವಾಸಪುರ ಕ್ಷೇತ್ರದಲ್ಲಿ ರಮೇಶ್‌ಕುಮಾರ್ ಮೇಲಿನ ಪ್ರೀತಿಗಾಗಿ ಅವರ ಅಭಿಮಾನಿಗಳು ಎಂತದ್ದೇ ತ್ಯಾಗಕ್ಕೂ ಸಿದ್ಧವಾಗಿ ಬಿಡುತ್ತಾರೆ. ಈ ಪ್ರೀತಿ ಕೆಲವೊಮ್ಮೆ ವಿಪರೀತಕ್ಕೂ ಹೋಗಿರುವ ನಿದರ್ಶನಗಳಿವೆ.
ಶಕ್ತಿ ಕೇಂದ್ರವಾಗಿ ಅಡ್ಡಗಲ್: ಕೋಲಾರದ ರಾಜಕಾರಣ ಬಹುಬೇಗ ರಮೇಶ್‌ಕುಮಾರ್‌ರ ಮಹತ್ವವನ್ನು ಅರಿತುಕೊಂಡಿತ್ತು. ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯವರು ಕೋಲಾರ ಜಿಲ್ಲೆಯ ಯಾವುದೇ ನಿಲುವು ನಿರ್ಧಾರಗಳಿಗೆ ರಮೇಶ್‌ಕುಮಾರ್ ಅವರನ್ನು ಸಂಪರ್ಕಿಸುತ್ತಿದ್ದರು. ಸಲಹೆ ಕೇಳುತ್ತಿದ್ದರು. ಸೋತ ನಂತರವೂ ರಮೇಶ್‌ಕುಮಾರ್ ಸರ್ಕಾರದ ಪರೋಕ್ಷ ಭಾಗವಾಗಿದ್ದಾರೆಂಬುದನ್ನು ಅವರ ಅಭಿಮಾನಿಗಳು, ಶತ್ರುಗಳು ಕೊಂಚ ತಡವಾಗಿ ಅರ್ಥ ಮಾಡಿಕೊಂಡಿದ್ದರು. ಇದಾದ ನಂತರ ಅವರ ಅಡ್ಡಗಲ್ ತೋಟದ ಮನೆ ರಾಜಕೀಯ ನಿಲುವುಗಳ ಶಕ್ತಿ ಕೇಂದ್ರವಾಗಿ ಮಾರ್ಪಟ್ಟಿತು.
ಆಕಾಂಕ್ಷಿಗಳ ದೌಡು: ಮುಂಬರುವ ಲೋಕಸಭಾ ಚು ನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು 12ಕ್ಕೂ ಹೆಚ್ಚು ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ಕೆಲವರು ಅರ್ಜಿ ಸಲ್ಲಿಸದೆಯೇ ಕ್ಷೇತ್ರದಲ್ಲಿ ರಾಜಕಾರಣ ಮಾಡುತ್ತಿ ದ್ದಾರೆ. ಹೀಗೆ, ಆಕಾಂಕ್ಷಿಯಾದವರು ಕೋಲಾರ ಜಿಲ್ಲೆಗೆ ಕಾಲಿಡುವ ಮೊದಲು ಅಡ್ಡಗಲ್‌ಗೆ ಭೇಟಿ ಕೊಟ್ಟು ಸ್ವಾಮಿ ಆಶೀರ್ವಾದ ಪಡೆದು ನಂತರವಷ್ಟೇ ಕ್ಷೇತ್ರ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಹೀಗೆ, ಬಂದವರಿಗೆ ಸ್ವಾಮಿ ಯಾರಿಗೂ ಈವರೆಗೂ ಅಭಯ ಹಸ್ತ ನೀಡಿಲ್ಲ. ಪಕ್ಷದ ನಿರ್ಧಾರವಷ್ಟೇ ಮುಖ್ಯ. ನಿಮ್ಮ ಪ್ರಯತ್ನ ನಿಮಗಿರಲಿ ಎಂದಷ್ಟೇ ಹೇಳಿ ಕಳುಹಿಸುತ್ತಿದ್ದಾರೆ. ಆದರೂ, ರಮೇಶ್‌ಕುಮಾರ್ ಬೆಂಬಲ ಸಿಕ್ಕರೆ ಗೆಲುವು ಸುಲಭ ಎಂಬ ಭಾವನೆ ಬಹುತೇಕ ಆಕಾಂಕ್ಷಿಗಳಲ್ಲಿದೆ. ಫೈರ್ ಬ್ರ್ಯಾಂಡ್ ರೀತಿ ಮಾತನಾಡುವ ಬಿಜೆಪಿ ಸಂಸದ ಎಸ್.ಮುನಿಸ್ವಾಮಿ ಕೂಡ ಇದುವರೆಗೂ ರಮೇಶ್‌ಕುಮಾರ್ ವಿರುದ್ಧ ಮಾತನಾಡುವ ಧೈರ್ಯ ತೋರಿಲ್ಲ ಎನ್ನುವುದು ಗಮನಾರ್ಹ ಸಂಗತಿಯೇ.
5 ದಶಕಗಳ ಪ್ರಭಾವಿ ರಾಜಕಾರಣಿ ರಮೇಶ್ : 1978ರಲ್ಲಿ ಶ್ರೀನಿವಾಸಪುರ ಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕರಾದ ರಮೇಶ್‌ಕುಮಾರ್ ಸತತ ಗೆಲುವುಗಳನ್ನೇ ಕಂಡವರಲ್ಲ. ಸುಮಾರು 46 ವರ್ಷಗಳ ರಾಜಕಾರಣದಲ್ಲಿ ಸೋತು-ಗೆದ್ದು ಪರಿಪಕ್ವವಾಗಿದ್ದಾರೆ. 1978ರಿಂದ 2013ರವರೆಗೂ ಒಮ್ಮೆ ರಮೇಶ್‌ಕುಮಾರ್, ಮತ್ತೂಮ್ಮೆ ಜಿ.ಕೆ.ವೆಂಕಟಶಿವಾರೆಡ್ಡಿ ಎಂಬಂತೆ ಗೆಲ್ಲುತ್ತಿದ್ದರು. ಬಹುತೇಕ ಇಬ್ಬರನ್ನು ಸರಿಸಮವಾಗಿ ಪ್ರೀತಿಸುತ್ತಿದ್ದ ಶ್ರೀನಿವಾಸಪುರ ಜನತೆ ಯಾರೇ ಗೆದ್ದರೂ ಕೇವಲ ಐದಾರು ಸಾವಿರ ಮತಗಳ ಅಂತರದ ಗೆಲುವು ನೀಡುತ್ತಿದ್ದರು. 2013 ಮತ್ತು 2018ರಲ್ಲಿ ಸತತವಾಗಿ ಗೆಲ್ಲುವ ಮೂಲಕ ರಮೇಶ್‌ಕುಮಾರ್ ಸೋಲು-ಗೆಲುವಿನ ಸರಪಳಿ ಮುರಿದು ದಾಖಲೆ ಬರೆದಿದ್ದರು. ಸುಮಾರು 40 ವರ್ಷಗಳ ಸುದೀರ್ಘ ರಾಜಕೀಯದ ನಂತರ ಸಂಪುಟದಲ್ಲಿ ಮಂತ್ರಿಯಾಗಿದ್ದರು. ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ಕೆಸಿ ವ್ಯಾಲಿ ಯೋಜ ನೆಯ ಅನುಷ್ಠಾನಕ್ಕಾಗಿ ಸಾಕಷ್ಟು ಶ್ರಮಿಸಿ ಯೋಜನೆ ಯನ್ನು ದಡ ಮುಟ್ಟಿಸಿದ್ದರು. ಆದರೆ, 2023ರ ಚು ನಾವಣೆಯಲ್ಲಿ ತಮ್ಮದೇ ಪಕ್ಷದವರ ವಿರೋಧದಲ್ಲಿ ಹ್ಯಾಟ್ರಿಕ್ ಗೆಲುವನ್ನು ತಪ್ಪಿಸಿಕೊಂಡಿದ್ದರು.
ಶಾಸಕ ವೆಂಕಟಶಿವಾರೆಡ್ಡಿ ಕಾಂಗ್ರೆಸ್ ಸೇರ್ಪಡೆ?: ರಮೇಶ್‌ಕುಮಾರ್‌ರ ಕಡು ರಾಜಕೀಯ ವೈರಿ ಜಿ.ಕೆ. ವೆಂಕಟಶಿವಾರೆಡ್ಡಿ ಗೆದ್ದ ನಂತರ ಕಾಂಗ್ರೆಸ್ ಸೇರುವ ಇಂಗಿತ ವ್ಯಕ್ತಪಡಿಸಿರುವ ಕುರಿತು ಕೋಲಾರ ಶಾಸಕ ಕೊತ್ತೂರು ಮಂಜುನಾಥ್ ಸುದ್ದಿ ಬಹಿರಂಗಪಡಿಸಿದ್ದಾರೆ. ಇದಕ್ಕೆ ರಮೇಶ್ ಕುಮಾರ್ ಒಪ್ಪಿಕೊಂಡಿದ್ದಾರೆ ಎಂದು ಹೇಳಿರುವುದು ರಾಜಕೀಯವಾಗಿ ವಿಶೇಷ ಅರ್ಥ ನೀಡುತ್ತಿದೆ. ಶ್ರೀನಿವಾಸಪುರದಲ್ಲಿ ರಮೇಶ್‌ಕುಮಾರ್ ಮತ್ತು ಜಿ.ಕೆ.ವೆಂಕಟಶಿವಾರೆಡ್ಡಿಯನ್ನು ಒಂದೇ ಪಕ್ಷದಲ್ಲಿ ಯಾರೂ ಇದುವರೆಗೂ ಊಹಿಸಿಕೊಳ್ಳಲೂ ಸಾಧ್ಯವಾಗಿರಲಿಲ್ಲ. ಅಂತದ್ದೊಂದು ರಾಜಕೀಯ ಧ್ರುವೀ ಕರ ಣಕ್ಕೆ ರಮೇಶ್‌ಕುಮಾರ್ ಒಪ್ಪಿಗೆ ನೀಡಿದ್ದಾರೆಂದರೆ ಅದು ಕೋಲಾರ ಜಿಲ್ಲಾ ರಾಜಕಾರಣದ ಬಹುದೊಡ್ಡ ಘಟ್ಟವಾಗಿ ಉಳಿದು ಹೋಗಲಿದೆ ಎಂದು ಹೇಳಲಾಗುತ್ತಿದೆ.
ರಮೇಶ್-ಮುನಿಯಪ್ಪ ಒಂದಾಗಲು ಸಾಧ್ಯವೇ?: ಶ್ರೀನಿವಾಸಪುರ ರಾಜಕಾರಣದ ರಾಜಕೀಯ ಕಡು ವಿರೋಧಿಗಳಾಗಿದ್ದ ರಮೇಶ್‌ಕುಮಾರ್ ಮತ್ತು ಜಿ.ಕೆ.ವೆಂಕಟಶಿವಾರೆಡ್ಡಿ ಇದೀಗ ಒಂದೇ ಪಕ್ಷಕ್ಕೆ ಬರಲು ಪ್ರಯತ್ನಗಳು ನಡೆಸುತ್ತಿರುವಾಗಲೇ, ಕಾಂಗ್ರೆಸ್ ಮುಖಂಡರು ಕಾರ್ಯಕರ್ತರ ಮತ್ತೂಂದು ಬೇಡಿಕೆಗೂ ಪಕ್ಷವು ಕಿವಿಗೊಡುವುದೇ ಎಂಬ ಪ್ರಶ್ನೆ ಕಾಡುತ್ತಿದೆ. ಕೋಲಾರ ಕಾಂಗ್ರೆಸ್‌ನಲ್ಲಿ ರಮೇಶ್‌ಕುಮಾರ್ ಹಾಗೂ ಕೆ.ಎಚ್. ಮುನಿಯಪ್ಪ ಒಂದಾಗಿ ಕಾಣಿಸಿಕೊಂಡರೆ ಇಡೀ ಕೋಲಾರ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಪ್ರಬಲವಾಗುತ್ತದೆ. ಆದರೆ, ಸೋತು-ಗೆದ್ದು ರಾಜ್ಯ ರಾಜಕಾರಣಕ್ಕೆಬಂದು ಆಹಾರ ಸಚಿವರಾಗಿರುವ ಕೆ.ಎಚ್.ಮುನಿಯಪ್ಪ ಮತ್ತು ಗೆದ್ದು- ಸೋತರೂ ಪ್ರಭಾವಿಯಾಗಿಯೇ ಉಳಿದಿರುವ ರಮೇಶ್‌ಕುಮಾರ್‌ರನ್ನು ಒಂದು ಮಾಡುವವರೂ ಯಾರು ಎಂಬುದೇ ಪ್ರಶ್ನೆ. ರಮೇಶ್‌ಕುಮಾರ್ ಮತ್ತು ಕೆ.ಎಚ್.ಮುನಿಯಪ್ಪ ಒಂದಾದರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುಲಭ ಎಂಬ ಲೆಕ್ಕಾಚಾರಗಳಿವೆ. ಇದರ ಅನುಷ್ಠಾನದ ಬಗ್ಗೆ ಸದ್ಯಕ್ಕೆ ಕುತೂಹಲ ಉಳಿದಿದೆ.
ಹತ್ತಾರು ನಿರೀಕ್ಷೆಗಳು : ಶಾಸಕ ಜಿ.ಕೆ. ವೆಂಕಟಶಿವಾರೆಡ್ಡಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರುವುದು. ವೆಂಕಟಶಿವಾರೆಡ್ಡಿ ಮತ್ತೇ ಚುನಾವಣೆಗೆ ಸ್ಪರ್ಧಿಸಿದರೆ ರಮೇಶ್‌ಕುಮಾರ್ ಅವರ ಸೂಚಕರಾಗಿರುವುದು. ವೆಂಕಟಶಿವಾರೆಡ್ಡಿಯನ್ನು ಕಾಂಗ್ರೆಸ್ ಗೆಲ್ಲಿಸಿಕೊಂಡು ಅವರಿಗೆ ಸೂಕ್ತ ಸ್ಥಾನಮಾನ ನೀಡುವುದು. ಇದರ ಜತೆಗೆ ರಮೇಶ್‌ಕುಮಾರ್‌ರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿಸಿ ಅವರಿಗೆ ಮಂತ್ರಿ ಸ್ಥಾನ ನೀಡುವುದು. ಕೋಲಾರ ಜಿಲ್ಲೆಯ ಉಸ್ತುವಾರಿ ಹೊಣೆಗಾರಿಕೆ ನೀಡಿ ಇಡೀ ಜಿಲ್ಲೆಯ ಕಾಂಗ್ರೆಸ್‌ಗೆ ಮತ್ತೇ ರಮೇಶ್‌ಕುಮಾರ್ ರನ್ನು ರೂವಾರಿಯಾಗಿಸುವ ಉದ್ದೇಶ ಇದೆ ಎನ್ನಲಾಗುತ್ತಿದೆ. ಇಲ್ಲವೇ ಮತ್ತಷ್ಟು ಬೇರೇ ರೀತಿಯ ಬೆಳವಣಿಗೆಗಳೂ ಆಗುವ ನಿರೀಕ್ಷೆಗಳಿವೆ.
ಚುನಾವಣೆ ಸೋತ ಮೇಲೆ ಅಜ್ಞಾತ : ರಮೇಶ್‌ಕುಮಾರ್ ಹ್ಯಾಟ್ರಿಕ್ ಗೆಲುವನ್ನು ನಿರೀಕ್ಷಿಸುತ್ತಿದ್ದರು. ಆದರೆ, ವಿವಿಧ ಕಾರಣಗಳಿಂದ 2023ರ ಚುನಾವಣೆಯಲ್ಲಿ ಸೋಲ ಬೇಕಾಯಿತು. ಸೋತ ನಂತರ ರಮೇಶ್‌ಕುಮಾರ್ ಕೋಲಾರ ಜಿಲ್ಲಾ ರಾಜಕಾರಣದಲ್ಲಿ ಅಜ್ಞಾತರಾದರು. ಇವರ ಸೋಲು ಹಲವರಿಗೆ ಸಂತಸ ತಂದಿತ್ತು. ಅನೇಕರಿಗೆ ದುಃಖವನ್ನು ತರಿಸಿತ್ತು. ಸ್ಥಿತಪ್ರಜ್ಞರಂತೆ ರಮೇಶ್‌ಕುಮಾರ್ ತಾವಾಯಿತು, ತಮ್ಮ ಪಾಡಾಯಿತು ಎಂಬಂತೆ ತಮ್ಮ ಗ್ರಾಮ ಅಡ್ಡಗಲ್ ತೋಟದ ಮನೆಯಲ್ಲಿ ಇದ್ದು ಬಿಟ್ಟಿದ್ದರು. ರಾಜಕಾರಣದಲ್ಲಿ ಗೆದ್ದ ಕೆಲವರು ಇವರ ಸ್ಥಾನ ತುಂಬಲು ಪ್ರಯತ್ನಿಸಿದರು. ರಮೇಶ್ ಕುಮಾರ್ ಇನ್ನು ಸಕ್ರಿಯ ರಾಜಕಾರಣಿ ಯಾಗಿರುವುದಿಲ್ಲ ಎಂದು ಬೀಗಿದ್ದರು. ತಮ್ಮ ಛಾಪು ತೋರಿಸಲು ಶುರುವಿಟ್ಟುಕೊಂಡಿದ್ದರು. ಅದರೂ ಅವರ ಜಾಗವನ್ನು ತುಂಬಲು ಯಾರಿಗೂ ಸಾಧ್ಯವಾಗಿರಲಿಲ್ಲ. ರಮೇಶ್‌ಕುಮಾರ್‌ರ ಮಾತಿಗೆ ಹತ್ತಾರು ಅರ್ಥಗಳಿರುವಂತೆ, ಅವರ ಮೌನಕ್ಕೆ ನೂರಾರು ಅರ್ಥಗಳು ಬಂದು ಬಿಟ್ಟಿದ್ದವು. ಒಟ್ಟಾರೆ, ಕೋಲಾರ ಜಿಲ್ಲಾ ರಾಜಕಾರಣದಲ್ಲಿ ರಮೇಶ್‌ಕುಮಾರ್ ಇಲ್ಲದ ಶೂನ್ಯ. ಅವರ ಅಭಿಮಾನಿಗಳನ್ನೂ ಹಾಗೂ ಅವರ ರಾಜಕೀಯ ಶತ್ರುಗಳನ್ನು ಕಾಡುವಂತಾಗಿತ್ತು.
-ಕೆ.ಎಸ್.ಗಣೇಶ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.