![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Aug 24, 2021, 4:00 PM IST
ಮುಳಬಾಗಿಲು: ಬಿತ್ತನೆ ಆಲೂಗಡ್ಡೆಗೆ ಜಿಲ್ಲಾಡಳಿತ ಬೆಲೆ ನಿಗದಿ ಮಾಡಬೇಕು, ದುಬಾರಿ ಬೆಲೆಗೆ ಮಾರಾಟ ಮಾಡುತ್ತಿರುವ ವ್ಯಾಪಾರಿಗಳ ವಿರುದ್ಧ ಕ್ರಮ ಕೈಗೊಳ್ಳ ಬೇಕೆಂದು ಸಾಮೂಹಿಕ ರೈತ ಸಂಘ ನಗರದ ತೋಟಗಾರಿಕೆ ಇಲಾಖೆ ಕಚೇರಿ ಎದುರು ಪ್ರತಿಭಟಿಸಿತು.
ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ. ನಾರಾಯಣ ಗೌಡ ಮಾತನಾಡಿ, ಹತ್ತಾರು ವರ್ಷಗಳಿಂದ ಕೃಷಿ ಉತ್ಪನ್ನ ಮಾರುಕಟ್ಟೆಯ ಜಾಗದಲ್ಲಿಯೇ ವ್ಯವಹಾರ ನಡೆಸುತ್ತಿರುವ ವ್ಯಾಪಾರಿಗಳು ರೈತರಿಗೆ ದುಬಾರಿ ಬೆಲೆಗೆ ಆಲೂಗಡ್ಡೆ ಮಾರಾಟ ಮಾಡುತ್ತಿದ್ದಾರೆ. ಆದರೂ, ತೋಟಗಾರಿಕೆ ಮತ್ತು ಕೃಷಿ ಉತ್ಪನ್ನ ಅಧಿಕಾರಿಗಳು ಏಕ ರೂಪದ ಬೆಲೆ ನಿಗದಿ ಮಾಡಲು ಸಾಧ್ಯವಾಗಿಲ್ಲ ಎಂದು ಹೇಳಿದರು.
ಸಾಲದ ಸುಳಿಯಲ್ಲಿ ರೈತ: ಈ ಈ ಬಗ್ಗೆ ಕೇಳಿದರೆ ನಾವು ಯಾವುದೇ ಬಿತ್ತನೆ ಆಲೂಗಡ್ಡೆ ಮಾರಾಟ ಮಾಡಲು ಪರವಾನಗಿ ನೀಡಿಲ್ಲವೆಂದು ಬೇಜವಾಬ್ದಾರಿ ಉತ್ತರ ನೀಡುತ್ತಿದ್ದಾರೆ. ಅಲ್ಲದೇ, ಕೋವಿಡ್ ನೆಪದಲ್ಲಿ ಹೊರ ರಾಜ್ಯಗಳಿಂದ ಬಿತ್ತನೆ ಆಲೂಗಡ್ಡೆ ಆಭಾವ ಇದೆ ಎಂದು ಕಳೆದ ವರ್ಷ ಪ್ರತಿ ಒಂದು ಮೂಟೆ ಬಿತ್ತನೆ ಆಲೂಗಡ್ಡೆ 5 ರಿಂದ 10 ಸಾವಿರ ರೂ.ಗೆ ಮಾರಾಟ ಮಾಡಿದ್ದಾರೆ. ಗುಣಮಟ್ಟ ಆಲೂಗಡ್ಡೆ ಸಿಗದೆ,
ಸಿಕ್ಕಿದ್ದನ್ನು ಬಿತ್ತನೆ ಮಾಡಿ, ಹಾಕಿದ ಬಂಡವಾಳ ಕೈಗೆ ಬರದೆ ರೈತರು ಸಾಲ ಸುಳಿಗೆ ಸಿಲುಕಿದ್ದಾರೆ ಎಂದು ಆರೋಪಿಸಿದರು.
ಇದನ್ನೂ ಓದಿ:ಜೆಡಿಎಸ್ ಪುನಃಶ್ಚೇತನಕ್ಕೆ ರಾಜ್ಯಾದ್ಯಂತ ಪ್ರವಾಸ : ಎಚ್.ಡಿ. ಕುಮಾರಸ್ವಾಮಿ
ಈ ವರ್ಷವೂ ಅವಧಿ ಮುನ್ನವೇ ಖಾಸಗಿ ಬಿತ್ತನೆ ಆಲೂಗಡ್ಡೆ ವ್ಯಾಪಾರಿಗಳಿಗೆ ಕಾನೂನಿನ ಭಯದ ಜೊತೆಗೆ ಅಧಿಕಾರಿಗಳ ಭಯವೂ ಇಲ್ಲ, ನಾನೇ ರಾಜ, ನಾನೇ ಮಂತ್ರಿ ಎಂಬಂತೆ ಪ್ರತಿ ಮೂಟೆಗೆ 2 ಸಾವಿರ ರೂ. ನಂತೆ ಬಿತ್ತನೆ ಆಲೂಗಡ್ಡೆ ಮಾರಾಟ ಮಾಡುತ್ತಿದ್ದಾರೆ. ಆದರೂ, ಅಧಿಕಾರಿಗಳು ಇತ್ತ ಕಡೆ ಗಮನಹರಿಸದಿರುವುದರಿಂದ ವ್ಯಾಪಾರಿಗಳ ದಂಧೆಗೆ ಕಡಿವಾಣವೇ ಇಲ್ಲದಾಗಿದೆ ಎಂದು ಆಕ್ರೋಶ
ವ್ಯಕ್ತಪಡಿಸಿದರು.
ತೋಟಗಾರಿಕೆ ನಿರ್ದೇಶಕಿಗೆ ಮನವಿ: ಖಾಸಗಿ ಬಿತ್ತನೆ ಆಲೂಗಡ್ಡೆ ಮಾರಾಟಗಾರರು ಕಡ್ಡಾಯವಾಗಿ ದರ ಪಟ್ಟಿಯನ್ನು ಅಂಗಡಿಯ ಮುಂದೆ ಹಾಕಬೇಕು, ರೈತರಿಗೆ ಕಡ್ಡಾಯವಾಗಿ ಜಿಎಸ್‌ಟಿ ಬಿಲ್ ನೀಡಬೇಕು, ಜಿಲ್ಲಾಡಳಿತವೇ ಬಿತ್ತನೆ ಆಲೂಗಡ್ಡೆಗೆ ಬೆಲೆ ನಿಗದಿ ಮಾಡಿ, ಖಾಸಗಿ ವ್ಯಾಪಾರಿಗಳಿಂದ ರೈತರ ಶೋಷಣೆ ತಪ್ಪಿಸಬೇಕೆಂದು ಒತ್ತಾಯಿಸಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕಿ ಶಿವಕುಮಾರಿಗೆ ಮನವಿ
ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಹಸಿರು ಸೇನೆ ತಾಲೂಕು ಅಧ್ಯಕ್ಷ ಯಲುವಳ್ಳಿ ಪ್ರಭಾಕರ್, ರೈತ ಸಂಘದ ತಾಲೂಕು ಅಧ್ಯಕ್ಷ ಫಾರುಕ್‌ಪಾಷ, ಜಿಲ್ಲಾ ಕಾರ್ಯಾಧ್ಯಕ್ಷ ಹೆಬ್ಬಣಿಆನಂದರೆಡ್ಡಿ, ವಿಜಯಪಾಲ್, ಅಣ್ಣಿಹಳ್ಳಿ ನಾಗರಾಜ್, ಸಾಗರ್, ಸುಪ್ರೀಂಚಲ, ವೇಣು, ನವೀನ್, ಕೇಶವ ಪಾಲ್ಗೊಂಡಿದ್ದರು.
ಆಸ್ಪತ್ರೆಗೆ ಮೂಲ ಸೌಕರ್ಯ ಕಲ್ಪಿಸಲು ರೈತ ಸಂಘ ಒತ್ತಾಯ
ಮುಳಬಾಗಿಲು: ನಗರದ ಸಾರ್ವಜನಿಕ ಆಸ್ಪತ್ರೆಗೆ ಮೂಲಸೌಕರ್ಯಒದಗಿಸಬೇಕೆಂದು ರೈತ ಸಂಘದ (ಪುಟ್ಟಣ್ಣಯ್ಯ ಬಣ) ಕಾರ್ಯಕರ್ತರು ಸೋಮವಾರ ನಗರದ ಸಾರ್ವಜನಿಕ ಆಸ್ಪತ್ರೆ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು. ಈ ವೇಳೆ ಮಾತನಾಡಿದ ರೈತ ಸಂಘದ ಜಿಲ್ಲಾಧ್ಯಕ್ಷ ಮುರಗಲ್ ಶ್ರೀನಿವಾಸ್, ತಾಲೂಕಿನ ಜನರು ನಗರದ ಸಾರ್ವಜನಿಕ ಆಸ್ಪತ್ರೆ ಅವಲಂಬಿಸಿದ್ದಾರೆ. ಆದರೆ, ಆಸ್ಪತ್ರೆಯಲ್ಲಿ ಮೂಳೆ ಸೇರಿ ಇತರೆ ತಜ್ಞ ವೈದ್ಯರ ಕೊರತೆ ಇದೆ. ಸರಿಯಾದ ಸಮಯಕ್ಕೆ ಚುಚ್ಚು ಮದ್ದು ದೊರೆ ಯುತ್ತಿಲ್ಲ, ಸಲಕರಣೆಗಳು ಇಲ್ಲದೆ ರೋಗಿಗಳು ಸೂಕ್ತ ಚಿಕಿತ್ಸೆಯಿಂದ ವಂಚಿತರಾಗುತ್ತಿದ್ದಾರೆ ಎಂದು ಆರೋಪಿಸಿದರು. ಕೂಡಲೇ ಜಿಲ್ಲಾಡಳಿತ ಆಸ್ಪತ್ರೆಯಲ್ಲಿನ ಮೂಲ ಸೌಕರ್ಯ ಕೊರತೆ ನಿವಾರಿಸಲು ಒತ್ತಾಯಿಸಿ ಆಡಳಿತ ವೈದ್ಯಾಧಿಕಾರಿ ಡಾ.ಭಾರತಿಗೆ ಸಂಘದ ಕಾರ್ಯಕರ್ತರುಮನವಿ ಸಲ್ಲಿಸಿದರು. ತಾಲೂಕು ಅಧ್ಯಕ್ಷ ಬಂಗಾರಿ ಮಂಜುನಾಥ್, ಮುಳಬಾಗಿಲು ನಗರ ಘಟಕ ಅಧ್ಯಕ್ಷ ಗಣೇಶ್ ಪಾಲ್ಗೊಂಡಿದ್ದರು.
You seem to have an Ad Blocker on.
To continue reading, please turn it off or whitelist Udayavani.