ಚಿನ‌್ನದ ನಾಡಲ್ಲಿ ಹರಡಿದ ಕನ್ನಡದ ಕಂಪು
ಕೆಜಿಎಫ್ ತಾಲೂಕು ಮೊದಲ ಸಾಹಿತ್ಯ ಸಮ್ಮೇಳನ ಸಂಪನ್ನ • ಸಮ್ಮೇಳನಾಧ್ಯಕ್ಷ ವೆಂಕಟರಮಣಪ್ಪ ಅದ್ಧೂರಿ ಮೆರವಣಿಗೆ
Team Udayavani, Jul 1, 2019, 11:23 AM IST
ಕೆಜಿಎಫ್: ಚಿನ್ನದ ಗಣಿಗಾರಿಕೆಯಿಂದ ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡಿರುವ ತಾಲೂಕಿನಲ್ಲಿ ಮೊದಲ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ಪೂರ್ಣಗೊಂಡಿತು. ತೆಲುಗು, ತಮಿಳು ಇತರೆ ಭಾಷಿಕರಿಂದ ತುಂಬಿರುವ ನಗರದಲ್ಲಿ ಭಾನುವಾರ ಕನ್ನಡದ ಕಂಪು ಹರಡಿತ್ತು. ರಥದಲ್ಲಿ ಸಮ್ಮೇಳನಾಧ್ಯಕ್ಷ ವೆಂಕಟರಮಣಪ್ಪ ಅವರ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು. ಕನ್ನಡ ಪರ ಕೆಲಸ ಮಾಡಿದ ಸಾಧಕರು, ವಿದ್ಯಾರ್ಥಿಗಳನ್ನು ಗುರುತಿಸಿ ಸನ್ಮಾನ ಮಾಡಲಾಯಿತು.
ಈ ವೇಳೆ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಅಧ್ಯಕ್ಷೀಯ ಭಾಷಣ ಮಾಡಿದ ಎಂ.ಎನ್.ವೆಂಕಟರಮಣಪ್ಪ, ಕನ್ನಡ ಕೆಲಸ ಮಾಡಲು ಜನ ಕಡಿಮೆ ಇದ್ದರೂ, ಇಚ್ಛಾಶಕ್ತಿ ಇದ್ದರೆ ಏನಾದರೂ ಸಾಧಿಸಬಹುದು ಎಂದು ಹೇಳಿದರು. ಬೆಮಲ್ ಕಲಾಕ್ಷೇತ್ರದಲ್ಲಿ ಭಾನುವಾರ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷೀಯ ಭಾಷಣ ಮಾಡಿದ ಅವರು, 50 ವರ್ಷದ ಹಿಂದೆ ಇದ್ದ ಕೆಜಿಎಫ್ ನಗರಕ್ಕೂ ಇಂದಿನ ನಗರಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಕನ್ನಡ ಸಾಕಷ್ಟು ಬೆಳೆದಿದೆ. ಇದರಲ್ಲಿ ಎಲ್ಲಾ ಕನ್ನಡಿಗರ ಕೊಡುಗೆ ಇದೆ ಎಂದು ಹೇಳಿದರು. ಪ್ರತಿಯೊಬ್ಬರಿಗೂ ಪ್ರಭಾಶಕ್ತಿ, ಉತ್ಸಾಹಶಕ್ತಿ ಮತ್ತು ಮಂತ್ರಶಕ್ತಿ ಇದ್ದರೆ ಅವರು ಜೀವನದಲ್ಲಿ ಉದ್ಧಾರವಾಗುತ್ತಾರೆ. ಕನ್ನಡದ ಕೆಲಸ ಮಾಡಲು ಸಹ ಈ ಶಕ್ತಿಯನ್ನು ಉಪಯೋಗಿಸಿ ಎಂದು ಅವರು ಕನ್ನಡಿಗರಿಗೆ ಸಲಹೆ ನೀಡಿದರು.
ಕನ್ನಡಿಗರ ಗುರುತಿಸಿ: ಶಾಸಕಿ ಎಂ.ರೂಪಕಲಾ ಮಾತನಾಡಿ, ಕನ್ನಡದ ಅಭಿಮಾನವಿದ್ದರೆ ಸಾಲದು, ಕನ್ನಡಕ್ಕಾಗಿ ಕೆಲಸ ಮಾಡಿದವರನ್ನು ಗುರುತಿಸಬೇಕು, ಚಿಂತನೆ ಮಾಡುವವರಿಗೆ ಆದ್ಯತೆ ನೀಡಬೇಕು. ಸಮಾಜದ ಅಭಿವೃದ್ಧಿಗೆ ಎಲ್ಲಾ ಪ್ರಗತಿಪರರು, ಕವಿಗಳು ಸಾಕಷ್ಟು ಕೊಡಗೆ ನೀಡಿದ್ದಾರೆ. ಕನ್ನಡದ ಅಭಿವೃದ್ಧಿಗೆ ಶಾಸಕಿಯಾಗಿ ಯಾವ ಜವಾಬ್ದಾರಿ ತೆಗೆದುಕೊಳ್ಳಲು ಸಿದ್ಧ ಎಂದರು. ಇದು ಮೊದಲ ತಾಲೂಕು ಸಮ್ಮೇಳನ ಆಗಿದೆ. ಅಲ್ಪಸ್ವಲ್ಪ ಲೋಪಗಳು ನಡೆದಿದೆ. ಅದನ್ನು ಮನ್ನಿಸಿ ಕಾರ್ಯಕ್ರಮ ಯಶಸ್ವಿ ಮಾಡಬೇಕು ಎಂದು ಶಾಸಕಿ ಮನವಿ ಮಾಡಿದರು.
ಕನ್ನಡಮಯ ವಾತಾವರಣ: ಕೆಜಿಎಫ್ ಬೆಮಲ್ ಸಂಕೀರ್ಣದ ಪ್ರಧಾನ ವ್ಯವಸ್ಥಾಪಕ ಉಮಾಶಂಕರ್ ಎನ್.ದೇವಪ್ಪ ಮಾತನಾಡಿ, ಕೆಜಿಎಫ್ನಲ್ಲಿ ಕನ್ನಡಮಯ ವಾತಾವರಣ ನಿರ್ಮಾಣವಾಗಿದೆ. ಇದಕ್ಕೆ ಎಲ್ಲಾ ಕನ್ನಡ ಸಂಘ ಸಂಸ್ಥೆಗಳ ಕೊಡುಗೆ ಇದೆ. ಬೆಮಲ್ ಕೂಡ ಎಲ್ಲಾ ಕಾರ್ಯಕ್ರಮಗಳಿಗೂ ಬೆಂಬಲ ನೀಡುತ್ತದೆ ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಸ್.ಮಹಮದ್ ಸುಜೀತ ಮಾತನಾಡಿ, ನಮ್ಮ ಸಂಸ್ಕೃತಿಯನ್ನು ಕಾಪಾಡಿಕೊಂಡು ಬರಲು ಮೊದಲು ಮನೆಯಲ್ಲಿ ಪೋಷಕರು ಮಕ್ಕಳಿಗೆ ವಿಷಯ ತಿಳಿಸಬೇಕು. ಸಾಹಿತ್ಯ ಸಮ್ಮೇಳನಕ್ಕೆ ಇಲಾಖೆ ಎಲ್ಲಾ ರೀತಿಯ ಸಹಕಾರ ನೀಡುತ್ತದೆ ಎಂದರು.
ಬೆಮೆಲ್ನಿಂದ ಸಹಕಾರ: ಕಸಾಪ ಜಿಲ್ಲಾಧ್ಯಕ್ಷ ನಾಗಾನಂದ ಕೆಂಪರಾಜ್ ಮಾತನಾಡಿ, ಬೆಮಲ್ ಸಂಸ್ಥೆ ಕನ್ನಡದ ಶಕ್ತಿಯಾಗಿದೆ. ಎಲ್ಲಾ ಕಾರ್ಯಕ್ರಮಗಳಿಗೂ ಪ್ರೋತ್ಸಾಹ ನೀಡಿದ್ದಾರೆ. ಅನೇಕ ಕನ್ನಡ ಕಾರ್ಯಕ್ರಮಗಳನ್ನು ಬೆಮಲ್ನಲ್ಲಿ ನಡೆಸಲು ಸಾಧ್ಯವಾಗಿದೆ ಎಂದು ಹೇಳಿದರು. ಕಳೆದ ಮೂರು ವರ್ಷಗಳಲ್ಲಿ ಸಾಹಿತ್ಯ ಪರಿಷತ್ ಗಡಿ ಪ್ರದೇಶದಲ್ಲಿ ಹಲವು ಕನ್ನಡ ಕಾರ್ಯಕ್ರಮಗಳನ್ನು ಮಾಡಿ, ಕನ್ನಡ ವಾತಾವರಣ ನಿರ್ಮಿಸಿದೆ ಎಂದು ಅವರು ಹೇಳಿದರು.
ನಗರಸಭೆ ಆಯುಕ್ತ ಆರ್.ಶ್ರೀಕಾಂತ್ ಮಾತನಾಡಿ, ಕನ್ನಡದ ಕೆಲಸ ಮಾಡುವ ಮನಸ್ಸು ಹೃದಯದಿಂದ ಬರಬೇಕು. ಬೇರೆಯವರ ಒತ್ತಾಯಕ್ಕೆ ಕನ್ನಡ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಸರಿಯಲ್ಲ ಎಂದು ತಿಳಿಸಿದರು.
ಬಿಇಒ ಅಶೋಕ್ ಮಾತನಾಡಿ, ಹಸಿದವರಿಗೆ ಅನ್ನ ನೀಡುವುದು, ಸಾಹಿತ್ಯ ಸಮ್ಮೇಳನ ಮಾಡಿದಷ್ಟೇ ಉತ್ತಮ ಕೆಲಸ ಎಂದು ತಿಳಿಸಿದರು. ಈ ಮುನ್ನ ಬೆಮಲ್ನಲ್ಲಿ ಧ್ವಜಾರೋಹಣ ಮಾಡಲಾಯಿತು.
ರಾಬರ್ಟಸನ್‌ಪೇಟೆಯಲ್ಲಿ ಅಧ್ಯಕ್ಷರ ಮೆರವಣಿಗೆಗೆ ಕನ್ನಡ ಸಂಘದ ಅಧ್ಯಕ್ಷ ವಿಜಯಶಂಕರ್ ಚಾಲನೆ ನೀಡಿದರು. ಸಾಧನೆ ಮಾಡಿದ ವಿದ್ಯಾರ್ಥಿಗಳು ಮತ್ತು ಕನ್ನಡ ಹೋರಾಟಗಾರರನ್ನು ಸನ್ಮಾನಿಸಲಾಯಿತು. ಭಾಷಾ ಸಾಮರಸ್ಯ ಕುರಿತು ಡಾ.ಶಿವಕುಮಾರ್ ಮತ್ತು ಸಿ.ಎ.ರಮೇಶ್ ಉಪನ್ಯಾಸ ನೀಡಿದರು. ಕವಿಗೋಷ್ಠಿಯಲ್ಲಿ ಅನೇಕ ಕವಿಗಳು ಸ್ವರಚಿತ ಕವಿತೆಗಳನ್ನು ವಾಚನ ಮಾಡಿದರು. ಎಚ್.ರಾಮಚಂದ್ರಪ್ಪ ಮತ್ತು ಜಿ.ಎಸ್.ಶೇಷಗಿರಿರಾವ್ ಸಮ್ಮೇಳನಾಧ್ಯಕ್ಷರ ಕುರಿತು ಮಾತನಾಡಿದರು. ಕಸಾಪದ ತಾಲೂಕು ಅಧ್ಯಕ್ಷ ವಿ.ಬಿ.ದೇಶಪಾಂಡೆ ಆಶಯಭಾಷಣ ಮಾಡಿದರು. ನರಸಿಂಹಮೂರ್ತಿ ಸ್ವಾಗತಿಸಿದರು. ರವಿಪ್ರಕಾಶ್ ನಿರೂಪಣೆ ಮಾಡಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.