ಜಿಲ್ಲೆಯ ಸಮಸ್ಯೆಗೆ ಸ್ಪಂದಿಸುವುದೇ ‘ಸಮ್ಮಿಶ್ರ’ ಬಜೆಟ್
Team Udayavani, Feb 8, 2019, 7:08 AM IST
ಕೋಲಾರ: ಈ ಹಿಂದಿನ ಸಿದ್ದರಾಮಯ್ಯ ಸರ್ಕಾರದ ಕೊನೆಯ ಬಜೆಟ್ ಹಾಗೂ ಕುಮಾರಸ್ವಾಮಿ ಮಂಡಿಸಿದ ಮತ್ತೂಂದು ಬಜೆಟ್ನಲ್ಲಿಯೂ ಬರ ಪೀಡಿತ ಕೋಲಾರ ಜಿಲ್ಲೆಯನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿತ್ತು.
2018 ಫೆ.16 ರಂದು ಸಿದ್ದರಾಮಯ್ಯ ಮಂಡಿಸಿದ 173 ಪುಟಗಳ ಹಾಗೂ 2018 ಜು.5 ರಂದು 97 ಪುಟಗಳಲ್ಲಿ ಎಚ್.ಡಿ.ಕುಮಾರಸ್ವಾಮಿ ಮಂಡಿಸಿದ್ದ ಬಜೆಟ್‌ನಲ್ಲಿ ಕೋಲಾರ ಜಿಲ್ಲೆಯ ಸಮಸ್ಯೆಗಳ ಕುರಿತು ಚಕಾರವೆತ್ತಿರಲಿಲ್ಲ.
ಎರಡೂ ಬಜೆಟ್‌ಗಳಲ್ಲಿ ವಿವಿಧ ಇಲಾಖೆಗಳ ಮೂಲಕ ಘೋಷಿಸಿದ್ದ ಯೋಜನೆಗಳಲ್ಲಾದರೂ ಕೋಲಾರ ಜಿಲ್ಲೆಗೆ ಪಾಲು ಸಿಗಬಹುದು ಎಂದು ಕಾದಿದ್ದ ಜನತೆಯನ್ನು ಸರ್ಕಾರಗಳು ನಿರಾಸೆಗೆ ತಳ್ಳಿದ್ದವು.
ಪ್ರಕಟಿಸಿದ್ದು ಕೈಗೆಟುಕಲಿಲ್ಲ: 2016ರ ಬಜೆಟ್‌ನಲ್ಲಿ ಸಿದ್ದರಾಮಯ್ಯ ಕೋಲಾರ ಜಿಲ್ಲೆಗೊಂದು ಸರ್ಕಾರಿ ವೈದ್ಯಕೀಯ ಕಾಲೇಜು ಪ್ರಕಟಿಸಿದ್ದರು. ಆದರೆ, ಇದು ಕೈಗೂಡಲಿಲ್ಲ. 2017 ರ ಬಜೆಟ್‌ನಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಘೋಷಿಸಿದ್ದರು. ಇದು ಈಡೇರಲಿಲ್ಲ.
ರಕ್ತ ವಿದಳನ ಘಟಕವನ್ನು ಎಸ್‌ಎನ್‌ಆರ್ ಆಸ್ಪತ್ರೆಗೆ ಮಂಜೂರು ಮಾಡಸಲಾಗಿತ್ತು. ಆದರೆ, ಆ ವೇಳೆಗಾಗಲೇ ಹೊಂಡಾ ಕಂಪನಿ ರಕ್ತವಿದಳನ ಘಟಕದ ಅಗತ್ಯತೆ ಮನಗಂಡು ಎಸ್‌ಎನ್‌ಆರ್ ಆಸ್ಪತ್ರೆಗೆ ನೀಡಿ ಕಾರ್ಯಾರಂಭವೂ ಮಾಡುವಂತಾಗಿತ್ತು.
ಕೆಜಿಎಫ್ ತಾಲೂಕು ಸೌಲಭ್ಯಗಳ ಕೊರತೆ: ಹಿಂದಿನ ಸರ್ಕಾರ ಕೆಜಿಎಫ್ ಅನ್ನು ಪ್ರತ್ಯೇಕ ತಾಲೂಕಾಗಿ ಘೋಷಣೆ ಮಾಡಿತು. ಆದರೆ, ಅಗತ್ಯ ಸೌಲಭ್ಯ ಕಲ್ಪಿಸುವಲ್ಲಿ ವಿಫಲವಾಗಿದೆ. ಸರ್ಕಾರ ಕೆಜಿಎಫ್ ತಾಲೂಕು ಆಗಿದೆ ಎನ್ನುವುದನ್ನೇ ಮರೆತು ಬಿಟ್ಟಿದೆ ಎನ್ನುವ ಅನುಮಾನ ಬರುವಂತೆ ವರ್ತಿಸುತ್ತಿದೆ. ಇದೇ ಕಾರಣಕ್ಕಾಗಿ ಇತ್ತೀಚಿಗೆ ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಜಿಪಂ ಕೆಡಿಪಿ ಸಭೆಯಲ್ಲಿ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡರೊಂದಿಗೆ ಮಾತಿನ ಚಕಮಕಿ ನಡೆಸಿದ್ದರು.
ಎತ್ತಿನಹೊಳೆ ಹರಿಯಲಿಲ್ಲ: ಜಿಲ್ಲೆಗೆ ಎತ್ತಿನ ಹೊಳೆ ಯೋಜನೆಯಡಿ ನೀರನ್ನು ಹರಿಸುವುದಾಗಿ ಹಿಂದಿನ ಅನೇಕ ಬಜೆಟ್‌ಗಳಲ್ಲಿ ಪ್ರಸ್ತಾಪಿಸಲಾಗಿದೆ. ಇಂತಿಷ್ಟು ವೇಳೆಗೆ ಯೋಜನೆ ಪೂರ್ಣಗೊಳಿಸುವ ವಾಕ್ಯಗಳನ್ನು ಬಜೆಟ್‌ನಲ್ಲಿ ಮುದ್ರಿಸಿದೆ. ಆದರೆ, ಇದುವರೆಗೂ ಎತ್ತಿನಹೊಳೆ ಯೋಜನೆ ಪೂರ್ಣಗೊಂಡು ಜಿಲ್ಲೆಗೆ ನೀರು ಹರಿಯುವ ಕುರಿತು ಯಾವುದೇ ಖಚಿತ ಮಾಹಿತಿ ಇಲ್ಲವಾಗಿದೆ.
ಕೆ.ಸಿ.ವ್ಯಾಲಿ ತಡೆ ನಿವಾರಣೆ ನಿರೀಕ್ಷೆ: ಈ ಹಿಂದಿನ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಯಾವುದಾದರೂ ಮೂಲದಿಂದ ಕೋಲಾರ ಜಿಲ್ಲೆಗೆ ನೀರು ಹರಿಸುವ ವಾಗ್ಧಾನ ಮಾಡಿತ್ತು. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಗಂಭೀರವಾಗಿ ಸ್ಪೀಕರಿಸಿತಲ್ಲದೆ ಜಿಲ್ಲೆಯ ಅಂತರ್ಜಲ ಮಟ್ಟ ಹೆಚ್ಚಿಸಲು ಬೆಂಗಳೂರಿನ ತ್ಯಾಜ್ಯ ನೀರನ್ನು ಸಂಸ್ಕರಿಸಿ ಕೋಲಾರ ಜಿಲ್ಲೆಯ 126 ಕೆರೆಗಳಿಗೆ ಹರಿಸುವ ಕೆಸಿ ವ್ಯಾಲಿ ಯೋಜನೆ ರೂಪಿಸಿ ಅನುಷ್ಠಾನಗೊಳಿಸಿದೆ.
ಆದರೆ, ಈ ಯೋಜನೆ ಸದ್ಯ ಸುಪ್ರಿಂ ಕೋರ್ಟ್‌ನಿಂದ ತಡೆಯಾಜ್ಞೆ ಎದುರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಈಗಿನ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸರ್ಕಾರ ತಡೆಯಾಜ್ಞೆ ತೆರವುಗೊಳಿಸಲು ಅಗತ್ಯ ಕ್ರಮ ತೆಗೆದುಕೊಳ್ಳಬೇಕೆಂದು ಕೋಲಾರ ಜಿಲ್ಲೆಯ ಜನ ಬಯಸುತ್ತಿದ್ದಾರೆ. ಜೊತೆಗೆ ಕೆಸಿ ವ್ಯಾಲಿ ನೀರನ್ನು 3 ಬಾರಿ ಸಂಸ್ಕರಣೆ ಅತ್ಯಗತ್ಯ ಎನ್ನುವ ವಾದಕ್ಕೆ ಹೆಚ್ಚು ಬಲ ಬರುತ್ತಿದ್ದು, ಕುಮಾರಸ್ವಾಮಿ ಈ ಬಾರಿಯ ಬಜೆಟ್‌ನಲ್ಲಿ ಮೂರನೇ ಸಂಸ್ಕರಣೆ ಕುರಿತು ಸ್ಪಷ್ಟ ನಿಲುವು ಘೋಷಿಸಬೇಕೆಂದು ಜನತೆ ಮನವಿ ಮಾಡಿದ್ದಾರೆ.
ವಿಶೇಷ ಆದ್ಯತೆ ಅಗತ್ಯ: ಕೋಲಾರ ಜಿಲ್ಲೆಯನ್ನು ಇತರೇ ಜಿಲ್ಲೆಗಳಂತೆ ಪರಿಗಣಿಸಿ ಬಜೆಟ್ ಮಂಡಿಸಿದರೆ ಪ್ರಯೋಜನವಾಗದು. ನದಿ ನಾಲೆಗಳಿಲ್ಲದ ಕೋಲಾರ ಜಿಲ್ಲೆಯನ್ನು ವಿಶೇಷವಾಗಿ ಪರಿಗಣಿಸಿ ಪ್ಯಾಕೇಜ್ ಘೋಷಿಸಿದರೆ ಮಾತ್ರ ಅನುಕೂಲ ಎಂಬ ಭಾವನೆ ಜನರಲ್ಲಿದೆ. ಆದರೆ, ಇದುವರೆಗೂ ಬಜೆಟ್ ಮಂಡಿಸಿದ ಯಾವುದೇ ಸರ್ಕಾರ ಈ ಕುರಿತು ಆದ್ಯತೆ ನೀಡಿಲ್ಲ.
ಜಿಲ್ಲೆಯ ಬಜೆಟ್ ನಿರೀಕ್ಷೆಗಳು
* ಜಿಲ್ಲೆಗೆ ಅನುಷ್ಠಾನವಾಗಿರುವ ಕೆಸಿ ವ್ಯಾಲಿ ಯೋಜನೆಗೆ ಸುಪ್ರಿಂ ನೀಡಿರುವ ತಡೆ ನಿವಾರಣೆ ಮಾಡಲು ಸರ್ಕಾರ ಅಗತ್ಯ ಕ್ರಮ ಕೈಗೊಂಡು ಕೆರೆಗಳಿಗೆ ನೀರು ಹರಿಸಬೇಕು ಹಾಗೂ ಯೋಜನೆಯಡಿ ಮೂರನೇ ಹಂತದ ಶುದ್ಧೀಕರಣಕ್ಕೆ ಒಪ್ಪಿಗೆ ನೀಡಬೇಕೆನ್ನುವುದು ಕೋಲಾರ ಜಿಲ್ಲೆಯ ಜನರ ರಾಜ್ಯ ಬಜೆಟ್ ನಿರೀಕ್ಷೆಯಾಗಿದೆ.
* ಕೋಲಾರ ಜಿಲ್ಲೆ ಹೈನುಗಾರಿಕೆ ಮೇಲೆ ಅವಲಂಬಿತವಾಗಿದ್ದು, ಹೈನುಗಾರರಿಗೆ ಬಿ.ಎಸ್.ಯಡಿಯೂರಪ್ಪ ಹಾಗೂ ಸಿದ್ದರಾಮಯ್ಯ ಮಾದರಿಯಲ್ಲಿ ಪ್ರತಿ ಲೀಟರ್ ಹಾಲಿಗೆ ಬೆಂಬಲ ಬೆಲೆ ನೀಡಬೇಕು.
* ಜಿಲ್ಲೆಯಲ್ಲಿ ಅತಿ ಹೆಚ್ಚಾಗಿ ಬೆಳೆಯುವ ಟೊಮೆಟೋ, ರೇಷ್ಮೆ ಧಾರಣೆ ಕುಸಿದಾಗ ತಕ್ಷಣ ರೈತರ ನೆರವಿಗೆ ಬರುವ ಮೂಲಕ ಬೆಲೆ ಸ್ಥಿರೀಕರಿಸಿ ರೈತಾಪಿ ವರ್ಗಕ್ಕೆ ಧಾರಣೆ ದೃಢೀಕರಿಸಬೇಕು.
* ಕೇಂದ್ರ ಸರ್ಕಾರ ಈಗಾಗಲೇ ಪ್ರಕಟಿಸಿರುವ ರೈಲ್ವೆ ಯೋಜನೆಗಳಿಗೆ ಆದ್ಯತೆ ಮೇರೆಗೆ ಭೂಮಿ ಮಂಜೂರು ಮಾಡುವ ಮೂಲಕ ರೈಲ್ವೇ ಇಲಾಖೆ ಮೇಲೆ ಯೋಜನೆಯನ್ನು ತ್ವರಿತಗತಿಯಲ್ಲಿ ಆರಂಭಿಸುವಂತೆ ಒತ್ತಡ ಹಾಕಬೇಕು.
* ಶಾಶ್ವತ ಬರಗಾಲ ಪೀಡಿತ ಕೋಲಾರ ಜಿಲ್ಲೆಯನ್ನು ವಿಶೇಷವಾಗಿ ಪರಿಗಣಿಸಿ ಡಿಸಿಸಿ ಬ್ಯಾಂಕ್ ಮೂಲಕ ರೈತರು ಹಾಗೂ ಸ್ತ್ರೀಶಕ್ತಿ ಸಂಘಗಳು ಪಡೆದುಕೊಂಡಿರುವ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು.
* ನೀರಾವರಿ ಯೋಜನೆಗಳ ಪೈಕಿ ಎತ್ತಿನಹೊಳೆ ಯೋಜನೆ ಪೂರ್ಣಗೊಳಿಸಲು ಕಾಲಮಿತಿ ಘೋಷಿಸಬೇಕು ಮತ್ತು ಮೇಕೆದಾಟು ಯೋಜನೆ ವ್ಯಾಪ್ತಿಗೆ ಕೋಲಾರ ಜಿಲ್ಲೆಯನ್ನು ಸೇರಿಸಬೇಕು.
* ಕೋಲಾರ ನಗರಕ್ಕೆ ಸಂಚಾರಿ ಒತ್ತಡ ನಿವಾರಿಸುವ ಸಲುವಾಗಿ ವರ್ತುಲ ರಸ್ತೆ ಯೋಜನೆ ಅನುಷ್ಠಾನಕ್ಕೆ ಅನುಮತಿ ನೀಡಬೇಕು. ಕೈಗಾರಿಕೆಗಳಿಗೆ ಅನುಕೂಲವಾಗುವಂತೆ ಕೋಲಾರದಿಂದ ದೇವನಹಳ್ಳಿವ ರೆಗಿನ ರಸ್ತೆಯನ್ನು ಚತುಷ್ಪಥ ಹೆದ್ದಾರಿಯಾಗಿ ಮಾರ್ಪಡಿಸಬೇಕು.
* ಕೋಲಾರ ಜಿಲ್ಲೆಯಲ್ಲಿ ಆರಂಭವಾಗುತ್ತಿರುವ ಬಹುರಾಷ್ಟ್ರೀಯ ಕಂಪನಿ ಕೈಗಾರಿಕೆಗಳಲ್ಲಿ ಜಿಲ್ಲೆಯ ನಿರುದ್ಯೋಗಿಗಳಿಗೆ ಕಡ್ಡಾಯವಾಗಿ ಉದ್ಯೋಗವಕಾಶ ಕಲ್ಪಿಸಬೇಕು. ಕೇಂದ್ರ ಬಜೆಟ್‌ನಲ್ಲಿ ಘೋಷಣೆಯಾಗಿರುವಂತೆ ಕೈಗಾರಿಕೆ ತರಬೇತಿ ಕೇಂದ್ರವನ್ನು ಶೀಘ್ರ ಆರಂಭಿಸಲು ಅಗತ್ಯ ಕ್ರಮ ಜರುಗಿಸಬೇಕು.
* ಕೋಲಾರ ಜಿಲ್ಲೆಯ ರೈತ ಬಹು ದಿನಗಳ ಬೇಡಿಕೆಯಾಗಿರುವ ಮಾವು, ಟೊಮೆಟೋ ಹಾಗೂ ತರಕಾರಿ ಹಣ್ಣುಗಳ ಸಂಸ್ಕರಣೆ ಘಟಕಗಳನ್ನು ಸ್ಥಾಪಿಸಬೇಕು.
ಈಡೇರದ ಭರವಸೆಗಳು: ಕೇಂದ್ರ ಯುಪಿಎ ಸರ್ಕಾರ ಘೋಷಿಸಿದ್ದ ರೈಲ್ವೇ ಯೋಜನೆಗಳಿಗೆ ಅಗತ್ಯ ಭೂಮಿಯನ್ನು ಉಚಿತವಾಗಿ ನೀಡುವುದಾಗಿ ರಾಜ್ಯ ಸರ್ಕಾರ ವಾಗ್ಧಾನ ಮಾಡಿತ್ತು. ಆದರೆ, ಇದುವರೆಗೂ ರಾಜ್ಯ ಸರ್ಕಾರ ತನ್ನ ಬಜೆಟ್‌ನಲ್ಲಿ ಕೋಲಾರದ ಯೋಜನೆಗಳತ್ತ ಗಮನ ಹರಿಸಿಲ್ಲ. ಇದರಿಂದಾಗಿಯೇ ರೈಲ್ವೆ ಕೋಚ್ ಕಾರ್ಖಾನೆಯು ನನೆಗುದಿಗೆ ಬೀಳುವಂತಾಗಿದೆ. ಜಿಲ್ಲೆಯಲ್ಲಿ ನೀಲಗಿರಿ ನಿರ್ಮೂಲನೆಗೊಳಿಸಿ 6 ಲಕ್ಷ ಶ್ರೀಗಂಧ ಮರಗಳನ್ನು 700 ಹೆಕ್ಟೇರ್‌ನಲ್ಲಿ ಬೆಳೆಸಲಾಗುವುದು ಎನ್ನುವ ಹೇಳಿಕೆಯೂ ಘೋಷಣೆಯಾಗಿಯೇ ಉಳಿದಿದೆ.
ಇಡೀ ರಾಜ್ಯದಲ್ಲಿ 100 ಕೆರೆಗಳಿಗೆ ನೀರು ತುಂಬಿಸುವ ಕೆರೆ ಸಂಜೀವಿನಿ ಯೋಜನೆ ಕೆರೆಗಳ ಜಿಲ್ಲೆ ಕೋಲಾರದಲ್ಲಿ ಯಾವ ಕೆರೆಗೆ ತುಂಬಿಸಿದೆ ಎನ್ನುವುದೇ ತಿಳಿಯುತ್ತಿಲ್ಲ. ಸಿದ್ದರಾಮಯ್ಯ ಮಂಡಿಸಿದ ಕೊನೆ ಬಜೆಟ್‌ನಲ್ಲಿ ಘೋಷಣೆಯಾಗಿದ್ದ ಮುಳಬಾಗಿಲು ಪಟ್ಟಣಕ್ಕೆ ಒಳಚರಂಡಿ ವ್ಯವಸ್ಥೆ ಕಾಮಗಾರಿ ಮಾತ್ರ ಕುಂಟುತ್ತಾ ಸಾಗಿರುವುದೇ ಸದ್ಯಕ್ಕೆ ಸಮಾಧಾನದ ಸಂಗತಿಯಾಗಿದೆ.
* ಕೆ.ಎಸ್.ಗಣೇಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.