ಅನುದಾನ ಬಳಕೆ ಆಗದಿದ್ರೆ ಕ್ರಮ
Team Udayavani, Feb 12, 2019, 7:25 AM IST
ಕೋಲಾರ: ಸರ್ಕಾರದ ವಿವಿಧ ಯೋಜನೆಗಳಡಿ ಇಲಾಖೆಗಳಿಗೆ ಬಿಡುಗಡೆಯಾಗಿರುವ ಅನುದಾನ ಮಾರ್ಚ್ ಅಂತ್ಯದೊಳಗೆ ಸೂಚಿಸಿದ ಅಗತ್ಯ ಕೆಲಸಗಳಿಗೆ ಬಳಕೆಯಾಗದಿದ್ದರೆ ಸಂಬಂಧಪಟ್ಟ ಅಧಿಕಾರಿಗಳನ್ನು ಹೊಣೆ ಮಾಡಿ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಜಿಪಂ ಅಧ್ಯಕ್ಷೆ ಗೀತಮ್ಮ ಎಚ್ಚರಿಕೆ ನೀಡಿದರು.
ಸೋಮವಾರ ಜಿಪಂ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ಸಾರ್ವಜನಿಕರ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸದೆ ಇರುವ ಕುರಿತು ಹಲವಾರು ದೂರುಗಳು ಬಂದಿವೆ. ಸರ್ಕಾರಿ ಸಂಬಳ ಪಡೆದು ಸಮಸ್ಯೆಗೆ ಸ್ಪಂದಿಸದಿರಲು ನಿಮಗೆ ಮನಸ್ಸು ಹೇಗೆ ಬರುತ್ತದೆ, ಜನರ ಋಣ ನಿಮ್ಮ ಮೇಲಿಲ್ಲವೇ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸುಳ್ಳು ಹೇಳದಿರಿ: ಜಿಪಂ ಸಿಇಒ ಜಿ.ಜಗದೀಶ್ ಮಾತನಾಡಿ, ವಿವಿಧ ಇಲಾಖೆಗಳ ಅಧಿಕಾರಿಗಳು ಮಾಹಿತಿ ನೀಡುತ್ತಿರುವಷ್ಟರ ಪ್ರಮಾಣದಲ್ಲಿ ಯಾವುದೇ ಕೆಲಸವಾಗಿಲ್ಲ. ನೀವು ಸುಳ್ಳು ಹೇಳುವುದಕ್ಕೂ ಮಿತಿ ಇರಬೇಕು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರೆ ಎಷ್ಟು ಕೆಲಸವಾಗಿದೆ ಎಂದು ಗೊತ್ತಾಗುತ್ತದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಶಿಥಿಲಗೊಂಡಿರುವ ಸರ್ಕಾರಿ ಶಾಲೆಗಳ ಕೊಠಡಿಗಳನ್ನು ರಿಪೇರಿ ಮಾಡಲು ಹಣ ಬಿಡುಗಡೆ ಮಾಡಲಾಗಿದೆ. ಆದರೆ ಇದರ ಜವಾಬ್ದಾರಿ ಹೊಂದಿರುವ ಎಂಜನಿಯರ್‌ಗಳು ಏಕೆ ಕ್ರಮಕೈಗೊಂಡಿಲ್ಲ. ಮಾರ್ಚ್‌ನಲ್ಲಿ ಕೇವಲ ಸುಣ್ಣ ಬಳಿದು ಬಿಲ್ ಮಾಡಿಕೊಳ್ಳಲು ನೋಡಿದರೆ ಸುಮ್ಮನೆ ಬಿಡು ವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ವಿದ್ಯಾರ್ಥಿಗಳಿಗೆ ಕನ್ನಡ ಓದಲು ಬರುವುದಿಲ್ಲ ಎಂದರೆ ಶಿಕ್ಷಕರೇ ನೇರ ಹೊಣೆಯಾಗಬೇಕಾಗುತ್ತದೆ. ತಾನು ಮುಳಬಾಗಿಲು ದೊಡ್ಡಗಾನಹಳ್ಳಿ ಶಾಲೆಗೆ ಭೇಟಿ ನೀಡಿದಾಗ ಅಲ್ಲಿನ ಮಕ್ಕಳಿಗೆ ಕನ್ನಡ ಪಾಠ ಓದಲಿಕ್ಕೂ ಬರಲಿಲ್ಲ. ಶಿಕ್ಷಕರೇನು ಹೊಸಬರಲ್ಲ, 13 ವರ್ಷಗಳಿಂದ ಅಲ್ಲಿಯೇ ಕೆಲಸ ಮಾಡುತ್ತಿದ್ದಾರೆ. ಮಕ್ಕಳಿಗೆ ಕನ್ನಡ ಕಲಿಸಿಲ್ಲ ಎಂದರೆ ಅವರೇನು ಕೆಲಸ ಮಾಡುತ್ತಿದ್ದಾರೆಂದು ಖಾರವಾಗಿ ಪ್ರಶ್ನಿಸಿದರು.
ಕಠಿಣ ಕ್ರಮ ಕೈಗೊಳ್ಳುವೆ: ಜಿಲ್ಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಎಲ್ಲಾ ಮಕ್ಕಳಿಗೂ ವೇತನ ವಿತರಿಸಬೇಕು. ಈಗಾಗಲೇ ಬ್ಯಾಂಕ್‌ಗೆ ವಿದ್ಯಾರ್ಥಿಗಳ ಖಾತೆಗೆ ಆಧಾರ್ ಲಿಂಕ್ ಮಾಡಲು ಸೂಚಿಸಿದೆ. ವಿದ್ಯಾರ್ಥಿ ನಿಲಯಗಳಲ್ಲಿ ವಿತರಿಸುವ ಆಹಾರದಲ್ಲಿ ಏನಾದರೂ ಸಮಸ್ಯೆ ಉಂಟಾದಲ್ಲಿ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ಗುಂಪುಗಾರಿಕೆ ಬಿಡಿ: ಮಕ್ಕಳಲ್ಲಿ ಗುಂಪುಗಾರಿಕೆ ಸೃಷ್ಟಿಸುವಂತಹ ವಾರ್ಡನ್‌ಗಳು, ಶಿಕ್ಷಕರ ಹೀನಾಯ ಕೆಲಸಗಳು ನಮಗೆ ಬೇಸರವನ್ನುಂಟು ಮಾಡಿವೆ. ಲೋಪವೆಸಗಿರುವವನ್ನು ಅಮಾನತು ಮಾಡಿರುವ ಬಗ್ಗೆ ಇತÃರಿಗೆ ಮಾಹಿತಿ ನೀಡುವ ಮೂಲಕ ವ್ಯವಸ್ಥೆ ಸರಿಪಡಿಸಿಕೊಳ್ಳಲು ಸೂಚನೆ ನೀಡಿ ಎಂದು ಸೂಚಿಸಿದರು.
ಜಿಪಂ ಅಧ್ಯಕ್ಷೆ ಗೀತಮ್ಮ, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕಳೆದ ಸಾಲಿನಲ್ಲಿ 8ನೇ ಸ್ಥಾನ ಪಡೆದಿದ್ದು ಈ ಬಾರಿ ಮೊದಲನೇ ಸ್ಥಾನ ಪಡೆಯುವಷ್ಟರ ಮಟ್ಟಿಗೆ ಶಿಕ್ಷಣ ಇಲಾಖೆ ವಿದ್ಯಾರ್ಥಿಗಳನ್ನು ತಯಾರು ಮಾಡಬೇಕು, ಬೋಧನೆ ಮಾಡುವಲ್ಲಿ ಶಿಕ್ಷಕರಿಗೆ ಪ್ರೇರಣೆ ನೀಡಬೇಕು ಎಂದು ಸೂಚಿಸಿದರು.
ವಿಶೇಷ ಕಾರ್ಯಾಗಾರ ನಡೆಸಿ: ಸಿಇಒ ಜಿ.ಜಗದೀಶ್, ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಗುರುತಿಸಿ ಅವರು ಯಾವ ವಿಷಯದಲ್ಲಿ ಹಿಂದಿದ್ದಾರೆ ಎಂಬುವುದು ಪರಿಶೀಲಿಸಿ ಅವರನ್ನು ಸುಧಾರಣೆ ಮಾಡಿ ಉತ್ತಮ ಫಲಿತಾಂಶ ಬರುವಂತೆ ವಿಶೇಷ ಕಾರ್ಯಕ್ರಮ ರೂಪಿಸಿಕೊಳ್ಳಬೇಕು. ಇದಕ್ಕಾಗಿ ಶಿಕ್ಷಕರಿಗೆ ವಿಶೇಷ ಕಾರ್ಯಾಗಾರ ಆಯೋಜಿಸಬೇಕೆಂದರು.
ಕೃಷಿ ಇಲಾಖೆ ಕಳಪೆ ಬಿತ್ತನೆ ಬೀಜ ವಿತರಣೆಯಾಗಿದ್ದರೆ ಅದರ ನಷ್ಟ ಪರಿಹಾರವನ್ನು ರೈತರಿಗೆ ತುಂಬಿ ಕೊಡಬೇಕಾಗುತ್ತದೆ. ಸಾರ್ವಜನಿಕರಿಗೆ ಸ್ಪಂದಿಸುತ್ತಿಲ್ಲ ಎಂಬ ದೂರುಗಳು ತೋಟಗಾರಿಕೆ ಇಲಾಖೆ ಮೇಲಿದೆ. ಇನ್ನು ಮಂದೆ ಈ ರೀತಿಯ ದೂರುಗಳು ಬಂದಲ್ಲಿ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು. ಸಭೆಯಲ್ಲಿ ಜಿಲ್ಲೆಯ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolara: ಹೈಕೋರ್ಟ್ ಅನುಮತಿ ಬಳಿಕ ಬಿಗಿ ಭದ್ರತೆಯಲ್ಲಿ ಆರೆಸ್ಸೆಸ್ ಪಥಸಂಚಲನ
Kolar: “ಗೃಹಲಕ್ಷ್ಮಿ’ಗೆ ಆಸಕ್ತಿ ತೋರದ 21 ಸಾವಿರ ಕೋಲಾರ ಸ್ತ್ರೀಯರು
Kolara: ಏಲಕ್ಕಿ ಬಾಳೆಕಾಯಿ ಬೆಲೆ ಕುಸಿತ: 3 ಎಕರೆ ಬೆಳೆ ಕಡಿದು ಹಾಕಿದ ರೈತ
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.