Lok Sabha Election ಬಳಿಕವೂ ಗ್ಯಾರಂಟಿ ನಿಲ್ಲದು: ಮುಖ್ಯಮಂತ್ರಿ ಸಿದ್ದರಾಮಯ್ಯ
ಕೋಲಾರದ ಕುರುಡುಮಲೆ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಪ್ರಜಾಧ್ವನಿ ಯಾತ್ರೆಗೆ ಚಾಲನೆ ನೀಡಿದ ಸಿಎಂ, ಡಿಸಿಎಂ
Team Udayavani, Apr 6, 2024, 11:12 PM IST
ಮುಳಬಾಗಿಲು(ಕೋಲಾರ): ರಾಜ್ಯದಲ್ಲಿ ಕಾಂಗ್ರೆಸ್‌ಗೆ ಐದು ವರ್ಷಗಳ ಅಧಿಕಾರ ನಡೆಸಲು ಜನತೆ ಅವಕಾಶ ಕಲ್ಪಿಸಿದ್ದು, ಐದು ಗ್ಯಾರಂಟಿಗಳನ್ನು ಲೋಕಸಭೆ ಚುನಾವಣೆ ಬಳಿಕವೂ ಮುಂದುವರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ತಾಲೂಕಿನ ಪುರಾಣ ಪ್ರಸಿದ್ಧ ಕುರುಡುಮಲೆ ವಿನಾಯಕ ದೇಗುಲದಲ್ಲಿ ಶನಿವಾರ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೊಂದಿಗೆ ಪೂಜೆ ಸಲ್ಲಿಸುವ ಮೂಲಕ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆಗೆ ಚಾಲನೆ ನೀಡಿದ ಬಳಿಕ ರೋಡ್ ಶೋ ಮೂಲಕ ತೆರಳಿ ಸೌಂದರ್ಯ ವೃತ್ತ ನಡೆದ ಬಹಿರಂಗ ಪ್ರಚಾರದಲ್ಲಿ ಅವರು ಮಾತನಾಡಿದರು.
ಭರವಸೆ ಈಡೇರಿಸಿದ್ದೇವೆ
ಎ. 26ಕ್ಕೆ ಮತಗಟ್ಟೆಗೆ ಹೋಗಿ ಪಕ್ಷದ ಅಭ್ಯರ್ಥಿ ಗೌತಮ್‌ಗೆ ಆಶೀರ್ವಾದ ಮಾಡಬೇಕೆಂದು ಮನವಿ ಮಾಡಿದ ಅವರು, ನಾವು ನಿಮ್ಮ ಮತ ಮಾತ್ರ ಕೇಳುತ್ತಿಲ್ಲ, ಅಧಿಕಾರಕ್ಕೆ ಬಂದ ಬಳಿಕ ಕಳೆದ 10 ತಿಂಗಳಲ್ಲಿ ನಿಮಗೆ ಕೊಟ್ಟಿರುವ ಎಲ್ಲ ಭರವಸೆಗಳನ್ನೂ ಈಡೇರಿಸಿದ್ದೇವೆ ಎಂದರು.
ಬಿಜೆಪಿಯವರು ಚುನಾವಣೆಗೆ ಮುಂಚೆ ನಮ್ಮ ಗ್ಯಾರಂಟಿಗಳನ್ನು ಈಡೇರಿಸಲು ಸಾಧ್ಯವಿಲ್ಲ, ಒಂದು ವೇಳೆ ಜಾರಿ ಮಾಡಿದ್ದಾದರೆ ಕರ್ನಾಟಕದ ಖಜಾನೆ ಖಾಲಿಯಾಗುತ್ತೆ ಅಂತ ಹೇಳುತ್ತಿದ್ದರು. ಆದರೆ, ನಾವು ಗ್ಯಾರಂಟಿಗಳನ್ನು ಜಾರಿ ಮಾಡಿ 36 ಸಾವಿರ ಕೋಟಿ ರೂ. ಖರ್ಚು ಮಾಡಿದ್ದೇವೆ, 2024-25ನೇ ಸಾಲಿಗೆ 52 ಸಾವಿರ ಕೋಟಿ ಇಟ್ಟಿದ್ದೇವೆ. ಈಗ, ಲೋಕಸಭಾ ಚುನಾವಣೆ ಬಳಿಕ ಗ್ಯಾರಂಟಿಗಳನ್ನು ನಿಲ್ಲಿಸುತ್ತಾರೆಂದು ಹೇಳುತ್ತಿದ್ದಾರೆ. ಗ್ಯಾರಂಟಿಗಳನ್ನು ಐದು ವರ್ಷ ಮುಂದುವರಿಸುತ್ತೇವೆ ಎಂದು ಹೇಳುವ ಮೂಲಕ ಬಿಜೆಪಿಗೆ ತಿರುಗೇಟು ನೀಡಿದರು.
ರಾಜ್ಯದಲ್ಲಿ ಕಾಂಗ್ರೆಸ್‌ಗೆ 20ಕ್ಕೂ
ಅಧಿಕ ಸ್ಥಾನ : ಡಿ.ಕೆ.ಶಿವಕುಮಾರ್
ಸೋಲಿನ ಭೀತಿಯಿಂದ ಬಿಜೆಪಿಯ ಅರ್ಧದಷ್ಟು ಹಾಲಿ ಸಂಸದರಿಗೆ ಟಿಕೆಟ್ ನೀಡಿಲ್ಲ. ಬಿಜೆಪಿ ದೇಶದಲ್ಲಿ 200ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲುವುದಿಲ್ಲ, ರಾಜ್ಯದಲ್ಲಿ ಕಾಂಗ್ರೆಸ್ 20ಕ್ಕೂ ಅಧಿಕ ಸ್ಥಾನಗಳಲ್ಲಿ ಗೆಲ್ಲಲಿದೆ. ಈ ಬಾರಿ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.
ಬಹಿರಂಗ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಬಯಸದೇ ಬಂದ ಭಾಗ್ಯ ಎಂಬಂತೆ ಗೌತಮ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಹುಟ್ಟಿದ ಸೂರ್ಯ ಮುಳುಗಿದಂತೆ, ಅರಳಿದ್ದ ಕಮಲ ಬಾಡುತ್ತಿದೆ, ತೆನೆ ಒಣಗುತ್ತಿದೆ. ಕಮಲ ಕೆರೆಯಲ್ಲಿದ್ದರೆ ಚೆಂದ, ತೆನೆ ಹೊಲದಲ್ಲಿದ್ದರೆ ಚೆಂದ, ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಚೆಂದ. ಈ ಕೈ ಅಧಿಕಾರಕ್ಕೆ ಬಂದ ಕಾರಣ ಇಂದು ನಿಮಗೆ ಗ್ಯಾರಂಟಿ ಯೋಜನೆಗಳು ಸಿಗುತ್ತಿವೆ. ಐದು ಬೆರಳು ಸೇರಿ ಕೈ ಮುಷ್ಟಿಯಾಯಿತು, ಐದು ಗ್ಯಾರಂಟಿ ಸೇರಿ ಕೈ ಗಟ್ಟಿಯಾಯಿತು ಎಂದರು.
“ಅಚ್ಚೇ ದಿನ್ ಆಯೇಗಾ’ ನಿಜವಾಯಿತಾ?: ಸಿಎಂ
ನರೇಂದ್ರ ಮೋದಿಯವರು ಕೇಂದ್ರದಲ್ಲಿ 10 ವರ್ಷ ಅಧಿಕಾರ ನಡೆಸಿದರು. ಆದರೆ ಅವರು ನುಡಿದಂತೆ ನಡೆದಿದ್ದಾರಾ? ಆಹಾರ ಪದಾರ್ಥಗಳು, ಪೆಟ್ರೋಲ್, ಡೀಸೆಲ್, ಗ್ಯಾಸ್ ಸಿಲಿಂಡರ್, ರಸಗೊಬ್ಬರ ಬೆಲೆ, ಅಕ್ಕಿ, ರಾಗಿ, ಗೋಧಿ ಬೆಲೆ ಕಡಿಮೆ ಮಾಡಿದರಾ? 2 ಕೋಟಿ ಉದ್ಯೋಗ ಸೃಷ್ಟಿ ಮಾಡ್ತೀವಿ ಅಂತ ಹೇಳಿದವರು ಮಾಡಿದ್ದಾರಾ? ಅಂತ ನೆರೆದಿದ್ದವರನ್ನು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದಾಗ ಇಲ್ಲವೆಂದರು. ಇದೇನಾ ಮಿಸ್ಟರ್ ನರೇಂದ್ರ ಮೋದಿಯವರೇ ಅಚ್ಚೇ ದಿನ್ ಆಯೇಗಾ ಎಂದು ಕುಟುಕಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.