ಕಾಂಗ್ರೆಸ್‌ನಿಂದ ರಾಜ್ಯದ ಘನತೆ ಮಣ್ಣುಪಾಲು
Team Udayavani, May 10, 2018, 3:45 PM IST
ಕೋಲಾರ: ಜಿಲ್ಲೆಗೆ ಇದೇ ಮೊದಲ ಬಾರಿಗೆ ಬಿಜೆಪಿ ಪ್ರಚಾರಕ್ಕಾಗಿ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ತಮ್ಮ ಭಾಷಣದಲ್ಲಿ ಕುಟುಂಬದ ಹೆಸರಿಗಾಗಿ ರಾಜಕಾರಣ ನಡೆಸುತ್ತಿರುವ ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ಧಾಳಿ ನಡೆಸುವ ಮೂಲಕ ಮುಖಂಡರ ಜನ್ಮ ಜಾಲಾಡಿದರು.
ಕಾಂಗ್ರೆಸ್‌ನ ಆರು ರೋಗಾಣುಗಳು: ಕಾಂಗ್ರೆಸ್ ಪಕ್ಷ ಆರು ರೋಗಾಣುಗಳಿಂದ ಕರ್ನಾಟಕ ರಾಜ್ಯದ ಗೌರವ, ಘನತೆಯನ್ನು ಮಣ್ಣು ಪಾಲು ಮಾಡಿದೆ ಎಂದು ಆರೋಪಿಸಿದ ಪ್ರಧಾನಿ ಮೋದಿ, ಕಾಂಗ್ರೆಸ್ ಸಂಸ್ಕೃತಿ, ಕೋಮುವಾದ, ಜಾತೀಯತೆ, ಅಪರಾಧ, ಭ್ರಷ್ಟಾಚಾರ ಹಾಗೂ ಗುತ್ತಿಗೆದಾರಿಕೆಯ ಈ ಆರು ರೋಗಾಣುಗಳು ಕರ್ನಾಟಕದ ಆಡಳಿತ ವ್ಯವಸ್ಥೆಯನ್ನು ಹಾಳು ಮಾಡಿವೆ ಎಂದು ಜರಿದರು.
ಬಿಜೆಪಿ ಬೆಂಬಲಿಸಿ: ಕಾಂಗ್ರೆಸ್‌ನ ದೆಹಲಿ ದರ್ಬಾರಿಗೆ ಬಹು ಪರಾಖ್ ಹೇಳುವ ಹಾಗೂ ಕಪ್ಪು ಕಾಣಿಕೆ ಒಪ್ಪಿಸುವ ಜನರು ದೇಶದ ವಿವಿಧ ರಾಜ್ಯಗಳಲ್ಲಿದ್ದಾರೆ. ಕರ್ನಾಟಕದಲ್ಲೂ ಇಂತಹದ್ದೇ ಕೆಟ್ಟ ಸರಕಾರ ಆಡಳಿತ ನಡೆಸಿದೆ. ಈ ಸರಕಾರವನ್ನು ತೊಲಗಿಸಿ ರಾಜ್ಯದ ಪ್ರಗತಿಗೆ ಜನತೆ ಸಹಕರಿಸಬೇಕು. ಹೆಸರು ಆಧಾರಿತ ಕಾಂಗ್ರೆಸ್ ಸಂಸ್ಕೃತಿಯನ್ನು ತೊಲಗಿಸಿ, ಕೆಲಸ ಆಧಾರಿತ ಬಿಜೆಪಿ ಪಕ್ಷವನ್ನು ಬೆಂಬಲಿಸ ಬೇಕೆಂದರು.
ಸಂವಿಧಾನ ಬದಲಿಸಲ್ಲ, ಮೀಸಲಾತಿ ರದ್ದಾಗಲ್ಲ: ದೇಶದಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರು ಅಧಿಕಾರಕ್ಕೆ ಬಂದಾಗ ಕಾಂಗ್ರೆಸ್ ಪಕ್ಷ ಸಂವಿಧಾನ ಬದಲಾವಣೆಯಾಗುತ್ತದೆ. ಮೀಸಲಾತಿ ರದ್ದಾಗುತ್ತದೆ ಎಂದು ಗುಲ್ಲೆಬ್ಬಿಸಿತ್ತು. ಆದರೆ, ವಾಜಪೇಯಿ ಸರಕಾರ ಅಂತಹ ಕೆಲಸವನ್ನು ಮಾಡಲಿಲ್ಲ. ಈಗ ತಮ್ಮ ನೇತೃತ್ವದ ಸರಕಾರದಲ್ಲೂ ಅದೇ ರೀತಿಯ ಸುಳ್ಳಿನ ಆರೋಪಗಳನ್ನು ಮಾಡಲಾಗುತ್ತಿದೆ.
ಆದರೆ, ಬಿಜೆಪಿ ಸರಕಾರ ಯಾವುದೇ ಕಾರಣಕ್ಕೂ ಸಂವಿಧಾನ ಬದಲಾವಣೆ ಮಾಡುವುದಿಲ್ಲ. ಮೀಸಲಾತಿಯನ್ನು ರದ್ದುಪಡಿಸುವುದಿಲ್ಲ. ಇದನ್ನು ದಲಿತರು ಅರ್ಥ ಮಾಡಿಕೊಳ್ಳಬೇಕು. ಬಿಜೆಪಿ ಅಧಿಕಾರದಲ್ಲಿ ಪರಿಶಿಷ್ಟ ಜಾತಿ,
ವರ್ಗದ ಕಾಯ್ದೆಯನ್ನು ಬಲ ಪಡಿಸಲಾಗಿದೆ ಎಂದರು.
ಅಂಬೇಡ್ಕರ್‌ಗೆ ಗೌರವ: ಡಾ.ಬಿ.ಆರ್.ಅಂಬೇಡ್ಕರ್‌ರಿಗೆ ಅತೀ ಹೆಚ್ಚು ಅಪಮಾನ ಮಾಡಿರುವ ಪಕ್ಷ ಕಾಂಗ್ರೆಸ್ ಆಗಿದೆ ಎಂದು ವಾಗ್ಧಾಳಿ ನಡೆಸಿದ ಮೋದಿ, ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ತಂದೆಗೆ ಮಗಳು, ಅಮ್ಮನಿಗೆ ಮಗ, ಗಂಡನಿಗೆ ಹೆಂಡತಿ ಭಾರತ ರತ್ನ ನೀಡುವ ಮೂಲಕ ಒಂದೇ ಕುಟುಂಬದಲ್ಲಿ ನಾಲ್ವರು ಭಾರತ ರತ್ನಗಳು ಇರುವಂತೆ ಮಾಡಿಕೊಂಡರು. ಸರಕಾರದ ಯಾವುದೇ ಯೋಜನೆಗೂ ಅವರದೇ ಕುಟುಂಬದ ಸದಸ್ಯರ ಹೆಸರುಗಳನ್ನು ಇಟ್ಟುಕೊಂಡರು. ಆದರೆ, ವಾಜಪೇಯಿ ಸರಕಾರ ಅಂಬೇಡ್ಕರ್‌ರಿಗೆ ಭಾರತ ರತ್ನ ಗೌರವ ನೀಡಿತು ಎಂದು ಹೇಳಿದರು.
ಕಾಂಗ್ರೆಸ್‌ನಿಂದ ಅಂಬೇಡ್ಕರ್ ಮೂಲೆಗುಂಪು: ಕಾಂಗ್ರೆಸ್ ಪಕ್ಷ ಅಂಬೇಡ್ಕರ್‌ರನ್ನು ಮೂಲೆಗುಂಪು ಮಾಡಿದ್ದ ಸಂದರ್ಭದಲ್ಲಿ ಜನಸೇನಾ ಸಂಸ್ಥಾಪಕ ಡಾ.ಶಾಮ್‌ಪ್ರಸಾದ್ ಮುಖರ್ಜಿ ಪಶ್ಚಿಮ ಬಂಗಾಳ ದಿಂದ ಅಂಬೇಡ್ಕರ್ ಸಂಸತ್ತಿಗೆ ಗೆದ್ದು ಬರುವಂತೆ ಮಾಡಿ, ಸಂವಿಧಾನ ಬರೆಯುವ ಅವಕಾಶ ಕಲ್ಪಿಸಿದ್ದರು. ಅಂಬೇಡ್ಕರ್ ಸಂವಿಧಾನ ಬರೆಯದಿದ್ದರೆ ಬಡ ಮಹಿಳೆಯ ಪುತ್ರನಾದ ತಾವು ಪ್ರಧಾನಿ ಹುದ್ದೆಗೇರು ತ್ತಲೇ ಇರಲಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಅಂಬೇಡ್ಕರ್ ಮಾತ್ರವಲ್ಲದೇ, ಬಾಬು ಜಗಜೀವನ್ ರಾಂ ಅವರಿಗೂ ಅನ್ಯಾಯವಾಗಿದೆ ಎಂದರು.
ರಿಮೋಟ್ ಕಂಟ್ರೋಲ್ ಪಕ್ಷ: ದೆಹಲಿ ಗದ್ದುಗೆಯಲ್ಲಿ ಹತ್ತು ವರ್ಷಗಳ ಕಾಲ ಪ್ರಧಾನಿ ಮನಮೋಹನ್ ಸಿಂಗ್ ಆಡಳಿತ ನಡೆಸಿದರು. ಆದರೆ, ಆ ಸರಕಾರದ ರಿಮೋಟ್ ಕಂಟ್ರೋಲ್ ಜನಪಥ್ 10ರ ಮನೆಯಲ್ಲಿತ್ತು. ನಾಲ್ಕು ವರ್ಷಗಳಿಂದ ಬಿಜೆಪಿಯ ಮೋದಿ ಸರಕಾರ ಆಡಳಿತ ನಡೆಸುತ್ತಿದೆ. ಆದರೆ, ನಮಗೆ ಜನತಾ ಜನಾರ್ದನನೇ ರಿಮೋಟ್ ಕಂಟ್ರೋಲ್ ಆಗಿದ್ದಾರೆ. ದೇಶದ 125 ಕೋಟಿ ಜನರು ನಿಲ್ಲು ಎಂದರೆ ನಿಲ್ಲುವೆ, ಕೂರು ಎಂದರೆ ಕೂರುವೆ. ಎಡ ಬಲಕ್ಕೂ ಚಲಿಸುವೆ. ಪ್ರಜಾತಂತ್ರದ ಹೈಕಮಾಂಡ್ ಜನತಾ ಜನಾರ್ದನನೇ ಆಗಿರಬೇಕೆಂದು ಪ್ರತಿಪಾದಿಸಿದರು.
ಚಿನ್ನದ ಚಮಚ: ಕಾಂಗ್ರೆಸ್ ಪಕ್ಷದ ನಾಮಧಾರಿಗಳು ಚಿನ್ನದ ಚಮಚ ಬಾಯಲ್ಲಿಟ್ಟುಕೊಂಡು ಹುಟ್ಟಿದ್ದಾರೆ. ಆದು ಕೋಲಾರದ ಚಿನ್ನದ ಚಮಚವಲ್ಲ. ವಿದೇಶಿ ಚಿನ್ನದ ಚಮಚ ಎಂದು ವ್ಯಂಗ್ಯವಾಡಿದ ಅವರು, ಇಂತಹವರಿಗೆ ಯಾವುದೇ ಕಾರಣಕ್ಕೂ ದೇಶದ ಬಡವರು, ಶೋಷಿತರ ಕಷ್ಟ ಅರ್ಥವಾಗುವುದಿಲ್ಲ ಎಂದು ಜರಿದರು.
ಯರಗೋಳ್, ಎತ್ತಿನಹೊಳೆ: ದೇಶವನ್ನೇ ಸಮೃದ್ಧಿ ಗೊಳಿಸುವಷ್ಟು ಸಂಪನ್ಮೂಲಗಳನ್ನು ಹೊಂದಿರುವ ಕೋಲಾರ ಜಿಲ್ಲೆಯನ್ನು ಮತ್ತಷ್ಟು ಸಮೃದ್ಧಗೊಳಿಸುವ ಅವಕಾಶವನ್ನು ಕಾಂಗ್ರೆಸ್ ಪಕ್ಷ ಹಾಳು ಮಾಡಿದೆ. ಯರಗೋಳ್ ಯೋಜನೆಯಲ್ಲಿ ಪೈಪುಗಳನ್ನು ಅಳವಡಿಸಿ ಅಣೆಕಟ್ಟು ನಿರ್ಮಾಣ ಮಾಡದೇ ಡೀಲ್ ಕುದುರಿಸಿಕೊಂಡಿದ್ದಾರೆ. ಎತ್ತನಹೊಳೆ ಯೋಜನೆಯಲ್ಲಿ ಕೋಲಾರ, ಚಿಕ್ಕಬಳ್ಳಾಪುರಕ್ಕೆ ಕುಡಿಯುವ ನೀರು ನೀಡುವುದಾಗಿ ಹೇಳಿ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಲಾಗಿದೆ. ಕೋಲಾರ, ಚಿಕ್ಕಬಳ್ಳಾಪುರ ಜನತೆ ಸಿಎಂ ಬಳಿ ಕುಡಿವ ನೀರಿಗಾಗಿ ಕೇಳಲು ಹೋದರೆ ಸಿದ್ದರಾಮಯ್ಯ ರೈತರ ಮೇಲೆ ಲಾಠಿ ಪ್ರಹಾರ ಮಾಡಿಸಿದ್ದಾರೆಂದು ಮೋದಿ ಗುಡುಗಿದರು.
ಕನ್ನಡದಲ್ಲಿ ಜಿಲ್ಲೆಯ ದೇವರು, ಸಾಹಿತಿಗಳ ಸ್ಮರಣೆ: ಕೋಲಾರ ಜಿಲ್ಲೆಯ ಪ್ರಸಿದ್ಧ ದೇವತೆಗಳಾದ ಕೋಲಾರಮ್ಮ, ಮುಳಬಾಗಿಲು ಆಂಜನೇಯಸ್ವಾಮಿ, ಕುರುಡುಮಲೆ ಗಣಪತಿ ಸ್ಮರಣೆ ಮಾಡುತ್ತ ಕನ್ನಡದಲ್ಲಿಯೇ ಭಾಷಣ ಆರಂಭಿಸಿದ ಪ್ರಧಾನಿ ಮೋದಿ, ನೆರೆದಿದ್ದ ಸಹಸ್ರಾರು ಜನರ ಶಿಳ್ಳೆ, ಚಪ್ಪಾಳೆ ಗಳ ನಡುವೆ ಜಿಲ್ಲೆಯ ಹಿರಿಯರಾದ ಡಿವಿಜಿ, ಮಾಸ್ತಿ, ಕೈವಾರ ತಾತಯ್ಯರನ್ನು ಸ್ಮರಿಸಿದರು. ಭಾಷಣದ ಕೊನೆಯಲ್ಲಿ ಕನ್ನಡದಲ್ಲಿಯೇ ಸ್ವತ್ಛ, ಸುಂದರ ಕರ್ನಾಟಕಕ್ಕಾಗಿ ಬನ್ನಿ ಎಲ್ಲರೂ ಕೈಜೋಡಿಸಿ. ಸರಕಾರ ಬದಲಿಸಿ, ಬಿಜೆಪಿ ಗೆಲ್ಲಿಸಿ ಘೋಷಣೆಗಳ ಮೂಲಕ ಒಂದು ಗಂಟೆಯ ಸುದೀರ್ಘ ಭಾಷಣಕ್ಕೆ ವಿರಾಮ ನೀಡಿದರು.
ಬಿಜೆಪಿ ಪ್ರಣಾಳಿಕೆಗೆ ಪ್ರಧಾನಿ ಹರ್ಷ ದಲಿತ, ಆದಿವಾಸಿ, ಶೋಷಿತ, ರೈತ, ಕಾರ್ಮಿಕ, ಮಹಿಳೆಯರ ಏಳಿಗೆಯ ವಚನಬದ್ಧ ಪ್ರಣಾಳಿಕೆಯನ್ನು ಕರ್ನಾಟಕ ವಿಧಾನಸಭಾ ಚುನಾವಣೆ ಯಲ್ಲಿ ಘೋಷಿಸಿರುವ ಬಿಜೆಪಿ ಸಿಎಂ ಅಭ್ಯರ್ಥಿ ಬಿ.ಎಸ್. ಯಡಿಯೂರಪ್ಪರಿಗೆ ಹೃದಯ ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ ಪ್ರಧಾನಿ ಮೋದಿ, ಈ ಪ್ರಣಾಳಿಕೆಯನ್ನು ಮನೆ ಮನೆಗೂ ತಲುಪಿಸಿ, ಮೇ 12ರ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವಂತೆ ಮಾಡಬೇಕೆಂದು ಕರೆ ನೀಡಿದರು.
ಮಾವಿನ ಜ್ಯೂಸ್ ತಯಾರಿಕಾ ಘಟಕ ಕೋಲಾರ ಜಿಲ್ಲೆಯಲ್ಲಿ ಮಾವನ್ನು ಯಥೇತ್ಛವಾಗಿ ಬೆಳೆಯಲ್ಪಡುತ್ತದೆ. ತಂಪು ಪಾನೀಯಗಳನ್ನು ಕುಡಿಯುವುದರ ಬದಲು ಮಾವಿನಿಂದ ಜ್ಯೂಸ್ ತಯಾರಿಸುವ ಘಟಕ ಸ್ಥಾಪಿಸಿದರೆ ಮಾವು
ಬೆಳೆಗಾರರಿಗೂ ಹೆಚ್ಚು ಲಾಭ ಸಿಗುತ್ತದೆ. ಮಹಾರಾಷ್ಟ್ರದಲ್ಲಿ ಕಿತ್ತಳೆ ಹಣ್ಣಿನಿಂದ ಜ್ಯೂಸ್ ತಯಾರಿಸುವ ಘಟಕಗಳನ್ನು ಆರಂಭಿಸಲಾಗಿದೆ. ಇದೇ ರೀತಿ 1 ಲಕ್ಷ ಕೋಟಿ ರೂ.ಯೋಜನೆಗಳನ್ನು ಕೇಂದ್ರ ಸರಕಾರ ರೂಪಿಸಿದೆ. ಕರ್ನಾಟಕದಲ್ಲೂ 4 ಸಾವಿರ ಕೋಟಿ ರೂ.ವೆಚ್ಚದ ಐದು ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಈ ಪೈಕಿ 1 ಪೂರ್ಣಗೊಂಡಿದ್ದರೆ, ನಾಲ್ಕು ಪ್ರಗತಿಯ ಹಂತದಲ್ಲಿವೆ. ಮಾವು, ತರಕಾರಿ ಬೆಳೆಗಳ ಸಾಗಾಣಿಕೆಗೆ ಅನುಕೂಲವಾಗುವಂತೆ ಕೋಲಾರ ಜಿಲ್ಲೆಯಲ್ಲಿ ರೈಲ್ವೆ, ರಸ್ತೆ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದು ಪ್ರಧಾನಿ ಹೇಳಿದರು.
ದೇಶದ ಮಹಿಳೆಯರ ಕಷ್ಟವನ್ನು ಅರ್ಥ ಮಾಡಿಕೊಂಡು ದೇಶಾದ್ಯಂತ ಐದು ಕೋಟಿ ಶೌಚಾಲಯಗಳನ್ನು ನಿರ್ಮಾಣ
ಮಾಡಿಸಲು ಮೋದಿಯೇ ಅಧಿಕಾರಕ್ಕೆ ಬರಬೇಕಾಯಿತು. ಆದರೂ, ಮೋದಿ ಶ್ರೀಮಂತರ ಪರ ಎನ್ನುವ ಆರೋಪವನ್ನು
ಕಾಂಗ್ರೆಸ್ ಮಾಡುತ್ತಲೇ ಇದೆ. 5 ಕೋಟಿ ಶೌಚಾಲಯಗಳನ್ನು ತಾವು ಶ್ರೀಮಂತರಿಗೆ ಕಟ್ಟಿಸಿದ್ದೇನೆಯೇ.
ನರೇಂದ್ರ ಮೋದಿ, ಪ್ರಧಾನ ಮಂತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು
Mulabagilu: ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲು ಪ್ರಕರಣ: ಶಿಕ್ಷಕರ ಅಮಾನತು
Cyclone Fengal: ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಶಾಲೆ, ಕಾಲೇಜಿಗೆ ಡಿ.2ರಂದು ರಜೆ
Kolar: ಧಾರ್ಮಿಕ ಮೆರವಣಿಗೆಯಲ್ಲಿ ಯಾಂತ್ರಿಕ ಆನೆ ಬಳಕೆ!
MUST WATCH
ಹೊಸ ಸೇರ್ಪಡೆ
New Year Guidelines: ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಹೈದರಾಬಾದ್ ಪೊಲೀಸರು
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.