ಬೀದಿ ನಾಯಿ ಹಾವಳಿ ತಡೆಗೆ ಸ್ಪಷ್ಟ ಆದೇಶವಿಲ್ಲ
ಸ್ಥಳೀಯ ಸಂಸ್ಥೆಗಳು ಅಸಹಾಯಕ • ಬೀದಿ ನಾಯಿಗಳ ಹಾವಳಿಯಿಂದ ನೂರಾರು ಮಂದಿಗೆ ಗಾಯ
Team Udayavani, Jul 1, 2019, 11:29 AM IST
ಕೋಲಾರ ನಗರದಲ್ಲಿ ಗುಂಪು ಗುಂಪಾಗಿ ಸಂಚರಿಸುತ್ತಿರುವ ಬೀದಿ ನಾಯಿಗಳ ಹಿಂಡು.
ಕೋಲಾರ: ಜಿಲ್ಲೆಯಲ್ಲಿ ಬೀದಿ ನಾಯಿಗಳ ಹಾವಳಿಯಿಂದ ಪ್ರತಿ ತಿಂಗಳು ನೂರಾರು ಮಂದಿ ರೇಬೀಸ್ ಚುಚ್ಚುಮದ್ದು ತೆಗೆದುಕೊಳ್ಳುತ್ತಿದ್ದರೆ, ಹಲವು ಮಂದಿ ಅಪಘಾತಗಳಿಗೆ ಸಿಲುಕಿ ಶಾಶ್ವತ ಅಂಗವೈಕಲ್ಯಕ್ಕೆ ತುತ್ತಾಗುತ್ತಿದ್ದಾರೆ. ಹೀಗಾಗಿ ಬೀದಿನಾಯಿಗಳ ನಿಯಂತ್ರಣಕ್ಕೆ ಸ್ಪಷ್ಟ ಸರ್ಕಾರಿ ಆದೇಶ ಇಲ್ಲದೇ ಇರುವುದರಿಂದ ನಗರಸಭೆ, ಪುರಸಭೆ ಸ್ಥಳೀಯ ಸಂಸ್ಥೆಗಳು ಅಸಹಾಯಕವಾಗಿವೆ.
ಜಿಲ್ಲಾ ಕೇಂದ್ರ ಕೋಲಾರದಲ್ಲಿಯೇ ಪ್ರತಿ ವಾರ್ಡ್‌ನಲ್ಲಿಯೂ ನೂರಾರು ಬೀದಿ ನಾಯಿಗಳು ಇದ್ದು, ಇವುಗಳು ಕಚ್ಚಿ ಚಿಕ್ಕಮಕ್ಕಳಿಂದ ಹಿಡಿದು ವೃದ್ಧರವರೆಗೂ ಅನೇಕ ಮಂದಿ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ದುಬಾರಿ ಚಿಕಿತ್ಸೆ ಪಡೆಯುವಂತಾಗಿದೆ. ಕೆಲವೊಮ್ಮೆ ಬೀದಿ ನಾಯಿಗಳು ಕಚ್ಚಾಡಿಕೊಂಡು ದ್ವಿಚಕ್ರ ವಾಹನಗಳಿಗೆ ಅಡ್ಡ ಬಂದು ಸವಾರರು ಬಿದ್ದು ಕೈಕಾಲು ಮುರಿದುಕೊಂಡು, ಶಾಶ್ವತ ಅಂಗವೈಕಲ್ಯಕ್ಕೆ ತುತ್ತಾಗಿದ್ದಾರೆ.
ಬೀದಿ ನಾಯಿಗಳಿಂದ ಇಷ್ಟೆಲ್ಲಾ ಅವಾಂತರಗಳು ಆಗುತ್ತಿದ್ದರೂ, ಸ್ಥಳೀಯ ನಗರಸಭೆ ನಾಯಿಗಳ ನಿಯಂತ್ರಣಕ್ಕೆ ಮುಂದಾಗುತ್ತಿಲ್ಲ. ಹಿಂದೆಲ್ಲಾ ಬೀದಿ ನಾಯಿಗಳನ್ನು ವರ್ಷಕ್ಕೊಮ್ಮೆ ಬಡಿದುಕೊಂದು ನಿಯಂತ್ರಣ ಮಾಡಲಾಗುತ್ತಿತ್ತು. ಆದರೆ, ಇದಕ್ಕೆ ಪ್ರಾಣಿ ದಯಾ ಸಂಘದ ಆಕ್ಷೇಪಣೆ ಎದುರಾದ ಮೇಲೆ, ಈ ಕುರಿತು ಕೆಲವು ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳ ಮೇಲೆ ಎಫ್ಐಆರ್‌ಗಳು ದಾಖಲಾಗಿ, ಬೀದಿ ನಾಯಿಗಳ ತಂಟೆಗೆ ಹೋಗುವುದನ್ನೇ ನಗರಸಭೆ, ಪುರಸಭೆಗಳು ಬಿಟ್ಟು ಬಿಟ್ಟಿವೆ.
10 ವರ್ಷಗಳ ಹಿಂದೆ ಕಾರ್ಯಾಚರಣೆ: ಕೋಲಾರ ಜಿಲ್ಲಾ ಕೇಂದ್ರದಲ್ಲಿಯೇ 10 ವರ್ಷಗಳ ಹಿಂದೆ 2007-08 ರಲ್ಲಿ ಬೀದಿ ನಾಯಿಗಳನ್ನು ನಗರದ ಎಲ್ಲಾ ವಾರ್ಡುಗಳಲ್ಲಿ ಕಾರ್ಯಾಚರಣೆ ಮಾಡಿ, ಹಿಡಿದು ಬಡಿದು ವಿಷ ಪ್ರಾಸನ ಮಾಡಿಸಿ ಸಾಮೂಹಿಕವಾಗಿ ಅಂತ್ಯ ಸಂಸ್ಕಾರ ಮಾಡಲಾಗಿತ್ತು. ಇದಕ್ಕೆ ಪ್ರಾಣಿ ದಯಾ ಸಂಘದಿಂದ ತೀವ್ರ ಆಕ್ಷೇಪ ಎದುರಾಗಿದ್ದಲ್ಲದೆ, ಅಂದಿನ ಕೇಂದ್ರ ಸಚಿವೆ ಮೇನಕಾಗಾಂಧಿ ನಗರಸಭೆಗೆ ನೋಟಿಸ್ ನೀಡಿದ್ದರು. ಈ ಹಿನ್ನೆಲೆಯಲ್ಲಿ ಬೀದಿ ನಾಯಿಗಳ ನಿಯಂತ್ರಣ ವಿಚಾರಕ್ಕೆ ಅಧಿಕಾರಿಗಳು ಕೈ ಹಾಕುತ್ತಿಲ್ಲ.
ನಿಯಂತ್ರಣ ದುಬಾರಿ: ಬೀದಿ ನಾಯಿಗಳನ್ನು ಹಿಡಿದು, ಬಡಿದು, ವಿಷ ಪ್ರಸನ ಮಾಡಿಸಿ ಕೊಲ್ಲುವುದಕ್ಕೆ ಕಡಿಮೆ ವೆಚ್ಚವಾಗುತ್ತದೆ. ಬಹುತೇಕ ಸ್ಥಳೀಯ ಸಂಸ್ಥೆಗಳು ಇದೇ ಪದ್ಧತಿ ಪಾಲಿಸುತ್ತಿದ್ದವು. ಆಂಧ್ರ ಮೂಲದ ತಂಡವೊಂದು ವರ್ಷಕ್ಕೊಮ್ಮೆ ಗುತ್ತಿಗೆ ಪಡೆದುಕೊಂಡು ಬೀದಿ ನಾಯಿ, ಕೋತಿಗಳನ್ನು ನಿಯಂತ್ರಿಸುತ್ತಿದ್ದವು. ಆದರೆ, ಪ್ರಾಣಿ ದಯಾ ಸಂಘದಿಂದ ಆಕ್ಷೇಪಣೆ ಎದುರಾದ ನಂತರ, ಬೀದಿ ನಾಯಿಗಳನ್ನು ನಿಯಂತ್ರಿಸಲು ಪ್ರತಿ ನಾಯಿಗೂ ಸಂತಾನ ಹರಣ ಚುಚ್ಚು ಮದ್ದು ನೀಡುವುದೊಂದೇ ಮಾರ್ಗವಾಗಿತ್ತು. ಆದರೆ, ಪ್ರತಿ ನಾಯಿಗೂ ಹೀಗೆ ಸಂತಾನ ಹರಣ ಚುಚ್ಚುಮದ್ದು ನೀಡಲು ಕನಿಷ್ಠ 500 ರೂ. ವೆಚ್ಛ ತಗುಲುತ್ತಿತ್ತು. ಆದರೆ, ಈ ವೆಚ್ಛವನ್ನು ಭರಿಸಲು ಆರ್ಥಿಕ ಶಕ್ತಿ ಇಲ್ಲದ ಕಾರಣದಿಂದ ಸ್ಥಳೀಯ ಸಂಸ್ಥೆಗಳು ಬೀದಿ ನಾಯಿಗಳ ನಿಯಂತ್ರಣ ವಿಚಾರಕ್ಕೂ ತಮಗೂ ಸಂಬಂಧವೇ ಇಲ್ಲ ಎನ್ನುವಂತೆ ಇದ್ದು ಬಿಟ್ಟಿವೆ.
ಮಾಂಸದಂಗಡಿಗಳಿಂದ ಪೋಷಣೆ: ಕೋಲಾರ ನಗರದಲ್ಲಿ ಕುರಿ, ಕೋಳಿ, ಮೀನು ಹಾಗೂ ದನದ ಮಾಂಸ ಮಾರಾಟಕ್ಕೆ ಆಧುನಿಕ ಹಾಗೂ ಒಂದೆಡೆ ಸುಸಜ್ಜಿತ ಮಾರುಕಟ್ಟೆ ಇಲ್ಲವಾಗಿದೆ. ಇದರಿಂದ ಇಡೀ ನಗರದ ಯಾವುದೇ ರಸ್ತೆಯಲ್ಲಿ ಮಾಂಸದಂಗಡಿಗಳು ಕಾಣ ಸಿಗುತ್ತವೆ.
ಇಲ್ಲಿ ಬೀಳುವ ಮಾಂಸದ ತ್ಯಾಜ್ಯವನ್ನು ತಿನ್ನಲು ಬೀದಿ ನಾಯಿಗಳ ದಂಡೇ ಸಜ್ಜಾಗಿರುತ್ತವೆ. ಹೀಗೆ ಮಾಂಸ ತಿಂದು ಬಲಿಯುವ ನಾಯಿಗಳು ತಮಗೆ ಆಹಾರ ಸಿಗದಿದ್ದಾಗ ದಾರಿಯಲ್ಲಿ ಸಂಚರಿಸುವ ಮಕ್ಕಳ ಮೇಲೆ ಎರಗುತ್ತದೆ. ನಗರದಲ್ಲಿ ಈ ರೀತಿಯ ಘಟನೆಗಳು ಪ್ರತಿನಿತ್ಯವೂ ಜರುಗುತ್ತಿರುತ್ತವೆ.
ಇಂಥ ಘಟನೆಗಳು ಜರುಗಿದಾಗಲೆಲ್ಲಾ ಸಾರ್ವಜನಿಕರು ಹಾಗೂ ಗಾಯಗೊಂಡ ಮಕ್ಕಳ ಪೋಷಕರು ಆಕ್ರೋಶ ವ್ಯಕ್ತಪಡಿಸಿದರು. ನಗರಸಭೆಯ ಅಧಿಕಾರಿಗಳು ತಮ್ಮ ಅಸಹಾಯಕತೆ ವ್ಯಕ್ತಪಡಿಸುತ್ತಾರೆ. ಬೀದಿ ನಾಯಿಗಳಿಂದ ನಾವೇ ದೂರ ಇರಬೇಕೇ ಹೊರತು, ನಾವೇನು ಮಾಡಲಾಗುವುದಿಲ್ಲವೆನ್ನುತ್ತಾರೆ.
● ಕೆ.ಎಸ್.ಗಣೇಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.