ತಾಪಂ ಅಧ್ಯಕ್ಷೆ ವಿರುದ್ಧ ಪಕ್ಷಾತೀತ ಅವಿಶ್ವಾಸ
27ರಲ್ಲಿ 26ಮಂದಿ ಅವಿಶ್ವಾಸ ಮಂಡನಾ ಮನವಿ ಸಲ್ಲಿಕೆ | ಕರ್ತವ್ಯಲೋಪ, ಅನುದಾನ ದುರ್ಬಳಕೆ, ಅಗೌರವದ ಆರೋಪ
Team Udayavani, Apr 30, 2019, 2:39 PM IST
ಬಂಗಾರಪೇಟೆ ತಾಪಂ ಆಧ್ಯಕ್ಷೆ ಭಾಗ್ಯಲಕ್ಷ್ಮೀ ವಿರುದ್ಧ 23 ಸದಸ್ಯರು ಅವಿಶ್ವಾಸ ನಿರ್ಣಯ ಕೋರಿ ತಾಪಂ ಇಒ ಮಂಜುನಾಥ್‌ರಿಗೆ ಮನವಿ ಸಲ್ಲಿಸಿದರು
ಬಂಗಾರಪೇಟೆ: ತಾಪಂನಲ್ಲಿ ಕೈಗೊಳ್ಳುವ ಅಭಿವೃದ್ಧಿ ಕಾರ್ಯಗಳಲ್ಲಿ ಏಕನಿರ್ಣಯ ಕೈಗೊಳ್ಳುವ ಮೂಲಕ ಎಲ್ಲಾ ಸದಸ್ಯರ ಕೆಂಗೆಣ್ಣಿಗೆ ಗುರಿಯಾಗಿರುವ ತಾಪಂ ಅಧ್ಯಕ್ಷೆ ಭಾಗ್ಯಲಕ್ಷ್ಮೀ ವಿರುದ್ಧ ಪಕ್ಷಾತೀತವಾಗಿ ಅವಿಶ್ವಾಸ ನಿರ್ಣಯ ಕೈಗೊಳ್ಳಲು ತಾಪಂ ಇಒ ಮಂಜುನಾಥ್‌ರಿಗೆ ಮನವಿ ಮಾಡಿದರು.
ತಾಪಂನ ಒಟ್ಟು 27 ಸ್ಥಾನಗಳಲ್ಲಿ ಬಿಜೆಪಿ 17, ಕಾಂಗ್ರೆಸ್ 9 ಹಾಗೂ ಒಂದು ಸ್ಥಾನವು ಪಕ್ಷೇತರರಾಗಿ ಗೆಲುವು ಸಾಧಿಸಿದ್ದಾರೆ. ಬಿಜೆಪಿಯಿಂದ ಗೆದ್ದಿರುವ 17 ಸ್ಥಾನಗಳಲ್ಲಿ ಬಂಗಾರಪೇಟೆ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಗೆ 10 ಸ್ಥಾನಗಳು ಹಾಗೂ ಕೆಜಿಎಫ್ ಕ್ಷೇತ್ರದ ವ್ಯಾಪ್ತಿಯಲ್ಲಿ 7 ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ.
ಅಧ್ಯಕ್ಷರ ವಿರುದ್ಧ ಅವಿಶ್ವಾಸ: ತಾಪಂನ ಸಾಮಾನ್ಯ ಸಭೆಯಲ್ಲಿ ಎಲ್ಲಾ ಸದಸ್ಯರ ಒಮ್ಮತದಿಂದ ಕೈಗೊಳ್ಳುವ ನಿರ್ಣಯಗಳನ್ನು ಪಾಲಿಸದೇ, ಸ್ವಹಿತಾಸಕ್ತಿಗನುಗುಣವಾಗಿ ಕಾರ್ಯ ನಿರ್ವಹಿಸಿ ಸದಸ್ಯರ ಸಹಕಾರ ಕಳೆದುಕೊಂಡಿದ್ದಾರೆ. ಚುನಾವಣೆಯಲ್ಲಿ ಇವರಿಗೆ ಸಹಕಾರ ನೀಡಿದ ಕಾಂಗ್ರೆಸ್ ಸದಸ್ಯರಿಗೂ ಅಗೌರವ ಸೂಚಿಸಿರುವ ಕಾರಣ ಅಧ್ಯಕ್ಷರ ವಿರುದ್ಧ ಪಕ್ಷಾತೀತವಾಗಿ ಎಲ್ಲಾ ಸದಸ್ಯರು ಮುನಿಸಿಕೊಂಡಿದ್ದಾರೆ. ಇದಕ್ಕೆ ತಲೆಕೆಡಿಸಿಕೊಳ್ಳದೆ ಇರುವ ಅಧ್ಯಕ್ಷೆ ಭಾಗ್ಯಲಕ್ಷ್ಮೀೕ ವಿರುದ್ಧ ಕೊನೆಗೂ ಸೋಮವಾರ ಅವಿಶ್ವಾಸ ನಿರ್ಣಯ ಫಲನೀಡಿದೆ.
ಸಾಕ್ಷಿ ನಾಶದ ಆತಂಕ: ತಾಪಂ ಅಧ್ಯಕ್ಷೆ ಭಾಗ್ಯಲಕ್ಷ್ಮೀ ತಾಪಂ ವಿವಿಧ ಯೋಜನೆಗಳಲ್ಲಿ ಕೆಲಸ ಮಾಡದೇ ಅಧಿಕಾರಿಗಳು ಮತ್ತು ಸಿಬ್ಬಂದಿಯ ಮೇಲೆ ಒತ್ತಡ ತಂದು ಕೆಲಸ ಮಾಡದೇ ಬಿಲ್ ಮಾಡುವುದರ ಮೂಲಕ ಸರ್ಕಾರಿ ಅನುದಾನ ದುರುಪಯೋಗಪಡಿಸಿಕೊಂಡಿರುವ ಬಗ್ಗೆ ಜಿಪಂಗೆ ದೂರು ಸಹ ನೀಡಲಾಗಿದ್ದು, ಈ ಬಗ್ಗೆ ಜಿಪಂ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ಅಧಿಕಾರದಲ್ಲಿದ್ದರೆ ಸಾಕ್ಷ್ಯ ನಾಶ ಮಾಡುತ್ತಾರೆಂಬ ಆತಂಕದಿಂದ ಎಲ್ಲಾ ಸದಸ್ಯರು ಸೇರಿ ಅವಿಶ್ವಾಸ ಮಂಡಿಸಿದ್ದಾರೆ.
ಮನವಿ ಸಲ್ಲಿಕೆ: ತಾಪಂನಲ್ಲಿ ಒಟ್ಟು 27 ಸ್ಥಾನಗಳ ಪೈಕಿ 26 ಸದಸ್ಯರು ಒಂದೆಡೆ ಸೇರಿ ತಾಪಂ ಅಧ್ಯಕ್ಷೆ ಭಾಗ್ಯಲಕ್ಷ್ಮೀ ವಿರುದ್ಧ ಅವಿಶ್ವಾಸ ನಿರ್ಣಯ ಕೈಗೊಳ್ಳುವ ಬಗ್ಗೆ ತೀರ್ಮಾನ ಕೈಗೊಂಡಿದ್ದು, ಸೋಮವಾರ ಕೋಲಾರ ಉಪವಿಭಾಗಾಧಿಕಾರಿಗಳಿಗೆ ಅವಿಶ್ವಾಸ ನಿರ್ಣಯ ಮಂಡಿಸಲು ಹೋಗಿದ್ದು, ಕಾನೂನಿನ ಪ್ರಕಾರ ತಾಪಂ ಅಧ್ಯಕ್ಷರಿಗೆ ಆಥವಾ ತಾಪಂ ಕಾರ್ಯನಿರ್ವಹಣಾಧಿಕಾರಿಗಳಿಗೆ ಅವಿಶ್ವಾಸ ನಿರ್ಣಯ ಮಂಡಿಸಬೇಕಾಗಿರುವ ಬಗ್ಗೆ ಖಚಿತ ಪಡಿಸಿಕೊಂಡು ನಂತರ ಬಂಗಾರಪೇಟೆ ತಾಪಂ ಇಒ ಮಂಜುನಾಥ್‌ರಿಗೆ ಮನವಿ ಸಲ್ಲಿಸಿದರು.
ಅವಿಶ್ವಾಸ ನಿರ್ಣಯದಲ್ಲಿ 26 ಸದಸ್ಯರು ನಮೂದು ಮಾಡಿದ್ದರೂ ಸಹ ಸುಂದರಪಾಳ್ಯದ ಜಯರಾಮರೆಡ್ಡಿ, ಚಿಕ್ಕಅಂಕಂಡಹಳ್ಳಿ ಪಿ.ಅಮರೇಶ್ ಹಾಗೂ ದೋಣಿಮಡುಗು ಶಿಲ್ಪ ಸಹಿ ಮಾಡಿಲ್ಲ. ಉಳಿದಂತೆ 23 ಸದಸ್ಯರು ಖುದ್ದು ಹಾಜರಾಗಿ ಮನವಿ ಸಲ್ಲಿಸಿದರು. ತಾಪಂ ಉಪಾಧ್ಯಕ್ಷೆ ಗಿರಿಜಮ್ಮ, ಸದಸ್ಯರಾದ ಜೆಸಿಬಿ ನಾರಾಯಣಪ್ಪ, ಗುಲ್ಲಹಳ್ಳಿ ವೆಂಕಟೇಶಯ್ಯ, ಹುಲಿಬೆಲೆ ನಾರಾಯಣಸ್ವಾಮಿ, ಬೂದಿಕೋಟೆ ಮಾರ್ಕಂಡೇಯಗೌಡ, ಎನ್.ಜಿ.ಹುಲ್ಕೂರು ನಾರಾಯಣಪ್ಪ, ಕಾಮಸಮುದ್ರ ವೆಂಕಟೇಶ್, ಹುನ್ಕುಂದ ವೆಂಕಟೇಶ್, ಬಲಮಂದೆ ಮಹದೇವ್, ರಾಮಸಾಗರ ಜಿ.ಬಾಬು, ಬೆಂಗನೂರು ಮಂಜುಳಾ, ಡಿ.ಕೆ.ಹಳ್ಳಿ ವರಲಕ್ಷ್ಮೀ, ಕೆಂಪಾಪುರ ಸುನಂದಮ್ಮ, ಹಂಗಳ ಮಮತಾ, ಕಮ್ಮಸಂದ್ರ ಆಶಾ, ಸೂಲಿಕುಂಟೆ ಶ್ರೀದೇವಿ, ಕಾರಹಳ್ಳಿ ವೀಣಾ, ಚಿನ್ನಕೋಠೆ ಅಂಬರೀಶ್, ದೊಡ್ಡವಲಗಮಾದಿ ನಾಗರತ್ನ, ಪಾರಾಂಡಹಳ್ಳಿ ಸವಿತಾ, ಬೇತಮಂಗಲ ಕೃಷ್ಣಮೂರ್ತಿ ಇತರರು ಸಹಿ ಹಾಕಿ ಅವಿಶ್ವಾಸ ಸೂಚಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.