ಗಣರಾಜ್ಯೋತ್ಸವ ಅಣಕಿಸುತ್ತಿರುವ ಅಸ್ಪೃಶ್ಯತೆ
Team Udayavani, Jan 26, 2019, 9:12 AM IST
ಕೋಲಾರ: ಭಾರತ ದೇಶವನ್ನು ಸಾರ್ವಭೌಮ ಸಮಾಜವಾದಿ ಜಾತ್ಯತೀತ ಲೋಕತಾಂತ್ರಿಕ ಗಣತಂತ್ರವನ್ನಾಗಿಸಲು ಪ್ರತಿಯೊಬ್ಬರಲ್ಲೂ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ ಭಾವನೆಯನ್ನು ಬೆಳೆಸುವ ವಾಗ್ಧಾನದೊಂದಿಗೆ ಎಪ್ಪತ್ತು ವರ್ಷಗಳ ಹಿಂದೆ ಸಂವಿಧಾನವನ್ನು ಅಳವಡಿಸಿಕೊಂಡಿದ್ದರೂ, ಅಸ್ಪೃಶ್ಯತೆ ಎನ್ನುವ ಮಾರಿ ಈಗಲೂ ಅಣಕಿಸುತ್ತಲೇ ಇರುವುದು ವಿಪರ್ಯಾಸವಾಗಿದೆ.
ಕೆಲವು ದಿನಗಳ ಹಿಂದಷ್ಟೇ ಜಿಲ್ಲೆಯ ಮಾಲೂರು ತಾಲೂಕಿನ ಚನ್ನಕಲ್ಲು ಗ್ರಾಮದಲ್ಲಿ ದಲಿತರಿಗೆ ದೇವಾಲಯ ಪ್ರವೇಶವಿಲ್ಲ, ರಸ್ತೆ ಇಲ್ಲ, ನೀರಿಲ್ಲ ಇತ್ಯಾದಿ ಆರೋಪಗಳೊಂದಿಗೆ ಅಸ್ಪೃಶ್ಯತೆಯ ರೂಪವೊಂದು ಹೊರಬಿದ್ದಿದ್ದು, ಇದಕ್ಕೆ ತಾಜಾ ಉದಾಹರಣೆಯಷ್ಟೇ. ಅಸ್ಪೃಶ್ಯತೆ ಆಚರಣೆಯ ಘಟನೆ ಹೊರ ಬೀಳುತ್ತಿದ್ದಂತೆಯೇ ಅಧಿಕಾರಿಗಳ ದಂಡು ಗ್ರಾಮಕ್ಕೆ ಧಾವಿಸಿ ಬಂದು ಗ್ರಾಮದಲ್ಲಿ ಕೆಲವರ ನಡುವಿನ ಮನಸ್ತಾಪಗಳಿಗೆ ಅಸ್ಪೃಶ್ಯತೆಯ ಲೇಪ ನೀಡಲಾಗಿದೆ. ಅಸ್ಪೃಶ್ಯತೆ ಆಚರಣೆ ಇಲ್ಲವೇ ಇಲ್ಲ ಎನ್ನುವ ಹೇಳಿಕೆ ನೀಡಿ ಪ್ರಕರಣಕ್ಕೆ ಇತಿಶ್ರೀ ಹಾಕಲಾಯಿತು.
ಗೃಹಪ್ರವೇಶ: ಕೋಲಾರ ಮಹಿಳಾ ಕಾಲೇಜಿನ ಉಪನ್ಯಾಸಕರಾಗಿರುವ ಅರಿವು ಶಿವಪ್ಪ, ಸಮಾಜವನ್ನು ಕಾಡುತ್ತಿರುವ ಅಸ್ಪೃಶ್ಯತೆಯನ್ನು ಜನರ ಮನೆ ಮತ್ತು ಮನಸ್ಸುಗಳಿಂದ ಹೋಗಲಾಡಿಸಬೇಕೆಂಬ ಉದ್ದೇಶ ಹೊತ್ತುಕೊಂಡು ಐದು ವರ್ಷಗಳ ಹಿಂದೆ ಗೃಹ ಪ್ರವೇಶ ಎನ್ನುವ ಕಾರ್ಯಕ್ರಮವನ್ನು ಹಾಕಿಕೊಂಡಿದ್ದರು. ಏಕೆಂದರೆ, ಜಿಲ್ಲೆಯಲ್ಲಿ ಬಹುತೇಕ ಗ್ರಾಮಗಳಲ್ಲಿ ದಲಿತರು ಸವರ್ಣೀಯರೆನಿಸಿಕೊಂಡವರ ಮನೆಗಳಿಗೆ ಇಂದಿಗೂ ಪ್ರವೇಶ ಇಲ್ಲವೆನ್ನುವುದನ್ನು ಅರಿವು ಶಿವಪ್ಪ ದೃಢಪಡಿಸಿಕೊಂಡಿದ್ದರು. ಅಸ್ಪೃಶ್ಯತೆಯು ಆಧುನಿಕ ಯುಗದಲ್ಲಿಯೂ ಭೀಕರವಾಗಿ ತನ್ನ ಕರಾಳ ಮುಖವನ್ನು ವಿವಿಧ ಆಯಾಮಗಳಲ್ಲಿ ಪ್ರದರ್ಶಿಸುತ್ತಿರುವುದನ್ನು ಪ್ರತಿ ಗ್ರಾಮದಲ್ಲಿಯೂ ಗುರುತಿಸಿದ್ದರು. ಈ ಹಿನ್ನೆಲೆಯಲ್ಲಿ ದಲಿತರನ್ನು ಒಪ್ಪಿತ ಸವರ್ಣೀಯರ ಮನೆಯೊಳಗೆ ಕರೆದೊಯ್ದು ತಮ್ಮಲ್ಲಿ ಭೇದ ಭಾವವಿಲ್ಲವೆಂಬ ಸಂದೇಶವನ್ನು ಇಡೀ ಗ್ರಾಮಕ್ಕೆ ಸಾರುವುದು ಗೃಹ ಪ್ರವೇಶ ಕಾರ್ಯಕ್ರಮದ ಮೂಲ ಆಶಯವಾಗಿತ್ತು.
ಸಹ ಭೋಜನ: 2014 ಜುಲೈ ಮಾಸದಲ್ಲಿ ಆರಂಭವಾದ ಗೃಹಪ್ರವೇಶ ಕಾರ್ಯಕ್ರಮವು ಕೋಲಾರ ಜಿಲ್ಲೆಯ ಹಲವಾರು ಗ್ರಾಮಗಳಲ್ಲಿ ನಡೆದಿದೆ. ಪ್ರಭಾವಿ ಮುಖಂಡರ ಮನೆಗಳಿಗೆ ದಲಿತರನ್ನು ಕರೆತರುವ ಹಾಗೂ ಭೋಜನ ಮಾಡಿಸುವ ಕೆಲಸ ಗೃಹಪ್ರವೇಶ ಕಾರ್ಯಕ್ರಮದಿಂದ ನಡೆದಿದೆ.
ಗೃಹಪ್ರವೇಶ ಕಾರ್ಯಕ್ರಮದ ಭಾಗವಾಗಿಯೇ ಜಿಲ್ಲೆಯ ಬಹುತೇಕ ಎಲ್ಲಾ ಪ್ರೌಢಶಾಲೆ ಮತ್ತು ಪದವಿ ಪೂರ್ವ ಹಾಗೂ ಪದವಿ ಕಾಲೇಜುಗಳ ಸುಮಾರು 2 ಲಕ್ಷ ಮಂದಿ ವಿದ್ಯಾರ್ಥಿಗಳಿಗೆ ಅಸ್ಪೃಶ್ಯತೆ ಆಚರಣೆ ಮಾಡುವುದಿಲ್ಲವೆಂಬ ಪ್ರತಿಜ್ಞಾವಿಧಿಯನ್ನು ಬೋಧಿಸಿದ್ದಾರೆ.
ಹಲವಾರು ಗ್ರಾಮಗಳಲ್ಲಿ ಸಹ ಭೋಜನ ಕಾರ್ಯಕ್ರಮವನ್ನು ಆಯೋಜಿಸಿ ಸಕಲ ಜಾತಿ ಜನಾಂಗದವನ್ನು ಒಟ್ಟಿಗೆ ಕೂರಿಸಿ ಊಟ ಮಾಡಿಸುವ ಕೆಲಸವನ್ನು ಹಮ್ಮಿಕೊಂಡಿದ್ದಾರೆ. ಕೇವಲ ಕೋಲಾರ ಜಿಲ್ಲೆ ಮಾತ್ರವಲ್ಲದೆ ಕೋಲಾರ ಜಿಲ್ಲೆಗೆ ಅಂಟಿಕೊಂಡಿರುವ ಆಂಧ್ರಪ್ರದೇಶದ ಚಿತ್ತೂರು ಹಾಗೂ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿಯೂ ಗೃಹಪ್ರವೇಶ ಅಸ್ಪೃಶ್ಯತಾ ನಿವಾರಣಾ ಕಾರ್ಯಕ್ರಮವನ್ನು ಅರಿವು ಶಿವಪ್ಪ ತಂಡದವರು ವಿಸ್ತರಿಸಿದ್ದಾರೆ. ಇಷ್ಟೆಲ್ಲಾ ಪ್ರಯತ್ನಗಳ ನಂತರವೂ ಅಸ್ಪೃಶ್ಯತೆ ನಿವಾರಣೆಯಾಗಿದೆಯಾ ಎನ್ನುವ ಪ್ರಶ್ನೆಗೆ ಅರಿವು ಶಿವಪ್ಪ, ಶೇ.99 ರಷ್ಟು ಅಸ್ಪೃಶ್ಯತೆ ಇಂದಿಗೂ ವಿವಿಧ ಆಯಾಮಗಳಲ್ಲಿ ಹಾಗೆಯೇ ಉಳಿದುಕೊಂಡಿದೆಯೆಂದು ತಮ್ಮ ವಾಸ್ತವಿಕ ಅನುಭವಗಳ ಮೂಲಕ ಅವರು ವಿವರಿಸುತ್ತಾರೆ.
ಮನೆಗಳಿಗೆ ಪ್ರವೇಶವಿಲ್ಲ: ಸ್ವಾತಂತ್ರ್ಯ ನಂತರ ದಲಿತರು ವಿವಿಧ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಸರಕಾರಿ ಕೆಲಸಗಳಲ್ಲಿ ತೊಡಗಿದ್ದರೂ ಆಯಾ ಗ್ರಾಮಗಳಲ್ಲಿ ಅವರು ಇಂದಿಗೂ ಅಸ್ಪೃಶ್ಯರಾಗಿಯೇ ಉಳಿದಿದ್ದಾರೆ. ಏಕೆಂದರೆ, ಪೂರ್ವಿಕರಂತೆಯೇ ದಲಿತರು ಸವರ್ಣೀಯರೊಂದಿಗೆ ಮುಕ್ತವಾಗಿ ಬೆರೆಯುತ್ತಿಲ್ಲ. ಅವರ ಮನೆಯನ್ನು ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ.
ದೇವಾಲಯ ಪ್ರವೇಶವಿಲ್ಲ: ಜಿಲ್ಲೆಯೊಂದರಲ್ಲಿಯೇ ಸಾವಿರಾರು ದೇವಾಲಯಗಳಿವೆ. ಈ ದೇವಾಲಯಗಳ ಪೈಕಿ 1300 ದೇವಾಲಯಗಳು ಮುಜರಾಯಿ ಧಾರ್ಮಿಕ ದತ್ತಿ ಇಲಾಖೆಗೆ ಸೇರುತ್ತದೆ. ಆದರೆ, ಗ್ರಾಮಾಂತರ ಪ್ರದೇಶದಲ್ಲಿರುವ ಇಂತ 1000 ದೇವಾಲಯಗಳಲ್ಲಿ ಇಂದಿಗೂ ದಲಿತರು ಪ್ರವೇಶ ಮಾಡುತ್ತಿಲ್ಲ. ದೇವಾಲಯದ ಮಹಾದ್ವಾರ ದಾಟಿ ಹೋಗಲು ದಲಿತರಿಗೆ ಇಂದಿಗೂ ಸಾಧ್ಯವಾಗಿಲ್ಲ. ಇದನ್ನು ತಾವು ಯಾವುದೇ ಗ್ರಾಮದಲ್ಲಿ ಸಾಬೀತುಪಡಿಸಲು ಸಿದ್ಧವೆನ್ನುತ್ತಾರೆ ಅರಿವು ಶಿವಪ್ಪ.
ಅಸ್ಪೃಶ್ಯತೆ ಬಗ್ಗೆ ಧ್ವನಿ ಎತ್ತುತ್ತಿಲ್ಲವೇಕೆ: ಬಹುತೇಕ ದಲಿತ ಮುಖಂಡರು ಹಿಂದಿನಂತೆ ಗ್ರಾಮಗಳಲ್ಲಿ ವಾಸವಾಗಿಲ್ಲ. ಅಸ್ಪೃಶ್ಯತೆಯ ಭೀಕರತೆ ಅವರಿಗೆ ಈಗ ನಿತ್ಯವೂ ಢಾಳಾಗಿ ಕಾಣಿಸುತ್ತಿಲ್ಲ. ಗ್ರಾಮಗಳಲ್ಲಿ ವಾಸವಾಗಿರುವ ದಲಿತರು ಈ ವ್ಯವಸ್ಥೆಗೆ ಹೊಂದಿಕೊಂಡು ಬಿಟ್ಟಿದ್ದಾರೆ. ಇದನ್ನು ಮೀರುವ ಪ್ರಯತ್ನವನ್ನು ಅವರು ಮಾಡುತ್ತಿಲ್ಲ. ಅಸ್ಪೃಶ್ಯತೆ ಇಲ್ಲವೇ ಎಂದು ವಾದಿಸುವ ಬದಲು ವಾಸ್ತವಾಂಶವನ್ನು ಅರ್ಥಮಾಡಿಕೊಂಡು ಸಮ ಸಮಾಜಕ್ಕೆ ಶ್ರಮಿಸಬೇಕಾಗಿರುವುದು ಪ್ರತಿಯೊಬ್ಬರು ಆಂದೋಲನ ರೂಪದಲ್ಲಿ ಮನಸ್ಸು ಮಾಡಿದರಷ್ಟೇ ಬದಲಾವಣೆ ಸಾಧ್ಯ ಎಂದು ಅರಿವು ಶಿವಪ್ಪ ಅಭಿಪ್ರಾಯಪಡುತ್ತಾರೆ.
ಗಣರಾಜ್ಯೋತ್ಸವ ಸಹ ಭೋಜನ
ಗೃಹ ಪ್ರವೇಶ ಸಮಿತಿಯು 70 ನೇ ಗಣರಾಜ್ಯೋತ್ಸವವನ್ನು ವಿಭಿನ್ನವಾದ ಕಾರ್ಯಕ್ರಮದ ಮೂಲಕ ಆಚರಿಸಲು ಸಿದ್ಧತೆ ನಡೆಸಿದೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಪುಲಗೂರಕೋಟೆ ಸಮೀಪದ ಪಿ.ಚನ್ನಯ್ಯವಾರಿಪಲ್ಲಿಯಲ್ಲಿ ಗಣರಾಜ್ಯೋತ್ಸವದ ಸಹ ಭೋಜನ ಕಾರ್ಯಕ್ರಮವನ್ನು ಸ್ಪೀಕರ್ ರಮೇಶ್‌ಕುಮಾರ್ ನೇತೃತ್ವದಲ್ಲಿಯೇ ಹಮ್ಮಿಕೊಂಡಿದೆ.
ಪರಿಸ್ಥಿತಿ ಬದಲಾಗಿದ್ದೆಲ್ಲಿ
ಅಸ್ಪೃಶ್ಯತೆಯ ಆಚರಣೆ ನಗರ ಮತ್ತು ಪಟ್ಟಣ ಪ್ರದೇಶದ ದೇವಾಲಯಗಳನ್ನು ಅಷ್ಟಾಗಿ ಬಾಧಿಸುತ್ತಿಲ್ಲ. ನಗರ, ಪಟ್ಟಣ ಪ್ರದೇಶಗಳಲ್ಲಿ ವಾಸವಾಗಿರುವ ಅಧಿಕಾರಿ, ರಾಜಕಾರಣಿ ದಲಿತರು ಬೇರೆ ಯಾವುದೋ ಗ್ರಾಮಕ್ಕೆ ತೆರಳಿದಾಗ ಅಲ್ಲಿನ ಸವರ್ಣೀಯರು ದೇವಾಲಯ ಮತ್ತು ಮನೆಗಳಿಗೆ ಪ್ರವೇಶ ನೀಡುತ್ತಿದ್ದಾರೆ. ಇದಕ್ಕೆ ಆ ದಲಿತರ ಸ್ಥಾನಮಾನಗಳೇ ಕಾರಣವಾಗುತ್ತದೆ. ಆದರೆ, ಅದೇ ಗ್ರಾಮದ ದಲಿತರು ಎಷ್ಟೇ ಸ್ಥಾನಮಾನ ಹೊಂದಿದ್ದರೂ ದೇಶ ಸ್ವಾತಂತ್ರ್ಯವಾಗಿ ಏಳು ದಶಕಗಳು ಕಳೆದರೂ ತಮ್ಮದೇ ಗ್ರಾಮದ ದೇವಾಲಯಗಳನ್ನು ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ.
ಕೆ.ಎಸ್.ಗಣೇಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kanguva: 10 ಸಾವಿರಕ್ಕೂ ಹೆಚ್ಚಿನ ಸ್ಕ್ರೀನ್‌ನಲ್ಲಿ ಅದ್ಧೂರಿಯಾಗಿ ರಿಲೀಸ್ ಆಗಲಿದೆ ʼಕಂಗುವʼ
Urwa: ಬಾಯ್ದೆರೆದ ಕಾಂಕ್ರೀಟ್ ಚೇಂಬರ್‌ಗಳಿಗೆ ಬಿತ್ತು ಮುಚ್ಚಳ
Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್: ಸಿದ್ದರಾಮಯ್ಯ
Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ
Karkala: ದುರ್ಗಾ ಗ್ರಾಮ ಪಂಚಾಯತ್; ರಸ್ತೆ ಸಂಪೂರ್ಣ ದುರವಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.