Kolar: ಕೂಲಿ ಕುಟುಂಬದ ಅಂಜುಲಾಗೆ 12 ಚಿನ್ನದ ಪದಕ
Team Udayavani, Feb 13, 2024, 3:47 PM IST
ಕೋಲಾರ: ತಾಲೂಕಿನ ಕೋಟಿಗಾನಹಳ್ಳಿಯ ಕೂಲಿ ಕುಟುಂಬದ ಬಾಲೆ ಕೋಲಾರದ ಆದಿಮಕ್ಕೆ ಆಗಮಿಸಿ, ಅಮೇರಿಕಾದ ಕೊಲಂಬಿಯಾಕ್ಕೆ ತೆರಳಿ ಮೆಚ್ಚುಗೆ ಪಡೆದು, ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಮಾಸ್ಟರ್ ಆಫ್ ಪರ್ಫಾಮಿಂಗ್ ಆರ್ಟ್ಸ್ ನಲ್ಲಿ 12 ಚಿನ್ನದ ಪದಕ ಪಡೆದಿದ್ದಾಳೆ. ಮಕ್ಕಳ ಮನಸ್ಥಿತಿಗೆ ರಂಗಭೂಮಿ ಮೂಲಕ ಚಿಕಿತ್ಸೆ ನೀಡುವ ವಿಷಯದಲ್ಲಿ ಪಿಎಚ್‌ಡಿ ಮಾಡುವ ಗುರಿ ಇಟ್ಟುಕೊಂಡಿರುವುದು ಒಂದು ಸಾಹಸಗಾಥೆಯಾಗಿದ್ದು, ಇಂಥದ್ದೊಂದು ಸಾಹಸ ಮಾಡಿರುವ ಯುವತಿಯೇ ಕೋಟಿಗಾನಹಳ್ಳಿಯ ಅಂಜುಲ.
ಕೂಲಿ ಕುಟುಂಬ: ಕೋಟಿಗಾನಹಳ್ಳಿ ಗ್ರಾಮದ ಕೂಲಿ ಕೆಲಸದ ದಂಪತಿಗಳಾದ ರತ್ನಮ್ಮ, ವೆಂಕಟಸ್ವಾಮಿಯ ನಾಲ್ವರು ಮಕ್ಕಳ ಪೈಕಿ ಎರಡನೇ ಮಗಳೇ ಅಂಜುಲ. ಕೋಟಿಗಾನಹಳ್ಳಿ ರಾಮಯ್ಯ ತನ್ನದೇ ಗ್ರಾಮದಲ್ಲಿ ಆದಿಮದಿಂದ ನಡೆಸಿದ್ದ ಮಕ್ಕಳ ರಂಗ ಶಿಬಿರಕ್ಕೆ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವಾಗಲೇ ಸೇರಿಕೊಂಡಿದ್ದರು. ಹೀಗೆ, ರಂಗಪ್ರವೇಶ ಮಾಡಿದ ಅಂಜುಲ “ಕಾಗೆ ಕಣ್ಣು, ಇರುವೆ ಬಲ’ ನಾಟಕದಲ್ಲಿ ಅಭಿನಯಿಸಿ ರಂಗಕರ್ಮಿಗಳ ಕಣ್ಣಿಗೆ ಬಿದ್ದಿದ್ದರು. ಇದರಿಂದ ಆದಿಮ ಶ್ರೀನಿವಾಸಪುರ ಭೈರವೇಶ್ವರ ಶಾಲೆಯಲ್ಲಿ ಆಯೋಜಿಸಿದ್ದ ಮತ್ತೂಂದು ಮಕ್ಕಳ ರಂಗ ಶಿಬಿರಕ್ಕೂ ಆಯ್ಕೆಯಾಗಿದ್ದರು. ಅಲ್ಲಿಯೂ “ಯಾರು ದೊಡ್ಡವರು’, ಕಿಂದರಿಜೋಗಿ ನಾಟಕದಲ್ಲಿ ಅಭಿನಯಿಸಿ ಸೈ ಎನಿಸಿಕೊಂಡರು.
ಆದಿಮ ಪ್ರವೇಶ: ಎರಡೂ ರಂಗ ಶಿಬಿರಗಳಲ್ಲಿ ಅಂಜುಲಾರ ಪ್ರತಿಭೆ ಗಮನ ಸೆಳೆದಿತ್ತು. ಆದಿಮ ರಂಗ ಶಿಬಿರಕ್ಕೆ ಹೀಗೆ ಪ್ರವೇಶ ಪಡೆದುಕೊಂಡರು. ಪಿಯುಸಿ ವ್ಯಾಸಂಗ ಮಾಡುತ್ತಿದ್ದ ವೇಳೆ ಆದಿಮ ಚುಕ್ಕಿಮೇಳದಲ್ಲಿ ತನ್ನನ್ನು ತೊಡಗಿಸಿಕೊಂಡರು. ಚುಕ್ಕಿಮೇಳದ ನಂತರ ಹಿರಿಯರ ತಂಡದಲ್ಲಿ ಮತ್ತೇ ಏಕಲವ್ಯ ಹಾಗೂ ಏಕಲವ್ಯ ಉವಾಚ ನಾಟಕಗಳಲ್ಲಿ ಅಭಿನಯಿಸಿದರು. ಏಕಲವ್ಯ ಉವಾಚ ನಾಟಕವು ಅಂತಾರಾಷ್ಟ್ರೀಯ ನಾಟಕೋತ್ಸವಕ್ಕೆ ಆಯ್ಕೆಯಾಗಿತ್ತು.
ಪಿಯುಸಿ ಪಾಸ್: 2009ರಲ್ಲಿ ಪಿಯುಸಿ ಫೇಲ್ ಆಗಿದ್ದ ಅಂಜುಲ ಆದಿಮದಲ್ಲೇ ರಂಗಭೂಮಿ ನಂಟಿನಲ್ಲಿ ಇದ್ದರು. ಆಗ ಪಿಯುಸಿ ಪಾಸ್ ಆಗಬೇಕೆಂಬ ಅಚಲ ನಿರ್ಧಾರ ಗುರಿ ತಲುಪಲು ನೆರವಾಗಿ ಮಾರ್ಗದರ್ಶನ ನೀಡಿದವರು ಬೆಂಗಳೂರು ವಿವಿ ಪ್ರೊಫೆಸರ್ ಆಗಿದ್ದ ಡೊಮಿನಿಕ್. ಅವರು ತೋರಿದ ವಿದ್ಯೆಯ ಹಾದಿಯಲ್ಲಿ 2013ರಲ್ಲಿ ಪಿಯುಸಿ ಪಾಸ್ ಆಗಿದ್ದರು. ಆನಂತರ ಅಂಜುಲ ವಿದ್ಯಾಭ್ಯಾಸದಲ್ಲಿ ಹಿಂದೆ ತಿರುಗಿ ನೋಡಿದ್ದಿಲ್ಲ.
ಬಳ್ಳಾರಿ ವಿವಿವರೆಗೂ: ಪಿಯುಸಿ ತೇರ್ಗಡೆ ನಂತರ ಅಂಜುಲ ಬೆಂಗಳೂರಿಗೆ ತೆರಳಿ ಸರ್ಕಾರಿ ಆರ್ಟ್ಸ್ ಕಾಲೇಜಿನಲ್ಲಿ ಹಾಸ್ಟೆಲ್‌ನಲ್ಲಿದ್ದುಕೊಂಡೇ ಪತ್ರಿಕೋದ್ಯಮ, ಸೈಕಾಲಜಿ ಮತ್ತು ರಾಜಕೀಯ ಶಾಸ್ತ್ರದಲ್ಲಿ ಪದವಿಯನ್ನು ಫಸ್ಟ್ ಕ್ಲಾಸ್‌ನ ಅಂಕಗಳೊಂದಿಗೆ ಪೂರ್ಣಗೊಳಿಸಿದರು. ಮೂರು ವರ್ಷಗಳ ಪದವಿ ಪೂರ್ಣಗೊಂಡ ನಂತರ ಪತ್ರಿಕೋದ್ಯಮದಲ್ಲಿ ಎಂ.ಎ ಪದವಿ ಪಡೆದುಕೊಂಡರು. ಸೈಕಾಲಜಿ ಕೌನ್ಸಿಲಿಂಗ್ ಎಂಎಸ್‌ಸಿ ಕೋರ್ಸ್ ಮೊದಲ ರ್‍ಯಾಂಕ್‌ನಲ್ಲಿ ಮುಗಿಸಿದ್ದರು. ಸೈಕಾಲಜಿ ವಿಷಯದಲ್ಲಿ ವಿಶೇಷ ಆಸಕ್ತಿ ಮೂಡಿತು. ತಾನು ಬೆಳೆದು ಬಂದ ರಂಗಭೂಮಿ ಮತ್ತು ಸೈಕಾಲಜಿ ವಿಷಯದಲ್ಲಿ ಉನ್ನತ ಅಧ್ಯಯನ ಮಾಡಬೇಕೆಂಬ ಉದ್ದೇಶದಿಂದಲೇ ಬಳ್ಳಾರಿ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಮಾಸ್ಟರ್ ಆಫ್ ಪರ್ಫಾಮಿಂಗ್ ಆರ್ಟ್ಸ್ ವಿಷಯದಲ್ಲಿ ಎಂ.ಎ ಮಾಡಲು ಸೇರ್ಪಡೆಯಾದರು. ಅಲ್ಲಿನ ಬಿಸಿಲು, ಊಟದ ಸಮಸ್ಯೆ ಇತ್ಯಾದಿಗಳ ನಡುವೆಯೂ ಅಂಜುಲ ವಾಪಾಸಾಗದೆ ಛಲ ತೋರಿ ಮಾಸ್ಟರ್ ಪದವಿ ಕೋರ್ಸ್ ಪೂರ್ಣಗೊಳಿಸಿದರು.
ಘಟಿಕೋತ್ಸವದಲ್ಲಿ ಪದವಿ ಸ್ಪೀಕಾರ: ಎರಡು ವರ್ಷಗಳ ಅಧ್ಯಯನದಲ್ಲಿ ರಂಗಭೂಮಿಯ ತನ್ನ ಅನುಭವವನ್ನು ಧಾರೆ ಎರೆದರು. ಸಹ ವಿದ್ಯಾರ್ಥಿಗಳಿಗೆ ಡೊಳ್ಳು ಕಲಿಸುತ್ತಾ, ನಟಿಯಾಗಿ, ನಿರ್ದೇಶಕಿಯಾಗಿ ಸ್ಕಿಟ್, ನಾಟಕಗಳ ಮೂಲಕ ತನ್ನ ಪ್ರತಿಭೆಯನ್ನು ತೋರಿಸಿದ್ದರು. 2 ವರ್ಷಗಳ ಎಂಎ ಆಫ್ ಪರ್ಫಾಮಿಂಗ್ ಆರ್ಟ್ಸ್ನಲ್ಲಿ ತೋರಿದ ಪ್ರತಿಭೆಗಾಗಿ 12 ಚಿನ್ನದ ಪದಕ ಪಡೆದುಕೊಂಡಿದ್ದರು. ಅಂತಿಮ ಫಲಿತಾಂಶ ಪ್ರಕಟವಾಗಿದ್ದು, ಮೊದಲ ರ್‍ಯಾಂಕ್ ಗಿಟ್ಟಿಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ. ಮಾರ್ಚ್‌ನಲ್ಲಿ ನಡೆಯುವ ಘಟಿಕೋತ್ಸವದಲ್ಲಿ ಪದವಿ ಸ್ಪೀಕರಿಸಲಿದ್ದಾರೆ.
ಮುಂದೇನು?: ವಿವಿಯಲ್ಲಿ ಚಿನ್ನದ ಪದಕಗಳೊಂದಿಗೆ ಮೊದಲ ರ್‍ಯಾಂಕ್ ಗಿಟ್ಟಿಸಿಕೊಂಡ ಸಾಧನೆ ಮಾಡಿರುವ ಅಂಜುಲ ಮುಂದೆ ತನ್ನ ಇಷ್ಟದ ರಂಗಭೂಮಿ ಅನುಭವ ಮತ್ತು ಸೈಕಾಲಜಿ ವಿಷಯದ ಪರಿಣಿತಿಯನ್ನು ಕ್ರೂಢೀಕರಿಸಿ ಆಧುನಿಕ ಯುಗದ ಜೀವನದಲ್ಲಿ ಮಕ್ಕಳ ಮನಸ್ಥಿತಿ ಮೇಲಿರುವ ಒತ್ತಡವನ್ನು ರಂಗಭೂಮಿ ಚಟುವಟಿಕೆಗಳ ಮೂಲಕ ಚಿಕಿತ್ಸೆ ನೀಡುವ ವಿಷಯದಲ್ಲಿ ಪಿಎಚ್‌ಡಿ ಮಾಡುವ ಗುರಿ ಹೊಂದಿದ್ದಾರೆ. ಕೂಲಿ ಕುಟುಂಬದ ಬಾಲೆಯಾಗಿ ಹಳ್ಳಿ ಮಟ್ಟದಲ್ಲಿಯೇ ಕಳೆದು ಹೋಗಬಹುದಾಗಿದ್ದ ತಮ್ಮ ಜೀವನದಲ್ಲಿ ರಂಗಭೂಮಿ ಮೂಲಕ ಪಡೆದುಕೊಂಡ ಆತ್ಮವಿಶ್ವಾಸವನ್ನು ತನ್ನಂತೆ ಕಷ್ಟ ಪಡುತ್ತಿರುವ ಪ್ರತಿ ಮಗುವಿಗೂ ಸಿಗುವಂತಾಗಬೇಕು ಎಂಬುದೇ ಅವರ ಜೀವನದ ಹೆಬ್ಬಯಕೆಯಾಗಿದೆ.
ಒಂದು ತಿಂಗಳ ಅಮೇರಿಕಾ ಪ್ರವಾಸ ನೀಡಿದ ಆತ್ಮಸ್ಥೈರ್ಯ :
ಕೋಟಿಗಾನಹಳ್ಳಿಯ ಬಾಲೆ ಅಮೇರಿಕಾದ ಕೊಲಂಬಿಯಾದ ನಾಟಕೋತ್ಸವಕ್ಕೆ ನಟಿಯಾಗಿ ತೆರಳಿದ್ದರು. ನಾಟಕದಲ್ಲಿ ಶಕ್ತಿ ಪಾತ್ರದಲ್ಲಿ ಮಿಂಚುತ್ತಿದ್ದರು. ಅಲ್ಲಿ ಒಂದು ತಿಂಗಳ ಕಾಲ ವಿವಿಧೆಡೆ ನಾಟಕ ಅಭಿನಯಿಸಿ ತಂಡದೊಂದಿಗೆ ಗಮನ ಸೆಳೆದಿದ್ದರು. ಆದಿಮ ತರಬೇತಿ, ಅಮೇರಿಕಾದ ಪ್ರವಾಸದ ಅನುಭವ ಅಂಜುಲಾರಲ್ಲಿ ಅಪರಿಮಿತ ಆತ್ಮವಿಶ್ವಾಸವನ್ನು ತುಂಬಿತ್ತು. ಹೀಗೆ, ನಟಿಯಾಗಿ ಆತ್ಮವಿಶ್ವಾಸವನ್ನು ತುಂಬಿಕೊಂಡ ಅಂಜುಲ ರಂಗ ಭೂಮಿಯಲ್ಲಿ ಏನಾದರೂ ಸಾಧನೆ ಮಾಡಬೇಕು ನಿರ್ಧರಿಸಿಕೊಂಡರು. ಜೊತೆಗೆ ಸ್ಥಗಿತಗೊಂಡಿದ್ದ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಲು ತೀರ್ಮಾನಿಸಿದ್ದರು.
ನಾಟಕಕಾರ ಕೋಟಿಗಾನಹಳ್ಳಿ ರಾಮಯ್ಯ ತಮ್ಮನ್ನು ಆದಿಮಗೆ ಸೇರಿಸಿಕೊಂಡರು. ಆದಿಮದ ಹ.ಮಾ.ರಾಮಚಂದ್ರ, ಇತರರು ತಮ್ಮನ್ನು ಉತ್ತೇಜಿಸಿದರು. ಡೊಮಿನಿಕ್ ಸರ್ ತಮಗೆ ವಿದ್ಯಾಭ್ಯಾಸದ ಹಾದಿ ತೋರಿದರು. ರಂಗಭೂಮಿ ತಮಗೆ ಸಾಧಿಸುವ ಆತ್ಮವಿಶ್ವಾಸ ಮೂಡಿಸಿತು. ಅನಕ್ಷರಸ್ಥ ತಂದೆ-ತಾಯಿ ಪ್ರತಿ ಹಂತದಲ್ಲೂ ಪ್ರೋತ್ಸಾಹಿಸಿದ್ದು, ಇದರ ಫಲವಾಗಿ ರಂಗಭೂಮಿಯಲ್ಲಿ ಸಾಧನೆ ತೋರಿ, ವಿದ್ಯಾಭ್ಯಾಸದಲ್ಲಿ ಚಿನ್ನದ ಪದಕ ಪಡೆದಿದ್ದೇನೆ.-ಅಂಜುಲ ಆದಿಮ ನಟಿ, ಬಳ್ಳಾರಿ ವಿವಿ ಚಿನ್ನದ ಪದಕಗಳ ಸಾಧಕಿ
ರಂಗಭೂಮಿ ಮೂಲಕ ಮಕ್ಕಳಲ್ಲಿ ಆದಮ್ಯ ಆತ್ಮವಿಶ್ವಾಸ ಮೂಡಿಸಿ ಅವರ ಜೀವನದಲ್ಲಿ ಮಹತ್ ಸಾಧನೆ ಮಾಡಿಸುವುದು ಆದಿಮ ರಂಗ ಪ್ರಯೋಗಗಳ ಮುಖ್ಯ ಉದ್ದೇಶವಾಗಿತ್ತು. ಈಗ ಗ್ರಾಮೀಣ ಭಾಗದ ಕೂಲಿ ಕುಟುಂಬದ ಬಾಲೆ ಅಂಜುಲ ಜೀವನದ ಸಾಧನೆ ಗಮನಿಸಿದಾಗ ಆದಿಮ ತನ್ನ ಪ್ರಯೋಗದಲ್ಲಿ ಯಶಸ್ವಿಯಾಗಿದೆ ಎನಿಸುತ್ತಿದೆ. ಅಂಜುಲಾರನ್ನು ಆದಿಮ ಅಭಿನಂದಿಸುತ್ತದೆ. -ಹ.ಮಾ. ರಾಮಚಂದ್ರ, ಖಜಾಂಚಿ, ಆದಿಮ ಕೋಲಾರ
– ಕೆ.ಎಸ್.ಗಣೇಶ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.