2024ರೊಳಗೆ ಪ್ರತಿ ಮನೆಗೂ ನಲ್ಲಿ ಮೂಲಕ ನೀರು
Team Udayavani, Nov 9, 2021, 3:40 PM IST
ಕೋಲಾರ: ಗ್ರಾಮೀಣ ಪ್ರದೇಶದ ಪ್ರತಿ ಮನೆಗೂ 2024ರೊಳಗೆ ನಳದ ಮೂಲಕ ಶುದ್ಧ ನೀರು ಸರಬರಾಜು ಮಾಡುವ ಜಲಜೀವನ್ ಮಿಷನ್ ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ಅಗತ್ಯ ಕ್ರಿಯಾಯೋಜನೆ ತಯಾರಿಸುವಂತೆ ರಾಜ್ಯ ಕುಡಿಯುವ ನೀರು, ನೈರ್ಮಲ್ಯ ಇಲಾಖೆ ಆಯುಕ್ತ ಎಚ್.ಪಿ.ಪ್ರಕಾಶ್ ಸೂಚನೆ ನೀಡಿದರು.
ತಾಲೂಕಿನ ಅರಾಭಿಕೊತ್ತನೂರು ಗ್ರಾಮದ ಸೋಮನಾಥೇಶ್ವರ ಕಲ್ಯಾಣ ಮಂಟಪದಲ್ಲಿ ಜಿಪಂ, ಜಲಜೀವನ್ ಮಿಷನ್, ಸ್ವತ್ಛ ಭಾರತ ಮಿಷನ್ ಯೋಜನೆಗಳಡಿ ಗ್ರಾಮ ಕ್ರಿಯಾಯೋಜನೆ ತಯಾರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಕೇಂದ್ರ ಸರ್ಕಾರದ ಯೋಜನೆ ಇದಾಗಿದ್ದು, ಪ್ರತಿಯೊಬ್ಬರಿಗೂ 55 ಲೀಟರ್ ನೀರನ್ನು ಮನೆ ಬಾಗಿಲಿಗೆ ಒದಗಿಸುವ ಉದ್ದೇಶ ಹೊಂದಲಾಗಿದೆ. ಅದಕ್ಕೂ ಮುನ್ನಾ ಹಳ್ಳಿಯ ಪರಿಸ್ಥಿತಿ, ಹೀಗಿರುವ ನೀರಿನ ವ್ಯವಸ್ಥೆ ಗಮನಿಸಿ ಸಮರ್ಪಕ ಯೋಜನೆ ತಯಾರಿಸುವ ಮೂಲಕ ನೀರಿನ ಸಮಾನ ಹಂಚಿಕೆಗೆ ಕ್ರಮವಹಿಸಬೇಕಾಗಿದೆ ಎಂದು ತಿಳಿಸಿದರು.
365 ದಿನವೂ ನೀರು ಪೂರೈಕೆ: 2019ರಲ್ಲೇ ಜಲಜೀವನ ಮಿಷನ್ ಆರಂಭವಾಗಿದ್ದರೂ, ಆಗ ಪ್ರತಿ ಗ್ರಾಮಕ್ಕೆ ನೀರು ಒದಗಿಸುವ ಉದ್ದೇಶವಿತ್ತು, ಈಗ ಪ್ರತಿ ಮನೆಗೂ ನಳ ನೀರು ಒದಗಿಸುವ ಮೂಲಕ ಯಾರೇ ಆಗಲಿ ನೀರಿಗಾಗಿ ದೂರ ಹೋಗಿ ಬರುವುದನ್ನು ತಪ್ಪಿಸುವುದಾಗಿದೆ. ವರ್ಷದ 365 ದಿನವೂ ನಳ ನೀರು ಸರಬರಾಜು ಆಗಬೇಕು, ಹಳ್ಳಿಗಳ ಪರಿಸ್ಥಿತಿ ಅವಲೋಕಿಸಿ ಬೇಡಿಕೆಗೆ ಅನುಗುಣವಾಗಿ ಕ್ರಿಯಾಯೋಜನೆ ರೂಪಿಸಬೇಕು ಎಂದು ತಾಕೀತು ಮಾಡಿದರು.
ಈ ಯೋಜನೆಯಡಿ ಕೊಳವೆ ಬಾವಿ, ನೀರಿನ ಸಂಪರ್ಕ, ಓವರ್‌ಹೆಡ್ ಟ್ಯಾಂಕ್ ನಿರ್ಮಾಣ ಎಲ್ಲವೂ ಸೇರಿದ್ದು, ಒಟ್ಟಾರೆಯಾಗಿ ಪ್ರತಿ ಮನೆಗೂ ನೇರವಾಗಿ ನೀರು ಒದಗಿಸುವುದಾಗಿದೆ ಎಂದು ತಿಳಿಸಿದರು.
ಮೀಟರ್ ಅಳವಡಿಕೆಗೆ ಜನರ ವಿರೋಧ: ನಳ ನೀರು ಪ್ರತಿಮನೆಗೂ ಒದಗಿಸಿ ಮೀಟರ್ ಅಳವಡಿಸುವ ಕುರಿತು ಆಯುಕ್ತ ಪ್ರಕಾಶ್ ಪ್ರಸ್ತಾಪಿಸಿದಾಗ ಅದಕ್ಕೆ ಗ್ರಾಪಂ ಸದಸ್ಯ ಎ.ಎಸ್.ನಂಜುಂಡಗೌಡ ವಿರೋಧ ವ್ಯಕ್ತಪಡಿಸಿದರು.
ತೆರಿಗೆಗೆ ಅಂಜಿ ನೀರು ಪಡೆಯಲ್ಲ: ನಂಜುಂಡಗೌಡ ಮಾತನಾಡಿ, ಅರಾಭಿಕೊತ್ತನೂರು ಗ್ರಾಮದಲ್ಲಿ ಬೇಸಿಗೆಯಲ್ಲೂ ಇಲ್ಲಿನ ಎರಡು ಬಾವಿಗಳಲ್ಲಿ 5 ಅಡಿ ಆಳದಲ್ಲೇ ಶುದ್ಧ ಕುಡಿಯುವ ನೀರು ಲಭ್ಯವಿದೆ, ಇಂತಹ ಸಂದರ್ಭದಲ್ಲಿ ಮೀಟರ್ ಅಳವಡಿಸಿದ್ದೇ ಆದಲ್ಲಿ ತೆರಿಗೆಗೆ ಅಂಜಿ ಅನೇಕರು ಈ ಯೋಜನೆಯ ಪ್ರಯೋಜನ ಪಡೆಯಲು ಮುಂದಾಗುವುದಿಲ್ಲ ಮತ್ತು ಗ್ರಾಮದಲ್ಲಿ ಶೇ.60 ಪರಿಶಿಷ್ಟರು, ಬಡವರಿದ್ದಾರೆ ಎಂದು ತಿಳಿಸಿದರು.
ಇದಕ್ಕೆ ಉತ್ತರಿಸಿದ ಆಯುಕ್ತರು, ಮೀಟರ್ ಅಳವಡಿಕೆ ಉದ್ದೇಶ ಎಷ್ಟು ನೀರು ಬಳಸಲಾಗುತ್ತಿದೆ ಎಂಬುದನ್ನು ಅರಿಯಲು ಮಾತ್ರ, ತೆರಿಗೆ ನಿರ್ಧಾರ ಆಯಾ ಗ್ರಾಮ ಪಂಚಾಯಿತಿಗೆ ಸೇರಿದ್ದು, ಮೀಟರ್ ಅಳವಡಿಕೆಗೂ ನೀವೇ ನಿರ್ಧರಿಸಿ ಎಂದು ಸೂಚಿಸಿದರು. ಬೋರ್‌ವೆಲ್‌ಗಳ ರೀಚಾರ್ಜ್‌ಗೆ ಸಲಹೆ: ಕುಡಿಯುವ ನೀರಿನ ಬೋರ್‌ವೆಲ್‌ಗಳ ರೀಚಾರ್ಜ್‌ಗೆ ಕ್ರಮವಹಿಸಿ, ಕೆ.ಸಿ. ವ್ಯಾಲಿ ನೀರು ನೇರವಾಗಿ ಕೊಳವೆಬಾವಿಗೆ ಹೋಗುವಂತಿದ್ದರೆ ಅಂತಹ ನೀರನ್ನು ಬಳಸದಿರಿ ಎಂದು ಆಯುಕ್ತರು ಸೂಚಿಸಿದರು.
ಓವರ್‌ಹೆಡ್ ಟ್ಯಾಂಕ್ ನಿರ್ಮಿಸಿ: ಬೆತ್ತನಿ ಗ್ರಾಮದಲ್ಲಿ 80 ಮನೆಗಳಿದ್ದು, ಅಲ್ಲಿ ಓವರ್ ಹೆಡ್‌ಟ್ಯಾಂಕ್ ಇಲ್ಲ ಎಂಬ ದೂರಿಗೆ ಸ್ಪಂದಿಸಿದ ಆಯುಕ್ತರು, ಅಲ್ಲಿ 10 ಸಾವಿರ ಲೀಟರ್ ಟ್ಯಾಂಕ್ ನಿರ್ಮಿಸಲು ಸೂಚಿಸಿ, ಅರಾಭಿಕೊತ್ತನೂರು ಗ್ರಾಮದಲ್ಲಿನ ಲಕ್ಷ ಲೀಟರ್ ಟ್ಯಾಂಕ್ ಸುಸ್ಥಿತಿಯಲ್ಲಿದೆ, ಉಳಿದ 25 ಸಾವಿರ ಲೀಟರ್ ಟ್ಯಾಂಕ್ ಶಿಥಿಲಗೊಂಡಿದ್ದು, ಅದನ್ನು ತೆಗೆದು ಹೊಸ ಟ್ಯಾಂಕ್ ನಿರ್ಮಿಸಲು ಸೂಚಿಸಿದರು.
ಕ್ಲೋರಿನೇಷನ್ ಯೂನಿಟ್ ಕಡ್ಡಾಯ: ಜಲಜೀವನ್ ಮಿಷನ್ ಯೋಜನೆಯಡಿ ಯಾವುದೇ ಗ್ರಾಮದಲ್ಲಿ ನೀರು ಒದಗಿಸುವುದಾದರೆ ಅಲ್ಲಿ ಕ್ಲೋರಿನೇಷನ್ ಯುನಿಟ್ ಮಾಡಿ, ನೀರಿನ ಶುದ್ಧತೆ ಕುರಿತು ಕಾಲಕಾಲಕ್ಕೆ ಗಮನಹರಿಸಬೇಕು ಎಂದು ಸೂಚಿಸಿದರು. ಕಾರ್ಯಕ್ರಮಕ್ಕೂ ಮೊದಲು ಅರಾಭಿಕೊತ್ತನೂರು ಗ್ರಾಮದಲ್ಲಿನ ಕುಡಿಯುವ ನೀರಿನ ಮೂಲ, ಸರಬರಾಜು ಕೊಳವೆ ಮಾರ್ಗ, ಟ್ಯಾಂಕ್ ಮತ್ತಿತರ ಮಾಹಿತಿ ಇರುವ ನಕ್ಷೆಯನ್ನು ಬರೆದಿದ್ದು, ಅದರ ಕುರಿತು ಗ್ರಾಮದ ಸಾಕ್ಷರತಾ ಪ್ರೇರಕ ರಾಮಚಂದ್ರಪ್ಪ ವಿವರಿಸಿದರು.
1 ಸಾವಿರ ಗ್ರಾಮದಲ್ಲಿ ಸೂಕ್ತ ನೀರಿನ ವ್ಯವಸ್ಥೆ : ಜಿಪಂ ಉಪಕಾರ್ಯದರ್ಶಿ ಸಂಜೀವಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯಲ್ಲಿ 1,980 ಹಳ್ಳಿಗಳಿದ್ದು, ಇದರಲ್ಲಿ 1,680 ಕಂದಾಯ ಗ್ರಾಮಗಳಾಗಿವೆ ಎಂದು ತಿಳಿಸಿ, ಇದರಲ್ಲಿ ಈಗಾಗಲೇ 1 ಸಾವಿರ ಗ್ರಾಮಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಸಮರ್ಪಕವಾಗಿದೆ ಎಂದು ತಿಳಿಸಿದರು.
ಗ್ರಾಪಂ ಅಧ್ಯಕ್ಷ ರಾಜಣ್ಣ ಅಧ್ಯಕ್ಷತೆ ವಹಿಸಿದ್ದು, ಸಭೆಯಲ್ಲಿ ಜಿಪಂ ಸಿಇಒ ಉಖೇಶ್ ಕುಮಾರ್, ಕುಡಿಯುವ ನೀರು, ನೈರ್ಮಲ್ಯ ಇಲಾಖೆ ಅಧೀಕ್ಷಕ ಅಭಿಯಂತರ ನಾಗರಾಜ್, ನೀರು, ನೈರ್ಮಲ್ಯ ಸಮಿತಿ ರಾಜ್ಯ ನಿರ್ದೇಶಕ ಪರಮೇಶ್ವರ ಹೆಗಡೆ, ಗ್ರಾಪಂ ಉಪಾಧ್ಯಕ್ಷೆ ಶಾಂತಮ್ಮ, ಯೋಜನಾ ನಿರ್ದೇಶಕಿ ಶೃತಿ, ಇಇ ಮಂಜುನಾಥ್, ಎಇಇಗಳಾದ ಶೇಷಾದ್ರಿ, ನಾರಾಯಣಸ್ವಾಮಿ, ರವಿಚಂದ್ರ, ಶ್ರೀನಿವಾಸ್, ಸುಬ್ರಮಣಿ, ವಿವಿಧ ತಾಲೂಕುಗಳ ಇಒಗಳಾದ ಬಾಬು, ಕೃಷ್ಣಪ್ಪ, ಆನಂದ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.