World Tourism Day: ಜಿಲ್ಲೆ ಪ್ರವಾಸೋದ್ಯಮ ಹೆಚ್ಚಳಕ್ಕೆ ಪ್ರಚಾರ
Team Udayavani, Sep 27, 2024, 3:30 PM IST
ಕೋಲಾರ: ವಿಶ್ವ ಪ್ರವಾಸೋದ್ಯಮ ದಿನವನ್ನು ಪ್ರತಿವರ್ಷ ಸೆ.27ರಂದು ಆಚರಿಸಲಾಗುತ್ತಿದ್ದು, ಈ ಬಾರಿ ಪ್ರವಾಸೋದ್ಯಮ ಮತ್ತು ಶಾಂತಿ ಧ್ಯೇಯವಾಕ್ಯ ದೊಂದಿಗೆ ಜಗತ್ತಿನಾದ್ಯಂತ ಆಚರಿಸಲಾಗುತ್ತಿದೆ.
ಕೋಲಾರ ಜಿಲ್ಲೆಯಲ್ಲಿಯೂ ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶವಿದ್ದರೂ, ಈವರೆಗೂ ನಿರೀಕ್ಷಿತ ಗುರಿ ಯನ್ನು ಮುಟ್ಟುವಲ್ಲಿ ಸಫಲವಾಗಿಲ್ಲ. ವಿಶ್ವ ಪ್ರವಾಸೋದ್ಯಮ ದಿನವನ್ನು ಕೋಲಾರ ನಗರದ ಐತಿಹಾಸಿಕ ಸೋಮೇಶ್ವರ ದೇವಾಲಯದಲ್ಲಿ ಸೆ.27ರಂದು ಬೆಳಗ್ಗೆ 8 ಗಂಟೆಗೆ ವಿವಿಧ ಕಾರ್ಯಕ್ರಮಗಳ ಮೂಲಕ ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ ದೇವಾಲಯದ ಆವರಣದಲ್ಲಿ ಯೋಗ ಪ್ರದರ್ಶನ, ಜಿಲ್ಲೆಯ ಪ್ರವಾಸಿ ತಾಣಗಳ ಕುರಿತು ಪರಿಚಯ, ಶಾಂತಿಗಾಗಿ ನಡಿಗೆ, ಪ್ರವಾಸೋದ್ಯಮ ಕುರಿತು ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆ ಹೊರ ತಂದಿರುವ ಕಿರುಪುಸ್ತಕವನ್ನು ಸಾರ್ವಜನಿಕರಿಗೆ ವಿತರಿಸಲಾಗುವುದು.
ಕೋಲಾರ ಇತಿಹಾಸ: ಕೋಲಾರ ಶತಮಾನಗಳ ಇತಿಹಾಸವನ್ನು ಹೊಂದಿದೆ. ಬಾಣರು, ಗಂಗರು, ನೊಳಂ ಬರು, ರಾಷ್ಟ್ರಕೂಟರು, ಚೋಳರು, ವಿಜಯ ನಗರ, ಮೈಸೂರು ಅರಸರ ಹೆಜ್ಜೆ ಗುರುತು ಹೊಂದಿದೆ. ಭೌಗೋಳಿಕವಾಗಿ ಕಲ್ಲು ಬೆಟ್ಟಗುಡ್ಡಗಳಿಂದ ಆವೃತವಾಗಿ ತಮಿಳುನಾಡು, ಆಂಧ್ರಪ್ರದೇಶದ ಗಡಿಯನ್ನು ಹೊಂದಿದ್ದು, ಚೆನ್ನೈ ಮತ್ತು ಬೆಂಗಳೂರು ಮಹಾನಗರಗಳ ನಡುವೆ ನೆಲೆಗೊಂಡಿದೆ. ಪೂರ್ವ ಹಾಗೂ ಬೃಹತ್ ಶಿಲಾಯುಗ ಸಂಸ್ಕೃತಿಗಳ ನೆಲೆಬೀಡಾ ಗಿದೆ. ಪ್ರವಾಸೋದ್ಯಮಕ್ಕೆ ವಿಫುಲವಾದ ಅವಕಾಶವನ್ನು ಹೊಂದಿದೆ. 5-6ನೇ ಶತಮಾನದಲ್ಲಿ ನಿರ್ಮಾಣ ಗೊಂಡಿರುವ ಸೋಮೇಶ್ವರ, ಕೋಲಾರಮ್ಮ, ಆವಣಿ ರಾಮಲಿಂಗೇಶ್ವರ ಸ್ವಾಮಿ ಸೇರಿದಂತೆ ವಿವಿಧ ದೇವಾಲಯಗಳು ಐತಿಹಾಸಿಕ ಮಹತ್ವದೊಂದಿಗೆ ಭಕ್ತಿಯನ್ನು ಸಾರುತ್ತಿವೆ. ಬೆಟ್ಟಗುಡ್ಡಗಳ ನೈಸರ್ಗಿಕ ಪರಿಸರ, ಕೆರೆ, ಕುಂಟೆ, ಜಲಾಶಯಗಳು, ವಿಶ್ವದ ಆಳದ ಚಿನ್ನದ ಗಣಿಗಳಿಗೆ ಚಾರಿತ್ರಿಕ ಐತಿಹ್ಯವಿದೆ.
ರಾಜರ ಆಳ್ವಿಕೆ: ಪ್ರವಾಸೋದ್ಯಮದಲ್ಲಿ ಕೋಲಾರ ಕಡೆಗಣಿಸಲ್ಪಟ್ಟಿದೆ ಯಾಕೆ ಎಂಬ ವಿಚಾರದ ಬಗ್ಗೆ ಬೆಳಕು ಚೆಲ್ಲಿದರೆ, ಇದಕ್ಕೆ ಹತ್ತಾರು ಶತಮಾನಗಳ ಐತಿಹ್ಯವೇ ಇದೆ. ಕೋಲಾರವನ್ನು ತಮ್ಮ ರಾಜಧಾನಿ ಯಾಗಿಸಿಕೊಂಡು ನೆಮ್ಮದಿಯಿಂದ ಈ ಭೂ ಭಾಗವನ್ನು ಅಚ್ಚುಕಟ್ಟಾಗಿ ನಿರ್ಮಾಣ ಮಾಡುತ್ತಿದ್ದ ಗಂಗರ ಮೇಲೆ ನೆರೆಯ ಚೋಳರು ಸಾಕಷ್ಟು ಬಾರಿ ದಾಳಿ ನಡೆಸುತ್ತಿದ್ದರು. ಹೀಗೆ ದಾಳಿಗಳಿಂದ ಕೋಲಾಹ ಲಪುರವೆನಿಸಿಕೊಂಡ ಕೋಲಾರದಿಂದ ಗಂಗರು ಇತರೆಡೆಗಳಿಗೆ ಹೋಗಬೇಕಾಯಿತು. ಚೋಳರ ಆಳ್ವಿಕೆ ಗೊಳಪಟ್ಟರು ಅವರ ಮುಖ್ಯ ಉದ್ದೇಶ ಇಲ್ಲಿನ ಚಿನ್ನ ಮತ್ತು ನೈಸರ್ಗಿಕ ಸಂಪತ್ತನ್ನು ಸಂಗ್ರಹಿಸುವುದೇ ಆಗಿತ್ತು. ಹೀಗೆ, ಕೋಲಾರ ಆಗಲೇ ಕಡೆಗಣಿಲ್ಪಟ್ಟಿತ್ತು. ಹಂಪೆಯಿಂದ ತಿರುಪತಿ ಯವರೆಗೂ ಸಾಲು ಸಾಲು ದೇವಾಲಯಗಳ ನಿರ್ಮಾಣ ಮಾಡಿ ತಿರುಪತಿಗೆ ದಾರಿದೀಪವಾಗಿಸಿದ ಶ್ರೀಕೃಷ್ಣದೇವರಾಯರ ಆಡಳಿತ ದಲ್ಲಿ ಕೋಲಾರವು ಗೋಪುರ ದೇವಾಲಯಗಳ ಸಾಲನ್ನು ಕಂಡಿದೆ. ಅದೇ ಕಾಲಾಂತರದಲ್ಲಿ ಎನ್‌ಎಚ್4 ಆಗಿ ಈಗ ಎನ್ ಎಚ್ 75 ಆಗಿ ಮಾರ್ಪಾಟಾಗಿದೆ.
ಕಡೆಗಣಿಸಲ್ಪಟ್ಟ ಕೋಲಾರ: ಹಲವಾರು ಯುದ್ಧಗಳಿಂದ ಜರ್ಜರಿತವಾಗಿದ್ದ ಕೋಲಾರ ನೆಲ ಕೋಲಾಹಲಪುರವಾಗಿ ನಂತರ ಕುವಲಾಲಪುರವಾಗಿ ನಂತರ ಕೋಲಾರ ಎನಿಸಿಕೊಂಡಿರುವ ಇತಿಹಾಸವಿದೆ. ಕೋಲಾರದ ಚಿನ್ನ ಮತ್ತು ಸಂಪತ್ತಿನ ಮೇಲೆ ಮಾತ್ರವೇ ಕಣ್ಣಿಟ್ಟಿದ್ದ ರಾಜ ಮನೆತನದವರು ಹಾಗೂ ಬ್ರಿಟಿಷರು ಕೋಲಾರದ ಅಭಿವೃದ್ಧಿಗೆ ಗಮನ ಕೊಡಲೇ ಇಲ್ಲ. ಸ್ವಾತಂತ್ರÂ ನಂತರವೂ ಇದೇ ಪರಿಸ್ಥಿತಿ ಮುಂದುವರಿ ದಿದ್ದು, ರಾಜ್ಯದಲ್ಲಿ ಪ್ರವಾಸೋದ್ಯಮ ಅತಿ ಹೆಚ್ಚು ಕಡೆಗಣಿಸಲ್ಪಟ್ಟ ಜಿಲ್ಲೆಯಾಗಿ ಕೋಲಾರ ಕಾಣಿಸುತ್ತದೆ. ಕೋಲಾರವನ್ನು ಪ್ರತಿನಿಧಿಸಿದ್ದ ಜನಪ್ರತಿನಿಧಿಗಳಿಗೆ ಪ್ರವಾಸೋದ್ಯಮ ಒಂದು ಅಭಿವೃದ್ಧಿಯ ಭಾಗ ಎನಿಸಿಕೊಳ್ಳಲೇ ಇಲ್ಲ. ಬಂದು ವರ್ಗವಾಗಿ ಹೋಗುತ್ತಿದ್ದ ಅಧಿಕಾರಿಗಳಿಗೂ ಇತ್ತ ಚಿತ್ತವಿರಲಿಲ್ಲ. ಇದೇ ಕಾರಣಕ್ಕಾಗಿ ಪ್ರವಾಸೋದ್ಯಮತ್ತೆ ವಿಫುಲ ಅವಕಾಶಗಳಿದ್ದರೂ, ಜಿಲ್ಲೆಯಲ್ಲಿ ಪ್ರವಾಸೋದ್ಯಮ ಇಂದಿಗೂ ಆದಾಯದ ಮೂಲವಾಗಲೇ ಇಲ್ಲ
ಈಗ ಪ್ರವಾಸೋದ್ಯಮ ಪರಿಚಯಿಸುವ ಕಾರ್ಯ : ಕೊಂಚ ತಡವಾಗಿಯಾದರೂ ಎಚ್ಚೆತ್ತುಕೊಂ ಡಿರುವ ಕೋಲಾರ ಜಿಲ್ಲಾಡಳಿತ ಜಿಲ್ಲೆಯನ್ನು ಪ್ರವಾಸಿ ತಾಣಗಳ ಜಿಲ್ಲೆಯನ್ನಾಗಿಸಲು ಮುಂದಾ ಗಿದೆ. ಕೋಲಾರ ಜಿಲ್ಲೆಯ ಪ್ರವಾಸಿ ತಾಣಗಳ ಕುರಿತ ಪುಸ್ತಕ, ವೀಡಿಯೋ, ಕಿರು ಹೊತ್ತಿಗೆಗಳನ್ನು ರೂಪಿಸಿ ಪ್ರಚಾರಕ್ಕೆ ಬಿಡುತ್ತಿದೆ. ತೀರಾ ಇತ್ತೀಚಿಗೆ ಜಿಲ್ಲಾಧಿಕಾರಿ ಅಕ್ರಂಪಾಷಾ ನೇತೃತ್ವದಲ್ಲಿ ಕೋಲಾರ ಜಿಲ್ಲೆಯ 21 ಪ್ರವಾಸಿ ತಾಣಗಳನ್ನು ಗುರುತಿಸಿ ಕನ್ನಡ ಮತ್ತು ಆಂಗ್ಲಭಾಷೆಯಲ್ಲಿ ಸುಂದರ ಪುಸ್ತಕವನ್ನು ಪ್ರಕಟಿಸಲಾಗಿದೆ. ಪಿಡಿಎಫ್ ಪ್ರತಿ ಈಗಾಗಲೇ ವೈರಲ್ ಆಗಿದೆ. ಅದೇ ರೀತಿ ವಿವಿಧ ತಾಣಗಳ ಡ್ರೋನ್ ವ್ಯೂ ಹೊಂದಿರುವ ಕಿರು ವೀಡಿಯೋಗಳು ಜನಪ್ರಿಯಗೊಂಡು ಕೋಲಾರದ ಪ್ರವಾಸಿ ತಾಣಗಳ ಕುರಿತು ಆಸಕ್ತಿ ಮೂಡಿಸುತ್ತಿದೆ. ಪ್ರವಾಸಿಗರಿಗೆ ಗೈಡ್, ವಾಸ್ತವ್ಯ, ಸಾರಿಗೆ ಸೌಕರ್ಯಗಳನ್ನು ಮತ್ತಷ್ಟು ಅಭಿವೃದ್ಧಿಪಡಿಸಬೇಕಾಗಿದೆ. ಇದಕ್ಕೆ ಪ್ರವಾಸೋದ್ಯಮ ದಿನಾಚರಣೆ ನೆರವಾಗಬೇಕಿದೆ.
ಚಿನ್ನದ ಮೇಲೆ ಮಾತ್ರ ಕಣ್ಣು : ಕೋಲಾರ ನೆಲದಲ್ಲಿ ಸಿಗುತ್ತಿದ್ದ ಚಿನ್ನದ ಅದಿರು ಈ ನೆಲದ ನಿರಂತರ ಅಭಿವೃದ್ಧಿಗೂ ತೊಡಕಾಗಿದ್ದನ್ನು ಇತಿಹಾಸ ದಾಖಲಿಸಿದೆ. ಕೋಲಾರಕ್ಕೆ ಬಂದವರೆಲ್ಲರ ಕಣ್ಣು ಹೊರಳುತ್ತಿದ್ದುದೇ ಇಲ್ಲಿ ಸಿಗುತ್ತಿದ್ದ ಚಿನ್ನದ ಅದಿರಿನ ಮೇಲೆ. ಸಿಂಧೂ ನಾಗರಿಕತೆಯಿಂದ ಹಿಡಿದು, ಮೈಸೂರು ಅರಸರ ಖಜಾನೆಯವರೆಗೂ ಕೋಲಾರ ನೆಲದಲ್ಲಿ ಸಿಕ್ಕ ಚಿನ್ನವೇ ಪ್ರಧಾನ ಪಾತ್ರವಹಿಸಿದೆ. ಹೀಗೆ ಬಂದವರಿಗೆ ಕೋಲಾರವನ್ನು ಅಭಿವೃದ್ಧಿ ಪಡಿಸುವುದಕ್ಕಿಂತಲೂ ಇಲ್ಲಿನ ಚಿನ್ನ ಮತ್ತು ಇನ್ನಿತರೇ ಸಂಪತ್ತನ್ನು ತಮ್ಮ ಸಾಮ್ರಾಜ್ಯಕ್ಕೆ ಹೊತ್ತೂಯ್ಯುವುದೇ ಮುಖ್ಯವಾಗಿರುತ್ತಿತ್ತು. ಬ್ರಿಟಿಷರ ಅವಧಿಯಲ್ಲಿಯೂ ಇದೇ ಮುಂದುವರಿಯಿತು. ಲಾರ್ಡ್ ಪಿಂಟೋ ಕೋಲಾರವನ್ನು ಎಷ್ಟರ ಮಟ್ಟಿಗೆ ಕಡೆಗಣಿಸಿದ್ದನೆಂದರೆ ಕೋಲಾರದ ಬಗ್ಗೆ ಅಧ್ಯಯನ ಮಾಡಿ ರಚಿಸಿದ ಯಾರದೇ ಥೀಸಿಸ್‌ಗೆ ಅವರು ಪಿಎಚ್‌ಡಿ ನೀಡುತ್ತಿರಲಿಲ್ಲವಂತೆ. ಕೋಲಾರದ ದೇವಾಲಯಗಳಲ್ಲಿ ಕಂಡು ಬರುವ ಸವೆದ ಕಲ್ಲುಗಳ ಮೇಜುಗಳು ತೆರಿಗೆ ಸಂಗ್ರಹಿಸುವ ಧಾನ್ಯ, ನಾಣ್ಯಗಳ ಸಂಗ್ರಹಿಸುವ ಇತಿಹಾಸವನ್ನು ವಿವರಿಸುತ್ತದೆ.
ಕೋಲಾರಕ್ಕೆ 20 ಶತಮಾನಗಳ ಹಿಂದಿನ ಇತಿಹಾಸವಿದೆ. ದುರ್ವಿನಾಥ ಮಾಧವ ದಡಿಗನಿಂದ ಸ್ಥಾಪನೆಯಾಗಿ ಗಂಗರ ಮೂಲಕ ಕ್ರಿಸ್ತಶಕ 350ರಿಂದ 360 ರವರೆಗೂ, ಶ್ರೀಪುರುಷನಿಂದ 750 ರಿಂದ 770ರ ಅವಧಿಯಲ್ಲಿ ಕೋಲಾರ ಗಂಗರ ರಾಜಧಾನಿಯಾಗಿ ತಮಿಳುನಾಡಿನವರೆಗೂ ವಿಸ್ತರಣೆಯಾಗಿತ್ತು. ಇದು ಗಂಗರು ಮತ್ತು ತಮಿಳುನಾಡಿನ ಚೋಳರ ನಡುವೆ ಯುದ್ಧಗಳಿಗೆ ಕಾರಣವಾಯಿತು. 1135ರ ವೀರಗಂಗಾ ಬಿಟ್ಟಿ ಎಂಬುವರ ಶಾಸನ ಕೋಲಾರದಲ್ಲಿ ದೊರೆತಿದೆ. ಸೋಮೇಶ್ವರ ದೇವಾಲಯವು 159ರಲ್ಲಿ ಆರಂಭವಾಗಿ 1560ರಲ್ಲಿ ಪೂರ್ಣಗೊಂಡಿದೆ. 1800ರಲ್ಲಿ ಪ್ರಾನ್ಸಿಸ್ ಬುಕನೈನ್ ಭಾರತ ಪ್ರವಾಸಕ್ಕೆ ಬಂದು ಕೋಲಾರದ ಕಂಬಳಿ ಉದ್ಯಮದ ಯಶಸ್ಸಿನ ಕುರಿತು ದಾಖಸಿದ್ದಾನೆ. –ಆರ್.ಚಂದ್ರಶೇಖರ್, ಪ್ರವಾಸಿ ಮಾರ್ಗದರ್ಶಿ, ಕೋಲಾರ
– ಕೆ.ಎಸ್.ಗಣೇಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Delhi Pollution: ಅಸ್ತಮಾ, ಶ್ವಾಸಕೋಶ ಕ್ಯಾನ್ಸರ್ ಭೀತಿ!
IPL-2025: ಓಂಕಾರ್ ಸಾಳ್ವಿ ಆರ್‌ಸಿಬಿ ಬೌಲಿಂಗ್ ಕೋಚ್
MUDA: ಸುಮ್ನಿರಯ್ಯ ಗೊತ್ತಿಲ್ದೆ ಮಾತಾಡ್ತಿಯಾ: ಸೋಮಣ್ಣಗೆ ಸಿದ್ದರಾಮಯ್ಯ ಪ್ರೀತಿಯ ಗದರಿಕೆ!
Market: ಇಳುವರಿ ಕೊರತೆ: ತೆಂಗಿನಕಾಯಿ ಬೆಲೆ 58ರಿಂದ 60 ರೂಪಾಯಿ!
Ration Card: ಬಡವರಿಗೆ ಬಿಪಿಎಲ್ ಕಾರ್ಡ್ ತಪ್ಪದಂತೆ ನೋಡಿಕೊಳ್ಳಿ: ಸಿಎಂ ಸೂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.