ಯರಗೋಳ್ ಡ್ಯಾಂ ಕಾಮಗಾರಿಗೆ ವೇಗ
Team Udayavani, May 27, 2019, 1:36 PM IST
ಬಂಗಾರಪೇಟೆ: ಜಿಲ್ಲೆಯ ನಾಲ್ಕು ತಾಲೂಕುಗಳಿಗೆ ಕುಡಿಯುವ ನೀರಿನ ಸೌಲಭ್ಯ ಒದಗಿಸುವ ಮಹತ್ತರ ಯರಗೋಳ್ ನೀರಾವರಿ ಯೋಜನೆ ಕಾಮಗಾರಿ ವೇಗಪಡೆದುಕೊಂಡಿದೆ. 8 ವರ್ಷಗಳ ಜಿಲ್ಲೆಯ ನೀರಾವರಿ ಹೋರಾಟಗಾರರು, ಜನಪ್ರತಿನಿಧಿಗಳ ಶ್ರಮದಿಂದ 88 ಕೋಟಿ ರೂ. ಅನುದಾನ ಬಿಡುಗಡೆಯಾಗಿ ಯೋಜನೆಗೆ 2006ರಲ್ಲಿ ಶಂಕುಸ್ಥಾಪನೆ ನೆರವೇರಿಸಲಾಗಿತ್ತು.
ಹೈದ್ರಾಬಾದ್‌ನ ರಾಮ್‌ಕೀ ಸಂಸ್ಥೆ ಗುತ್ತಿಗೆ ಪಡೆದಿದ್ದು, ಜಿಲ್ಲೆಯ ಜನಪ್ರತಿನಿಧಿಗಳು ಇಚ್ಛಾಶಕ್ತಿಯ ಕೊರತೆಯಿಂದ ಕಾಮಗಾರಿ ನನೆಗುದಿಗೆ ಬಿದ್ದಿತ್ತು. ನಂತರ ಜಿಲ್ಲೆಯ ಶಾಸಕರು ಕಳೆದ ಅಕ್ಟೋಬರ್‌ನಲ್ಲಿ ಕಾಮಗಾರಿ ವೀಕ್ಷಿಸಿ 12 ವರ್ಷಗಳಿಂದಲೂ ಕಾಮಗಾರಿ ಮುಗಿಸದೇ ವಿಳಂಬ ಮಾಡುತ್ತಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಕಾಮಗಾರಿಯನ್ನು 2019 ಯುಗಾದಿ ಹಬ್ಬದ ವೇಳೆಗೆ ಪೂರ್ಣ ಮಾಡುವಂತೆ ಡೆಡ್‌ಲೈನ್ ನೀಡಿದ್ದರು. ನಂತರ ಕಾಮಗಾರಿ ವೇಗ ಪಡೆದಿದ್ದು, ದೀಪಾವಳಿ ವೇಳೆಗೆ ಪೂರ್ಣಗೊಳಿಸಬಹುದೆಂಬ ಅಂದಾಜು ಇದೆ.
ಜಿಲ್ಲೆಗೆ ಯಾವುದೇ ನದಿ ಮೂಲಗಳಿಲ್ಲ. ಯರಗೋಳ್ ಡ್ಯಾಂ ನಿರ್ಮಾಣವಾದಲ್ಲಿ ಕನಿಷ್ಠ ಮೂರು ತಾಲೂಕುಗಳಿಗೆ ಹಾಗೂ 40 ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆ ಮಾಡಬಹುದೆಂದು ಸರ್ಕಾರ 240 ಕೋಟಿ ರೂ. ಮಂಜೂರು ಮಾಡಿತ್ತು. ಆದರೂ ಇಲಾಖೆಯ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಅನಗತ್ಯವಾಗಿ ವಿಳಂಬ ನೀತಿ ಅನುಸರಿಸುತ್ತಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ತರಾಟೆಗೆ ತೆಗೆದುಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಒಟ್ಟು 240 ಕೋಟಿ ರೂ. ಅನುದಾನದಲ್ಲಿ ಪೈಪ್‌ಲೈನ್ 80 ಕೋಟಿ ರೂ., ಅಣೆಕಟ್ಟು ಮತ್ತು ಸೇವಾ ರಸ್ತೆ ನಿರ್ಮಾಣಕ್ಕೆ 88 ಕೋಟಿ ರೂ. ಮತ್ತು ಅಣೆಕಟ್ಟೆಯಿಂದ ನೀರು ಪೂರೈಕೆ ಮಾಡಲು ಯಂತ್ರೋಪಕರಣಗಳ ಅಳವಡಿಸಿ ಕ್ರಮಕೈಗೊಳ್ಳುವುದಕ್ಕೆ 72 ಕೋಟಿ ರೂ. ಮಂಜೂರಾಗಿದೆ. ಬಂಗಾರಪೇಟೆ, ಮಾಲೂರು ಮತ್ತು ಕೋಲಾರ ನಗರಕ್ಕೆ ಕುಡಿಯುವ ಪೂರೈಕೆ ಮಾಡಲು ಯೋಜನೆ ಸಿದ್ಧಪಡಿಸಲಾಗಿದೆ.
ಗ್ರಾಮಗಳಿಗೆ ನೀರು: ಕುಡಿಯುವ ನೀರು ಪೂರೈಕೆಗೆ ನಗರ ನೀರು ಪೂರೈಕೆ ಮತ್ತು ಒಳಚರಂಡಿ ಇಲಾಖೆಯು ಕ್ರಮಕೈಗೊಳ್ಳಲಿದೆ. ಯರಗೋಳ್‌ನಿಂದ ಬಂಗಾರಪೇಟೆ, ಬಂಗಾರಪೇಟೆಯಿಂದ ಮಾಲೂರು ಮತ್ತು ಬಂಗಾರಪೇಟೆಯಿಂದ ಕೋಲಾರಕ್ಕೆ ಹಾದುಹೋಗುವ ಮಾರ್ಗ ಮಧ್ಯೆ ಬರುವ 45 ಗ್ರಾಮಗಳಿಗೆ ನೀರು ಪೂರೈಕೆಗೆ ಅವಕಾಶ ಕಲ್ಪಿಸಲಾಗಿದೆ. ಈ ಮಧ್ಯೆ ಬರುವ ಗ್ರಾಮಗಳಿಗೆ ನೀರು ಪೂರೈಕೆ ಮಾಡಲು ಸಂಬಂಧಪಟ್ಟ ಗ್ರಾಪಂಗಳ ವಿಶೇಷ ಅನುದಾನ ಬಿಡುಗಡೆ ಮಾಡಿ ಕುಡಿಯುವ ನೀರು ಪೂರೈಕೆ ಮಾಡಿಕೊಳ್ಳಬೇಕಾದ ಕಾಮಗಾರಿಗಳನ್ನು ಸ್ವಂತವಾಗಿಯೇ ಮಾಡಿಕೊಳ್ಳಬೇಕಾಗಿದೆ.
ಕುಡಿವ ನೀರು ಪೂರೈಕೆ: ಯರಗೋಳ್ ನೀರಾವರಿ ಯೋಜನೆಯಿಂದ 500 ಎಂಸಿಎಫ್ಟಿ ಸಾಮರ್ಥ್ಯದ ನೀರು ಸಂಗ್ರಹಣೆಯಾಗಲಿದೆ. ಡ್ಯಾಂ ತುಂಬಿ ಹರಿದರೆ 375 ಎಕರೆ ಭೂ ಪ್ರದೇಶವು ಮುಳಗಡೆಯಾಗಲಿದೆ. ಒಮ್ಮೆ ತುಂಬಿದರೆ ಕನಿಷ್ಠ ಎರಡು ವರ್ಷ ಕುಡಿಯುವ ನೀರು ಪೂರೈಕೆ ಮಾಡಬಹುದಾಗಿದೆ.
ಯರಗೋಳ್ ಡ್ಯಾಂ ನಿರ್ಮಾಣಕ್ಕೆ 375 ಎಕರೆ ಭೂ ಪ್ರದೇಶ ವಶಪಡಿಸಿಕೊಳ್ಳಲಾಗಿದೆ. ರೈತರಿಂದ 95 ಎಕರೆ, ಅರಣ್ಯ ಇಲಾಖೆಯಿಂದ 154 ಎಕರೆ ಮತ್ತು 126 ಎಕರೆ ಸರ್ಕಾರಿ ಭೂ ಪ್ರದೇಶವನ್ನು ವಶಪಡಿಸಿಕೊಳ್ಳಲಾಗಿದೆ. ರೈತರಿಗೆ ಪರಿಹಾರವಾಗಿ ಒಟ್ಟು 5.19 ಕೋಟಿ ರೂ. ಬಿಡುಗಡೆ ಮಾಡಿ ವಿತರಣೆಗೆ ಕೋಲಾರ ಉಪಭಾಗಾಧಿಕಾರಿಗಳಿಗೆ ಬಿಡುಗಡೆ ಮಾಡಿ ಸಮಸ್ಯೆ ಬಗೆಹರಿಸಲಾಗಿದೆ.
ಯರಗೋಳ್ ಅಣೆಕಟ್ಟೆಯನ್ನು ಎರಡು ಬೆಟ್ಟಗಳ ಮಧ್ಯೆ ಅಡ್ಡಲಾಗಿ ನಿರ್ಮಾಣ ಮಾಡಲಾಗುತ್ತಿದ್ದು, 414 ಮೀಟರ್ ಉದ್ದ, 30 ಮೀಟರ್ ಎತ್ತರ ಅಣೆಕಟ್ಟು ನಿರ್ಮಾಣ ಮಾಡಲಾಗುತ್ತಿದೆ. ಡ್ಯಾಂ ನಿರ್ಮಾಣ ವೇಳೆಗೆ ನೀರು ಪೂರೈಕೆಗೆ ಅಗತ್ಯ ತಾಂತ್ರಿಕತೆಗಳನ್ನು ಅಳವಡಿಸಲಾಗುವುದೆಂದು ಆಧಿಕಾರಿಗಳು ತಿಳಿಸಿದ್ದಾರೆ.
● ಎಂ.ಸಿ.ಮಂಜುನಾಥ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.