ನರೇಗಾದಡಿ 12 ಕೋಟಿ ಮಾನವ ದಿನ ಸೃಜನೆ
•ಜಲ ಸಂರಕ್ಷಣೆಗೆ ನರೇಗಾದಲ್ಲಿ ಮೊದಲ ಆದ್ಯತೆ•ಪ್ರತಿಭಟಿಸುವ ಮುನ್ನ ಸಮಸ್ಯೆ ಗಮನಕ್ಕೆ ತನ್ನಿ
Team Udayavani, Jul 31, 2019, 12:41 PM IST
ಕೊಪ್ಪಳ: ಕಾಯಕ ಬಂಧುಗಳ ಸಮಾವೇಶದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾಯದರ್ಶಿ ಎಲ್.ಕೆ. ಅತೀಕ್ ಮಾತನಾಡಿದರು.
ಕೊಪ್ಪಳ: ಜನರಿಗೆ ಸಮರ್ಪಕ ಉದ್ಯೋಗ ಖಾತ್ರಿ ಕೂಲಿ ಕೆಲಸ ಕೊಡಲು ಪ್ರಸಕ್ತ ವರ್ಷ 12 ಕೋಟಿ ಮಾನವ ದಿನಗಳ ಸೃಜನೆ ಮಾಡಲಾಗಿದೆ ಎಂದು ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ ಎಲ್.ಕೆ. ಅತೀಕ್ ಹೇಳಿದರು.
ನಗರ ಸಮೀಪದ ಗುಪ್ತಾ ಕಾಂಪ್ಲೇಕ್ಸ್‌ನ ಬಾಲಾಜಿ ಸಭಾ ಭವನದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಮಿತಿ ಹಾಗೂ ಜಿಲ್ಲಾ ಪಂಚಾಯತಿ ಸಹಯೋಗದಲ್ಲಿ ಮಂಗಳವಾರ ನಡೆದ ಕಾಯಕ ಬಂಧುಗಳ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ನರೇಗಾ ಯೋಜನೆ ಬಡ ಜನರಿಗೆ ಅನುಕೂಲವಾಗುವ ಯೋಜನೆಯಾಗಿದೆ. ಜಿಪಂ, ತಾಪಂ, ಗ್ರಾಪಂ ಅಧಿಕಾರಿಗಳು ನರೇಗಾ ಕಾಮಗಾರಿಗೆ ಹೆಚ್ಚು ಒತ್ತು ಕೊಡಬೇಕು. ಜನತೆ ನಮೂನೆ-6 ಅರ್ಜಿ ಹಿಡಿದು ಬಂದಾಗ ಕೂಡಲೇ ಸ್ವೀಕಾರ ಮಾಡಿ ಅವರಿಗೆ ಕೆಲಸ ಕೊಡಬೇಕು. ನಮಗೆ ಅರ್ಜಿ ಸ್ವೀಕಾರ ಮಾಡಲ್ಲ. ಕೆಲಸ ಕೊಡಲ್ಲ ಎನ್ನುವ ದೂರುಗಳೇ ಹೆಚ್ಚು ಕೇಳಿ ಬರುತ್ತಿವೆ. ಕ್ರಿಯಾ ಯೋಜನೆಯಲ್ಲಿ ಕಾಮಗಾರಿ ಸೇರಿಸಿಲ್ಲ ಎನ್ನುವ ನೆಪ ಹೇಳದೇ ಏಲ್ಲಿ ಕೆಲಸದ ಬೇಡಿಕೆ ಇದೆಯೋ ಅಲ್ಲಿ ಜನತೆ ತಕ್ಷಣ ಕೆಲಸ ಕೊಡುವುದು ಅಧಿಕಾರಿಗಳ ಕರ್ತವ್ಯವಾಗಿದೆ ಎಂದರು.
ಕೂಲಿಕಾರ ಕೆಲಸ ಮಾಡಿದ ಕೂಡಲೇ ಹಣ ಪಾವತಿಸಬೇಕು. ಈ ಹಿಂದೆ 15 ದಿನಕ್ಕೊಮ್ಮೆ ಕೂಲಿಹಣ ಪಾವತಿಗೆ ಆದೇಶವಿತ್ತು. ಪ್ರಸ್ತುತ 8 ದಿನದೊಳಗೆ ಪಾವತಿಗೆ ನಾವು ಕ್ರಮ ಕೈಗೊಂಡಿದ್ದೇವೆ. ಅಧಿಕಾರಿಗಳು ಯಾವುದೇ ವಿಳಂಬ ಮಾಡದೇ ಬಿಲ್ ಪಾಸ್ ಮಾಡಿದರೆ ಜನರಿಗೆ ಸಕಾಲಕ್ಕೆ ಹಣ ಪಾವತಿಯಾಗಲಿದೆ. ನರೇಗಾ ಕಾಮಗಾರಿಗೆ ಸಂಬಂಧಿಸಿದಂತೆ ಪಿಡಿಒ ತಕ್ಷಣ ಸಹಿ ಹಾಕಬೇಕು. ಜೊತೆಗೆ ಕೆಲಸ ಮಾಡುವ ಸ್ಥಳದಲ್ಲಿ ನೀರು, ನೆರಳಿನ ವ್ಯವಸ್ಥೆ ಮಾಡಬೇಕು ಎಂದರು.
ನರೇಗಾ ಸಂಪೂರ್ಣ ಕೇಂದ್ರದ ಯೋಜನೆ ಯಾಗಿದ್ದರಿಂದ ಕೇಂದ್ರವೇ ಕೂಲಿಕಾರರಿಗೆ ಹಣ ಪಾವತಿ ಮಾಡಲಿದೆ. ಆದರೆ, ಕೆಲವೊಂದು ಸಾರಿ ಕೂಲಿ ಸಕಾಲಕ್ಕೆ ಪಾವತಿಯಾಗಲ್ಲ. ಕೇಂದ್ರವು ಇವರೆಗೂ ರಾಜ್ಯಕ್ಕೆ 2500 ಕೋಟಿ ರೂ. ಅನುದಾನ ಬಿಡುಗಡೆ ಮಾಡುವುದು ಬಾಕಿಯಿದೆ. ಹಾಗಾಗಿ ರಾಜ್ಯ ಸರ್ಕಾರದಿಂದಲೇ 2-3 ಹಂತದಲ್ಲಿ ಬಿಡುಗಡೆ ಮಾಡಿದೆ. ಜೊತೆಗೆ ಸಾಮಗ್ರಿ ವೆಚ್ಚಕ್ಕೂ ಕೇಂದ್ರ ಹಣ ಕೊಟ್ಟಿಲ್ಲ ಎಂದರು.
ನರೇಗಾದಲ್ಲಿ ಜಿಲ್ಲೆಯಲ್ಲಿ ಹೆಚ್ಚಿನ ಕೆಲಸ ನಡೆಯುತ್ತಿವೆ. ಇನ್ನೂ ಹೆಚ್ಚಿನ ಉತ್ಸಾಹ ನಿಮ್ಮಲ್ಲಿ ಬರಲಿ ಎಂದರಲ್ಲದೇ, ಕಾರ್ಮಿಕರು ನರೇಗಾಕ್ಕೆ ಸಂಬಂಧಿಸಿದಂತೆ ಪ್ರತಿಭಟನೆ ಮಾಡುವ ಅಗತ್ಯವಿಲ್ಲ. ಮೊದಲು ನಮ್ಮ ಬಳಿ ನಿಮ್ಮ ಸಮಸ್ಯೆ ಹೇಳಿ. ಸರ್ಕಾರ, ಜಿಲ್ಲಾಡಳಿತದ ಗಮನಕ್ಕೆ ಸಮಸ್ಯೆ ಹೇಳಿಕೊಂಡರೆ ಇತ್ಯರ್ಥ ಮಾಡಲಾಗುವುದು. ಏಕಾಏಕಿ ಪ್ರತಿಭಟನೆ ಮಾಡಬೇಡಿ ಎಂದು ಮನವಿ ಮಾಡಿದರು.
ರಾಜ್ಯದಲ್ಲಿ ಈ ಹಿಂದೆ 8.50 ಕೋಟಿ ಮಾನವ ದಿನ ಸೃಜನೆ ಮಾಡಲಾಗಿತ್ತು. ಕಳೆದ 8 ತಿಂಗಳ ಹಿಂದೆ 10.50 ಕೋಟಿ ಮಾನವ ದಿನ ಸೃಜನೆ ಮಾಡಿದ್ದೆವು. ನಮ್ಮ ಸಾಧನೆ ನೋಡಿ ಕೇಂದ್ರವು ಪ್ರಸಕ್ತ ಸಾಲಿನಲ್ಲಿ 12 ಕೋಟಿ ಮಾನವ ದಿನ ಸೃಜನೆಗೆ ಅವಕಾಶ ನೀಡಿದೆ ಎಂದರು.
ರಾಜ್ಯದಲ್ಲಿ ಬರದ ಪರಿಸ್ಥತಿ ಎದುರಿಸಬೇಕಾಗಿದೆ. ಮಳೆಯ ಕೊರತೆ ಹೆಚ್ಚು ಕಾಡುತ್ತಿದೆ. ಮಳೆ ಬಂದಾಗ ವೈಜ್ಞಾನಿಕವಾಗಿ ಹೇಗೆ ನೀರು ಹಿಡಿದಿಡಬೇಕು ಎಂಬ ಯೋಜನೆ ಮಾಡಬೇಕು. ಹಾಗಾಗಿ ನರೇಗಾದಡಿ ಕೆರೆ ಹೂಳು ತೆಗೆದು ಅವುಗಳಿಗೆ ಪುನರುಜ್ಜೀವನ ನೀಡಲು ನಾವು ಮುಂದಾಗಿದ್ದೇವೆ. ಕೂಲಿಯ ಮೂಲಕ ದೇಶ ಕಟ್ಟುವ ಕೆಲಸ ಮಾಡುತ್ತಿದ್ದೇವೆ. ನೆಲ, ಜಲ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ ಎಂದರು.
ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಾರುತಿ ಮಾನ್ಪಾಡೆ ಮಾತನಾಡಿ, ಕೂಲಿಕಾರರಿಗೆ ನರೇಗಾ ಯೋಜನೆ ಮಹತ್ವದ ಯೋಜನೆ. ಹಲವು ನಾಯಕರು ಈ ಕಾಯ್ದೆ ಜಾರಿಗೆ ಶ್ರಮಿಸಿದ್ದಾರೆ. ಆದರೆ ಚುನಾಯಿತ ಪ್ರತಿನಿಧಿಗಳು ನರೇಗಾ ಬಗ್ಗೆ ಕಾಳಜಿ ಕೊಡುತ್ತಿಲ್ಲ. ರಾಜ್ಯದಲ್ಲಿ ಗುತ್ತಿಗೆದಾರರ ಆಡಳಿತ ಮಾಡಲು ನಾವು ಬಿಟ್ಡಿಲ್ಲ. ಕಳೆದ ವರ್ಷ ಖಾತ್ರಿ ಹಣ ನಮಗೆ ಸಕಾಲಕ್ಕೆ ಸಿಗಲಿಲ್ಲ. ಕೇಂದ್ರವೇ ಅನುದಾನ ಬಿಡುಗಡೆ ಮಾಡಲಿಲ್ಲ. ರಾಜ್ಯ ಸರ್ಕಾರ 908 ಕೋಟಿ ಅನುದಾನವನ್ನು ಬಿಡುಗಡೆ ಮಾಡಿದೆ ಎಂದರು.
ಕೊಪ್ಪಳದಂತ ಬರಪೀಡಿತ ಜಿಲ್ಲೆಯಲ್ಲಿ ನರೇಗಾ ಯೋಜನೆ ಅಕ್ಷಯ ಪಾತ್ರೆಯಂತಾಗಿದೆ. ಇಲ್ಲಿ ಜಲ ಸಂರಕ್ಷಣೆ ಕೆಲಸ ತಗೆದುಕೊಂಡರೆ ನಾವು ಮಾಡಿದ ಕೆಲಸ ಸಾರ್ಥಕವಾಗಲಿದೆ. ಇದರ ಜೊತೆಗೆ ನರೇಗಾದಲ್ಲಿ ಅರಣ್ಯೀಕರಣ ಮಾಡಬೇಕು. ಸಸಿಗಳನ್ನು ಮೂರು ವರ್ಷ ಕಾಪಾಡಿದರೆ ಸಸಿ ಉಳಿಯಲಿವೆ. ಕೆಲಸ ಕೊಟ್ಡಿದ್ದನ್ನು ನಾವು ನ್ಯಾಯವಾಗಿ ಕೊಡಬೇಕು ಎಂದರಲ್ಲದೇ ಸರ್ಕಾರ ನಮಗೆ ಕನಿಷ್ಟ 600 ಕೂಲಿ ಹಣ ನಿಗದಿ ಮಾಡಬೇಕು ಎಂದು ಒತ್ತಾಯ ಮಾಡಿದರು.
ಜಿಪಂ ಸಿಇಒ ರಘುನಂದನ್ ಮೂರ್ತಿ, ಉಪ ಕಾರ್ಯದರ್ಶಿ ಎನ್.ಕೆ. ತೊರವಿ, ಯೋಜನಾ ನಿರ್ದೇಶಕ ರವಿ ಬಸರಿಹಳ್ಳಿ, ಅಧಿಕಾರಿ ದೊಡ್ಡನಗೌಡ, ತಾಪಂ ಇಒ ಟಿ. ಕೃಷ್ಣಮೂರ್ತಿ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP Politics: ಮಗನ ಪರ ನಿಲ್ಲಬೇಡಿ: ಬಿಎಸ್‌ವೈಗೆ ರಮೇಶ್ ಜಾರಕಿಹೊಳಿ; ಬಿವೈವಿ ಆಕ್ರೋಶ
Gangavathi: ಸಂಕ್ರಾಂತಿ: ತುಂಗಭದ್ರಾ ನದಿಯಲ್ಲಿ ಸಾವಿರಾರು ಜನರಿಂದ ಪುಣ್ಯ ಸ್ನಾನ
Gangavati: ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವಿಜಯಪ್ರಸಾದ್ ಅಮಾನತು
Gangavathi; ಸಿಲಿಂಡರ್ ಸ್ಪೋ*ಟಗೊಂಡು ಅಗ್ನಿ ಅವಘಡ: ವೈದ್ಯೆ ಸೇರಿ ಇಬ್ಬರಿಗೆ ತೀವ್ರ ಗಾಯ
Overview: ಕೊಪ್ಪಳ ಜಿಲ್ಲಾಸ್ಪತ್ರೆಗೆ ಬಿಜೆಪಿ ಸತ್ಯ ಶೋಧನಾ ತಂಡ ಭೇಟಿ