ಜಿಪಂ ವ್ಯಾಪ್ತಿಯ 275 ರಸ್ತೆಗಳು ಹಾನಿ
Team Udayavani, Dec 6, 2019, 12:38 PM IST
ಕೊಪ್ಪಳ: ಜಿಲ್ಲೆಯಲ್ಲಿ ಮಳೆ ಆರ್ಭಟ ಹಾಗೂ ವಾಹನ ಸಂಚಾರದಿಂದ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಗ್ರಾಮೀಣ ಪ್ರದೇಶದ 275 ರಸ್ತೆಗಳು ಹಾಳಾಗಿವೆ. ಇವುಗಳ ದುರಸ್ತಿಗಾಗಿ ಪಂಚಾಯತ್ ರಾಜ್ ಇಲಾಖೆ ಯೋಜನೆ ಸಿದ್ಧಪಡಿಸಿ ಸಲ್ಲಿಸಿದ ಹಿನ್ನೆಲೆಯಲ್ಲಿ ಸರ್ಕಾರದಿಂದ 19 ಕೋಟಿ ರೂ. ಬಿಡುಗಡೆಯಾಗಿದೆ.
ಹೌದು. ಜಿಲ್ಲೆಯಲ್ಲಿ ಪ್ರಸಕ್ತ ವರ್ಷದಲ್ಲಿ ಮಳೆಯ ಆರ್ಭಟದಿಂದ ನಗರ ಪ್ರದೇಶಗಳಿಗಿಂತ ಗ್ರಾಮೀಣ ಪ್ರದೇಶದ ಹಲವು ರಸ್ತೆಗಳು ಹಾನಿಗೀಡಾಗಿವೆ. ಎಲ್ಲೆಂದರಲ್ಲಿ ಕಿತ್ತು ಹೋಗಿವೆ. ರಸ್ತೆ ಸಂಚಾರಕ್ಕೆ ಕೆಲವು ಗ್ರಾಮಗಳಲ್ಲಿ ಜನರೇ ಮರಂ ಹಾಕಿ ಸಂಚಾರಕ್ಕೆ ದಾರಿ ಮಾಡಿಕೊಂಡಿರುವ ಉದಾಹರಣೆಯೂ ಇವೆ.
ಇದಲ್ಲದೇ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ನೆರೆ ಹಾವಳಿಯಿಂದಾಗಿ ತುಂಗಭದ್ರಾ ಜಲಾಶಯಕ್ಕೆ ಅಧಿಕ ಪ್ರಮಾಣದ ನೀರು ಹರಿದು ಬಂದಿದ್ದರಿಂದ, ಡ್ಯಾಂನಿಂದ ನದಿಪಾತ್ರಗಳಿಗೆ ನೀರು ಹರಿಬಿಟ್ಟ ವೇಳೆ ನದಿ ತಟದ ಹಳ್ಳಿಗಳ ರಸ್ತೆಗಳು ಬಹುಪಾಲು ಹಾನಿಯಾಗಿವೆ. ಇನ್ನು ಡ್ಯಾಂ ಎಡದಂಡೆ ಮೇಲ್ಮಟ್ಟದ ಗೇಟ್ ಮುರಿದು ನೀರು ತಾಲೂಕಿನ ಮುನಿರಾಬಾದ್ ಭಾಗದ ಹಲವು ರಸ್ತೆಗಳಲ್ಲಿ ಹರಿದು ರಸ್ತೆಗಳನ್ನು ಹಾನಿ ಮಾಡಿದೆ. ಇನ್ನೂ ಅಂಜನಾದ್ರಿ ಸಮೀಪದಲ್ಲಿನ ರಸ್ತೆಗಳು ಹಾಳಾಗಿವೆ.
ಇದಲ್ಲದೇ, ಡ್ಯಾಂನಿಂದ 2 ಲಕ್ಷ ಕ್ಯೂಸೆಕ್‌ಗೂ ಅಧಿಕ ನೀರು ಹೊರ ಬಿಟ್ಟ ಹಿನ್ನೆಲೆಯಲ್ಲಿ ಗಂಗಾವತಿ ತಾಲೂಕಿನ ಕಂಪ್ಲಿ ಸೇತುವೆ ಭರ್ತಿಯಾಗಿ ಅಕ್ಕಪಕ್ಕದ ರಸ್ತೆಗಳು ಹಾನಿಗೀಡಾಗಿವೆ. ಈ ಎಲ್ಲ ರಸ್ತೆಗಳು ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯು ಹಾನಿಯಾದ ರಸ್ತೆಗಳಿಗೆ ಯೋಜನೆ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿತು.
19 ಕೋಟಿ ತಕ್ಷಣ ಬಿಡುಗಡೆ: ರಾಜ್ಯ ಸರ್ಕಾರವು ಮಳೆಯಿಂದ ಹಾನಿಗೀಡಾದ ಪ್ರದೇಶಗಳ ಬಗ್ಗೆ ನಿಗಾ ವಹಿಸಿದ್ದು, ರಸ್ತೆ ಸೇರಿ ಇತರೆ ಕಾರ್ಯಕ್ಕೆ ಮೊದಲ ಆದ್ಯತೆ ನೀಡುತ್ತಿದೆ. ಹಾಗಾಗಿ ಜಿಲ್ಲೆಯಲ್ಲಿ ಹಾನಿಗೀಡಾದ ಕನಕಗಿರಿ ಜಿಪಂ ರಸ್ತೆಗಳಿಗೆ 5.90 ಕೋಟಿ, ಗಂಗಾವತಿ
ತಾಲೂಕಿಗೆ 4 ಕೋಟಿ, ಕೊಪ್ಪಳ ತಾಲೂಕಿಗೆ 4 ಕೋಟಿ ಹಾಗೂ ಕುಷ್ಟಗಿ ತಾಲೂಕಿಗೆ 5.05 ಕೋಟಿ ಸೇರಿ ಒಟ್ಟು ಜಿಪಂ ವ್ಯಾಪ್ತಿಯ ರಸ್ತೆಗಳ ನಿರ್ಮಾಣಕ್ಕೆ 19.04 ಕೋಟಿಯನ್ನು ತಕ್ಷಣವೇ ಬಿಡುಗಡೆ ಮಾಡಿದೆ. ಮೊದಲೆಲ್ಲ ರಸ್ತೆಗಳು ಹಾಳಾಗಿದ್ದರೆ ಹಣ ಬಿಡುಗಡೆ ಮಾಡುತ್ತಿರಲಿಲ್ಲ. ಮಳೆಯಿಂದ ಹಾನಿಯಿಂದ ಹಾನಿ ಆಗಿದ್ದರಿಂದ ವೇಗದಗತಿಯಲ್ಲಿ ಹಣ ಬಿಡುಗಡೆ ಮಾಡಿದೆ ಎನ್ನುವುದು ಇಲಾಖೆ ಅಧಿಕಾರಿಗಳಿಂದ ತಿಳಿದು ಬಂದಿದೆ.
275 ರಸ್ತೆಗಳು ಹಾನಿಗೀಡಾಗಿವೆ: ಮಳೆ ಹಾಗೂ ಇನ್ನಿತರ ಕಾರಣದಿಂದ ಜಿಲ್ಲೆಯ ಮರಂ, ಜಲ್ಲಿ ರಸ್ತೆ, ಡಾಂಬಾರ್ ರಸ್ತೆ ಸೇರಿದಂತೆ 275 ರಸ್ತೆಗಳು ಹಾನಿಗೀಡಾಗಿವೆ. ಈ ಪೈಕಿ ಕೊಪ್ಪಳ ತಾಲೂಕಿನಲ್ಲಿ 40 ರಸ್ತೆಗಳು ಹಾನಿಗೀಡಾಗಿದ್ದರೆ, ಗಂಗಾವತಿ ತಾಲೂಕಿನಲ್ಲಿ 19 ರಸ್ತೆಗಳು, ಕನಕಗಿರಿ ತಾಲೂಕಿನಲ್ಲಿ 116 ರಸ್ತೆ ಸೇರಿದಂತೆ ಕುಷ್ಟಗಿ ತಾಲೂಕಿನಲ್ಲಿ 110 ರಸ್ತೆಗಳು ಹಾಳಾಗಿವೆ. ಎಲ್ಲ ರಸ್ತೆಗೆ ಕ್ರಿಯಾಯೋಜನೆ ಸಿದ್ಧಪಡಿಸಿ ಇಲಾಖೆ ಸರ್ಕಾರಕ್ಕೆ ತಕ್ಷಣವೇ ವರದಿ ಸಲ್ಲಿಸಿತ್ತು.
ಮರಂ ರಸ್ತೆಗೆ ಪ್ರತ್ಯೇಕ 3 ಕೋಟಿ: ಗ್ರಾಮೀಣ ಪ್ರದೇಶದಲ್ಲಿನ ಮರಂ (ಮಣ್ಣಿನ) ರಸ್ತೆಗಳನ್ನು ಪ್ರತಿ ವರ್ಷವೂ ಜಿಪಂನಿಂದಲೇ ನಿರ್ವಹಣೆ ಮಾಡಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ ಸರ್ಕಾರದಿಂದ 3.70 ಕೋಟಿ ರೂ. ಹಣ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯು 85 ಕಾಮಗಾರಿಗಳನ್ನು ಕೈಗೆತ್ತಿಕೊಂಡು ಕಾರ್ಯವನ್ನೂ ಆರಂಭಿಸಿದೆ.
-ದತ್ತು ಕಮ್ಮಾರ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.