ಕೋಲ್ಡ್ ಸ್ಟೋರೇಜ್‌ನಿಂದ ವಿಮುಖವಾಗುತ್ತಿರುವ ರೈತ
Team Udayavani, Jan 29, 2020, 4:46 PM IST
ಕುಷ್ಟಗಿ: ಕೃಷಿ ಹಾಗೂ ತೋಟಗಾರಿಕೆ ಉತ್ಪನ್ನಸಂರಕ್ಷಿಸಲು ಸರ್ಕಾರ 8 ಕೋಟಿ ರೂ. ವೆಚ್ಚ ಮಾಡಿ ಪಟ್ಟಣದಲ್ಲಿ ಶೀತಲ ಸರಪಳಿ ಘಟಕ (ಕೋಲ್ಡ್ ಚೈನ್ ಸ್ಟೋರೇಜ್) ನಿರ್ಮಿಸಿದರೂ ರೈತಾಪಿ ವರ್ಗವೇ ಇದರಿಂದ ವಿಮುಖವಾಗುತ್ತಿದೆ.
ಇಲ್ಲಿನ ಸುವರ್ಣ ಚತುಷ್ಪಥ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಕೈಗಾರಿಕಾ ಪ್ರದೇಶದಲ್ಲಿ ನಿರ್ಮಾಣವಾಗಿರುವ ಶೀತಲ ಸರಪಳಿ ಘಟಕ ಕಳೆದ ಮಾರ್ಚ್-2009ರಿಂದ ಕಾರ್ಯ ಆರಂಭಿಸಿದೆ. ಈ ಭಾಗದಲ್ಲಿ ದಾಳಿಂಬೆ ಬೆಳೆ ದೃಷ್ಟಿಯಲ್ಲಿಟ್ಟುಕೊಂಡು ಗುಣಮಟ್ಟದ ರಫ್ತಿಗಾಗಿ ಘಟಕ ಸ್ಥಾಪಿಸಿದೆ. ಆದರೆ ಬ್ಯಾಕ್ಟ್ರೀಯ ಬ್ಲೈಟ್ ರೋಗಕ್ಕೆ ದಾಳಿಂಬೆ ಹಾನಿಯಾಗಿದ್ದರಿಂದ ಘಟಕವೀಗ ನಿರುಪಯುಕ್ತವಾಗಿದೆ. ಘಟಕದಲ್ಲಿ ಖಾಲಿ ಬಿಡದೇ ಪರ್ಯಾಯವಾಗಿ ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಹಗೂ ರಫ್ತು ನಿಗಮದ ನಿರ್ದೇಶದನ್ವಯ ಧಾನ್ಯಗಳನ್ನು ಮಾಸಿಕ ಬಾಡಿಗೆಯಾಧಾರದಲ್ಲಿ ಸಂಗ್ರಹಿಸಿಡುವುದು ಮುಂದುವರಿದಿದೆ.
ರೈತರಿಗೆ ಮೊದಲ ಆದ್ಯತೆ: ಕೋಲ್ಡ್ ಸ್ಟೋರೇಜ್ ನಲ್ಲಿ ಧಾನ್ಯಗಳನ್ನು ಪ್ರತಿ ಕ್ವಿಂಟಲ್‌ಗೆ ಮಾಸಿಕ ಬಾಡಿಗೆ 22 ರೂ. ನಿಗದಿ ಮಾಡಲಾಗಿದೆ. ಆಸಕ್ತ ರೈತರು ಸ್ಟೋರೇಜ್‌ನಲ್ಲಿಡಲು ಜಮೀನಿನ ಪಹಣಿ, ಆಧಾರ್ ಕಾರ್ಡ್ ದಾಖಲೆ ಸಲ್ಲಿಸಬೇಕು. ಸದರಿ ಸ್ಟೋರೇಜ್ ರೈತರಿಗೆ ಮೊದಲಾದ್ಯತೆ ನಂತರದ ಆದ್ಯತೆ ವರ್ತಕರಿಗೆ. ಸುಗ್ಗಿ ಮುಗಿಯುವವರೆಗೂರೈತರ ಉತ್ಪನ್ನ ಸಂಗ್ರಹಿಸಿಡಲು ನಿರೀಕ್ಷಿಸಲಾಗುತ್ತಿದೆ.ಆದರೆ ರೈತರು ಉತ್ಪನ್ನ ತರದಿದ್ದಾಗ ವರ್ತಕರಿಗೆ ಅವಕಾಶ ಕಲ್ಪಿಸಲಾಗುತ್ತಿದೆ.
ರೈತರ ಸಮ್ಮುಖದಲ್ಲಿ ಮಾರಾಟ: ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಹಗೂ ರಫ್ತು ನಿಗಮ ರೈತರಿಗೆ ನಿಗದಿತ ಬಾಡಿಗೆ ದರದಲ್ಲಿ ದಾಸ್ತಾನು ಮಾಡಲು ಅವಕಾಶ ಅಲ್ಲದೇ, ಖರೀ ದಾರರಿಗೆ ಇಲ್ಲಿಗೆ ಬಂದು ಬೆಲೆ ನಿಗದಿಗೊಳಿಸಿ ರೈತರ ಸಮ್ಮುಖದಲ್ಲಿ ಮಾರಾಟಕ್ಕೆ ಅವಕಾಶ ಕಲ್ಪಿಸಿದೆ. ರೈತರು ಜಮೀನಿನಲ್ಲಿ ರಾಶಿ ಮಾಡಿ ಸ್ವಚ್ಛಗೊಳಿಸಿ, ನೇರವಾಗಿ ಕೋಲ್ಡ್ ಸ್ಟೋರೇಜ್‌ನಲ್ಲಿ ದಾಸ್ತಾನು ಮಾಡಬಹುದು ಎನ್ನುತ್ತಾರೆ ವ್ಯವಸ್ಥಾಪಕ ಭೀಮನಗೌಡ ಬಿರಾದಾರ.
ಸದುಪಯೋಗವಾಗುತ್ತಿಲ್ಲ: ಈ ಬಾರಿ ತೊಗರಿ, ಕಡಲೆ ಉತ್ಪನ್ನಗಳನ್ನು ಕೇಂದ್ರ ಸರ್ಕಾರದ ಬೆಂಬಲ ಬೆಲೆಗೆ ಮಾರಾಟ ಮಾಡುವವರೆಗೂ ಕೋಲ್ಡ್ ಸ್ಟೋರೇಜ್‌ನಲ್ಲಿ ಇಡಬಹುದು. ಆದರೆ ರೈತರು ಅಲ್ಲಿಯವರೆಗೂ ಕಾಯದೇ ಎಪಿಎಂಸಿ ಗಂಜ್ ದಲಾಲ್ ಅಂಗಡಿಗಳಲ್ಲಿ ಮಾರಾಟ ಮಾಡಿ ಕೈತೊಳೆದುಕೊಳ್ಳುತ್ತಿದ್ದು, ಕೆಲವು ಸಣ್ಣ ಅತಿ ಸಣ್ಣ ರೈತರಿಗೆ ಬೆಂಬಲ ಬೆಲೆಯೂ ಸಿಗುವುದಿಲ್ಲ. ಹೀಗಾಗಿ ಕೋಲ್ಡ್ ಸ್ಟೋರೇಜ್ ಸದುಪಯೋಗವೂ ಆಗುತ್ತಿಲ್ಲ. ಸದ್ಯ ತೊಗರಿ ಬೆಂಬಲ ಬೆಲೆ ಖರೀದಿಗೆ ಆನ್‌ಲೈನ್ ನೋಂದಣಿ ಪ್ರಕ್ರಿಯೆ ಜ.31ರ ವರೆಗೆ ಇದ್ದು, ರೈತರು ಪ್ರತಿ ಕ್ವಿಂಟಲ್‌ಗೆ 3,750 ರೂ.ನಂತೆ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಬೆಂಬಲ ಬೆಲೆಯಿಂದ ವಂಚಿತರಾಗುವಂತಾಗಿದೆ.
ಇದೀಗ ಕಡಲೆ ಬೆಳೆ ಕಟಾವು ಪ್ರಕ್ರಿಯೆ ನಡೆದಿದ್ದು, ಇನ್ನು ಬೆಂಬಲ ಬೆಲೆಗೆ ಖರೀದಿಸಲು ಸರ್ಕಾರ ಪ್ರಕಟಿಸಿಲ್ಲ. ಕಡಲೆ ಖರೀದಿ ಪ್ರಕಿಯೆ ಆರಂಭಗೊಳ್ಳುವವರೆಗೂ ಇಲ್ಲಿನ ಕೋಲ್ಡ್ ಸ್ಟೋರೇಜ್‌ನಲ್ಲಿ ಸಂಗ್ರಹಿಸಿಡಬಹುದಾಗಿದ್ದರೂ, ರೈತರು ಮನಸ್ಸು ಮಾಡುತ್ತಿಲ್ಲ.
ಕೋಲ್ಡ್ ಸ್ಟೋರೇಜ್‌ನಲ್ಲಿ ವೈಜ್ಞಾನಿಕವಾಗಿ ಕಾಳುಗಳನ್ನು ಸಂಗ್ರಹಿಸುವುದರಿಂದ ತಾಜಾತನ ಹಾಗೆಯೇ ಇರುತ್ತದೆ. ಕಾಳಿನ ಬಣ್ಣ ಮಾಸುವುದಿಲ್ಲ. ತೂಕ ಕಡಿಮೆಯಾಗುವುದಿಲ್ಲ. ಗುಣಮಟ್ಟ ಹಾಳಾಗುವುದಿಲ್ಲ. –ಭೀಮನಗೌಡ ಬಿರಾದಾರ, ವ್ಯವಸ್ಥಾಪಕ, ಶೀತಲ ಸರಪಳಿ ಘಟಕ ಕುಷ್ಟಗಿ
ಈ ಕೋಲ್ಡ್ ಸ್ಟೋರೇಜ್ ರೈತರಿಗೆ ಉಪಯೋಗವಾಗುತ್ತದೆ ಏನೋ ನಿಜ. ಆದರೆ ಮಾಸಿಕ ಬಾಡಿಗೆ ದರ ರೈತರು ಹಾಗೂ ವರ್ತಕರಿಗೆ ಏಕರೂಪವಾಗಿದೆ. ರೈತರಿಗಾಗಿ ದರ ಕಡಿಮೆ ಮಾಡಬೇಕು. –ಬಸವರಾಜ ಗಡಾದ, ರೈತ, ಕುಷ್ಟಗಿ
-ಮಂಜುನಾಥ ಮಹಾಲಿಂಗಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.