ಆನೆಗೊಂದಿ ಉತ್ಸವ: ಸ್ಥಳೀಯರಿಗೆ ಅವಕಾಶ
Team Udayavani, Nov 28, 2019, 3:45 PM IST
ಕೊಪ್ಪಳ: ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿಯಲ್ಲಿ 2020ರ ಜ.09 ಮತ್ತು 10 ರಂದು ನಡೆಯಲಿರುವ ಆನೆಗೊಂದಿ ಉತ್ಸವದಲ್ಲಿ ಕಲೆ, ಸಾಹಿತ್ಯ, ಸಂಗೀತ, ನೃತ್ಯ ಕಾರ್ಯಕ್ರಮಗಳಿಗೆ ಆದ್ಯತೆನೀಡುವ ಜತೆಗೆ ಸ್ಥಳೀಯ ಕಲಾವಿದರಿಗೆ ಹೆಚ್ಚು ಅವಕಾಶ ನೀಡಲಾಗುವುದು ಎಂದು ಡಿಸಿ ಹಾಗೂ ಉತ್ಸವ ಸಮಿತಿ ಅಧ್ಯಕ್ಷ ಪಿ. ಸುನೀಲ್ ಕುಮಾರ್ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಉಪ ವಿಭಾಗಾಧಿಕಾರಿ ಕಚೇರಿ ಸಭಾಂಗಣದಲ್ಲಿ 2019-20ನೇ ಸಾಲಿನ ಆನೆಗೊಂದಿ ಉತ್ಸವ ಆಚರಣೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕಲೆ, ಸಾಹಿತ್ಯ ಹಾಗೂ ಇತರ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯ್ಕೆಗಾಗಿ ಪ್ರತ್ಯೇಕ ಸಮಿತಿ ರಚಿಸಲಾಗಿದ್ದು, ಉತ್ತಮ ಪ್ರದರ್ಶನ ತೋರುವ ತಂಡಗಳನ್ನು ಆಯಾ ಸಮಿತಿ ಮುಖ್ಯಸ್ಥರೇ ಆಯ್ಕೆ ಮಾಡುತ್ತಾರೆ. ಅಂತಹ ತಂಡಗಳು ಉತ್ಸವದಲ್ಲಿ ತಮ್ಮ ಪ್ರತಿಭೆ ತೋರಲಿವೆ. ಕುಸ್ತಿ, ಗುಂಡು ಎತ್ತುವ ಸ್ಪರ್ಧೆ, ಜಲಕ್ರೀಡೆ ಹೀಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಜತೆ ಸಾಹಸ ಕ್ರೀಡೆಗಳನ್ನೂ ಹಮ್ಮಿಕೊಳ್ಳಲಾಗುವುದು. ಉತ್ಸವ ಸಂದರ್ಭದಲ್ಲಿ ಆನೆಗೊಂದಿ ಗ್ರಾಮದಲ್ಲಿ ಉತ್ತಮ ರೀತಿಯಲ್ಲಿ ಶೃಂಗಾರಗೊಳಿಸಿದ ಮನೆಗಳಿಗೆ ಉತ್ಸವ ಸಮಿತಿ ವತಿಯಿಂದ ಬಹುಮಾನ ವಿತರಿಸಲಾಗುವುದು ಎಂದರು.
ಉತ್ಸವದಲ್ಲಿ ಉತ್ತಮ ಆಹಾರ ತಯಾರಿಸುವ ಸ್ಪರ್ಧೆ ಏರ್ಪಡಿಸಲಿದ್ದು, ಇದರಲ್ಲಿ ವಿಜಯನಗರ ಸಾಮ್ರಾಜ್ಯದ ವೈಭವವನ್ನು ನೆನಪಿಸುವ ಆಹಾರ ಪದಾರ್ಥಗಳಿಗೆ ಬಹುಮಾನ ನೀಡಲಾಗುವುದು. ಪ್ರವಾಸೋದ್ಯಮ ಇಲಾಖೆಯಿಂದ ಆನೆಗೊಂದಿ ಇತಿಹಾಸ ಕುರಿತು ಪ್ರಚಾರ ಫಲಕಗಳನ್ನು ಜಿಲ್ಲೆಯಾದ್ಯಂತ ಪ್ರದರ್ಶಿಸಲಾಗುವುದು ಎಂದರು.
ಗಗನ ಮಹಲ್ ಹತ್ತಿರ ತೋಟಗಾರಿಕೆ ಇಲಾಖೆ ವತಿಯಿಂದ ಫಲ-ಪುಷ್ಪ ಪ್ರದರ್ಶನ ನಡೆಯಲಿದೆ. ಜಿಲ್ಲೆಯ ಕಲಾವಿದರಿಗೆ ಕೆಲ ಮಾನದಂಡ ಅನುಸರಿಸಿ ರಾಜ್ಯ, ರಾಷ್ಟ್ರ ಹಾಗೂ ಜಿಲ್ಲಾ ಪ್ರಶಸ್ತಿ ವಿಜೇತರಿಗೆ ಮತ್ತು ಹಲವಾರು ಪುಸ್ತಕಗಳನ್ನು ಪ್ರಕಟಿಸಿದ ಸಾಹಿತಿಗಳಿಗೆ ಆದ್ಯತೆ ನೀಡುವ ಕುರಿತು ಸಮಿತಿ ರಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಪ್ರತಿಯೊಬ್ಬ ಕಲಾವಿದರಿಗೆ ಆನೆಗೊಂದಿ ಉತ್ಸವದ ಶೋಭಾಯಾತ್ರೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗುವುದು. ಜಿಲ್ಲೆಯಲ್ಲಿರುವ ಕಲೆ, ಸಾಹಿತ್ಯ, ಸಂಗೀತ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಪ್ರಖ್ಯಾತಿ ಪಡೆದವರನ್ನು ಸಮಿತಿಗಳು ಗುರುತಿಸಿ, ಉತ್ಸವದಲ್ಲಿ ಪಾಲ್ಗೊಳ್ಳುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಅಪರ ಜಿಲ್ಲಾಧಿಕಾರಿ ಎಂ.ಪಿ ಮಾರುತಿ, ಉಪವಿಭಾಗಾಧಿಕಾರಿ ಸಿ.ಡಿ. ಗೀತಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ ಕೆ.ರಂಗಣ್ಣನವರ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ರಾಜಶೇಖರ ಅಂಗಡಿ, ಸಾಹಿತಿಗಳಾದ ಎಚ್.ಎಸ್. ಪಾಟೀಲ್, ಅಲ್ಲಮಪ್ರಭು ಬೆಟ್ಟದೂರ, ಗಣ್ಯರಾದ ಬಸವರಾಜ ಆಕಳವಾಡಿ, ಸಿ.ಬಿ ಜಡಿಯವರ ಸೇರಿದಂತೆ ಜಿಲ್ಲೆಯ ವಿವಿಧ ಸಾಹಿತಿಗಳು, ಕಲಾವಿದರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.