ಜಡಿ ಮಳೆಗೆ ರೋಸಿ ಹೋದ ಅನ್ನದಾತ
ಗಂಗಾವತಿ, ಮುನಿರಾಬಾದ್ ಭಾಗದಲ್ಲಿ ಭತ್ತವನ್ನು ಬೆಳೆದಿದ್ದಾರೆ.
Team Udayavani, Nov 20, 2021, 5:23 PM IST
ಕೊಪ್ಪಳ: ಜಿಲ್ಲೆಯಲ್ಲಿ ಗುರುವಾರದಿಂದ ಜಿನುಗುತ್ತಿರುವ ಜಡಿ ಮಳೆಗೆ ಅನ್ನದಾತ ಕಂಗಾಲಾಗಿದ್ದಾರೆ. ಫಸಲು ಉತ್ತಮವಾಗಿ ಬಂದಿದ್ದರೂ ಒಕ್ಕಲು ಮಾಡಿಕೊಳ್ಳಲಾರದ ಪರಿಸ್ಥಿತಿ ಎದುರಾಗಿದೆ. ಭತ್ತ ಗದ್ದೆಯಲ್ಲೇ ನೆಲಕ್ಕುರಳಿ ಮೊಳಕೆಯೊಡೆಯುತ್ತಿದ್ದರೆ, ಗುಂಪಿನ ರಾಶಿಗಳಲ್ಲಿಯೇ ಮೆಕ್ಕೆಜೋಳ, ಸಜ್ಜೆ ನೀರಿನಲ್ಲೇ ನೆನೆದು ಸಸಿ ನಾಟುತ್ತಿವೆ. ಇದರಿಂದ ರೈತರಿಗೆ ದಿಕ್ಕು ತೋಚದಾಗಿದೆ.
ಇನ್ನು ಮಳೆಯಿಂದಾಗಿ ಅಲ್ಲಲ್ಲಿ ಮನೆಗಳು ಬಿದ್ದಿದ್ದರೆ, ಶಾಲೆ, ಕಾಲೇಜುಗಳಿಗೆ ಜಿಲ್ಲಾಡಳಿತ ರಜೆಯನ್ನೂ ಘೋಷಣೆ ಮಾಡಿದೆ. ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯೇ ಆಗಿವೆ. ರೈತರು ಕಷ್ಟಪಟ್ಟು ಮೆಕ್ಕೆಜೋಳ ಸೇರಿ ಇತರೆ ಬೆಳೆಯನ್ನು ಸಮೃದ್ಧಿಯಾಗಿಯೇ ಬೆಳೆದಿದ್ದಾರೆ. ಅದರಲ್ಲೂ ಮಸಾರಿ ಭಾಗದಲ್ಲಿ ಸಜ್ಜೆ ಹಾಗೂ ಮೆಕ್ಕೆಜೋಳ ಬೆಳೆದಿದ್ದರೆ, ಗಂಗಾವತಿ, ಮುನಿರಾಬಾದ್ ಭಾಗದಲ್ಲಿ ಭತ್ತವನ್ನು ಬೆಳೆದಿದ್ದಾರೆ. ಭತ್ತವು ಇನ್ನೂ ಹಸಿರಾಗಿದೆ. ಕೆಲವೆಡೆ ಕಟಾವಿನ ಹಂತದಲ್ಲಿದೆ. ಆದರೆ ಜಿನುಗು ಮಳೆಯು ದೊಡ್ಡ ಅವಾಂತರವನ್ನೇ ಸೃಷ್ಟಿ ಮಾಡಿದೆ. ತದೇಕ ಚಿತ್ತದಿಂದ ಮಳೆಯು ಜಿಲ್ಲೆಯಾದ್ಯಂತ ಆವರಿಸಿದೆ.
ಮೋಡ ಕವಿದ ವಾತಾವರಣ ನಿರ್ಮಾಣವಾಗಿ ಜಡಿ ಮಳೆಯು ನಿರಂತರ ಸುರಿಯುತ್ತಲೇ ಇದೆ. ಇದರಿಂದಾಗಿ ಬಿಸಿಲು, ಬಯಲು ನಾಡೆನಿಸಿದ್ದ ಕೊಪ್ಪಳವು ಮಲೆನಾಡಿನಂತೆ ಭಾಸವಾಗಿದೆ. ಜಿನುಗು ಮಳೆ, ಸುಳಿ ಗಾಳಿಗೆ ಗದ್ದೆಯಲ್ಲಿನ ಭತ್ತವು ನೆಲಕ್ಕೆ ಉರುಳಿದೆ.
ಹತ್ತಾರು ಸಾವಿರ ರೂ. ಖರ್ಚು ಮಾಡಿ ಬೆಳೆದಿದ್ದ ಭತ್ತವು ನೆಲಕ್ಕೆ ಉರುಳಿರುವುದನ್ನು ನೋಡುತ್ತಿರುವ ರೈತ ಕಣ್ಣೀರಿಡುವಂತಾಗಿದೆ. ಕಷ್ಟಪಟ್ಟು ಭತ್ತ ಬೆಳೆದಿದ್ದೇವೆ. ಇನ್ನೇನು ಕಟಾವಿಗೆ ಬರುವ ಹಂತದಲ್ಲಿತ್ತು. ಕೈಗೆ ಬಂದ ತುತ್ತು ನಮ್ಮ ಬಾಯಿಗೆ ಬಾರದಂತಾಯಿತಲ್ಲ. ಆ ವರುಣನಿಗೆ ನಮ್ಮ ಮೇಲೇಕೆ ಇಷ್ಟು ಸಿಟ್ಟು. ಮಳೆಯಿಂದ ಭತ್ತವೆಲ್ಲವೂ ಇಲ್ಲದಂತಾಗುತ್ತಿದೆಲ್ಲ ಎಂದು ರೋದನೆ ವ್ಯಕ್ತಪಡಿಸಿದ್ದಾನೆ.
ಇನ್ನು ಕೊಪ್ಪಳ, ಕುಷ್ಟಗಿ ಹಾಗೂ ಕನಕಗಿರಿಯ ಕೆಲವು ಮಸಾರಿ ಭಾಗದಲ್ಲಿ ಮೆಕ್ಕೆಜೋಳವನ್ನು ಈಗಾಗಲೇ ಒಕ್ಕಲು ಮಾಡಿದ್ದು ರಾಶಿ ಮಾಡಿಕೊಂಡಿದ್ದಾರೆ. ಬಿಸಿಲಿಗೆ ಜೋಳವನ್ನು ಒಣಗಿಸಿ ಇನ್ನೇನು ಮಾರುಕಟ್ಟೆಗಳಿಗೆ ಕಳುಹಿಸಬೇಕು ಎನ್ನುವಷ್ಟರಲ್ಲಿ ವರುಣ ಅವಾಂತರ ತಂದಿಟ್ಟಿದ್ದಾನೆ. 3-4 ದಿನದಿಂದ ರಾಶಿಯನ್ನು ತಾಡಪಾಲು ಹೊದಿಕೆ ಹಾಕಿ ಮುಚ್ಚಿಡಲಾಗಿದೆ. ಇದರ ಕಾವಿನಿಂದಾಗಿ ಜೋಳ ಹಾಗೂ ಸಜ್ಜೆಯು ಒಳಗಡೆ ಕಾವೇರಿ ಅಲ್ಲೇ ವಾಸನೆಯಾಗುತ್ತಿವೆ. ಕೆಲವು ಕಪ್ಪುಗಟ್ಟುತ್ತಿವೆ. ಇಂತಹ ಜೋಳವನ್ನು ಮಾರುಕಟ್ಟೆಗೆ ತೆಗೆದುಕೊಂಡು ಹೋದರೆ ವರ್ತಕರು ಅಡ್ಡಾದಿಡ್ಡಿಗೆ ಖರೀದಿ ಮಾಡುತ್ತಾರೆ. ಇದರಿಂದ ನಮಗೆ ತುಂಬ ನಷ್ಟವಾಗಲಿದೆ ಎಂದು ರೈತಾಪಿ ವಲಯವು ತುಂಬ ಆತಂಕ ವ್ಯಕ್ತಪಡಿಸಿದೆ.
ಬೆಳೆ ಹಾನಿ ಪರಿಹಾರಕ್ಕೆ ಸರ್ಕಾರದ ಮೋರೆ: ಭತ್ತವೇ ಹೆಚ್ಚು ಜಡಿ ಮಳೆಗೆ ಹಾನಿಯಾಗಿದ್ದು, ಸರ್ಕಾರವು ಕೂಡಲೇ ಸಮರ್ಪಕವಾಗಿ ಸರ್ವೇ ನಡೆಸಿ ಬೆಳೆ ಹಾನಿಯ ವರದಿ ಸರ್ಕಾರಕ್ಕೆ ಸಲ್ಲಿಸಿ ನಮಗೆ ಪರಿಹಾರ ನೀಡಬೇಕು ಎಂದು ರೈತಾಪಿ ವಲಯ ಒತ್ತಾಯಿಸಿದೆ. ಆದರೆ ಈ ಹಂತದಲ್ಲಿ ಸರ್ಕಾರ ಯಾವ ನಿರ್ಧಾರ ಕೈಗೊಳ್ಳಲಿದೆ ಎನ್ನುವುದು ನೋಡಬೇಕಿದೆ. ಇನ್ನೊಂದೆಡೆ ಜಿಲ್ಲಾಡಳಿತವು ಬೆಳೆಯ ಹಾನಿಯ ಕುರಿತು ಸರ್ವೇ ಕಾರ್ಯಕ್ಕೂ ಮುಂದಾಗಿದೆ.
ತುಂಗಭದ್ರಾ ಡ್ಯಾಂನಿಂದ ನದಿಪಾತ್ರಕ್ಕೆ ನೀರು: ತುಂಗಭದ್ರಾ ಡ್ಯಾಂನಿಂದ ನದಿಪಾತ್ರಗಳಿಗೆ ನೀರು ಹರಿ ಬಿಡಲಾಗಿದ್ದು, ಇದಕ್ಕೂ ಮೊದಲು ಜಿಲ್ಲಾಡಳಿತವು ನದಿ ಪಾತ್ರದಲ್ಲಿನ ಗ್ರಾಮಗಳಿಗೆ ಡಂಗೂರ ಸಾರಿಸಿದ್ದಾರೆ. ನದಿಯ ತಟಗಳಿಗೆ ಜನ ಹಾಗೂ ಜಾನುವಾರು ಹಿಡಿದುಕೊಂಡು ತೆರಳದಂತೆಯೂ ಮುನ್ಸೂಚನೆ ಕೊಟ್ಟಿದ್ದಾರೆ. ಈ ಮಧ್ಯೆಯೂ ತಾಲೂಕಿನ ಶಿವಪುರ, ಗಡ್ಡಿ ಸೇರಿ ಇತರೆ ಪ್ರದೇಶಗಳಲ್ಲಿ ಜನರು ನದಿಪಾತ್ರದತ್ತ ತೆರಳುತ್ತಿದ್ದಾರೆ. ದಂಪತಿಯಿಬ್ಬರು ತೋಟ ಕಾಯಲು ಹೋಗಿ ಗಡ್ಡೆಯಲ್ಲಿ ಸಿಲುಕಿದ್ದು, ಅವರಿಬ್ಬರನ್ನು ಜಿಲ್ಲಾಡಳಿತವು ರಕ್ಷಣೆ ಮಾಡಿ ಸುರಕ್ಷಿತ ಸ್ಥಳಕ್ಕೆ ಕರೆತಂದಿದೆ.
ಒಟ್ಟಿನಲ್ಲಿ ಜಿಲ್ಲೆಯಾದ್ಯಂತ ಭತ್ತ, ಮೆಕ್ಕೆಜೋಳ, ತೋಟಗಾರಿಕೆ ಬೆಳೆಗಳಾದ ಈರುಳ್ಳಿ, ದ್ರಾಕ್ಷಿ ಸೇರಿದಂತೆ ಇತರೆ ಬೆಳೆಯು ಜಡಿ ಮಳೆಗೆ ಹಾನಿಗೀಡಾಗುತ್ತಿದೆ. ಇದರಿಂದ ರೈತ ನಷ್ಟ ಅನುಭವಿಸುತ್ತಿದ್ದು, ಪರಿಹಾರದ ಮೊರೆ ಇಟ್ಟಿದ್ದಾನೆ. ಸರ್ಕಾರ ರೈತರ ಬೆಳೆ ಸರ್ವೇ ಸಮರ್ಪಕವಾಗಿ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕಿದೆ.
ಅತಿಯಾದ ಮಳೆಯಿಂದಾಗಿ ಭತ್ತವು ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ. ಗದ್ದೆಯಲ್ಲಿದ್ದ ಭತ್ತ ನೆಲಕ್ಕುರಳಿ ಅಲ್ಲಿಯೇ ಮೊಳಕೆ ಒಡೆಯುತ್ತಿದೆ. ಇದರಿಂದ ತುಂಬ ನಷ್ಟವಾಗಿದೆ. ನಮಗೆ ದಿಕ್ಕು ತಿಳಿಯದಂತ ಪರಿಸ್ಥಿತಿ ಬಂದಿದೆ. ಸರ್ಕಾರ ಕೂಡಲೇ ಬೆಳೆ ಹಾನಿ ಸರ್ವೇ ನಡೆಸಿ ರೈತರಿಗೆ ನಷ್ಟ ಪರಿಹಾರ ಕೊಡಬೇಕು.
ಭೈರವ ಸಿದ್ದಾಪುರ, ರೈತ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tawargera: ಚಲಿಸುತ್ತಿದ್ದ ಬಸ್ಸಿಗೆ ಡಿಕ್ಕಿ ಹೊಡೆದು ನಂತರ ಕುರಿಗಳ ಮೇಲೆ ಹರಿದ ಕ್ಯಾಂಟರ್
Gangavathi: ಪತ್ನಿ ವರದಕ್ಷಿಣೆ ತಂದಿಲ್ಲ ಎಂದು ಮನೆಗೆ ಬೀಗ ಹಾಕಿ ಪತಿ ಹಾಗೂ ಮನೆಯವರು ಪರಾರಿ
Koppala ಗವಿಮಠ ಜಾತ್ರೆಗೆ ನಟ ಅಮಿತಾಬ್ ಬಚ್ಚನ್?
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
Koppala: ಮರಕುಂಬಿ ಅಸ್ಪೃಶ್ಯತೆ ಪ್ರಕರಣ… 99 ಜನರಿಗೆ ಜಾಮೀನು ನೀಡಿದ ಹೈಕೋರ್ಟ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.