ನಗರಸಭೆ ಮೊದಲ ಸಭೆಯಲ್ಲೇ ವಾಗ್ಯುದ್ಧ
ಗ್ಯಾಸ್ ಪೈಪ್‌ಲೈನ್ ಅಳವಡಿಕೆಗೆ ಪರ-ವಿರೋಧ ; ಸಭೆಯಲ್ಲಿ ಪೇಚಿಗೆ ಸಿಲುಕಿದ ಅಧ್ಯಕ್ಷೆ ಭೂಮಕ್ಕನವರ
Team Udayavani, Jun 7, 2022, 12:10 PM IST
ಕೊಪ್ಪಳ: ನಗರಸಭೆ ಸಂಭಾಗಣದಲ್ಲಿ ಸೋಮವಾರ ನಡೆದ ನೂತನ ಅಧ್ಯಕ್ಷೆ ಶಿವಗಂಗಾ ಭೂಮಕ್ಕನವರ್ ನೇತೃತ್ವದಲ್ಲಿ ನಡೆದ ಮೊದಲ ಸಾಮಾನ್ಯ ಸಭೆಯಲ್ಲಿ ಗ್ಯಾಸ್ ಪೈಪ್‌ಲೈನ್ ಅಳವಡಿಕೆಗೆ ವಾಗ್ಯುದ್ಧವೇ ನಡೆದಿದ್ದು, ಸದಸ್ಯರು ಕೈ-ಕೈ ಮಿಲಾಯಿಸುವ ಹಂತಕ್ಕೆ ತಲುಪಿದ್ದರು.
ಪೌರಾಯುಕ್ತ ಎಚ್.ಎನ್. ಭಜಕ್ಕನವರ್ ಮಾತನಾಡಿ, ಎಜಿಪಿ ಕಂಪನಿ ನಗರದಲ್ಲಿ ಮನೆ-ಮನೆಗೆ ಅಡುಗೆ ಅನಿಲ ಪೂರೈಕೆಗೆ ಗ್ಯಾಸ್ ಪೈಪ್‌ಲೈನ್ ಅಳವಡಿಸುತ್ತಿದ್ದಾರೆ. ಆದರೆ, ಕಾಮಗಾರಿ ನಡೆಸುವ ಸಂಬಂಧ ಸದಸ್ಯರು ಹಾಗೂ ಸಾರ್ವಜನಿಕರಿಂದ ದೂರು ಬಂದಿವೆ. ಕಡತ ಪರಿಶೀಲಿಸಲಾಗಿದೆ. ಜಿಲ್ಲಾಡಳಿತ ಹಾಗೂ ನಗರಸಭೆಯಿಂದ ಹಿಂದಿನ ಪೌರಾಯುಕ್ತರು ಪರವಾನಗಿ ನೀಡಿದ್ದಾರೆಂದು ಸಭೆ ಗಮನ ಸೆಳೆದರು.
ಓಣಿಗಳಲ್ಲಿ ಅವೈಜ್ಞಾನಿಕವಾಗಿ ರಸ್ತೆ ಕಿತ್ತು ಹಾಕಿ ಪೈಪ್ ಅಳವಡಿಸುತ್ತಿದ್ದಾರೆ. ಕುಡಿವ ನೀರು, ಮೊಬೈಲ್ ನೆಟ್‌ವರ್ಕ್ ಕೇಬಲ್‌ಗಳಿದ್ದು, ಅವುಗಳ ಮೇಲೆ ಪೈಪ್ ಹಾಕುತ್ತಿದ್ದಾರೆ. ಕೆಲವೆಡೆ ಪೈಪ್ ಒಡೆದು ಹೋಗಿದೆ. ಮುಂದೆ ಅನಾಹುತವಾದರೆ ಯಾರು ಜವಾಬ್ದಾರಿ? ಎಂದು ಸದಸ್ಯರಾದ ಮುತ್ತು ಕುಷ್ಟಗಿ, ಸಿದ್ದು ಮ್ಯಾಗೇರಿ, ಅಮ್ಜದ್ ಪಟೇಲ್, ಮಹೇಂದ್ರ ಚೋಪ್ರಾ ಇತರರು ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಕಂಪನಿ ಪ್ರತಿನಿಧಿ ಜಗದೀಶ ಪುರ್ಲಿ ಪ್ರತಿಕ್ರಿಯಿಸಿ, ಕೇಂದ್ರ ಸರ್ಕಾರದ ಯೋಜನೆ ಇದಾಗಿದ್ದು, ನಿಯಮದ ಅನುಸಾರ ಕಾಮಗಾರಿ ನಡೆಸುತ್ತಿದ್ದೇವೆ. ಈಗಾಗಲೇ ಹಲವು ಜಿಲ್ಲೆಗಳಲ್ಲಿ ಕಾಮಗಾರಿ ನಡೆಸಿದ್ದು, ಯಾವುದೇ ಸಮಸ್ಯೆಯಾಗಿಲ್ಲ. ನೈಸರ್ಗಿಕ ಅನಿಲ ಬಳಕೆಯಿಂದ ಎಲ್‌ಪಿಜಿ ಮೇಲಿನ ಅವಲಂಬನೆ ತಪ್ಪಲಿದೆ ಎಂದರು. ಇದಕ್ಕೆ ಕೆಲ ಸದಸ್ಯರು ಒಪ್ಪಿದರೆ, ಇನ್ನೂ ಕೆಲವರು ಒಪ್ಪಲಿಲ್ಲ. ಹೀಗಾಗಿ ಸದಸ್ಯರ ಮಧ್ಯೆ ವಾಗ್ವಾದ ನಡೆದು ಏಕ ವಚನದ ಪದ ಪ್ರಯೋಗವೂ ನಡೆದವು. ವಾಗ್ಯುದ್ಧವೇ ನಡೆದು, ಸಭೆಯಲ್ಲಿ ಗೊಂದಲ, ಗದ್ದಲದ ವಾತಾವರಣ ಸೃಷ್ಟಿಯಾಯಿತು. ಇದರಿಂದ ಕೆಲವು ಸದಸ್ಯರು ಪರಿಸ್ಥಿತಿ ನಿಯಂತ್ರಿಸುವ ಪ್ರಯತ್ನ ನಡೆಸಿದರು.
ಕೊನೆಗೂ ಅಧ್ಯಕ್ಷೆ ಪೇಚಿಗೆ ಸಿಲುಕಿ ಸದಸ್ಯರ ಅಭಿಪ್ರಾಯ ಪಡೆದು ನಡಾವಳಿ ಜಿಲ್ಲಾಧಿಕಾರಿಗೆ ಸಲ್ಲಿಸೋಣ. ಅವರೇ ಅಂತಿಮ ನಿರ್ಣಯ ತೆಗೆದುಕೊಳ್ಳಲಿ ಎಂದು ಪೌರಾಯುಕ್ತರ ಮೂಲಕ ಸಲಹೆ ನೀಡಿದರು.
ನಗರದಲ್ಲಿ ಫುಟ್‌ಪಾತ್‌ನಲ್ಲಿ ಅಕ್ರಮವಾಗಿ ಕಟ್ಟಡ ಕಟ್ಟುತ್ತಿದ್ದಾರೆ. ಹಲವು ಬಾರಿ ದೂರು ನೀಡಿದರೂ ಕ್ರಮವಾಗಿಲ್ಲ. ಫಾರ್ಮ್ 3 ಸಮಸ್ಯೆ ಲಂಚಕ್ಕೆ ದಾರಿಯಾಗಿದೆ. ನಾವು ಕೇಳಿದರೆ ಸಿಗಲ್ಲ. ಏಜೆಂಟ್‌ಗಳಿಗೆ 30 ಸಾವಿರ ರೂ. ಕೊಟ್ಟರೆ ಸಿಗತ್ತದೆ ಹೇಗೆ?. ಎಸ್ಸೆಸ್ಸೆಲ್ಸಿ ಫೇಲಾದವನೂ ಕೊಪ್ಪಳದಲ್ಲಿ ಪೌರಾಯುಕ್ತ ಆಗುವ ಸ್ಥಿತಿ ಇದೆ. ಖಾತೆ ಬಿ ಮಾಡಿಕೊಟ್ಟು ಜನರ ಸಮಸ್ಯೆ ಪರಿಹರಿಸುವಂತೆ ಸದಸ್ಯ ಮುತ್ತುರಾಜ ಕುಷ್ಟಗಿ ವಾಗ್ಧಾಳಿ ನಡೆಸಿದರು. ಸಾರ್ವಜನಿಕ ಉದ್ಯಾನದಲ್ಲೂ ಅಕ್ರಮವಾಗಿ ಮನೆ ಕಟ್ಟಲಾಗುತ್ತಿದೆ ಎಂದು ಸದಸ್ಯ ರಾಜಶೇಖರ್ ಆಡೂರು ಆರೋಪಿಸಿದರು. ಈ ಬಗ್ಗೆ ಸಮಿತಿ ರಚಿಸಿ ವರದಿ ಪಡೆದು ಕ್ರಮ ಕೈಗೊಳ್ಳುವುದಾಗಿ ಪೌರಾಯುಕ್ತರು ಭರವಸೆ ನೀಡಿದರು.
ನಗರದಲ್ಲಿ ಕಸ ವಿಲೇವಾರಿ ವಾಹನಗಳು ನಾಲ್ಕೈದು ದಿನಗಳಿಗೆ ವಾರ್ಡ್‌ಗೆ ಬರುತ್ತಿವೆ. ವಾಹನಗಳಿಗೆ ಸರಿಯಾದ ದಾಖಲಾತಿ ಇಲ್ಲ. ಎಪಿಎಂಸಿಯಲ್ಲಿ ಒಂದು ವರ್ಷದಿಂದ ಗಾಡಿ ನಿಲ್ಲಿಸಿದ್ದು, ನಿರುಪಯುಕ್ತವಾಗಿದೆ ಎಂದು ಸದಸ್ಯರಾದ ಅಜೀಂ ಅತ್ತಾರ್, ಸೋಮಣ್ಣ ಹಳ್ಳಿ, ಗುರುರಾಜ ಹಲಗೇರಿ ಆರೋಪಿಸಿದರು. ಅಭಿಯಂತರ ಸೋಮನಾಥ ಉತ್ತರಿಸಿ, ವಾಹನ ಕೊರತೆಯಿದೆ. ಇರುವ ಕೆಲವು ವಾಹನ ದುರಸ್ತಿಗೆ ಬಂದಿವೆ. ಹೀಗಾಗಿ ಸಮಸ್ಯೆಯಾಗುತ್ತಿದೆ ಎಂದರು. ಹೊಸ ವಾಹನಕ್ಕೆ ಟೆಂಡರ್ ಕರೆದಿದ್ದು, ಶೀಘ್ರ ವಾಹನ ತರಿಸಿ. ಹಳೇ ವಾಹನ ರಿಪೇರಿ ಮಾಡಿಸಿ ಎಂದು ಪೌರಾಯುಕ್ತರು ಸೂಚಿಸಿದರು.
ಸಭೆಯಲ್ಲಿ ಉಪಾಧ್ಯಕ್ಷೆ ಆಯೇಷಾ ರುಬಿನಾ, ಎಇಇ ಶಿವಾನಂದ ರಡ್ಡೇರ್ ಸೇರಿದಂತೆ ಇತರರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.