ಜಿಲ್ಲೆಯ ಮೂರು ಕಡೆ ಕೋವಿಡ್-19 ಕೇರ್ ಸೆಂಟರ್
Team Udayavani, May 26, 2020, 5:04 PM IST
ಕೊಪ್ಪಳ: ಜಿಲ್ಲೆಯಲ್ಲಿ ಕೋವಿಡ್ ಸೋಂಕು ನಿಯಂತ್ರಣಕ್ಕೆ ತರಲು ಹಾಗೂ ಮುಂಬರುವ ದಿನಗಳಲ್ಲಿ ಸೋಂಕು ಹೆಚ್ಚಳವಾದರೆ ಅವರಿಗೆ ಯಾವ ಸ್ಥಳದಲ್ಲಿ ಚಿಕಿತ್ಸೆ ನೀಡಬೇಕು. ಕ್ವಾರಂಟೈನ್ ಮಾಡಬೇಕೆಂಬ ಪೂರ್ವ ತಯಾರಿ ಮಾಡಿಕೊಳ್ಳಲು ಜಿಲ್ಲಾಡಳಿತ ಮೂರು ಕಡೆ ಕೋವಿಡ್-19 ಕೇರ್ ಸೆಂಟರ್ ಆರಂಭಿಸಲು ಯೋಜನೆ ರೂಪಿಸಿದೆ.
ರಾಜ್ಯದಲ್ಲಿ ಕೋವಿಡ್ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಅದರಲ್ಲೂ ಲಾಕ್ ಡೌನ್ ಸಡಲಿಕೆ ಬಳಿಕ ಸೋಂಕು ವೇಗವಾಗಿ ಹರಡುತ್ತಿದೆ. ಇದೆಲ್ಲವನ್ನು ಅವಲೋಕಿಸಿ ಸರ್ಕಾರ ಸಹಿತ ಎಲ್ಲ ಜಿಲ್ಲೆಗಳಲ್ಲಿ ಪೂರ್ವ ತಯಾರಿಯಾಗಿ ಕ್ವಾರಂಟೈನ್ ಕೇಂದ್ರ ಹಾಗೂ ಐಸೋಲೇಟೆಡ್ ವಾರ್ಡ್ ಸೇರಿದಂತೆ ವಿವಿಧ ಸಿದ್ಧತೆ ಕೈಗೊಳ್ಳಲು ಸೂಚನೆ ನೀಡಿದೆ. ಕೊಪ್ಪಳ ಜಿಲ್ಲೆಯಲ್ಲಿ ಪೂರ್ವ ತಯಾರಿಯಾಗಿ ಮೂರು ಕಡೆ ವಿಶೇಷ ಕೋವಿಡ್-19 ಕೇರ್ ಸೆಂಟರ್ ಆರಂಭಕ್ಕೆ ವ್ಯವಸ್ಥೆ ಮಾಡಿಕೊಳ್ಳುತ್ತಿದೆ.
ಜಿಲ್ಲೆಯಲ್ಲಿ ಗುಳೆ ಹೋಗಿ ವಾಪಸ್ಸಾದವರ ಸಂಖ್ಯೆ 25 ಸಾವಿರಕ್ಕೂ ಹೆಚ್ಚಿದೆ. ಇನ್ನೂ ಅನ್ಯ ಜಿಲ್ಲೆ, ರಾಜ್ಯಗಳಿಂದ ಅತ್ಯಧಿಕ ಪ್ರಮಾಣದಲ್ಲಿ ಜನರು ವಾಪಸ್ಸಾಗಿದ್ದಾರೆ. ಇದರಲ್ಲಿ ಗುಳೆ ಹೋದವರು, ವಿದ್ಯಾರ್ಥಿಗಳು ಹಾಗೂ ಉದ್ಯಮ ಅರಸಿ ಹೋಗಿದ್ದವರೂ ಇದ್ದಾರೆ. ಅಂದಾಜು 36 ಸಾವಿರಕ್ಕೂ ಹೆಚ್ಚು ಜನರು ಜಿಲ್ಲೆಗೆ ವಾಪಸ್ಸಾಗಿದ್ದು, ಇತ್ತೀಚೆಗೆ ಹೈರಿಸ್ಕ್ ಪ್ರದೇಶಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದಾರೆ. ಅವರ ಮೇಲೆ ಜಿಲ್ಲಾಡಳಿತ ನಿಗಾ ಇರಿಸಿದೆ. ಇದೆಲ್ಲವನ್ನೂ ಅವಲೋಕಿಸಿಯೇ ಸರ್ಕಾರವು ಜಿಲ್ಲೆಗಳಲ್ಲಿ ಕೋವಿಡ್ ಸೋಂಕು ದಿಢೀರ್ ಹೆಚ್ಚಳವಾದರೆ ಅವರಿಗೆ ಆಸ್ಪತ್ರೆ, ಚಿಕಿತ್ಸೆ, ಪ್ರಯೋಗಾಲಯ ಸೇರಿದಂತೆ ಪ್ರಾಥಮಿಕ ಸಂಪರ್ಕಿತರಿಗೆ ಕ್ವಾರಂಟೈನ್ ಮಾಡುವ ಸೇರಿದಂತೆ ವಿವಿಧ ಸಿದ್ಧತೆಗೆ ಸೂಚಿಸಿದ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ತಳಕಲ್ ಸಮೀಪದ ಸರ್ಕಾರಿ ಇಂಜನಿಯರಿಂಗ್ ಕಾಲೇಜಿನ ವಸತಿ ನಿಲಯಗಳು, ಕೊಪ್ಪಳದ ವಿಜ್ಞಾನ ಭವನ, ಗಂಗಾವತಿ ಸರ್ಕಾರಿ ಇಂಜನಿಯರಿಂಗ್ ಕಾಲೇಜಿನಲ್ಲಿ ವ್ಯವಸ್ಥೆಗೆ ಸಿದ್ಧತೆ ಮಾಡಿಕೊಂಡಿದೆ.
500 ಹಾಸಿಗೆ ವ್ಯವಸ್ಥೆ: ಪ್ರಸ್ತುತ ಜಿಲ್ಲಾ ಆಸ್ಪತ್ರೆಯನ್ನು ಕೋವಿಡ್-19 ಆಸ್ಪತ್ರೆಯನ್ನಾಗಿ ಪರಿವರ್ತಿಸಲಾಗಿದೆ. ಆದರೆ ಸಾಮಾನ್ಯ ರೋಗಿಗಳಿಗೆ ಚಿಕಿತ್ಸೆ ನೀಡುವುದು ಸಮಸ್ಯೆಯಾಗುತ್ತಿರುವ ಹಿನ್ನೆಲೆಯಲ್ಲಿ ಇರುವ ಜಿಲ್ಲಾಸ್ಪತ್ರೆಯಲ್ಲೇ ಅರ್ಧ ಕೋವಿಡ್-19 ಬ್ಲಾಕ್, ಇನ್ನರ್ಧ ಸಾಮಾನ್ಯ ರೋಗಿಗಳಿಗೆ ಚಿಕಿತ್ಸೆಗೆ ವ್ಯವಸ್ಥೆ ಮಾಡಿಕೊಂಡಿದೆ. ಒಂದು ವೇಳೆ ಕೋವಿಡ್ ಸೋಂಕಿತರ ಪ್ರಮಾಣ ಹೆಚ್ಚಳವಾದರೆ ಅವರನ್ನು ತಳಕಲ್ ಸರ್ಕಾರಿ ಇಂಜನಿಯರಿಂಗ್ ಹಾಸ್ಟೆಲ್‌ನಲ್ಲಿ 200 ಬೆಡ್‌ಗಳ ವ್ಯವಸ್ಥೆ, ವಿಜ್ಞಾನ ಭವನದಲ್ಲಿ 150 ಬೆಡ್‌ಗಳ ವ್ಯವಸ್ಥೆ ಹಾಗೂ ಗಂಗಾವತಿಯ ಸರ್ಕಾರಿ ಇಂಜನಿಯರಿಂಗ್ ಕಾಲೇಜಿನಲ್ಲಿ 150 ಬೆಡ್‌ಗಳ ವ್ಯವಸ್ಥೆ ಮಾಡಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ. ಜಿಲ್ಲಾಸ್ಪತ್ರೆಯಲ್ಲಿ 200 ಬೆಡ್‌ಗಳಷ್ಟು ಸಿದ್ಧವಾಗಿಟ್ಟುಕೊಂಡಿದೆ. ಮೂರು ಸ್ಥಳಗಳನ್ನು ಕೋವಿಡ್-19 ಕೇರ್ ಸೆಂಟರ್ ಎಂದು ಹೆಸರಿಸಿದ್ದು, ಇಲ್ಲಿ ಪಾಸಿಟಿವ್ ಕೇಸ್ ಬಂದವರನ್ನು ಇಲ್ಲವೇ ಕ್ವಾರಂಟೈನ್‌ಗೆ ಒಳಪಡಿಸಿದವರನ್ನೂ ಇರಿಸಿ ನಿಗಾ ವಹಿಸಲು ಜಿಲ್ಲಾಡಳಿತ ವ್ಯವಸ್ಥೆ ಮಾಡಿಕೊಂಡಿದೆ.
ಲ್ಯಾಬ್ ಸಿದ್ಧತೆ: ಇನ್ನೂ ಜಿಲ್ಲೆಯಲ್ಲೂ ಕೋವಿಡ್ -19 ಟೆಸ್ಟ್ ಪ್ರಯೋಗಾಲಯ ಆರಂಭಕ್ಕೆ ಸರ್ಕಾರ ಅನುಮತಿ ನೀಡಿದ್ದು, ಮೆಡಿಕಲ್ ಕಾಲೇಜಿನಲ್ಲಿ ಆರಂಭಿಸಲಾಗುತ್ತಿದೆ. ಅಲ್ಲಿ ಎಲ್ಲ ತಯಾರಿಯೂ ನಡೆದಿದೆ. ಜಿಲ್ಲಾಧಿಕಾರಿ ಸುನೀಲ್ ಕುಮಾರ ಅವರು ಸೋಮವಾರ ಕಿಮ್ಸ್‌ಗೆ ಭೇಟಿ ನೀಡಿ ಸಿದ್ಧತೆ ಕುರಿತು ಪರಿಶೀಲಿಸಿದರು. ಅಲ್ಲದೇ ತಳಕಲ್ ಸರ್ಕಾರಿ ಇಂಜನಿಯರಿಂಗ್ ಕಾಲೇಜು ಪರಿಶೀಲನೆ ನಡೆಸಿದರು.
ಮುಂಬರುವ ದಿನಗಳಲ್ಲಿ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರು ಹೆಚ್ಚಾದರೆ ಮುಂಜಾಗ್ರತೆ ದೃಷ್ಟಿಯಿಂದ ಜಿಲ್ಲೆಯ ಮೂರು ಕಡೆ ಕೋವಿಡ್-19 ಕೇರ್ ಸೆಂಟರ್ ಆರಂಭಕ್ಕೆ ಸಿದ್ಧತೆ ಮಾಡಿಕೊಂಡಿದ್ದೇವೆ. 3 ಕೇಂದ್ರಗಳಲ್ಲಿ ಪಾಸಿಟಿವ್ ಕೇಸ್ ಬಂದವರನ್ನು ಇರಿಸಿ ಚಿಕಿತ್ಸೆ ನೀಡಲಾಗುತ್ತೆ. ಅಲ್ಲದೇ ಅವುಗಳನ್ನು ಅವಶ್ಯವಿದ್ದರೆ ಕ್ವಾರಂಟೈನ್‌ಗೂ ಬಳಕೆ ಮಾಡಲಿದ್ದೇವೆ. ಇಂಜನಿಯರಿಂಗ್ ಕಾಲೇಜಿಗೂ ಭೇಟಿ ನೀಡಿದ್ದೇನೆ. ಕಿಮ್ಸ್‌ನಲ್ಲಿನ ಪ್ರಯೋಗಾಲಯದ ಸಿದ್ಧತೆ ಪರಿಶೀಲಿಸಿದ್ದು, ಐಸಿಎಂಆರ್‌ನಿಂದ ಲ್ಯಾಬ್ ಟೆಸ್ಟ್‌ಗೆ ಅನುಮತಿ ಸಿಗುವುದು ಬಾಕಿಯಿದೆ. -ಸುನೀಲ್ ಕುಮಾರ, ಜಿಲ್ಲಾಧಿಕಾರಿ
-ದತ್ತು ಕಮ್ಮಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP Politics: ಮಗನ ಪರ ನಿಲ್ಲಬೇಡಿ: ಬಿಎಸ್‌ವೈಗೆ ರಮೇಶ್ ಜಾರಕಿಹೊಳಿ; ಬಿವೈವಿ ಆಕ್ರೋಶ
Gangavathi: ಸಂಕ್ರಾಂತಿ: ತುಂಗಭದ್ರಾ ನದಿಯಲ್ಲಿ ಸಾವಿರಾರು ಜನರಿಂದ ಪುಣ್ಯ ಸ್ನಾನ
Gangavati: ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವಿಜಯಪ್ರಸಾದ್ ಅಮಾನತು
Gangavathi; ಸಿಲಿಂಡರ್ ಸ್ಪೋ*ಟಗೊಂಡು ಅಗ್ನಿ ಅವಘಡ: ವೈದ್ಯೆ ಸೇರಿ ಇಬ್ಬರಿಗೆ ತೀವ್ರ ಗಾಯ
Overview: ಕೊಪ್ಪಳ ಜಿಲ್ಲಾಸ್ಪತ್ರೆಗೆ ಬಿಜೆಪಿ ಸತ್ಯ ಶೋಧನಾ ತಂಡ ಭೇಟಿ