ಕೋವಿಡ್ 19 ತಡೆಗೆ ತಂಡ ಕಟ್ಟಿದ ಜಿಲ್ಲಾಧಿಕಾರಿ
Team Udayavani, Apr 20, 2020, 6:41 PM IST
ಕೊಪ್ಪಳ: ಮಹಾಮಾರಿ ಕೋವಿಡ್ 19 ಗೆ ಸಂಬಂಧಿಸಿದಂತೆ ಯಾವುದೇ ಪ್ರಕರಣ ದೃಢಪಡದೆ “ಹಸಿರು ವಲಯ’ದಲ್ಲೇ ಕೊಪ್ಪಳ ಜಿಲ್ಲೆ ಮುಂದುವರಿದಿದೆ. ಇದಕ್ಕೆಲ್ಲ ಡಿಸಿ ಸುನೀಲ್ ಕುಮಾರ ಅವರ ದೂರದೃಷ್ಟಿ, ತಂಡದ ಕಾರ್ಯಕ್ಷಮತೆ, ಗ್ರಾಪಂ ಸಮಿತಿ, ಚೆಕ್ ಪೋಸ್ಟ್ ಸ್ಥಾಪನೆ ಸೇರಿ ಮನೆ ಮನೆಗೆ ತರಕಾರಿ, ಔಷಧಿ ಪೂರೈಕೆ, ಜನತೆ ರಸ್ತೆಗಿಳಿಯದಂತೆ ನೋಡಿಕೊಂಡಿದ್ದೇ ಕಾರಣ.
ಕಳೆದ ಮಾ.22ರಂದು ಜನತಾ ಕರ್ಫ್ಯೋ ಘೋಷಣೆಯಾದ ಬಳಿಕವಂತೂ ಜಿಲ್ಲಾಧಿಕಾರಿ ಹೆಚ್ಚು ಜಾಗೃತಿ ವಹಿಸಿದರು. ಪೊಲೀಸರಿಗೆ ಖಡಕ್ ಸೂಚನೆ ನೀಡಿ ನಾಲ್ಕು ಜನರಿಗಿಂತ ಹೆಚ್ಚು ಗುಂಪು ಸೇರುವುದನ್ನು ತಡೆಯಲು ಸೂಚಿಸಿದರು. ಎಲ್ಲೆಡೆ ಬಂದೋಬಸ್ತ್ ಏರ್ಪಡಿಸಿ ಗುಂಪು ಚದುರಿಸುವ ಕೆಲಸ ಆರಂಭಿಸಿದರು. ಜನದಟ್ಟಣೆ ತಡೆಗೆ ಮೈಕ್, ನಗರಸಭೆ ವಾಹನಗಳಲ್ಲಿ ಧ್ವನಿವರ್ಧಕಗಳ ಮೂಲಕವೂ ಜಾಗೃತಿ ಮೂಡಿಸಿದರು. ತುಂಗಾ ಮಹಿಳಾ ಪೊಲೀಸ್ ಪಡೆಯು ರಸ್ತೆಗಿಳಿದ ವಾಹನ ಸವಾರರಿಗೆ ಲಾಠಿ ರುಚಿ ತೋರಿಸಿದರು. ವೈರಸ್ ನಿಯಂತ್ರಣಕ್ಕೆ ಎಲ್ಲರೂ ತಮ್ಮ ಮನೆಯಲ್ಲೇ ಇರುವಂತೆ ಸೂಚಿಸಿದ್ದರು. ಪೊಲೀಸರಂತೂ ಆರಂಭದಲ್ಲಿ ಕಿರಾಣಿ, ತರಕಾರಿ ಅಂಗಡಿಗಳನ್ನು ಬಂದ್ ಮಾಡಿಸಿದ್ದರು.
ಮನೆ ಮನೆಗೆ ತರಕಾರಿ: ಜನತೆಗೆ ಅಗತ್ಯ ವಸ್ತುಗಳು ಸಿಗದೆ ಸಮಸ್ಯೆಯಾಗುತ್ತಿರುವುದನ್ನು ಗಮನಿಸಿದ ಡಿಸಿ, ನಗರ ಸ್ಥಳೀಯ ಸಂಸ್ಥೆಗಳ ಪೌರಾಯುಕ್ತರು, ಅಧಿಕಾರಿಗಳು, ಸಿಬ್ಬಂದಿ ಹಾಗೂ ಪೌರ ಕಾರ್ಮಿಕರಿಗೆ ಪ್ರತಿಯೊಂದು ವಾರ್ಡ್‌ನ ಜವಾಬ್ದಾರಿ ನೀಡಿದರು. ರೈತರು ಸರ್ಕಾರಿ ವಾಹನಗಳಲ್ಲೇ ಜನರ ಮನೆ ಬಾಗಿಲಿಗೆ ತೆರಳಿ ಮಾರಲು ಅನುವು ಮಾಡಿಕೊಟ್ಟರು. ವಯಸ್ಕರಿಗೆ ಔಷಧಿ ಪೂರೈಸಲು ಖಾಸಗಿ ಮೆಡಿಕಲ್ ಶಾಪ್‌ನ ಮಾಲೀಕರಿಗೆ ಸೂಚಿಸಿದ್ದು ಯಶಸ್ವಿಯಾಯಿತು. ಜಿಲ್ಲೆಯೆಲ್ಲೆಡೆ ಚೆಕ್‌ಪೋಸ್ಟ್ ಸ್ಥಾಪಿಸಿ ಗ್ರಾಮಲೆಕ್ಕಿಗ, ಪೇದೆ, ವೈದ್ಯರನ್ನು ನಿಯೋಜಿಸಿದರು. ಮೂರು ಶಿಫ್ಟ್‌ನಂತೆ ಕಾರ್ಯನಿರ್ವಹಣೆಗೆ ಸೂಚಿಸಿದರು. ಡಿಸಿ ಸುನೀಲ್ ಕುಮಾರ್ ಹಗಲು-ರಾತ್ರಿ ಚೆಕ್‌ಪೋಸ್ಟ್‌ಗಳಿಗೆ ಭೇಟಿ ನೀಡಿ ಸ್ಥಿತಿಗತಿ ಗಮನಿಸಿದರು.
ಪ್ರತಿ ಗ್ರಾಪಂನಲ್ಲಿ ಸಮಿತಿ ರಚನೆ: ಇನ್ನು ಆರೋಗ್ಯ ಇಲಾಖೆ ವೈದ್ಯರು, ಜಿಲ್ಲಾಸ್ಪತ್ರೆ ವೈದ್ಯರು, ಕಿಮ್ಸ್ ಬೋಧಕ ತಂಡ ಸೇರಿ ಗ್ರಾಮೀಣ ಆರೋಗ್ಯ ಕೇಂದ್ರದ ವೈದ್ಯರ ತಂಡಕ್ಕೆ ಕಾರ್ಯದ ಮಾರ್ಗಸೂಚಿ ನೀಡಿದರು. ಗ್ರಾಪಂ ಅಧ್ಯಕ್ಷ,-ಪಿಡಿಒ, ಆಶಾ ಕಾರ್ಯಕರ್ತೆ, ಪಿಎಚ್‌ಸಿ ವೈದ್ಯೆ, ಗ್ರಾಮ ಲೆಕ್ಕಾಧಿಕಾರಿ ತಂಡ ರಚಿಸಿದರು. ಆಯಾ ಗ್ರಾಪಂ ವ್ಯಾಪ್ತಿ ಹೊರಗಡೆಯಿಂದ, ವಿದೇಶದಿಂದ ಯಾರೇ ಬಂದರೂ ತಕ್ಷಣ ಜಿಲ್ಲಾಡಳಿತಕ್ಕೆ ಮಾಹಿತಿ ನೀಡುವಂತೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಸಮಿತಿ ಅತ್ಯಂತ ಕಾರ್ಯಕ್ಷಮತೆಯಿಂದ ಕೆಲಸ ಮಾಡಿತು. ಗುಳೆ ಹೋದ, ವಿದೇಶದಿಂದ ಬಂದ ಅಪರಿಚಿತರು ಹಾಗೂ ಅವರ ಸಂಪರ್ಕದಲ್ಲಿದ್ದವರ ಮೇಲೂ ನಿಗಾವಿರಿಸಿ ಅವರನ್ನು ಕ್ವಾರಂಟೈನ್ ಮಾಡಿಸಲಾರಂಭಿಸಿದರು. ಇದೂ ಸಹ ಯಶಸ್ವಿಯಾಗಿ ನಡೆಯಿತು. ಗುಳೆ ಹೋದ ಜನ ಜಿಲ್ಲೆಗೆ ಬಂದಿದ್ದನ್ನು ಗಮನಿಸಿ ಅವರ ಮೇಲೂ ನಿಗಾ ಇರಿಸಲಾಯಿತು.
ಜಿಲ್ಲೆಗೆ ವಾಪಸಾದ 22 ಸಾವಿರ ಜನರ ಆರೋಗ್ಯ ತಪಾಸಣೆ ಮಾಡಲಾಯಿತು. ನಿಜಾಮುದ್ದೀನ್ ಜಮಾತ್‌ಗೆ ತೆರಳಿದ್ದವರ, ದೆಹಲಿ-ಮುಂಬೈ ವ್ಯಾಪ್ತಿಯಲ್ಲಿ ಪ್ರವಾಸ ಮಾಡಿದ ಎಲ್ಲರನ್ನೂ ಪೊಲೀಸ್ ತಂಡದೊಂದಿಗೆ ಪತ್ತೆ ಹಚ್ಚಿ ಗೃಹಬಂಧನ ವಿಧಿಸಿದರು. ಹೊರಬರದಂತೆ ಸೂಚಿಸಿದರು. ಜಿಲ್ಲೆಯ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗಳಲ್ಲಿ ಸರ್ಕಾರಿ ಸೇವೆ ದೊರೆಯುವಂತೆ ಮಾಡಿ ಜನತೆಗೆ ಮಾಹಿತಿ ನೀಡಿದರು. ಸರ್ಕಾರಿ ಆಸ್ಪತ್ರೆ ಬಂದ್ ಮಾಡಿ ಕೋವಿಡ್-19 ಆಸ್ಪತ್ರೆಯನ್ನಾಗಿ ಪರಿವರ್ತಿಸಿದರು. ಪಡಿತರ ವಿತರಣೆಯಲ್ಲಿ ಸಾಮಾಜಿಕ ಅಂತರ ಕಾಯುವುದು. ತಪ್ಪಿದರೆ ಲೈಸನ್ಸ್ ರದ್ದು ಮಾಡುವ ಎಚ್ಚರಿಕೆ ನೀಡಿದ್ದು, ಪ್ರತಿ ಅಂಗಡಿಗೂ ಗೃಹರಕ್ಷಕ ದಳದ ಸಿಬ್ಬಂದಿ ನಿಯೋಜಿಸಿ ಎಚ್ಚರಿಕೆ ವಹಿಸಿದ್ದು, ಹಳ್ಳಿ ಹಳ್ಳಿಯಲ್ಲೂ ಡಂಗೂರ ಸಾರಿಸಿದರು. ಸರ್ಕಾರಿ ಕಚೇರಿಗೆ ಬರುವ ಜನರಿಗೆ ಜಾಗೃತಿ ಮೂಡಿಸಿ ಮಾಸ್ಕ್ ಧರಿಸಬೇಕು. ಕೈಗಳನ್ನು ತೊಳೆಯಬೇಕೆನ್ನುವ ಸಂದೇಶ ನೀಡಿದರು.
ಮಧ್ಯರಾತ್ರಿಯೂ ಡಿಸಿ ಕಾರ್ಯಭಾರ: ಹಗಲು-ರಾತ್ರಿ ಕೆಲಸದಲ್ಲಿ ತೊಡಗಿದ ಜಿಲ್ಲಾಧಿಕಾರಿಗಳನ್ನು ಗಮನಿಸಿದ ಇತರೆ ಸಿಬ್ಬಂದಿಯೂ ಅವರೊಟ್ಟಿಗೆ ಕೈಜೋಡಿಸಿತು. ಮಧ್ಯರಾತ್ರಿಯೂ ಬಂದ ಜನರ ಕರೆ ಸ್ವೀಕರಿಸಿ, ಸಮಸ್ಯೆ ಆಲಿಸಿದರು. ಸೋಂಕಿತರ ಬಗ್ಗೆ ಯಾರೇ ಮಾಹಿತಿ ಕೊಟ್ಟರೂ ತಕ್ಷಣ ಆಯಾ ವ್ಯಾಪ್ತಿಯ ತಹಶೀಲ್ದಾರ್‌ಗಳು, ಗ್ರಾಪಂ ಸಮಿತಿ, ಪೊಲೀಸ್ ಪಡೆಗೆ ಮಾಹಿತಿ ನೀಡಿ ಸಂಶಯಾಸ್ಪದ ವ್ಯಕ್ತಿಗಳ ಆರೋಗ್ಯ ತಪಾಸಿಸುತ್ತಿದ್ದರು. ಜಿಲ್ಲೆಯು ಪ್ರಸ್ತುತ ಗ್ರೀನ್ ಜೋನ್ ನಲ್ಲಿದ್ದರೂ ಡಿಸಿ, ಡಿಎಚ್‌ಒ, ಎಸ್ಪಿ ತಂಡ ರೆಡ್ ಜೋನ್ ನಲ್ಲಿ ಇರುವಂತೆ ಕೆಲಸ ಮಾಡುತ್ತಿದೆ. ಕೊಪ್ಪಳ ಗಡಿ ಭಾಗದ ಜಿಲ್ಲೆಗಳಲ್ಲಿ ಸೋಂಕು ಕಾಣಿಸಿಕೊಂಡಿದ್ದರಿಂದ ಡಿಸಿ ಅವರ ಕಾರ್ಯ ಮತ್ತಷ್ಟು ಹೆಚ್ಚಿದೆ.
ಕೋವಿಡ್ 19 ನಿಯಂತ್ರಣಕ್ಕೆ ಎಸ್ಪಿ ಶ್ರಮ: ಕೋವಿಡ್ 19 ನಿಯಂತ್ರಣಕ್ಕಾಗಿ ಶ್ರಮಿಸುತ್ತಿರುವ ಎಸ್ಪಿ ಜಿ.ಸಂಗೀತಾ ಅವರು ಲಾಕ್‌ಡೌನ್ ಘೋಷಣೆಯಾದ ಬೆನ್ನಲ್ಲೇ ಎಲ್ಲೆಡೆ ಪೊಲೀಸ್ ನಾಕಾಬಂದಿ ನಿಯೋಜಿಸಿ ವಾಹನಗಳನ್ನು ತಪಾಸಣೆಗೊಳಪಡಿಸದೆ ಬಿಡದಂತೆ ಖಡಕ್ ಸೂಚನೆ ನೀಡಿದ್ದರು. ಹೀಗಾಗಿ ಜಿಲ್ಲೆಯಾದ್ಯಂತ ಪೊಲೀಸ್ ಪಡೆ ಹದ್ದಿನ ಕಣ್ಣೀಟ್ಟು ಕೊರೊನಾ ನಿಯಂತ್ರಣಕ್ಕೆ ಶ್ರಮಿಸುತ್ತಿದೆ. ಇನ್ನು ಲಾಕ್‌ಡೌನ್ ಆರಂಭಿಕ ದಿನದಲ್ಲಿ ನಗರದ ವಿವಿಧೆಡೆ ರಸ್ತೆಗಿಳಿದು ಬೈಕ್‌ಗಳಲ್ಲಿ ಸುತ್ತಾಟ ನಡೆಸುವ ವಾಹನ ಸವಾರರನ್ನು ತಡೆದು ಖಡಕ್ ಎಚ್ಚರಿಕೆ ನೀಡಿದ್ದರು. ಪೊಲೀಸ್ ವಾಹನಗಳಲ್ಲಿ ಸಾಮಾಜಿಕ ಅಂತರ ಕಾಪಾಡುವುದು, ಮಾಸ್ಕ್ ಧರಿಸುವುದು, ಕೈಗಳನ್ನು ಶುಚಿಯಾಗಿ ತೊಳೆದುಕೊಳ್ಳುವ ಕುರಿತು ಜಾಗೃತಿ ಮೂಡಿಸುವಂತೆಯೂ ಸೂಚನೆ ನೀಡಿದ್ದರು. ಲಾಕ್ ಡೌನ್ ನಿಯಮ ಉಲ್ಲಂಘಿಸುವ ವ್ಯಕ್ತಿಗಳ ಮೇಲೆ ಮುಲಾಜಿಲ್ಲದೇ ಕೇಸ್ ದಾಖಲಿಸುವಂತೆಯೂ ಸೂಚಿಸಿದ್ದರು.
ಕೊಪ್ಪಳ ಜಿಲ್ಲೆ ಈವರೆಗೂ ಗ್ರೀನ್ ಜೋನ್‌ನಲ್ಲಿದೆ. ಹಾಗೆಂದ ಮಾತ್ರಕ್ಕೆ ನಾವು ಸೇಫ್ ಅಂತಲ್ಲ. ಎಚ್ಚರಿಕೆಯಿಂದಿರಬೇಕು. ಆರಂಭದ ದಿನದಿಂದಲೂ ಮನೆ ಮನೆಗೆ ತರಕಾರಿ ಪೂರೈಕೆ, ಔಷಧಿ ವಿತರಣೆ, ಚೆಕ್‌ಪೋಸ್ಟ್ ಸ್ಥಾಪನೆ ಸೇರಿ ಗ್ರಾಮ ಮಟ್ಟದಲ್ಲಿ ನಮ್ಮ ಸಮಿತಿ ಅತ್ಯಂತ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದೆ. ಇದರಿಂದ ನಮಗೆ ಕೆಳ ಹಂತದಿಂದ ಸ್ಪಷ್ಟ ಮಾಹಿತಿ ದೊರೆಯುತ್ತಿದೆ. ಇದಕ್ಕೆ ತಮ್ಮ ತಂಡದ ಎಲ್ಲರ ಸಹಕಾರವಿದೆ. ಜನರ ಸಹಕಾರವೂ ದೊರೆತಿದೆ. –ಸುನೀಲ್ ಕುಮಾರ, ಜಿಲ್ಲಾಧಿಕಾರಿ. ಕೊಪ್ಪಳ
-ದತ್ತು ಕಮ್ಮಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayanagara ಕಾಲುವೆಗೆ ಬಿದ್ದು ಮತ್ತೊಬ್ಬ ಬೈಕ್ ಸವಾರ ಸಾವು
Anjanadri ಬೆಟ್ಟದಲ್ಲಿ ಬೆಳಗಿನ ಜಾವದಿಂದಲೇ ಮಾಲಾಧಾರಿಗಳಿಂದ ಮಾಲೆ ವಿಸರ್ಜನೆ
ಹನುಮಮಾಲಾ ವಿಸರ್ಜನೆ: ಕಿಷ್ಕಿಂಧಾ ಅಂಜನಾದ್ರಿಗೆ ಜಗಮಗಿಸುವ ವಿದ್ಯುತ್ ದೀಪಗಳಿಂದ ಅಲಂಕಾರ
ಕೃಷ್ಣ ನಿಧನ;ಪ್ರಮುಖ ಸರಕಾರಿ ಕಚೇರಿಗಳಲ್ಲಿ ಅರ್ಧಕ್ಕೇರದ ರಾಷ್ಟ್ರಧ್ವಜ;ಅಧಿಕಾರಿಗಳಿಂದ ಅಗೌರವ
ಎಸ್.ಎಂ.ಕೃಷ್ಣ ನಿಧನ; ಶೋಕಾಚರಣೆ ಆದೇಶಕ್ಕೆ ಕಿಮ್ಮತ್ತು ನೀಡದ ಬಿಇಒ,ಸಮಾಜ ಕಲ್ಯಾಣ ಇಲಾಖೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.