Kishkindha ಜಿಲ್ಲೆ ಘೋಷಣೆ ಅಸಾಧ್ಯ,ಆದರೂ ಹೋರಾಟ ಅಗತ್ಯ: ಜನಾರ್ದನ ರೆಡ್ಡಿ
ಕಂಪ್ಲಿ, ಸಿಂಧನೂರು ಜನರ ಮನವೊಲಿಕೆ ಮಾಡಿ ನೂತನ ಜಿಲ್ಲೆಗಾಗಿ ಹೋರಾಟ ಮಾಡಬೇಕಿದೆ
Team Udayavani, Sep 28, 2023, 10:53 PM IST
ಗಂಗಾವತಿ: ಪ್ರಸ್ತುತ ಸರಕಾರದಲ್ಲಿ ನೂತನ ಕಿಷ್ಕಿಂಧಾ ಜಿಲ್ಲೆಯ ಘೋಷಣೆ ಕಷ್ಟ ಸಾಧ್ಯವಾಗಿದೆ. ಮುಖ್ಯಮಂತ್ರಿಗಳು ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕಾಗಿ ಬೊಕ್ಕಸದ ಹಣ ಖರ್ಚು ಮಾಡುತ್ತಿದ್ದು ಅನ್ಯ ಯೋಜನೆ ಕಾರ್ಯಗಳಿಗೆ ಹಣ ಹೊಂದಿಸುವುದು ಅಸಾಧ್ಯ ಎಂದು ಹೇಳುತ್ತಿದ್ದಾರೆ. ಆದರೂ ಗಂಗಾವತಿಯನ್ನು ಕೇಂದ್ರವಾಗಿರಿಸಿಕೊಂಡು ಐತಿಹಾಸಿಕ ನೂತನ ಕಿಷ್ಕಿಂಧಾ ಜಿಲ್ಲಾ ರಚನೆಗಾಗಿ ನಿರಂತರ ಹೋರಾಟ ಅಗತ್ಯವಾಗಿದೆ ಎಂದು ಶಾಸಕ ಹಾಗೂ ಕೆಆರ್‌ಪಿ ಪಾರ್ಟಿ ಸಂಸ್ಥಾಪಕಾಧ್ಯಕ್ಷ ಗಾಲಿ ಜನಾರ್ದನರೆಡ್ಡಿ ಹೇಳಿದರು.
ನಗರದ ಅಮರ ಜ್ಯೋತಿ ಕಲ್ಯಾಣಮಂಟಪದಲ್ಲಿ ಕಿಷ್ಕಿಂಧಾ ನೂತನ ಜಿಲ್ಲಾ ಹೋರಾಟ ಸಮಿತಿಯ ಸಭೆಯಲ್ಲಿ ಪಾಲ್ಗೊಂಡು ಮಾತಾಡಿದರು.
ಸದ್ಯ ನೂತನ ಜಿಲ್ಲೆಯ ರಚನೆ ಕಾರ್ಯಸಾಧುವಲ್ಲ. ಭೌಗೋಳಿಕವಾಗಿ ಕಂಪ್ಲಿ ತುಂಗಭದ್ರಾ ನದಿ ಆ ಪಕ್ಕದಲ್ಲಿದ್ದು ಅಲ್ಲಿಯವರು ವಿಜಯನಗರ ಜಿಲ್ಲೆಗೆ ಸೇರ್ಪಡೆ ಮಾಡುವಂತೆ ನ್ಯಾಯಾಲಯದ ಮೆಟ್ಟಿಲನ್ನು ಹತ್ತಿದ್ದಾರೆ. ಇನ್ನು ಅಲ್ಲಿಯ ಶಾಸಕ ಗಣೇಶ ಅವರು ಅಭಿವೃದ್ಧಿಯ ದೃಷ್ಠಿಯಿಂದ ಹೊಸಪೇಟೆ ಅಥವಾ ಬಳ್ಳಾರಿಯಲ್ಲಿಯೇ ಉಳಿದರೆ ವಾರ್ಷಿಕ ಗಣಿಖನಿಜ ನಿಧಿಯಲ್ಲಿ 4-5 ಸಾವಿರ ಕೋಟಿ ಹಣ ಬರುತ್ತದೆ.ಇದರಿಂದ ಕ್ಷೇತ್ರದಲ್ಲಿ ಮೂಲಸೌಕರ್ಯ ಕಲ್ಪಿಸಬಹುದೆಂದು ಅಭಿಪ್ರಾಯ ಹೊಂದಿದ್ದಾರೆ. ಸಿಂಧನೂರು ಭಾಗದ ಜನರು ಸ್ವಂತ ಜಿಲ್ಲೆ ಮಾಡಿಕೊಳ್ಳಲು ಈಗಾಗಲೇ ಹಲವು ಸಭೆ ನಡೆಸಿದ್ದಾರೆ. ಈ ಮಧ್ಯೆ ಒಂದು ಜಿಲ್ಲೆಗೆ ಕನಿಷ್ಠ 4-5 ವಿಧಾನಸಭಾ ಕ್ಷೇತ್ರಗಳಿರಬೇಕೆನ್ನುವುದು ಒಂದು ಲೆಕ್ಕಾಚಾರವಾಗಿದೆ. ಆದ್ದರಿಂದ ಕಿಷ್ಕಿಂಧಾ ನೂತನ ಜಿಲ್ಲೆಗಾಗಿ ವರ್ಷಾನುಗಟ್ಟಲೇ ಹೋರಾಟ ನಡೆಸಲೇಬೇಕಿದೆ ಎಂದರು.
ಹೋರಾಟ ಸಮಿತಿಯವರು ನೂತನ ಜಿಲ್ಲೆಯ ರಚನೆ ಕುರಿತು ತಮಗೆ ಮನವಿ ಮಾಡಿದ್ದು ನಿರಂತರ ಹೋರಾಟದ ಮೂಲಕ ಐತಿಹಾಸಿಕ ಕಿಷ್ಕಿಂಧಾ ಜಿಲ್ಲೆ ರಚನೆ ಮಾಡಲು ಪ್ರತಿಯೊಬ್ಬರೂ ಸಹಕಾರ ನೀಡಬೇಕು. ಹೋರಾಟ ಸಮಿತಿಯವರ ಎಲ್ಲಾ ಹೋರಾಟ ಅಥವಾ ನಿಯೋಗಕ್ಕೆ ತಮ್ಮ ಸಂಪೂರ್ಣ ಬೆಂಬಲವಿದೆ ಎಂದರು.
ಸಭೆಯಲ್ಲಿ ಕಂಪ್ಲಿ, ಸಿಂಧನೂರು, ತಾವರಗೇರಾದಿಂದ ಯಾರು ಹಾಜರಿರಲಿಲ್ಲ. ಕನಕಗಿರಿ,ಕಾರಟಗಿಯಿಂದ ಬೆರಳೆಣಿಯಷ್ಟು ಮುಖಂಡರಿದ್ದರು. ಕಾರ್ಯಕ್ರಮದಲ್ಲಿ ಮಾಜಿ ಸಂಸದ ಶಿವರಾಮಗೌಡ, ಮಾಜಿ ಶಾಸಕರಾದ ಪರಣ್ಣ ಮುನವಳ್ಳಿ, ಜಿ.ವೀರಪ್ಪ, ದಡೆಸೂಗೂರು ಬಸವರಾಜ,ಎಚ್.ಆರ್.ಶ್ರೀನಾಥ, ಕೇಲೋಜಿ ಸಂತೋಷ, ರೈಲ್ವೇ ಗುಪ್ತ, ರಾಜೆಶ ಅಂಗಡಿ, ಸರ್ವೇಶ ವಸ್ತçದ್, ಸರ್ವೇಶ್ ಮಾತಂಗೊಂಡ, ಡಾ.ಅಮರೇಶ ಪಾಟೀಲ್, ಡಾ.ಸುಲೋಷನಾ ಚಿನಿವಾಲರ, ಅಮರಜ್ಯೋತಿ ನರಸಪ್ಪ, ನ್ಯಾಯವಾದಿ ನಾಗರಾಜ ಗುತ್ತೆದಾರ್, ಎಚ್.ಎಂ.ಮಂಜುನಾಥ, ಗೌಳಳಿ ರಮೇಶ, ಜೋಗದ ನಾರಾಯಣಪ್ಪ, ಸಿಂಗನಾಳ ಸುರೇಶ, ಮಂಜುನಾಥ ಕಟ್ಟಿಮನಿ, ಯಂಕಪ್ಪ ಕಟ್ಟಿಮನಿ, ಎಂ.ಜೆ.ಶ್ರೀನಿವಾಸ, ರಾಘವೇಂದ್ರಚಶಿರಿಗೇರಿ ಸೇರಿ ಹಲವರಿದ್ದರು.
ಮೈ ಮರೆಯುವುದು ಬೇಡ
ಮಾಜಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ರಾಯಾಯಣ,ಮಹಾಭಾರತ ಸೇರಿ ಹಲವು ಗ್ರಂಥಗಳಲ್ಲಿ ಉಲ್ಲೇಖಿಸಿರುವಂತೆ ಕಿಷ್ಕಿಂಧಾ ಪ್ರದೇಶವನ್ನು ಗಂಗಾವತಿ ಕೇಂದ್ರವಾಗಿಸಿಕೊಂಡು ನೂತನ ಜಿಲ್ಲೆ ರಚನೆ ಪ್ರಸ್ತುತ ಅಗತ್ಯವಾಗಿದೆ. ಹೋರಾಟ ಮಾಡುವ ಮೂಲಕ ನೂತನ ಕಿಷ್ಕಿಂಧಾ ಜಿಲ್ಲೆ ಪಡೆಯಲು ಪಕ್ಷಾತೀತ, ಜಾತ್ಯತೀತ ಹೋರಾಟ ಅಗತ್ಯವಾಗಿದೆ. ಭತ್ತದ ಕಣಜ ಗಂಗಾವತಿಗೆ ಈಗಾಗಲೇ ರೈಲ್ವೆ ಸೇರಿ ಅಗತ್ಯ ಸೌಕರ್ಯಗಳಿದ್ದು ಜಿಲ್ಲಾ ಕೇಂದ್ರವಾಗಲು ಎಲ್ಲಾ ಅರ್ಹತೆಗಳಿವೆ. ರಾಜ್ಯ ಸರಕಾರಕ್ಕೆ ಅಗತ್ಯ ಮಾಹಿತಿ ರವಾನೆಯ ಮೂಲಕ ನೂತನ ಜಿಲ್ಲೆಗಾಗಿ ಮನವರಿಕೆ ಮಾಡಬೇಕು. ನಿರಂತರ ಹೋರಾಟದ ಮೂಲಕ ಕಿಷ್ಕಿಂಧಾ ನೂತನ ಜಿಲ್ಲೆ ರಚನೆ ಮಾಡಿಕೊಳ್ಳಬೇಕಿದೆ. 1997 ರಲ್ಲಿ ಮೈ ಮರೆತಿದ್ದರಿಂದ ಕೊಪ್ಪಳ ಜಿಲ್ಲಾ ಕೇಂದ್ರವಾಗಿದೆ. ಈಗ ಮೈ ಮರೆಯುವುದು ಬೇಡ ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.