ಕುಷ್ಟಗಿ-ಕೊಪ್ಪಳಕ್ಕೆ ಬರಲಿಲ್ಲ ಪರಿಹಾರ
•ಗಂಗಾವತಿ-ಯಲಬುರ್ಗಾಗಷ್ಟೇ ಬಂತು ಸಬ್ಸಿಡಿ•ಸರ್ಕಾರದ ನಿಯಮಕ್ಕೆ ಅನ್ನದಾತ ಕಂಗಾಲು
Team Udayavani, Jun 15, 2019, 11:03 AM IST
ಕೊಪ್ಪಳ: ಜಿಲ್ಲೆ ಮೊದಲೇ ಬರದನಾಡು ಎಂಬ ಹಣಪಟ್ಟಿ ಕಟ್ಟಿಕೊಂಡಿದೆ. ಸತತ ಮಳೆ ಕೊರತೆಯಿಂದ ಅನ್ನದಾತ ಕಂಗಾಲಾಗಿದ್ದಾನೆ. ಇದರ ಮಧ್ಯೆ ಕಳೆದ ವರ್ಷ ಬರ ಪರಿಹಾರ ಕೊಡುವಲ್ಲಿ ಸರ್ಕಾರಗಳು ತಾರತಮ್ಯ ಮಾಡಿ ರೈತರ ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡಿವೆ.
ಹೌದು. ಕಳೆದ ವರ್ಷ ಮಳೆಯ ಕೊರತೆ ಎದುರಾದ ಪರಿಣಾಮ ರಾಜ್ಯ ಸರ್ಕಾರವೇ ಜಿಲ್ಲೆಯ ಎಲ್ಲ ಏಳೂ ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಣೆ ಮಾಡಿತ್ತು. ಕಂದಾಯ ಸಚಿವರು ಸೇರಿದಂತೆ ಜಿಲ್ಲಾ ಸಚಿವರು ಬರ ಅಧ್ಯಯನ ನಡೆಸಿದರು. ಕೇಂದ್ರ ಬರ ಅಧ್ಯಯನ ತಂಡವೂ ಜಿಲ್ಲೆಗೆ ಆಗಮಿಸಿ ಇಲ್ಲಿನ ಜನರ ನರಕಯಾತನೆ, ಜಾನುವಾರುಗಳ ನರಳಾಟ ಕುರಿತು ಕೇಂದ್ರಕ್ಕೆ ವಸ್ತು ಸ್ಥಿತಿ ವರದಿ ನೀಡಿವೆ. ಆದರೂ ಸರ್ಕಾರದಿಂದ ಯಲಬುರ್ಗಾ ಮತ್ತು ಗಂಗಾವತಿ ತಾಲೂಕಿಗಳಿಗೆ ಮಾತ್ರ ಬರ ಪರಿಹಾರ (ಇನ್‌ಪುಟ್ ಸಬ್ಸಿಡಿ) ಬಿಡುಗಡೆಯಾಗಿದೆ. ಕೊಪ್ಪಳ ಹಾಗೂ ಕುಷ್ಟಗಿ ತಾಲೂಕುಗಳಿಗೆ ಇಲ್ಲಿವರೆಗೂ ನಯಾಪೈಸೆ ಬಂದಿಲ್ಲ.
19 ಕೋಟಿ ಬಿಡುಗಡೆ: ಜಿಲ್ಲೆಯಲ್ಲಿ 2018-19ನೇ ಸಾಲಿನ ಬರ ಪರಿಹಾರದಲ್ಲಿ 44,496 ರೈತರಿಗೆ ಎರಡು ಹಂತದಲ್ಲಿ ವಿತರಣೆ ಮಾಡಬೇಕು. ಆದರೆ ಇಲ್ಲಿವರೆಗೂ 27,606 ರೈತರ ಖಾತೆಗೆ 19,23,57,329 ರೂ. ಜಮೆಯಾಗಿದೆ. ಅಂದರೆ ಇನ್ನೂ 16,890 ರೈತರಿಗೆ ಸರ್ಕಾರ ಪರಿಹಾರ ಬಿಡುಗಡೆ ಮಾಡಬೇಕಿದೆ. ಇಷ್ಟೊಂದು ಮೊತ್ತವು ಕೇವಲ ಗಂಗಾವತಿ, ಯಲಬುರ್ಗಾ ತಾಲೂಕಿನ ರೈತರಿಗೆ ಮಾತ್ರ ಬಂದಿದೆ.
ಕುಷ್ಟಗಿ ತಾಲೂಕು ಪ್ರತಿ ವರ್ಷ ಅತಿ ಹೆಚ್ಚು ಬರ ಎದುರಿಸುತ್ತದೆ. ಆದರೆ ಬರ ಪರಿಹಾರ ವಿತರಣೆಯಲ್ಲಿ ನಮ್ಮ ತಾಲೂಕು ಸೇರಿ ಕೊಪ್ಪಳ ತಾಲೂಕನ್ನು ಕೈ ಬಿಡಲಾಗಿದೆ. ಕಳೆದ ವರ್ಷದ ಬರ ಪರಿಹಾರ ಬಿಡುಗಡೆ ಮಾಡಿಲ್ಲ. ನಾನೇ ಸ್ವತಃ ಸಿಎಂ ಅವರನ್ನು ಭೇಟಿ ಮಾಡಿ ಈ ವಿಷಯ ಪ್ರಸ್ತಾಪಿಸಿದ್ದೇನೆ. ಕಂದಾಯ ಸಚಿವರು ಸೇರಿದಂತೆ ಎಲ್ಲರಿಗೂ ಪತ್ರ ಬರೆದಿದ್ದೇನೆ. ಸಿಎಂ ಈ ಬಗ್ಗೆ ಪರಿಶೀಲನೆ ನಡೆಸುವ ಕುರಿತು ಅಧಿಕಾರಿಗಳಿಗೆ ಹೇಳಿದ್ದಾರೆ.•ಅಮರೇಗೌಡ ಬಯ್ನಾಪೂರ, ಕುಷ್ಟಗಿ ಶಾಸಕ
ತೀವ್ರ ಬರಪೀಡತಕ್ಕಷ್ಟೇ ಪರಿಹಾರ! : ಸರ್ಕಾರಗಳ ನಿಯಮವೇ ವಿಚಿತ್ರ ಎನ್ನುವಂತಿವೆ. ಜಿಲ್ಲೆಯಲ್ಲಿ ಬರದ ತೀವ್ರತೆ ತಾಂಡವಾಡುತ್ತಿದೆ. ಒಂದೆಡೆ ಸರ್ಕಾರವೇ ಕುಡಿಯುವ ನೀರು ಸೇರಿದಂತೆ ಬರ ನಿರ್ವಹಣೆಗೆ ಕೋಟಿ ಕೋಟಿ ರೂ. ಅನುದಾನ ಬಿಡುಗಡೆ ಮಾಡುತ್ತಿದೆ. ಆದರೆ ರೈತರ ವಿಷಯದಲ್ಲಿ ಹಿಂದೇಟು ಹಾಕುತ್ತಿದೆ. ಕೇಂದ್ರ ಸರ್ಕಾರದ ನಿಯಮಾವಳಿ ಪ್ರಕಾರ ತೀವ್ರ ಬರದ ಪರಿಸ್ಥಿತಿ ಎದುರಿಸುವ ತಾಲೂಕುಗಳಿಗೆ ಮಾತ್ರ ಬರ ಪರಿಹಾರ ಬಿಡುಗಡೆ ಮಾಡಲಾಗಿದೆಯಂತೆ. ಗಂಗಾವತಿ ಮತ್ತು ಯಲಬುರ್ಗಾ ಮಾತ್ರ ಶೇ. 80ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಬೆಳೆಹಾನಿಯಾಗಿದ್ದರಿಂದ ಅವರಿಗೆ ಪರಿಹಾರ ಬಿಡುಗಡೆ ಮಾಡಲಾಗಿದೆ. ಕೊಪ್ಪಳ, ಕುಷ್ಟಗಿ ತೀವ್ರ ಬರದ ಪಟ್ಟಿಯಲ್ಲಿಲ್ಲ ಎನ್ನುತ್ತಿವೆ ದಾಖಲೆಯ ಅಂಕಿ-ಅಂಶ.
ಕೊಪ್ಪಳ, ಕುಷ್ಟಗಿಗೆ ಏಕೆ ಅನ್ಯಾಯ?: ಅಚ್ಚರಿಯ ವಿಷಯವೆಂದರೆ, ಕೊಪ್ಪಳ ಮತ್ತು ಕುಷ್ಟಗಿ ತಾಲೂಕು ಅತಿ ಹೆಚ್ಚು ಮಳೆಯ ಕೊರತೆ ಎದುರಿಸುವ ತಾಲೂಕುಗಳಾಗಿವೆ. ಗಂಗಾವತಿ ಭಾಗ ತುಂಗಭದ್ರಾ ಕಾಲುವೆ ನೀರಿನಿಂದ ರೈತರು ಬಿತ್ತನೆ ಪ್ರಕ್ರಿಯೆ ನಡೆಸುತ್ತಾರೆ. ಆದರೆ ಕುಷ್ಟಗಿ, ಕೊಪ್ಪಳದ ಭಾಗದಲ್ಲಿ ಯಾವುದೇ ಮಹತ್ವದ ನೀರಾವರಿ ಸೌಲಭ್ಯಗಳಿಲ್ಲ. ಇಲ್ಲಿನ ರೈತರಿಗೆ ಬರದ ಬಿಸಿ ತಟ್ಟಿಲ್ಲವೇ? ಅವರ ಬೆಳೆ ಹಾನಿ ಅನುಭವಿಸಿಲ್ಲವೇ ? ಸರ್ಕಾರಗಳಿಂದ ಒಬ್ಬ ರೈತನಿಗೆ ನ್ಯಾಯ, ಇನ್ನೊಬ್ಬ ರೈತನಿಗೆ ಏಕೆ ಅನ್ಯಾಯ ಮಾಡುತ್ತಿದೆ. ಈ ಭಾಗದ ರೈತರು ಏನು ಪಾಪ ಮಾಡಿದ್ದಾರೆ. ನಮ್ಮ ಜನಪ್ರತಿನಿಧಿಗೆ ಇದರ ಬಗ್ಗೆ ಅರಿವಿಲ್ಲವೇ? ಅವರು ಈ ಬಗ್ಗೆ ಕಣ್ತೆರೆದು ನೋಡುತ್ತಿಲ್ಲವೆ ಎನ್ನುವ ಮಾತುಗಳು ರೈತಾಪಿ ವಲಯದಿಂದ ಕೇಳಿ ಬಂದಿವೆ.
ಶಾಸಕ, ಸಂಸದರೇ ಕಣ್ತೆರೆದು ನೋಡಿ: ಜಿಲ್ಲೆಯಲ್ಲಿ ಬರದ ಪರಿಸ್ಥಿತಿ ಯಾವ ಹಂತಕ್ಕೆ ತಲುಪುತ್ತಿದೆ ಎನ್ನುವುದನ್ನು ಕ್ಷೇತ್ರದ ಶಾಸಕರು ಹಾಗೂ ಸಂಸದರು ಒಮ್ಮೆ ಗಮನಿಸಬೇಕಿದೆ. ಕಳೆದ ವರ್ಷ ತೀವ್ರ ಬರ ಎದುರಿಸಿದ ರೈತರಿಗೆ ಸರ್ಕಾರದಿಂದ ನಯಾಪೈಸೆ ಬಿಡುಗಡೆಯಾಗಿಲ್ಲ. ಇದಕ್ಕೆಲ್ಲ ಏನು ಕಾರಣ ಎನ್ನುವುದನ್ನು ತಿಳಿದು ಕಣ್ಣೀರಿನಲ್ಲಿ ಕೈ ತೊಳೆಯುತ್ತಿರುವ ರೈತರಿಗೆ ಅಲ್ಪ ಪರಿಹಾರ ಕೊಡಿಸುವ ಮೂಲಕವಾದರೂ ಅವರಿಗೆ ನೆರವಾಗಿ. ಸುಮ್ಮನೆ ಆರೋಪ, ಪ್ರತ್ಯಾರೋಪ ಮಾಡುವುದಕ್ಕಿಂತ ಎಲ್ಲಿ ತೊಂದರೆ ಆಗಿದೆ ಎನ್ನುವುದನ್ನು ಅರಿತು ರೈತರಿಗೆ ಬರ ಪರಿಹಾರ ಬರುವಂತೆ ಮಾಡಿ ಎನ್ನುತ್ತಿದೆ ಜಿಲ್ಲೆಯ ನಾಗರಿಕ ಸಮುದಾಯ.
ಸರ್ಕಾರ ಗಂಗಾವತಿ ಹಾಗೂ ಯಲಬುರ್ಗಾ ತಾಲೂಕುಗಳಿಗೆ ಮಾತ್ರ ಬರ ಪರಿಹಾರ ಬಿಡುಗಡೆ ಮಾಡಿದೆ. ಕೊಪ್ಪಳ, ಕುಷ್ಟಗಿ ತಾಲೂಕಿಗೆ ಪರಿಹಾರ ಬಿಡುಗಡೆ ಮಾಡಿಲ್ಲ. ಈ ಕುರಿತು ಸಿಎಂ ಅವರ ಸಭೆಯಲ್ಲಿ ಇದನ್ನು ಪ್ರಸ್ತಾಪಿಸಿದ್ದೇನೆ. ಕೆಲವೊಂದು ನಿಯಮಗಳ ಪ್ರಕಾರ ತೀವ್ರ ಬರ ಎದುರಿಸುವ ತಾಲೂಕಿಗೆ ಮಾತ್ರ ಪರಿಹಾರ ಬಂದಿದೆ ಎಂದಿದ್ದಾರೆ.•ಪಿ. ಸುನೀಲ್ ಕುಮಾರ, ಜಿಲ್ಲಾಧಿಕಾರಿ
•ದತ್ತು ಕಮ್ಮಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
Koppala: ಮರಕುಂಬಿ ಅಸ್ಪೃಶ್ಯತೆ ಪ್ರಕರಣ… 99 ಜನರಿಗೆ ಜಾಮೀನು ನೀಡಿದ ಹೈಕೋರ್ಟ್
ಕೊಪ್ಪಳ:ಈ ರಸ್ತೆಗಳಲ್ಲಿ ನಿತ್ಯವೂ ನರಕ ದರ್ಶನ-ಜೀವಭಯದಲ್ಲೇ ಸಂಚಾರ
ಕುಷ್ಟಗಿ: ಬಿಳಿ ಜೋಳಕ್ಕೂ ಲಗ್ಗೆಯಿಟ್ಟ ಲದ್ದಿ ಹುಳು
Gangavathi: ಆನೆಗೊಂದಿ ರಾಜವಂಶಸ್ಥ ಎಸ್.ಆರ್.ಕೆ. ರಾಜಬಹಾದ್ದೂರ್ ನಿಧನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.