ಬಯಲಾಟಕ್ಕೆ ಬಲ ತುಂಬಿದ ತಿಪ್ಪನಗೌಡ್ರು
500ಕ್ಕ ಹೆಚ್ಚು ಬಯಲಾಟಕ್ಕೆ -ನಾಟಕಕ್ಕೆ ತರಬೇತಿ
Team Udayavani, Apr 3, 2022, 3:15 PM IST
ಕೊಪ್ಪಳ: ಬಯಲಾಟಕ್ಕೆ ಕೊಪ್ಪಳ ಜಿಲ್ಲೆಯದ್ದು ದೊಡ್ಡ ಹೆಸರಿದೆ. ರಾಮಾಯಣ, ಮಹಾಭಾರತ ದಂತ ಹಲವು ಪೌರಾಣಿಕ ಕಥೆಗಳನ್ನು ಜಿಲ್ಲೆಯ ಹಲವು ಕಲಾವಿದರಿಗೆ ತರಬೇತಿಗೊಳಿಸಿ 500ಕ್ಕೂ ಹೆಚ್ಚು ಬಯಲಾಟ ಕಟ್ಟಿ ಬೆಳೆಸಿದವರಲ್ಲಿ ಜಿಲ್ಲೆಯ ಹಿರಿಯ ಚೇತನ, ಕಲಾವಿದ ತಿಪ್ಪನಗೌಡ ಪಾಟೀಲರು ಒಬ್ಬರು.
ಕೊಪ್ಪಳ ತಾಲೂಕಿನ ಚಿಕ್ಕಬಗನಾಳ ಗ್ರಾಮದ ನಿವಾಸಿ ತಿಪ್ಪನಗೌಡ ಬಸನಗೌಡ ಪಾಟೀಲ್ ಬಯಲು ಸೀಮೆಯಲ್ಲಿ ಬಯಲಾಟವನ್ನು ಸುತ್ತಲಿನ ಹಲವು ಹಳ್ಳಿಗಳಲ್ಲಿ ಕಟ್ಟಿ ಬೆಳೆಸಿದ್ದಾರೆ. ತಿಂಗಳುಗಟ್ಟಲೇ ಹಳ್ಳಿಗಳಲ್ಲಿ ತಾಲೀಮು ನಡೆಸಿ ಸ್ಥಳೀಯ ಕಲಾವಿದರಿಗೆ ಹಳೇ ಪೌರಾಣಿಕ ಕಥೆ ಕಲಿಸಿ, ಹಾಡು ಹೇಳಿಕೊಟ್ಟು ಕಲೆ ಉಳಿಸಿ-ಬೆಳೆಸಿದವರಲ್ಲಿ ಪ್ರಮುಖರಾಗಿದ್ದಾರೆ.
9ನೇ ತರಗತಿ ಅಭ್ಯಾಸ ಮಾಡಿರುವ ತಿಪ್ಪನಗೌಡ ಪಾಟೀಲ್ ಅವರಿಗೆ 1965ರ ಅವಧಿಯಲ್ಲಿ ಡೆಪ್ಯೂಟಿ ತಹಶೀಲ್ದಾರ್ ಹುದ್ದೆ ಹುಡುಕಿಕೊಂಡು ಬಂದಿತ್ತು. ಆದರೆ ಜಮೀನು ಅಪಾರವಾಗಿದ್ದರಿಂದ ಇವರ ತಂದೆ ಬಸನಗೌಡ ಪಾಟೀಲ್ ಇರುವ ಒಬ್ಬನೇ ಪುತ್ರ ತಿಪ್ಪನಗೌಡರನ್ನು ಯಾವುದೇ ಸರ್ಕಾರಿ ಹುದ್ದೆಗೆ ಕಳುಹಿಸದೇ ಮನೆಯಲ್ಲಿಯೇ ಕೃಷಿ ಮಾಡಿಕೊಂಡು ಇರುವಂತೆ ಸಲಹೆ ನೀಡಿ ಬಂದಿರುವ ಹುದ್ದೆ ತ್ಯಜಿಸಲು ಸೂಚಿಸಿದ್ದರು.
1972-74ರ ಅವಧಿಯಲ್ಲಿ ಬಯಲಾಟದ ಕಲೆ ಬಗ್ಗೆ ಆಸಕ್ತಿ ಹೊಂದಿ ತಂದೆಯ ಸಂಗೀತ ಕಾರ್ಯಕ್ರಮದಲ್ಲಿ ತೊಡಗುತ್ತಿದ್ದ ತಿಪ್ಪನಗೌಡ ಪಾಟೀಲ್ ಬಯಲಾಟಗಳಲ್ಲಿಯೂ ಹಲವಾರು ಪಾತ್ರಗಳಲ್ಲಿ ಅಭಿನಯಿಸಿ ಎಲ್ಲರ ಗಮನ ಸೆಳೆದಿದ್ದರು.
ವಿದ್ವಾನ್ ಷಡಕ್ಷರಯ್ಯ ಸೊಪ್ಪಿಮಠ ಸಂಗೀತ ಗರಡಿಯಲ್ಲಿ ಪಳಗಿದ ತಿಪ್ಪನಗೌಡ ಪಾಟೀಲರು 1975ರಲ್ಲಿ ತಾಲೂಕಿನ ಹ್ಯಾಟಿ ಗ್ರಾಮದಲ್ಲಿ “ಲವ-ಕುಶರ ಕಾಳಗ’ ಎನ್ನುವ ಬಯಲಾಟಕ್ಕೆ ತಾಲೀಮು ನಡೆಸಿ ಪ್ರದರ್ಶನಗೊಳಿಸಿ ಯಶಸ್ವಿಯಾದರು. ಅಂದಿನಿಂದ ಬಯಲಾಟ ಕಲಿಸುವ ಮಾಸ್ತರ್ ಆಗಿ ಹಳ್ಳಿ ಹಳ್ಳಿಯಲ್ಲಿ ಕಾಲ್ನಡಿಗೆ, ಎತ್ತಿನ ಬಂಡಿ, ಸೈಕಲ್‌ನಲ್ಲಿ ಸುತ್ತಿ ಇಡೀ ಜಿಲ್ಲೆಯ ಹಲವು ಹಳ್ಳಿಗಳಲ್ಲಿ ಬಯಲಾಟ ಕಟ್ಟಿ ಬೆಳೆಸಿದ್ದಾರೆ.
ಇವರು ರಾಮಾಯಣ, ಮಹಾಭಾರತದಲ್ಲಿ ಬರುವ ವಿರಾಟ ಪರ್ವ, ರಾಮಾಂಜನೇಯ ಯುದ್ಧ, ಲವ ಕುಶರ ಕಾಳಗ ಸೇರಿದಂತೆ ಹಲವು ಕಥೆಗಳಿಗೆ ನಿರ್ದೇಶಕರಾಗಿ, ಪ್ರತಿಯೊಬ್ಬ ಕಲಾವಿದರಿಗೆ ತಿದ್ದಿ ಬುದ್ಧಿ ಹೇಳುವ ಕೆಲಸ ಮಾಡಿದ್ದಾರೆ. ರಾಗ, ಲಯ, ತಾಳ, ನುಡಿಯ ಅನುಸಾರ ಕಲಾವಿದರನ್ನು ತಿದ್ದಿ ಬುದ್ಧಿ ಕಲಿಸಿ ಕಲೆ ಉಳಿಸಿ-ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದವರಲ್ಲಿ ಇವರು ಮುಂಚೂಣಿಯಲ್ಲಿದ್ದರು.
500 ನಾಟಕ-ಬಯಲಾಟಕ್ಕೆ ತರಬೇತಿ: ತಿಪ್ಪನಗೌಡ ಪಾಟೀಲ್ ಈವರೆಗೂ 500ಕ್ಕೂ ಹೆಚ್ಚು ಬಯಲಾಟ, ಸಾಮಾಜಿಕ ನಾಟಕಗಳಿಗೆ ತರಬೇತಿ, ಮಾರ್ಗದರ್ಶನ, ನಿರ್ದೇಶನ ನೀಡಿದ್ದಾರೆ. ವಿಶೇಷವೆಂಬಂತೆ ಬಯಲಾಟ ಪ್ರದರ್ಶನಕ್ಕೆ ತರಬೇತಿ ನೀಡುವ ಮಾಸ್ತರ್‌ಗೆ ಸಾಮಾಜಿಕ ನಾಟಕದ ಸಂಗೀತ ನಿರ್ವಹಣೆ ಸುಲಭವಾಗಿ ಬರುವುದಿಲ್ಲ. ಸಾಮಾಜಿಕ ನಾಟಕಕ್ಕೆ ನಿರ್ದೇಶನ ನೀಡುವ ಮಾಸ್ತರ್‌ರಿಗೆ ಬಯಲಾಟ ನಿರ್ವಹಣೆ ಬರುವುದಿಲ್ಲ. ಆದರೆ ತಿಪ್ಪನಗೌಡರು ಎರಡನ್ನೂ ಹಾಸು ಹೊಕ್ಕಾಗಿ ಕಲೆ ಕರಗತ ಮಾಡಿಕೊಂಡು ಎರಡನ್ನೂ ಅಷ್ಟೇ ನಿಷ್ಠೆ, ಪ್ರೇಮದಿಂದಲೇ ಕೊಪ್ಪಳ ತಾಲೂಕಿನಲ್ಲಿ ಕಟ್ಟಿ ಬೆಳೆಸಿದ್ದಾರೆ.
ಇಂದಿಗೂ ಸಹ 78ನೇ ಇಳಿ ವಯಸ್ಸಿನಲ್ಲಿಯೂ ಬಯಲಾಟದ ಉತ್ಸಾಹ, ಹುಮ್ಮಸ್ಸು, ಪ್ರೀತಿ ಕಡಿಮೆಯಾಗಿಲ್ಲ. ಸ್ವಲ್ಪ ಬಯಲಾಟದ ಬಗ್ಗೆಯೂ ಮಾತನಾಡಿದರೂ ಇಡೀ ಕಥೆ ಹೇಳುವಂತಹ ದಿಟ್ಟತೆ ಇವರಲ್ಲಿದೆ. ಪ್ರತಿಯೊಂದು ಹಾಡುಗಳನ್ನು ಲಯ, ರಾಗಬದ್ಧವಾಗಿ ಹಾಡಿ ಎಲ್ಲರ ಗಮನ ಸೆಳೆಯುತ್ತಾರೆ. ಇಂತಹ ಮೇರು ಪ್ರತಿಭೆಯನ್ನು ಸರ್ಕಾರ ಗೌರವಿಸಬೇಕು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಅವರಿಗೆ ಕಲಾವಿದರ ಮಾಸಾಶನ ದೊರೆತಿದ್ದು ಬಿಟ್ಟರೆ ಮತ್ಯಾವ ಸೌಲಭ್ಯಗಳು ದೊರೆತಿಲ್ಲ. ಸರ್ಕಾರ ಇಂತಹ ಹಿರಿಯ ಚೇತನರನ್ನು ಗುರುತಿಸುವ ಕೆಲಸ ಮಾಡಬೇಕಿದೆ.
ನಾನು 1975ರಿಂದಲೂ ಬಯಲಾಟ ಹಾಗೂ ಸಾಮಾಜಿಕ ನಾಟಕಗಳಿಗೆ ನಿರ್ದೇಶನ ಮಾಡಿಸುತ್ತ ಬಂದಿದ್ದೇನೆ. ಅಲ್ಲದೇ, ಹಲವು ಬಯಲಾಟಗಳಲ್ಲಿಯೂ ವಿವಿಧ ಪಾತ್ರಗಳಲ್ಲಿ ಅಭಿನಯಿಸಿದ್ದೇನೆ. ಇಂದು ಬಯಲಾಟದಂತ ಕಲೆ ಉಳಿಯಬೇಕಿದೆ. ಯುವಕರು ಕಥೆ ಚೆನ್ನಾಗಿ ಆಲಿಸಿ, ಬಯಲಾಟದ ಕಲೆ ಉಳಿಸಿ, ಬೆಳೆಸಿ ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸ ಮಾಡಬೇಕಿದೆ.
ತಿಪ್ಪನಗೌಡ ಪಾಟೀಲ್, ಹಿರಿಯ ಕಲಾವಿದ
ಹಿರಿಯ ಕಲಾವಿದ ತಿಪ್ಪನಗೌಡ ಪಾಟೀಲ್ ಮಾರ್ಗದರ್ಶನದಲ್ಲಿ ನಾನು ಹಲವು ಬಯಲಾಟದಲ್ಲಿ ವಿವಿಧ ಪಾತ್ರಗಳಲ್ಲಿ ಅಭಿನಯಿಸಿದ್ದೇನೆ. ನಿಜಕ್ಕೂ ಅವರ ಕೈಯಲ್ಲಿ ಕಲಿತಿರುವ ನಾವೇ ಪುಣ್ಯವಂತರು. ಅಂತಹ ಮಹಾನ್ ಕಲಾವಿದರನ್ನು ನಾವು ನೋಡಿಲ್ಲ. ಸರ್ಕಾರ ಗುರುತಿಸಿ-ಪ್ರೋತ್ಸಾಹಿಸುವ ಕೆಲಸ ಮಾಡಬೇಕಿದೆ.
ಹನುಮಗೌಡ್ರ, ಮುದ್ದಾಬಳ್ಳಿ ಕಲಾವಿದ
-ದತ್ತು ಕಮ್ಮಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tawargera: ಚಲಿಸುತ್ತಿದ್ದ ಬಸ್ಸಿಗೆ ಡಿಕ್ಕಿ ಹೊಡೆದು ನಂತರ ಕುರಿಗಳ ಮೇಲೆ ಹರಿದ ಕ್ಯಾಂಟರ್
Gangavathi: ಪತ್ನಿ ವರದಕ್ಷಿಣೆ ತಂದಿಲ್ಲ ಎಂದು ಮನೆಗೆ ಬೀಗ ಹಾಕಿ ಪತಿ ಹಾಗೂ ಮನೆಯವರು ಪರಾರಿ
Koppala ಗವಿಮಠ ಜಾತ್ರೆಗೆ ನಟ ಅಮಿತಾಬ್ ಬಚ್ಚನ್?
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
Koppala: ಮರಕುಂಬಿ ಅಸ್ಪೃಶ್ಯತೆ ಪ್ರಕರಣ… 99 ಜನರಿಗೆ ಜಾಮೀನು ನೀಡಿದ ಹೈಕೋರ್ಟ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.