ಕೈ ಮುಗಿದು ಕೇಳಿಕೊಳ್ತಾ ಇದ್ದೇನೆ ‘ಆ’ 15 ಜನ ನಮ್ಮನ್ನು ಸಂಪರ್ಕಿಸಿ: ಸಚಿವ ಶ್ರೀ ರಾಮುಲು
ನಿಜಾಮುದ್ದೀನ್ ಮರ್ಕಜ್‌ನಲ್ಲಿ ಪ್ರಾರ್ಥನೆಯಲ್ಲಿ ಪಾಲ್ಗೊಂಡು ಇನ್ನೂ ಮಾಹಿತಿ ನೀಡದ ವ್ಯಕ್ತಿಗಳಿಗೆ ಸಚಿವರ ಕಳಕಳಿಯ ಮನವಿ
Team Udayavani, Mar 31, 2020, 7:35 PM IST
ಕೊಪ್ಪಳ: ದೆಹಲಿ ನಿಜಾಮುದ್ದೀನ್ ಮರ್ಕಜ್‌ನಲ್ಲಿ ಮಾ.10ರಂದು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ಜನರಲ್ಲಿ ಕೋವಿಡ್ 19 ಸೋಂಕು ಕಾಣಿಸಿಕೊಂಡಿದೆ. ಕರ್ನಾಟಕದಿಂದ 54 ಜನರು ಪಾಲ್ಗೊಂಡಿರುವ ಮಾಹಿತಿ ಇದೆ. ಈಗಾಗಲೆ 39 ಜನರನ್ನು ಪತ್ತೆ ಮಾಡಿದ್ದೇವೆ.
ಇನ್ನುಳಿದ 15 ಜನರ ಮಾಹಿತಿ ಸಿಗುತ್ತಿಲ್ಲ, ಅವರೆಲ್ಲರಲ್ಲಿ ನಾನು ಕೈ ಮುಗಿದು ಕೇಳಿಕೊಳ್ಳುವುದೇನೆಂದರೆ ನೀವೆಲ್ಲರೂ ದಯವಿಟ್ಟು ಕೂಡಲೇ ನಮ್ಮನ್ನು, ಇಲ್ಲವೇ ಜಿಲ್ಲಾಸ್ಪತ್ರೆ, ಜಿಲ್ಲಾಧಿಕಾರಿ, ಜಿಲ್ಲಾ ಆರೋಗ್ಯಾಧಿಕಾರಿಗಳಲ್ಲಿ ಯಾರೊಬ್ಬರನ್ನಾದರೂ ತುರ್ತಾಗಿ ಸಂಪರ್ಕಿಸಿ ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ಅವರು ಇಂದು ಕಳಕಳಿಯಿಂದ ಮನವಿ ಮಾಡಿಕೊಂಡಿದ್ದಾರೆ.
ಕೊಪ್ಪಳದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವರು, ರಾಜ್ಯದಿಂದ ತೆರಳಿ ಪ್ರಾರ್ಥನೆಯಲ್ಲಿ ಪಾಲ್ಗೊಂಡವರಲ್ಲಿ 13 ಜನ ಸ್ವಯಂ ಆಗಿಯೇ ಬಂದು ನಮ್ಮನ್ನು ಸಂಪರ್ಕಿಸಿದ್ದಾರೆ. ಉಳಿದವರನ್ನು ನಾವು ಪತ್ತೆ ಮಾಡಿದ್ದೇವೆ. ಇನ್ನು 15 ಜನ ನಮಗೆ ಸಿಗುತ್ತಿಲ್ಲ. ಅವರು ಯಾರೇ ಆಗಿರಲಿ. ಸದ್ಯದ ಪರಿಸ್ಥಿತಿ ಅರಿತು ಡಿಸಿ, ಡಿಎಚ್‌ಒ ಅವರನ್ನು ಸಂಪರ್ಕಿಸಿ. ನಾವು ನಿಮ್ಮ ಹೆಸರು, ವಿಳಾಸವನ್ನು ಬಹಿರಂಗಪಡಿಸುವುದಿಲ್ಲ. ಇದೊಂದು ನನ್ನ ಕಳಕಳಿಯ ಮನವಿ ಎಂದರು.
ಈಗಾಗಲೆ ವೈರಸ್‌ನ ಸ್ಥಿತಿ ಹೇಗಿದೆ ಎಂದು ಎಲ್ಲರಿಗೂ ಗೊತ್ತಿದೆ. ಹೀಗಾಗಿ ಯಾವುದೇ ವಿಷಯ ಮುಚ್ಚಿಡುವ ಕೆಲಸ ಮಾಡಬೇಡಿ. ಅಲ್ಲದೇ, ಸರ್ಕಾರವು ಸಹ ಅವರು ದೆಹಲಿಗೆ ತೆರಳಿದ ದಿನಾಂಕ, ಅಲ್ಲಿಂದ ಯಾವ ವಿಮಾನದಲ್ಲಿ ವಾಪಾಸು ಬಂದಿದ್ದಾರೆ ಎಂದೆಲ್ಲಾ ಅವರ ಪ್ರವಾಸದ ವಿವರವನ್ನು ಕ್ರೋಡಿಕರಿಸುತ್ತಿದ್ದೇವೆ. ಇನ್ನೂ 39 ಜನರ ಮೇಲೆ ವಿವಿಧೆಡೆ ನಿಗಾ ವಹಿಸಲಾಗಿದೆ. ಇವರಲ್ಲಿ 13 ಜನರ ಗಂಟಲು ದ್ರವ ಪರೀಕ್ಷೆ ನೆಗಟಿವ್ ಎಂದು ಬಂದಿದೆ, ಇನ್ನುಳಿದವರ ವರದಿಗಾಗಿ ಕಾಯುತ್ತಿದ್ದೇವೆ ಎಂದು ಸಚಿವ ಶ್ರೀರಾಮುಲು ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದರು.
ರಾಜ್ಯದಲ್ಲಿ ಇದುವರೆಗೆ 98 ಪಾಸಟಿವ್ ಕೇಸ್ ಇವೆ. ಇವುಗಳಲ್ಲಿ 6 ಜನರು ಗುಣಖವಾಗಿದ್ದು, 3 ಜನರು ಸಾವನ್ನಪ್ಪಿದ್ದಾರೆ. ಸುಮಾರು 3243 ಗಂಟಲು ದ್ರವದ ಮಾದರಿ ಕಳಿಸಿ ಕೊಟ್ಟಿದ್ದೇವೆ. 3025 ಜನರ ನೆಗಟಿವ್ ವರದಿ ಬಂದಿದೆ. ಉಳಿದವುಗಳ ವರದಿ ಕಾಯುತ್ತಿದ್ದೇವೆ. 33 ಸಾವಿರ ಜನರ ಮೇಲೆ ನಿಗಾ ಇರಿಸಲಾಗಿದೆ. ಇವರು 14 ಹಾಗೂ 28 ದಿನಗಳ ಹೋಂ ಕ್ವಾರೆಂಟೈನ್ ಪೂರೈಸಿದ್ದಾರೆ. ಐಸೋಲೆಟೆಡ್‌ನಲ್ಲಿ 226 ಜನರಿದ್ದಾರೆ ಎಂಬ ವಿವರಗಳನ್ನು ಸಚಿವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಅದೃಷ್ಟವಶಾತ್ ರಾಜ್ಯದಲ್ಲಿ ಕೋವಿಡ್ 19 ಸೋಂಕು ಇನ್ನೂ ಮೂರನೇ ಹಂತಕ್ಕೆ ಹೋಗಿಲ್ಲ ಮತ್ತು ಸದ್ಯದ ಪರಿಸ್ಥಿತಿಯಲ್ಲಿ ನಿಯಂತ್ರಣಕ್ಕೆ ಬರುತ್ತಿದೆ. ಸೋಂಕು ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಹಗಲು-ರಾತ್ರಿ ಕೆಲಸ ಮಾಡುತ್ತಿದೆ ಮತ್ತು ಜನರೂ ತಮ್ಮ ಸಹಕಾರ ಕೊಡಬೇಕು ಎಂದು ಸಚಿವರು ಇದೇ ಸಂದರ್ಭದಲ್ಲಿ ರಾಜ್ಯದ ಜನತೆಯಲ್ಲಿ ಮನವಿ ಮಾಡಿಕೊಂಡರು.
ಸಾಮೂಹಿಕ ಪ್ರಾರ್ಥನೆ ಮಾಡಬೇಡಿ :
ಧಾರ್ಮಿಕ ಸ್ಥಳಗಳಲ್ಲಿ ಯಾರೂ ಸಾಮೂಹಿಕ ಪ್ರಾರ್ಥನೆ ಮಾಡಬೇಡಿ. ಮಸೀದಿ, ಚರ್ಚ್, ಮಂದಿರದ ಧರ್ಮ ಗುರುಗಳನ್ನು ಕೈ ಮುಗಿದು ಕೇಳಿಕೊಳ್ಳುತ್ತೇನೆ. ಇದು ಸೂಕ್ಷ್ಮ ವಿಚಾರವಾಗಿದೆ ಮತ್ತು ನಾವು ಯಾವುದೇ ಧಾರ್ಮಿಕ ಕೇಂದ್ರಕ್ಕೆ ಬೀಗ ಹಾಕುವಂತೆ ಆದೇಶ ಮಾಡಿಲ್ಲ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಬೀಗ ಹಾಕಿದರೂ ತಪ್ಪಿಲ್ಲ ಆದರೆ ಸಾಮೂಹಿಕ ಪ್ರಾರ್ಥನೆ ಮಾತ್ರ ಬೇಡವೇ ಬೇಡ ಎಂದು ಸಚಿವ ರಾಮುಲು ಮನವಿ ಮಾಡಿಕೊಂಡರು.
ಇಂದಿನ ಈ ಸುದ್ದಿಗೋಷ್ಠಿಯಲ್ಲಿ ಸಂಸದ ಸಂಗಣ್ಣ ಕರಡಿ, ಶಾಸಕರಾದ ಹಾಲಪ್ಪ ಆಚಾರ್, ಅಮರೆಗೌಡ ಭಯ್ಯಾಪೂರ, ಪರಣ್ಣ ಮುನವಳ್ಳಿ, ಬಸವರಾಜ ದಡೆಸೂಗೂರು, ಡಿಸಿ ಸುನೀಲ್ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayanagara ಕಾಲುವೆಗೆ ಬಿದ್ದು ಮತ್ತೊಬ್ಬ ಬೈಕ್ ಸವಾರ ಸಾವು
Anjanadri ಬೆಟ್ಟದಲ್ಲಿ ಬೆಳಗಿನ ಜಾವದಿಂದಲೇ ಮಾಲಾಧಾರಿಗಳಿಂದ ಮಾಲೆ ವಿಸರ್ಜನೆ
ಹನುಮಮಾಲಾ ವಿಸರ್ಜನೆ: ಕಿಷ್ಕಿಂಧಾ ಅಂಜನಾದ್ರಿಗೆ ಜಗಮಗಿಸುವ ವಿದ್ಯುತ್ ದೀಪಗಳಿಂದ ಅಲಂಕಾರ
ಕೃಷ್ಣ ನಿಧನ;ಪ್ರಮುಖ ಸರಕಾರಿ ಕಚೇರಿಗಳಲ್ಲಿ ಅರ್ಧಕ್ಕೇರದ ರಾಷ್ಟ್ರಧ್ವಜ;ಅಧಿಕಾರಿಗಳಿಂದ ಅಗೌರವ
ಎಸ್.ಎಂ.ಕೃಷ್ಣ ನಿಧನ; ಶೋಕಾಚರಣೆ ಆದೇಶಕ್ಕೆ ಕಿಮ್ಮತ್ತು ನೀಡದ ಬಿಇಒ,ಸಮಾಜ ಕಲ್ಯಾಣ ಇಲಾಖೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.