ಬರದ ನಾಡಿಗೆ ನೀರಾವರಿ ಭಾಗ್ಯ ಕರುಣಿಸಲಿ
ನವಲಿ ಜಲಾಶಯ, ಏತ ನೀರಾವರಿ ಪೂರ್ಣಗೊಳ್ಳಲಿ | ಹೊಸ ವಿವಿ, ತೋಟಗಾರಿಕೆ ಪಾರ್ಕ್ ಅಭಿವೃದ್ಧಿಪಡಿಸಿ
Team Udayavani, Jul 29, 2021, 7:36 PM IST
ವರದಿ: ದತ್ತು ಕಮ್ಮಾರ
ಕೊಪ್ಪಳ: ರಾಜ್ಯ ಬಿಜೆಪಿ ಸರ್ಕಾರದಲ್ಲಿ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅವರು ಬುಧವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇವರ ಅಧಿಕಾರವಧಿಯಲ್ಲಿ ಕೃಷ್ಣಾ ಬಿ ಸ್ಕೀಂ, ನವಲಿ ಜಲಾಶಯ, ಸಿಂಗಟಾಲೂರು ಏತ ನೀರಾವರಿ ಪೂರ್ಣಗೊಳಿಸುವುದು. ಹೊಸ ವಿವಿ, ವಿಮಾನ ನಿಲ್ದಾಣ ಸೇರಿದಂತೆ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಗಳ ಆರಂಭದ ಬಗ್ಗೆ ಜಿಲ್ಲೆಯ ಜನತೆ ನಿರೀಕ್ಷೆ ಹೊಂದಿದ್ದಾರೆ.
ಹೌದು. ಜಿಲ್ಲೆಯು ಮೊದಲೇ ಬರದ ನಾಡು ಎಂಬ ಹಣೆಪಟ್ಟಿ ಕಟ್ಟಿಕೊಂಡಿದೆ. 2 ವರ್ಷ ಉತ್ತಮ ಮಳೆಯಾದರೆ, ಮತ್ತೆರೆಡು ವರ್ಷ ಭೀಕರ ಬರಗಾಲ ಆವರಿಸಿ ಜನರ ಜೀವನವನ್ನೇ ನುಂಗುತ್ತಿದೆ. ಹನಿ ನೀರಿಗೂ ತತ್ವಾರ ಉಂಟಾಗುತ್ತಿದೆ. ಅದೆಷ್ಟೋ ಜನರು ನೀರಿನ ಸಮಸ್ಯೆಯಿಂದಲೇ ಕೆಲಸ ಅರಸಿ ಗುಳೆ ಹೋಗುತ್ತಿದ್ದಾರೆ. ಇಡೀ ಜಿಲ್ಲೆಯ ಜನ ನೀರು ಹರಿಸುವಂತೆ ಮೂರ್‍ನಾಲ್ಕು ದಶಕಗಳಿಂದ ಒತ್ತಾಯಿಸುತ್ತಲೇ ಇದ್ದಾರೆ. ಆದರೂ ಪರಿಪೂರ್ಣ ನೀರಾವರಿ ಕಂಡಿಲ್ಲ. ತುಂಗಭದ್ರಾ ಜಲಾಶಯ ಕೊಪ್ಪಳದಲ್ಲೇ ಇದ್ದರೂ ಸಮಪರ್ಕವಾಗಿ ನೀರು ಸಿಗುತ್ತಿಲ್ಲ. ಹಾಗಾಗಿ ಬರದ ನಾಡಿನ ನೀರಾವರಿ ಯೋಜನೆಗಳನ್ನು ಜಾರಿಗೊಳಿಸಿ ಎನ್ನುವ ಒತ್ತಾಯ ಇದೆ.
ಕೃಷ್ಣಾ ಬಿ ಸ್ಕೀಂಗೆ ಒತ್ತು ಕೊಡಿ:
ಕುಷ್ಟಗಿ-ಯಲಬುರ್ಗಾ ಹಾಗೂ ಕೊಪ್ಪಳ ಸ್ವಲ್ಪ ಭಾಗಕ್ಕೆ ಕೃಷ್ಣಾ ಬಿ ಸ್ಕೀಂ ನೀರು ಹರಿಯಬೇಕಿದೆ. ಈ ಭಾಗದ ಜನರು ದಶಕಗಳಿಂದಲೂ ನೀರಾಗಿ ಹೋರಾಟ ಮಾಡುತ್ತಿದ್ದಾರೆ. ಈ ಯೋಜನೆಗೆ ಕನಿಷ್ಟ 8-10 ಸಾವಿರ ಕೋಟಿ ಅನುದಾನ ಬೇಕಿದೆ. ಕೆಲವೆಡೆ ಕಾಮಗಾರಿ ನಡೆದಿದ್ದು, ಬಿಟ್ಟರೆ ಯೋಜನೆಗೆ ವೇಗ ಸಿಗುತ್ತಿಲ್ಲ. ಈ ಹಿಂದೆ ಬಿಜೆಪಿ ಸರ್ಕಾರವೇ ಯೋಜನೆ ಆರಂಭಕ್ಕೆ ಅಡಿಗಲ್ಲು ಹಾಕಿದೆ. ಕಳೆದ ಚುನಾವಣೆಯಲ್ಲಿ ಬಿಎಸ್‌ವೈ ಅವರು ಕೃಷ್ಣಾ ಕೊಳ್ಳದ ನೀರಾವರಿ ಪೂರ್ಣಗೊಳಿಸಲು ಮೋದಿ ಅವರ ಕೈಕಾಲು ಹಿಡಿದಾದರೂ 1 ಲಕ್ಷ ಕೋಟಿ ಅನುದಾನ ತರುವುದಾಗಿ ಘೋಷಿಸಿದ್ದರು. ಆದರೆ ಅಧಿಕಾರಕ್ಕೆ ಬಂದ ಬಳಿಕ ಅನುದಾನ ದೊಡ್ಡ ಮಟ್ಟದಲ್ಲಿ ಸಿಗಲೇ ಇಲ್ಲ. ನೂತನ ಸಿಎಂ ಈ ಯೋಜನೆ ಬಗ್ಗೆ ಕಾಳಜಿ ವಹಿಸಬೇಕಿದೆ. ಇನ್ನು ಸಿಂಗಟಾಲೂರು ಏತ ನೀರಾವರಿ ಬಲ ಭಾಗ ನೀರಾವರಿ ಕಂಡಿದ್ದು, ಎಡ ಭಾಗದ ಕೊನೆ ಹಂತದಲ್ಲಿ ಕೊಪ್ಪಳ ತಾಲೂಕಿನ ಅಳವಂಡಿ, ಬೆಟಗೇರಿ, ಸಿಂದೋಗಿವರೆಗೂ ನೀರಾವರಿ ಭಾಗ್ಯ ಕಾಣಬೇಕಿದೆ. ಆದರೆ ಯೋಜನೆಗೆ ವೇಗವೇ ಸಿಗುತ್ತಿಲ್ಲ. ಇದಕ್ಕೂ ಅನುದಾನ ನೀಡಿ ಇಚ್ಛಾಶಕ್ತಿ ತೋರಬೇಕಿದೆ.
ನವಲಿ ಜಲಾಶಯ ನಿರ್ಮಿಸಿ:
ತುಂಗಭದ್ರಾ ಹೂಳಿಗೆ ಪರ್ಯಾಯವಾಗಿ ನವಲಿ ಬಳಿ ಸಮಾನಾಂತರ ಜಲಾಶಯ ನಿರ್ಮಾಣಕ್ಕೆ ಸರ್ಕಾರವೇ ನಿರ್ಧರಿಸಿದೆ. ಮಾಜಿ ಸಿಎಂ ಬಿಎಸ್‌ವೈ ಅವರೇ ಈಚೆಗೆ 20 ಕೋಟಿ ರೂ. ಬಿಡುಗಡೆ ಮಾಡಿ ಡಿಪಿಆರ್ ಸಿದ್ಧಪಡಿಸಲು ಸಮ್ಮತಿ ನೀಡಿದ್ದರು. ಅದಕ್ಕೂ ಸಾವಿರಾರು ಕೋಟಿ ಅನುದಾನದ ಅಗತ್ಯವಿದೆ. ಇಲ್ಲಿ ಜಲಾಶಯ ನಿರ್ಮಾಣಗೊಂಡರೆ 33 ಟಿಎಂಸಿ ನೀರನ್ನು ಸಂಗ್ರಹಿಸಿಕೊಳ್ಳಲು ಸಾಧ್ಯವಾಗಲಿದೆ. ಈ ಭಾಗವೂ ನೀರಾವರಿ ಸೌಲಭ್ಯ ಕಾಣಲಿದೆ. ಜನರ ಜೀವನೋಪಾಯಕ್ಕೂ ಅನುಕೂಲವಾಗಲಿದೆ. ನೀರಾವರಿ ವ್ಯಾಜ್ಯ ಇತ್ಯರ್ಥಪಡಿಸಿ ಈ ಭಾಗದ ಜನರಿಗೆ ನೀರು ಹರಿಸಬೇಕಿದೆ. ಇದಕ್ಕೆ ಕನಿಷ್ಟ 6 ಸಾವಿರ ಕೋಟಿ ಅನುದಾನ ಬೇಕಾಗಿದೆ. ನೂತನ ಸಿಎಂ ನೀರಾವರಿ ಬಗ್ಗೆ ಹೆಚ್ಚು ಅನುಭವ ಹೊಂದಿದ್ದು, ತಕ್ಷಣ ಆರಂಭಿಕ ಸಾವಿರ ಕೋಟಿ ಅನುದಾನ ಘೋಷಣೆ ಮಾಡಬೇಕಿದೆ.
ಕೆರೆ ತುಂಬಿಸಲಿ:
ಜಿಲ್ಲೆಯಲ್ಲಿ ನೂರಕ್ಕೂ ಹೆಚ್ಚು ಕೆರೆಗಳಿವೆ. ಈ ಹಿಂದೆ ಕೆರೆ ತುಂಬಿಸುವ ಯೋಜನೆಯಲ್ಲಿ ಕೆಲವೊಂದು ಕೆರೆಗೆ ನೀರು ಹರಿಸಲಾಗಿದೆಯೇ ವಿನಃ ಶಾಶ್ವತ ಯೋಜನೆ ರೂಪಿಸಬೇಕಿದೆ. ಜಲ ಸಂರಕ್ಷಣೆಯ ಜೊತೆಗೆ ಕೆರೆಗೆ ನೀರು ತುಂಬಿಸುವ ಯೋಜನೆಗೂ ಅನುದಾನ ಘೋಷಣೆ ಮಾಡಬೇಕಿದೆ. ಈಗಾಗಲೇ ಘೋಷಣೆ ಮಾಡಿದ ಯೋಜನೆಗಳಿಗೂ ವೇಗ ಕೊಡಬೇಕಿದೆ. ಇದಲ್ಲದೇ, ಮುಂಡರಗಿ ಕುಡಿಯುವ ನೀರಿನ ಯೋಜನೆ, ಕುಷ್ಟಗಿ-ಯಲಬುರ್ಗಾ ತಾಲೂಕಿನ 700 ಕೋಟಿ ರೂ. ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ಬಹದ್ದೂರು ಬಂಡಿ ಏತ ನೀರಾವರಿ, ಬೆಟಗೇರಿ-ಅಳವಂಡಿ ಏತ ನೀರಾವರಿ ಯೋಜನೆಗಳ ಪೂರ್ಣಗೊಳಿಸಲು ಹೆಚ್ಚಿನ ಒಲವು ತೋರಬೇಕಿದೆ.
ತೋಟಗಾರಿಕೆ ಪಾರ್ಕ್, ಹೊಸ ವಿವಿ:
ಮಾಜಿ ಸಿಎಂ ಬಿಎಸ್‌ವೈ ಅವರ ಬಜೆಟ್ ನಲ್ಲಿ ಕನಕಗಿರಿಗೆ ನೂತನ ತೋಟಗಾರಿಕೆ ಪಾರ್ಕ್ ಘೋಷಣೆ ಮಾಡಿದ್ದಾರೆ. ಆದರೆ ಅನುದಾನವನ್ನೇ ಕೊಟ್ಟಿಲ್ಲ. ಅದಕ್ಕೆ ಅನುದಾನ ಮೀಸಲಿಡಬೇಕಿದೆ. ಇದರಿಂದ ಬರದ ನಾಡಿನ ಪ್ರದೇಶ ತೋಟಗಾರಿಕೆ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯವಾಗಲಿದೆ. ಇನ್ನೂ ಜಿಲ್ಲೆಗೆ ಹೊಸ ವಿವಿ ಸ್ಥಾಪನೆ ಪ್ರಯತ್ನ ನಡೆದಿದ್ದು, ಅದಕ್ಕಾಗಿ ನೂರಾರು ಎಕರೆ ಪ್ರದೇಶದಲ್ಲಿ ಜಾಗ ಗುರುತಿಸುವ ಅಗತ್ಯವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hukkeri: ಮೀನು ಹಿಡಿಯಲು ಹೋಗಿದ್ದ ತಂದೆ, ಇಬ್ಬರು ಮಕ್ಕಳು ನೀರುಪಾಲು
Karkala: ಪಶು ಗಣತಿಯಲ್ಲಿ ಬೆಕ್ಕುಗಳ ಅವಗಣನೆ !
Emergency: ಹತ್ತಾರು ವಿಳಂಬದ ಬಳಿಕ ಕೊನೆಗೂ ಕಂಗನಾ ʼಎಮರ್ಜೆನ್ಸಿʼ ರಿಲೀಸ್ ಗೆ ಡೇಟ್ ಫಿಕ್ಸ್
IPL Mega Auction: ಮೆಗಾ ಹರಾಜಿನಲ್ಲಿ 13ರ ಬಾಲಕ: ಯಾರಿದು ವೈಭವ್ ಸೂರ್ಯವಂಶಿ
Mangaluru: ಹೆದ್ದಾರಿ ಬದಿ ನಿಲ್ಲುವ ವಾಹನ; ಅಪಾಯಕ್ಕೆ ಆಹ್ವಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.