Koppala; ವಿಜಯನಗರ ಅರಸರ ಕಾಲದಲ್ಲಿ ನಿರ್ಮಿಸಿದ ಹುಲಗಿ ಕಟ್ಟೆಯ ಶಾಸನ ಪತ್ತೆ
Team Udayavani, May 23, 2024, 6:18 PM IST
ಕೊಪ್ಪಳ: ವಿಜಯನಗರ ಅರಸರ ಕಾಲದಲ್ಲಿ ನಿರ್ಮಿಸಿದ ಹುಲಗಿ ಕಟ್ಟೆಯ ಶಾಸನ ಪತ್ತೆಯಾಗಿದೆ.
ಕೊಪ್ಪಳ ಜಿಲ್ಲೆ ಕೊಪ್ಪಳ ತಾಲ್ಲೂಕಿನ ಹೊಳೆ ಮುದ್ಲಾಪುರದ ಹತ್ತಿರದ ಬಳಿ ಹುಲಗಿ ಅಣೆಕಟ್ಟೆಯ ಹತ್ತಿರ ವಿಜಯನಗರ ಕಾಲುವೆ ಯೋಜನೆಯನ್ನು ಕರ್ನಾಟಕ ನೀರಾವರಿ ನಿಗಮ, ವಿಜಯನಗರ ಕಾಲುವೆಗಳ ಆಧುನಿಕರಣ ಯೋಜನೆ, ನಂ-1 ತುಂಗಾಭದ್ರ ಜಲಾಶಯ ವಿಭಾಗ ಮುನಿರಾಬಾದ್ ಇವರು ಕಾಮಗಾರಿ ಕೈಗೊಳ್ಳುವಾಗ ಶಾಸನ ಪತ್ತೆಯಾಗಿದೆ. ಈ ಬಗ್ಗೆ ಮಾಹಿತಿಯನ್ನು ರಾಜ್ಯ ಪುರಾತತ್ತ್ವ ಸಂಗ್ರಹಾಲಯಗಳು ಪರಂಪರೆ ಇಲಾಖೆಗೆ ವಿಜಯನಗರ ಕಾಲುವೆ ಯೋಜನೆಯ ಸಂವಹನ ಮತ್ತು ದಾಖಲಾತಿ ತಜ್ಞ ಮಲ್ಲಿಕಾರ್ಜುನ ಹೊಸಪಾಳ್ಯ ಅವರು ತಿಳಿಸಿದಾಗ ಕಮಲಾಪುರ-ಹಂಪಿಯ ರಾಜ್ಯ ಪುರಾತತ್ತ್ವ ಸಂಗ್ರಹಾಲಯಗಳು ಪರಂಪರೆ ಇಲಾಖೆಯ ಉಪ ನಿರ್ದೇಶಕರಾದ ಡಾ.ಆರ್.ಶೇಜೇಶ್ವರ ಹಾಗೂ ಪುರಾತತ್ತ್ವ ಸಹಾಯಕರಾದ ಡಾ.ಆರ್.ಮಂಜನಾಯ್ಕ ಕ್ಷೇತ್ರಕಾರ್ಯ ಕೈಗೊಂಡಾಗ ಅಲ್ಲಿ ಆರು ಸಾಲಿನ ವಿಜಯನಗರ ಅರಸರ ಕಾಲದ ಶಾಸನವು ಕಂಡುಬಂದಿತು.
ಶಾಸನವು ತುಂಗಾಭದ್ರಾ ನದಿಗೆ ಅಡ್ಡಲಾಗಿ ಕಟ್ಟಿರುವ ಹುಲಿಗೆಯ ಅಣೆಕಟ್ಟೆಯ ಹೊಳೆ ಮುದ್ಲಾಪುರದ ಹತ್ತಿರದ ಅಣೆಕಟ್ಟಿನ ಪಕ್ಕದಲ್ಲಿ ಹುಟ್ಟುಬಂಡೆಯಲ್ಲಿದೆ. ಇದು 14 ಆಡಿ ಉದ್ದ ಹಾಗೂ 3 ಆಡಿ ಆಗಲವಾಗಿದ್ದು ಆರು ಸಾಲಿನ ಕನ್ನಡ ಶಾಸನವಾಗಿದೆ. ಈ ಶಾಸನವು ತುಂಗಾಭದ್ರ ನೀರಿನಿಂದ ಮುಳುಗಿರುತ್ತಿತ್ತು ಈ ವರ್ಷ ಮಳೆ ಕಡಿಮೆ ಇದ್ದರಿಂದ ಶಾಸನವು ಕಂಡು ಬಂದಿದೆ.
ಶಾಸನದ ಸಾರಾಂಶ: ಶಾಸನವು ನೀರಿನಲ್ಲಿ ಮುಳುಗಿದ್ದರಿಂದ ತೃಟಿತವಾಗಿದೆ. ಆದರೆ ಶಾಸನವನ್ನು ಓದಿ ಅರ್ಥಯಿಸಲು ಸಾಧ್ಯವಾಗಿದ್ದು, ವಿಜಯನಗರದ ಅರಸರ ಮಹಾಪ್ರಧಾನ ನಾಗಂಣದಂಣ ನಾಯಕನು ಮಲಿನಾಥದೇವರ ವಾಯುವ್ಯಕ್ಕೆ ಕಲಊರ ಎಂಬ ಸ್ಥಳದಲ್ಲಿ ತುಂಗಾಭದ್ರ ನದಿಗೆ ಅಡ್ಡಲಾಗಿ ಕಟ್ಟೆಯನ್ನು ಕಟ್ಟಿಸುತ್ತಾರೆ. ಈ ಕಟ್ಟೆಗೆ ಹುಲಿಗಿಯಕಟ್ಟಿ ಎಂಬ ಉಲ್ಲೇಖವಿದೆ. ಇಲ್ಲಿಂದ ಒಂದು ಕಾಲುವೆಯನ್ನು ನಿರ್ಮಿಸಿ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಹುಲಿಗಿಗೆ ನೀರನ್ನು ಕಾಲುವೆಯ ಮುಖಾಂತರ ನೀರನ್ನು ಹರಿಸಿರುವುದು ಈ ಶಾಸನದಿಂದ ತಿಳಿದು ಬರುತ್ತದೆ. ಇದರಲ್ಲಿ ಕಾಲುವೆಯ ಉಲ್ಲೇಖವು ಇದೆ. ಶಾಸನದ ಕುರಿತು ಇಲಾಖೆಯಿಂದ ಹೆಚ್ಚಿನ ಅಧ್ಯಯನ ನಡೆಯುತ್ತಿದೆ.
ಶಾಸನವನ್ನು ಓದಿಕೊಟ್ಟ ಡಾ.ಜಗದೀಶ ಅಗಸಿಬಾಗಿಲ ಹಾಗೂ ವಿಜಯನಗರ ಕಾಲುವೆ ಯೋಜನೆಯನ್ನು ಕರ್ನಾಟಕ ನೀರಾವರಿ ನಿಗಮ, ವಿಜಯನಗರ ಕಾಲುವೆಗಳ ಆಧುನಿಕರಣ ಯೋಜನೆ. ನಂ-1 ತುಂಗಾಭದ್ರ ಜಲಾಶಯ ವಿಭಾಗ ಮುನಿರಾಬಾದ್ ಹಾಗೂ ವೆಂಕಟೇಶ ಇವರಿಗೆ ರಾಜ್ಯ ಪುರಾತತ್ತ್ವ ಸಂಗ್ರಹಾಲಯಗಳು ಪರಂಪರೆ ಇಲಾಖೆಯ ಉಪ ನಿರ್ದೇಶಕರಾದ ಡಾ.ಆರ್.ಶೇಜೇಶ್ವರ ಇವರು ಧನ್ಯವಾದ ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.