ಇನ್ನೂ ತಪ್ಪಿಲ್ಲ ಬಿಡಾಡಿ ದನಗಳ ಹಾವಳಿ
ಒಂದೇ ದಿನದಲ್ಲಿ ಕಾರ್ಯಚರಣೆ ಭರವಸೆ ನೀಡಿದ್ದ ನಗರಸಭೆ; ವಿಳಂಬ ಧೋರಣೆಗೆ ಸಾರ್ವಜನಿಕರ ಆಕ್ರೋಶ
Team Udayavani, Nov 27, 2022, 5:12 PM IST
ಕೊಪ್ಪಳ: ನಗರಸಭೆ ವ್ಯಾಪ್ತಿಯಲ್ಲಿನ ಬಿಡಾಡಿ ದನಗಳನ್ನು ಒಂದೇ ದಿನದಲ್ಲಿ ಕಾರ್ಯಾಚರಣೆ ಮಾಡಿ ಹಿಡಿಯುವ ಘೋಷಣೆ ಮಾಡಿದ್ದ ನಗರಸಭೆ ಪೌರಾಯುಕ್ತರು ಇನ್ನು ಪೂರ್ಣವಾಗಿ ದನಗಳ ಸ್ಥಳಾಂತರಿಸುವ ಕೆಲಸವನ್ನೇ ಮಾಡಿಲ್ಲ. ಈಗಲೂ ದನಗಳ ಹಾವಳಿ ಹೆಚ್ಚಾಗಿದೆ. ರಸ್ತೆಗಳಲ್ಲೇ ಅಡ್ಡಾದಿಡ್ಡಿ ಮಲಗಿ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದು, ನಗರಸಭೆ ವಿಳಂಬ ನೀತಿಗೆ ಜನತೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಹೌದು.. ನಗರ ವ್ಯಾಪ್ತಿಯಲ್ಲಿ ಬಿಡಾಡಿ ದನಗಳ ಹಾವಳಿ ಮಿತಿ ಮೀರಿದೆ. ರಾಷ್ಟ್ರೀಯ ಹೆದ್ದಾರಿ ರಸ್ತೆ, ಜವಾಹರ ರಸ್ತೆ, ಗಡಿಯಾರ ಕಂಬ, ಗವಿಮಠ ಸೇರಿದಂತೆ ಸಣ್ಣಪುಟ್ಟ ರಸ್ತೆಗಳಲ್ಲಿ ಬಿಡಾಡಿ ದನಗಳ ಹಾವಳಿ ಮಿತಿ ಮೀರಿದೆ. ಈ ದನಗಳಿಗೆ ಮಾಲೀಕರು ಇದ್ದಾರೆ. ಆದರೆ ಅವರ್ಯಾರು ಈ ಬಗ್ಗೆ ಕಿವಿಗೆ ಹಾಕಿಕೊಳ್ಳುತ್ತಿಲ್ಲ. ಹಿಂದೆ ದನಗಳ ಹಾವಳಿ ಕುರಿತು ಮಾಧ್ಯಮಗಳಲ್ಲೂ ಹಲವು ಬಾರಿ ವರದಿ ಪ್ರಕಟವಾಗಿವೆ. ಹಲವು ಹೋರಾಟಗಾರರು ನಗರಸಭೆ ಸೇರಿ ಜಿಲ್ಲಾಧಿಕಾರಿಗಳಿಗೂ ದೂರು ಸಲ್ಲಿಸಿ ದನಗಳ, ಬೀದಿ ನಾಯಿಗಳ, ಹಂದಿಗಳನ್ನು ಹಿಡಿದು ಬೇರೆಡೆ ಸಾಗಿಸುವಂತೆ ಮನವಿ ಮಾಡಿದ್ದರು. ಆದರೂ ನಗರಸಭೆ ನಿರ್ಲಕ್ಷ್ಯ ವಹಿಸಿತ್ತು.
ಈಚೆಗೆ ನಗರದ 30ನೇ ವಾರ್ಡ್‌ನಲ್ಲಿ ಮಹಿಳೆಯೊಬ್ಬರ ಮೇಲೆ ಬಿಡಾಡಿ ದನ ದಾಳಿ ನಡೆಸಿತ್ತು. ಆ ದಾಳಿಗೆ ಮಹಿಳೆ ಮೃತಪಟ್ಟಿದ್ದಾಳೆ. ಸ್ಥಳೀಯ ನಿವಾಸಿಗಳು ಮೃತ ಮಹಿಳೆ ಶವವನ್ನು ನಗರಸಭೆ ಮುಂದೆ ತಂದಿಟ್ಟು ಪ್ರತಿಭಟನೆ ನಡೆಸಿ ಅಧಿಕಾರಿಗಳಿಗೆ ಎಚ್ಚರಿಕೆ ಮೂಡಿಸಿತ್ತು. ಈ ಘಟನೆ ಬೆನ್ನಲ್ಲೇ ಎಚ್ಚೆತ್ತ ನಗರಸಭೆ ಪೌರಾಯುಕ್ತ ಭುಜಕ್ಕನವರ್ ಒಂದೇ ದಿನದಲ್ಲಿ ಬಿಡಾಡಿ ದನಗಳ ಹಿಡಿಯುವ ಕೆಲಸಕ್ಕೆ ಮುಂದಾಗುವುದಾಗಿ ಘೋಷಣೆ ಮಾಡಿದ್ದರು.
ಆದರೆ ಬಹುಪಾಲು ದನಗಳು ಇನ್ನು ನಗರದ ರಸ್ತೆಗಳಲ್ಲಿ ಎಲ್ಲೆಂದರಲ್ಲಿ ಓಡಾಡುತ್ತಿವೆ. ಮಹಿಳೆಯ ಸಾವು ಸಂಭವಿಸಿದ ಬಳಿಕವೂ ನಗರಸಭೆ ಎಚ್ಚೆತ್ತುಕೊಳ್ಳಲಿದೆ. ಜನರಿಗೆ ಆಗುವ ತೊಂದರೆ ತಪ್ಪಿಸಲಿದೆ ಎಂದುಕೊಂಡಿದ್ದ ಸಾರ್ವಜನಿಕರ ನಿರೀಕ್ಷೆ ಮತ್ತೆ ಹುಸಿಯಾಗುತ್ತಿದೆ ಎನ್ನುವ ಭಾವನೆ ಮೂಡಲಾರಂಭಿಸಿವೆ. ನಗರದಲ್ಲಿ 100ಕ್ಕೂ ಹೆಚ್ಚು ದನಗಳಿವೆ. ಇನ್ನು ಬೀದಿ ನಾಯಿಗಳ ಹಾವಳಿಯೂ ಹೆಚ್ಚಾಗಿದ್ದು, ಈಚೆಗಷ್ಟೇ ಬಾಲಕನ ಮೇಲೆ ನಾಯಿ ದಾಳಿ ಮಾಡಿದೆ. ಕೋತಿಗಳು ದಾಳಿ ನಡೆಸುತ್ತಿವೆ. ಹಂದಿಗಳ ಹಾವಳಿಯೂ ಹೆಚ್ಚಾಗಿದೆ. ಹಾಗಾಗಿ ನಗರದಲ್ಲಿನ ಜನರಿಗೆ ರಕ್ಷಣೆ ಇಲ್ಲದಂತಾಗಿದೆ. ಪ್ರಯಾಣಿಕರು ಜೀವ ಭಯದಲ್ಲೇ ವಾಹನ ಚಲಾಯಿಸುವಂತ ಸ್ಥಿತಿಯಿದೆ.
ಆಕ್ರೋಶ: ನಗರಸಭೆ ಪೌರಾಯುಕ್ತ ಎಚ್. ಎನ್. ಭುಜಕ್ಕನವರ್ ಒಂದೇ ದಿನದಲ್ಲಿ ದನಗಳನ್ನು ಹಿಡಿಯುವ ಭರವಸೆ ನೀಡಿದ್ದಲ್ಲದೇ, ಪ್ರಕಟಣೆಯನ್ನೂ ನೀಡಿ ದನಗಳ ಮಾಲಿಕರಿಗೆ ಎಚ್ಚರಿಕೆ ನೀಡಿದ್ದಾರೆ. ಆದರೆ ಹಿಡಿಯುವ ಕೆಲಸವು ಎಲ್ಲಿಯೂ ಕಂಡು ಬಂದಿಲ್ಲ. ಇದರಿಂದ ಸಾರ್ವಜನಿಕರು ನಗರಸಭೆ ವೈಖರಿಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಶೀಘ್ರದಲ್ಲೇ ದನಗಳ ಹಿಡಿಯುವ ಕೆಲಸವಾಗಲಿ. ಇಲ್ಲದಿದ್ದರೆ ನಗರಸಭೆ ಮುಂದೆ ದೊಡ್ಡ ಹೋರಾಟ ಮಾಡಬೇಕಾಗುತ್ತದೆ ಎನ್ನುವ ಎಚ್ಚರಿಕೆಯ ಮಾತುಗಳನ್ನೂ ಆಡುತ್ತಿದ್ದಾರೆ.
ಬಿಡಾಡಿ ದನಗಳ ಹಾವಳಿಯಿಂದ ಮಹಿಳೆ ಸಾವನ್ನಪ್ಪಿದ್ದಾರೆ. ಈ ಘಟನೆ ಬಳಿಕ ನಗರಸಭೆ ಎಚ್ಚೆತ್ತುಕೊಳ್ಳಬೇಕಿತ್ತು. ಒಂದೇ ದಿನದಲ್ಲಿ ಬಿಡಾಡಿ ದನಗಳನ್ನು ಹಿಡಿಯುವುದಾಗಿ ಹೇಳಿತ್ತು. ಆದರೆ ಇಲ್ಲಿವರೆಗೂ ಎಲ್ಲೆಂದರಲ್ಲಿ ದನಗಳ ಓಡಾಟ ನಡೆದಿದೆ. ನಗರಸಭೆ ಈ ವಿಷಯದಲ್ಲಿ ನಿರ್ಲಕ್ಷ್ಯ ಭಾವನೆ ತಾಳುತ್ತಿದೆ. ಇನ್ನು ಎಷ್ಟು ಸಾವು ಸಂಭವಿಸಬೇಕು. ಬಿಡಾಡಿ ದನಗಳ ಜೊತೆಗೆ ಬೀದಿ ನಾಯಿಗಳು, ಹಂದಿಗಳನ್ನು ಹಿಡಿಯಬೇಕು. ಇಲ್ಲದಿದ್ದರೆ ನಗರಸಭೆ ಮುಂದೆ ಹೋರಾಟ ಮಾಡಲಾಗುವುದು. –ಎಸ್.ಎ. ಗಫಾರ್, ಕಾರ್ಮಿಕ ಮುಖಂಡ
ಬಿಡಾಡಿ ದನಗಳನ್ನು ಒಂದೇ ದಿನದಲ್ಲಿ ಹಿಡಿಯುವ ಕುರಿತು ಹೇಳಿದ್ದೆವು. ಆದರೆ ಕೆಲ ದನಗಳ ಮಾಲೀಕರು ತಮ್ಮ ದನಗಳನ್ನು ಹಿಡಿದುಕೊಂಡು ಹೋಗಿದ್ದಾರೆ. ಇನ್ನು 70-80 ದನಗಳು ನಗರದಲ್ಲಿ ಓಡಾಡುತ್ತಿದ್ದು, ಹಗಲು ವೇಳೆ ಅವುಗಳನ್ನು ಹಿಡಿಯಲು ತೆರಳಿದರೆ ಸಾರ್ವಜನಿಕರಿಗೆ ತೊಂದರೆ ಮಾಡುತ್ತವೆ ಎನ್ನುವ ಕಾರಣಕ್ಕೆ ಪ್ರತಿದಿನ ರಾತ್ರಿ 11 ಗಂಟೆ ವೇಳೆಗೆ ಕಾರ್ಯಾಚರಣೆ ಮಾಡುತ್ತಿದ್ದೇವೆ. ಈಗ 12 ದನಗಳನ್ನು ಹಿಡಿದು ಗೋಶಾಲೆಗೆ ಸಾಗಿಸಿದ್ದೇವೆ. ಉಳಿದವುಗಳನ್ನು ಹಿಡಿಯಲಿದ್ದೇವೆ. ಗೋ ಶಾಲೆ ಮುಖ್ಯಸ್ಥರಿಗೂ ಪತ್ರ ಬರೆದಿದ್ದು, ಬಿಡಾಡಿ ದನಗಳನ್ನು ಬಿಡಿಸಿಕೊಳ್ಳಲು ಯಾರೇ ಬಂದರೂ ಬಿಡದಂತೆ ಹೇಳಿದ್ದೇವೆ. ಎಲ್ಲ ದನಗಳನ್ನು ಹಿಡಿಯಲಿದ್ದೇವೆ. –ಎಚ್.ಎನ್. ಭುಜಕ್ಕನವರ್, ನಗರಸಭೆ ಪೌರಾಯುಕ್ತ, ಕೊಪ್ಪಳ
ದತ್ತು ಕಮ್ಮಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tawargera: ಚಲಿಸುತ್ತಿದ್ದ ಬಸ್ಸಿಗೆ ಡಿಕ್ಕಿ ಹೊಡೆದು ನಂತರ ಕುರಿಗಳ ಮೇಲೆ ಹರಿದ ಕ್ಯಾಂಟರ್
Gangavathi: ಪತ್ನಿ ವರದಕ್ಷಿಣೆ ತಂದಿಲ್ಲ ಎಂದು ಮನೆಗೆ ಬೀಗ ಹಾಕಿ ಪತಿ ಹಾಗೂ ಮನೆಯವರು ಪರಾರಿ
Koppala ಗವಿಮಠ ಜಾತ್ರೆಗೆ ನಟ ಅಮಿತಾಬ್ ಬಚ್ಚನ್?
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
Koppala: ಮರಕುಂಬಿ ಅಸ್ಪೃಶ್ಯತೆ ಪ್ರಕರಣ… 99 ಜನರಿಗೆ ಜಾಮೀನು ನೀಡಿದ ಹೈಕೋರ್ಟ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.