ಏಕಾಏಕಿ ನಾಪತ್ತೆಯಾದ ಪೌರ ಕಾರ್ಮಿಕ : ಪತ್ನಿಗೆ ಹೊರಗುತ್ತಿಗೆ ಕೆಲಸ ನೀಡಲು ಮುಂದಾದ ಪುರಸಭೆ
Team Udayavani, Aug 16, 2022, 3:01 PM IST
ಕುಷ್ಟಗಿ : ಪುರಸಭೆ ಪೌರ ಕಾರ್ಮಿಕ ರಾಜಶೇಖರ ಮರಿಯಪ್ಪ ನಾಗೂರು ಏಕಾಏಕಿ ನಾಪತ್ತೆ ಪ್ರಕರಣ ಹಿನ್ನೆಲೆಯಲ್ಲಿ ಪತ್ನಿಗೆ ಹೊರಗುತ್ತಿಗೆ ಕೆಲಸ ನೀಡುವುದಾಗಿ ಮಂಗಳವಾರ ನಡೆದ ಪುರಸಭೆ ಸಾಮಾನ್ಯ ಸಭೆ ನಿರ್ಣಯಿಸಿತು.
ಪುರಸಭೆ ಅಧ್ಯಕ್ಷ ಗಂಗಾಧರ ಸ್ವಾಮಿ ಹಿರೇಮಠ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ರಾಜಶೇಖರ ನಾಗೂರು ಪತ್ನಿ ರೇಣುಕಾ ಹಾಗೂ ಪುತ್ರಿಯರು ಕಣ್ಣೀರಿಟ್ಟರು. ಪತಿ ಕಾಣೆಯಾಗಿ 6ತಿಂಗಳಾಗಿದ್ದು ಕುಷ್ಟಗಿ ಪೊಲೀಸರು ಪತ್ತೆ ಮಾಡಿಲ್ಲ. ಐವರು ಪುತ್ರಿಯರಿದ್ದು ಜೀವನ ನಿರ್ವಹಣೆ ಕಡು ಕಷ್ಟವಾಗಿದೆ. ಬಾಡಿಗೆ ಮನೆಯಲ್ಲಿ ಇದ್ದು, ಬಾಡಿಗೆಯವರು ಮನೆ ಬಾಡಿಗೆ ಪಾವತಿಸದ ಸಂಬಂಧ ಮನೆ ಬಿಡಲು ಸೂಚಿಸಿದ್ದಾರೆ. ಐವರು ಹೆಣ್ಣು ಮಕ್ಕಳೊಂದಿಗೆ ಬೀದಿಗೆ ಬೀಳುವಂತಾಗಿದೆ ಎಂದು ಅಳಲು ತೋಡಿಕೊಂಡರು.
ಜೀವನ ನಿರ್ವಹಣೆಗೆ ಹೊರಗುತ್ತಿಗೆ ಕೆಲಸ ನೀಡುವಂತೆ ವಿನಂತಿಸಿದರು. ಇದಕ್ಕೆ ಮುಖ್ಯಾಧಿಕಾರಿ ಬುಡ್ಡಪ್ಪ ಬಂಡಿವಡ್ಡರ ಅವರು, ಪೌರ ಕಾರ್ಮಿಕ ರಾಜಶೇಖರ ನಾಗೂರು ಅವರು ಕಾಯಂ ನೌಕರಲ್ಲ ಹೊರಗುತ್ತಿಗೆ ನೌಕರ ಆಗಿದ್ದು, ಅನುಕಂಪದ ಹಿನ್ನೆಲೆಯಲ್ಲಿ ನೇಮಿಸಿಕೊಳ್ಳಲು ಅಸಾಧ್ಯ ಎಂದರು. ಪುರಸಭೆ ಸದಸ್ಯರಾದ ಚಿರಂಜೀವಿ ಹಿರೇಮಠ,ಸಯ್ಯದ್ ಖಾಜಾ ಮೈನುದ್ದೀನ್ ಮುಲ್ಲಾ, ಮೈಬೂಸಾಬ್ ಕಮ್ಮಾರ, ವಸಂತ ಮೇಲಿನಮನಿ ಸೇರಿದಂತೆ ಇತರೇ ಸದಸ್ಯರು, ರಾಜಶೇಖರ ಪತ್ನಿಗೆ ಮಾನವೀಯತೆ ಆಧಾರದ ಮೇಲೆ ಹೊರಗುತ್ತಿಗೆ ಕೆಲಸ ನೀಡುವಂತೆ ಒತ್ತಾಯಿಸಿದರು. ಇದಕ್ಕೆ ಪುರಸಭೆ ಅಧ್ಯಕ್ಷ ಗಂಗಾಧರಸ್ವಾಮಿ ಹಿರೇಮಠ ಅವರು, ಎಲ್ಲಾ ಸದಸ್ಯರು ಸ್ಥಳೀಯ ಪೊಲೀಸ್ ಠಾಣೆಗೆ ರಾಜಶೇಖರ ಪತ್ತೆಗೆ ಒತ್ತಡ ಹೇರುವುದಾಗಿ ಹಾಗೂ ಸದರಿ ಕುಟುಂಬಕ್ಕೆ ಆರ್ಥಿಕ ಸಹಾಯ ಹಾಗೂ ಈ ಕುಟುಂಬದ ಜೀವನ ಭದ್ರತೆಗೆ ಪುರಸಭೆಯಲ್ಲಿ ಹೊರಗುತ್ತಿಗೆ ಕೆಲಸ ನೀಡುವ ಭರವಸೆ ವ್ಯಕ್ತಪಡಿಸಿದರು.
ಇದನ್ನೂ ಓದಿ : ಭದ್ರಾವತಿ: ಬಜರಂಗದಳ ಯುವಕನ ಮೇಲೆ ಹಲ್ಲೆ ನಡೆಸಿದ್ದ ಡಿಚ್ಚಿ ಮುಬಾರಕ್ ಬಂಧನ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.