ಪಶುಪಾಲನಾ ಇಲಾಖೆಯಲ್ಲಿ ಕಾರ್ಯ ಭಾರ
ಅರ್ಧಕ್ಕರ್ಧ ವೈದ್ಯರ ಕೊರತೆ,2-3 ಆಸ್ಪತ್ರೆಗೆ ಒಬ್ಬ ವೈದ್ಯರ ನಿಯೋಜನೆ
Team Udayavani, Nov 9, 2020, 7:17 PM IST
ಸಾಂದರ್ಭಿಕ ಚಿತ್ರ
ಕೊಪ್ಪಳ: ಜಿಲ್ಲೆಯಲ್ಲಿನ ಪಶುಪಾಲನಾ ಇಲಾಖೆಯಲ್ಲಿ ಕಾರ್ಯಭಾರದ ಒತ್ತಡ ಹೆಚ್ಚಿದೆ. ಜಾನುವಾರುಗಳಿಗೆ ರೋಗ ಬಂದರೆ ಚಿಕಿತ್ಸೆ ಕೊಡಿಸಲು ಜನರು ಪರದಾಡುವ ಸ್ಥಿತಿಯಿದೆ. ಅರ್ಧಕ್ಕೆ ಅರ್ಧದಷ್ಟು ಪಶು ಚಿಕಿತ್ಸಾ ವೈದ್ಯರ ಕೊರತೆಯಿದ್ದು, ಇಲಾಖೆ ಅಧಿಕಾರಿ ವರ್ಗವು ಒತ್ತಡದಲ್ಲಿಯೇ ಕೆಲಸ ನಿರ್ವಹಿಸುವಂತಹ ಪರಿಸ್ಥಿತಿ ಎದುರಾಗಿದೆ.
ಇತ್ತೀಚಿಗೆ ಜಾನುವಾರುಗಳಿಗೆ ರೋಗ ಹೆಚ್ಚಾಗುತ್ತಿವೆ. ಅವುಗಳಿಗೆ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ ಎನ್ನುವ ಕೂಗು ಒಂದಡೆಯಾದರೆ, ಆಸ್ಪತ್ರೆಯಲ್ಲಿ ವೈದ್ಯರು ಇಲ್ಲ ಎನ್ನುವ ಕೂಗು ಮತ್ತೂಂದೆಡೆ ಕಾಡುತ್ತಿದೆ. ಹೀಗಾಗಿ ಜಾನುವಾರು ಮಾಲಿಕರ ರೋಧನ ಹೇಳದಂತ ಸ್ಥಿತಿಯಾಗಿದೆ.
ಚರ್ಮಗಂಟು ರೋಗ ಜಾನುವಾರುಗಳ ಜೀವ ಹಿಂಡುತ್ತಿದೆ. ಇದಕ್ಕೆ ಚಿಕಿತ್ಸೆ ಸಕಾಲಕ್ಕೆ ದೊರೆಯುತ್ತಿಲ್ಲ ಎನ್ನುವ ಕೂಗು ಕೇಳುತ್ತಿದ್ದರೆ, ಇರುವ ಸಿಬ್ಬಂದಿಯೇ ಕೆಲಸ ನಿರ್ವಹಿಸುತ್ತಿದ್ದೇವೆ ಎನ್ನುವ ಮಾತು ಪಶುಪಾಲನಾ ಇಲಾಖೆಯಿಂದ ಕೇಳಿ ಬರುತ್ತಿದೆ. ಜಿಲ್ಲೆಯ ಪಶುಪಾಲನಾ ಇಲಾಖೆಯಲ್ಲಿ ಒಟ್ಟು 356 ಹುದ್ದೆಗಳು ಮಂಜೂರಾಗಿವೆ. ಇದರಲ್ಲಿ ಜಾನುವಾರುಗಳಿಗೆ ಚಿಕಿತ್ಸೆ ನೀಡುವ ವೈದ್ಯರೂ ಒಳಗೊಂಡಿದ್ದಾರೆ. ಈ ಪೈಕಿ 152 ಜನರು ಕಾರ್ಯ ನಿರ್ವಹಿಸುತ್ತಿದ್ದಾರೆ. ಅಂದರೆ 204 ಹುದ್ದೆಗಳು ಖಾಲಿಯಿವೆ. ಅಂದರೆ ಶೇ. 63ರಷ್ಟು ಹುದ್ದೆಗಳು ಖಾಲಿಯಿವೆ. ಇದರಿಂದ ಇರುವ ಅಧಿ ಕಾರಿಗಳಿಗೆ ಕಾರ್ಯ ಒತ್ತಡವೂ ಹೆಚ್ಚಾಗಿದೆ.
75 ವೈದ್ಯರಲ್ಲಿ 33 ಜನ ಕೆಲಸ: ಇನ್ನೂ ಜಿಲ್ಲೆಯಲ್ಲಿ ಪಶು ಚಿಕಿತ್ಸಾಲಯಗಳಿಗೆ ಮಂಜೂರಾಗಿರುವ 75 ವೈದ್ಯರ ಹುದ್ದೆಗಳ ಪೈಕಿ 33 ವೈದ್ಯರು ಕಾರ್ಯ ನಿರ್ವಹಿಸುತ್ತಿದ್ದಾರೆ. ಅಂದರೆ 38 ವೈದ್ಯರ ಹುದ್ದೆಗಳು ಖಾಲಿಯಿವೆ. ಇದರಿಂದ ಜಿಲ್ಲೆಯಲ್ಲಿನ 2-3 ಪಶು ಚಿಕಿತ್ಸಾಲಯಗಳಿಗೆ ಒಬ್ಬರೇ ವೈದ್ಯರು ಕಾರ್ಯ ನಿರ್ವಹಿಸುತ್ತಿದ್ದಾರೆ. ಅಲ್ಲಿನ ಕಾಂಪೌಂಡರ್, ಪ್ಯೂನ್ ಮೇಲೆಯೇ ಆಸ್ಪತ್ರೆ ನಡೆಯುತ್ತಿದೆ. ಉತ್ತರ ಕರ್ನಾಟಕ ಹೊರತುಪಡಿಸಿ ಬೇರೆ ಜಿಲ್ಲೆಗಳಲ್ಲಿ ಪಶುಪಾಲನಾ ಇಲಾಖೆಯಲ್ಲಿ ಶೇ. 80-90ರಷ್ಟು ಹುದ್ದೆಗಳು ಭರ್ತಿಯಾಗಿವೆ. ಆದರೆ ಈ ಭಾಗದಲ್ಲಿ ಮಾತ್ರ ಹುದ್ದೆಗಳು ಭರ್ತಿಯಾಗುತ್ತಿಲ್ಲ ಎನ್ನುವುದೇ ಇಲಾಖೆ ಹಂತದ ಅಧಿಕಾರಿಗಳ ಅಳಲು.
ಸಚಿವರೇ ಸಮಸ್ಯೆ ಗಮನಿಸಿ: ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ್, ಸಂಸದ ಸಂಗಣ್ಣ ಕರಡಿ ಸೇರಿದಂತೆ ಜಿಲ್ಲೆಯ ಐದು ಕ್ಷೇತ್ರದ ಶಾಸಕರು ಇಲ್ಲಿನ ಪಶು ಪಾಲನಾ ಇಲಾಖೆಯಲ್ಲಿನ ಸಮಸ್ಯೆಯನ್ನೊಮ್ಮೆ ಆಲಿಸಬೇಕಿದೆ. ಮೂಕ ಪ್ರಾಣಿಗಳಿಗೆ ಚಿಕಿತ್ಸೆ ನೀಡುವ ವೈದ್ಯರೇ ಇಲ್ಲದಿರುವಾಗ ಅವುಗಳ ವೇದನೆ ಯಾರು ಕೇಳಬೇಕು ಎನ್ನುವಂತಾಗಿದೆ. ಜನ ನಾಯಕರು ಪಶು ಪಾಲನಾ ಇಲಾಖೆಯಲ್ಲಿನ ಕಾರ್ಯ ಭಾರದ ಒತ್ತಡವನ್ನು ಕಡಿಮೆ ಮಾಡಲು ಸರ್ಕಾರದ ಮಟ್ಟದಲ್ಲಿ ಒತ್ತಡ ತಂದು ನೇಮಕಾತಿ ಪ್ರಕ್ರಿಯೆಗೆ ಚಾಲನೆ ಕೊಡಿಸಬೇಕಿದೆ. ಇಲ್ಲಿನ ಖಾಲಿ ಹುದ್ದೆಗಳ ಭರ್ತಿಗೆ ಸರ್ಕಾರದ ಮಟ್ಟದಲ್ಲಿ ಗಮನ ಸೆಳೆಯಬೇಕಿದೆ. ಇಲ್ಲದಿದ್ದರೆ ಇಲ್ಲಿನ ಸಮಸ್ಯೆಯನ್ನು ಕೇಳುವವರೇ ಇಲ್ಲದಂತಾಗಿದೆ.
ನಮ್ಮ ಇಲಾಖೆಯಲ್ಲಿ ಹುದ್ದೆಗಳ ಕೊರತೆ ತುಂಬಾ ಇದೆ. 356 ಹುದ್ದೆಗಳ ಪೈಕಿ 152 ಹುದ್ದೆ ಮಾತ್ರ ಕಾರ್ಯ ನಿರ್ವಹಿಸುತ್ತಿವೆ. ಉಳಿದೆಲ್ಲವೂ ಖಾಲಿಯಿವೆ. ಇದರಿಂದಾಗಿ ಇರುವ ಸಿಬ್ಬಂದಿ ಮಧ್ಯೆ ಒತ್ತಡದಲ್ಲಿಯೇ ಕೆಲಸ ಮಾಡುವಂತ ಸ್ಥಿತಿಯಿದೆ. ಹುದ್ದೆಗಳ ಭರ್ತಿಯು ಸರ್ಕಾರದ ಮಟ್ಟದಲ್ಲಿ ನಡೆಯಬೇಕು. ಸರ್ಕಾರವು ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ನಾಗರಾಜ ಎಚ್., ಉಪ ನಿರ್ದೇಶಕರು, ಪಶುಪಾಲನಾ ಇಲಾಖೆ
–ದತ್ತು ಕಮ್ಮಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕೊಪ್ಪಳ:ಈ ರಸ್ತೆಗಳಲ್ಲಿ ನಿತ್ಯವೂ ನರಕ ದರ್ಶನ-ಜೀವಭಯದಲ್ಲೇ ಸಂಚಾರ
ಕುಷ್ಟಗಿ: ಬಿಳಿ ಜೋಳಕ್ಕೂ ಲಗ್ಗೆಯಿಟ್ಟ ಲದ್ದಿ ಹುಳು
Gangavathi: ಆನೆಗೊಂದಿ ರಾಜವಂಶಸ್ಥ ಎಸ್.ಆರ್.ಕೆ. ರಾಜಬಹಾದ್ದೂರ್ ನಿಧನ
Koppala: ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ ಜೆಸ್ಕಾಂ ಗುತ್ತಿಗೆದಾರ
ಗಂಗಾವತಿ: ಹಳ್ಳದ ಬದಿ ಹೊಸ್ಕೇರಾ-ಡಗ್ಗಿ ದಲಿತರ ಶವ ಸಂಸ್ಕಾರ- ಅಸ್ಪ್ರಶ್ಯತೆ ಇನ್ನೂ ಜೀವಂತ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.