ಎರೆಹುಳು ತೊಟ್ಟಿ ಹಣ ಪಾವತಿ ವಿಳಂಬ
ಸರ್ಕಾರದ ಯೋಜನೆ ಬಗ್ಗೆ ರೈತರು ಆಸಕ್ತಿಯನ್ನೇ ಕಳೆದುಕೊಳ್ಳುವ ಸಾಧ್ಯತೆಯೂ ಇದೆ.
Team Udayavani, May 13, 2022, 6:19 PM IST
ಕೊಪ್ಪಳ: ಜಿಲ್ಲೆಯ ಕೃಷಿ ಇಲಾಖೆಯ ನರೇಗಾ ಯೋಜನೆಯಡಿ ಕಳೆದ 10 ತಿಂಗಳಿಂದ ಎರೆಹುಳು ತೊಟ್ಟಿ ನಿರ್ಮಿಸಿಕೊಂಡಿರುವ ನೂರಾರು ರೈತರಿಗೆ ಈವರೆಗೂ ಸಾಮಗ್ರಿ ವೆಚ್ಚದ ಹಣವೇ ಇನ್ನು ಪಾವತಿಯಾಗಿಲ್ಲ. ಇದರಿಂದ ತೊಟ್ಟಿ ನಿರ್ಮಿಸಿಕೊಂಡ ರೈತರು ನಿತ್ಯವೂ ಇಲಾಖೆಗೆ ಅಲೆದಾಡುವ ಸ್ಥಿತಿ ಬಂದಿದೆ. ಹಣ ಪಾವತಿಗೆ ಒಬ್ಬರ ಮೇಲೊಬ್ಬರು ಕಾರಣ ಹೇಳುತ್ತಿದ್ದು, ಈ ಬಗ್ಗೆ ಯಾರೂ ಗಂಭೀರವಾಗಿ ಪರಿಗಣಿಸುತ್ತಿಲ್ಲ ಎನ್ನುವ ಆಪಾದನೆಯಿದೆ.
ಹೌದು, ಕೇಂದ್ರ ಸರ್ಕಾರವು ಕೃಷಿಯಲ್ಲಿ ರೈತರಿಗೆ ಉತ್ತೇಜನ ನೀಡಲು ಹಾಗೂ ಸಾವಯವ ಕೃಷಿ ಕಡೆ ಹೆಚ್ಚು ಒತ್ತು ನೀಡಬೇಕೆನ್ನುವ ಉದ್ದೇಶದಿಂದ ಎರೆಹುಳು ಮೂಲಕ ತನ್ನ ಜಮೀನಿನಲ್ಲಿಯೇ ಗೊಬ್ಬರ ತಯಾರಿಸಿಕೊಳ್ಳುವ ಎರೆಹುಳು ತೊಟ್ಟಿ ಯೋಜನೆ ಜಾರಿ ತಂದಿದೆ. ತೊಟ್ಟಿ ನಿರ್ಮಾಣಕ್ಕೆ ನರೇಗಾ ಯೋಜನೆಯಡಿ ಹಣ ಪಾವತಿಸಲಾಗುತ್ತದೆ. ಆದರೆ ಈ ವರೆಗೂ ತೊಟ್ಟಿ ನಿರ್ಮಿಸಿಕೊಂಡ ಹಣ ಬಂದಿಲ್ಲ.
ಕಳೆದ ವರ್ಷ ಜುಲೈನಲ್ಲಿ ಜಿಪಂ ಸಿಇಒ ಫೌಜಿಯಾ ತರನ್ನುಮ್ ಅವರು ಎರಹುಳು ತೊಟ್ಟಿಗಳ ನಿರ್ಮಾಣಕ್ಕೆ ಉತ್ತೇಜನ ನೀಡಿದ್ದರು. ಹಾಗಾಗಿ ಜಿಲ್ಲೆಯ ಎಲ್ಲ ತಾಲೂಕಿನಲ್ಲಿ ರೈತಬಂಧು ಎನ್ನುವ ಯೋಜನೆಯಡಿ ರೈತರು ತೊಟ್ಟಿ ನಿರ್ಮಿಸಿಕೊಂಡಿದ್ದಾರೆ. ತೊಟ್ಟಿ ನಿರ್ಮಾಣಕ್ಕೆ ನರೇಗಾದಡಿ ಒಟ್ಟಾರೆ 27 ಸಾವಿರ ರೂ. ಹಣ ಇದೆ. ಇದರಲ್ಲಿ 5,860 ನರೇಗಾ ಮಾನವ ದಿನಗಳ ಸೃಜನೆ ಆಧಾರದ ಮೇಲೆ ಕೂಲಿ ಹಣ ಪಾವತಿ ಮಾಡಲಾಗುತ್ತಿದ್ದರೆ, ಉಳಿದಂತೆ 21 ಸಾವಿರ ರೂ.
ಹಣ ತೊಟ್ಟಿ ನಿರ್ಮಾಣದ ಸಾಮಗ್ರಿ ವೆಚ್ಚಕ್ಕಾಗಿ ಕೊಡಲಾಗುತ್ತದೆ.
ಜಿಲ್ಲೆಯಲ್ಲಿ ಹಲವು ನೂರಾರು ರೈತರು ಆಸಕ್ತಿಯಿಂದಲೇ ಎರೆಹುಳು ತೊಟ್ಟಿ ನಿರ್ಮಿಸಿಕೊಂಡು ಹುಳುಗಳನ್ನು ಜೋಪಾನ ಮಾಡುತ್ತಾ ತ್ಯಾಜ್ಯದಿಂದಲೇ ತಮ್ಮ ಜಮೀನುಗಳಿಗೆ ಗೊಬ್ಬರ ತಯಾರಿಸಿಕೊಳ್ಳುತ್ತಿದ್ದಾರೆ. ತೊಟ್ಟಿಯಲ್ಲಿ ನರೇಗಾ ಕೂಲಿ ಹಣ ಅಲ್ಲಲ್ಲಿ ಪಾವತಿಯಾಗಿದೆ. ಆದರೆ ಸಾಮಗ್ರಿ ವೆಚ್ಚವು ಕಳೆದ 10 ತಿಂಗಳಿಂದಲೂ ಪಾವತಿಯಾಗಿಲ್ಲ. ಕೃಷಿ ಇಲಾಖೆಯಲ್ಲಿ ಕೇಳಿದರೆ ತಾಂತ್ರಿಕ ಸಮಸ್ಯೆ ಎಂದೆನ್ನುವ ಮಾತು ಕೇಳಿ ಬರುತ್ತಿದೆ. ಜಿಪಂನಲ್ಲಿ ಕೇಳಿದರೂ ಅದೇ ರಾಘ ಕೇಳುತ್ತಿದೆ.
ವೆಚ್ಚ ಮಾಡಿದ ರೈತನಿಗೆ ಹಣವಿಲ್ಲ: ಇನ್ನೊಂದು ಮೂಲಗಳ ಪ್ರಕಾರ, ಕೇಂದ್ರ ಸರ್ಕಾರವು ನರೇಗಾ ಯೋಜನೆಯಲ್ಲಿ ಮಾರ್ಪಾಡು ಮಾಡಿದ್ದು, ಹೊಸ ಸಾಪ್ಟವೇರ್ ಜಾರಿ ತಂದಿರುವ ಹಿನ್ನೆಲೆಯಲ್ಲಿ ಇಷ್ಟೆಲ್ಲವು ತೊಂದರೆಯಾಗಿದೆ ಎನ್ನುವ ಮಾತು ಕೇಳಿ ಬಂದಿದೆ. ನರೇಗಾದಡಿ ಸಮುದಾಯಿಕ ಕೂಲಿ ಹಣ ಪಾವತಿಯಾಗುತ್ತೆ, ಆದರೆ ವೈಯಕ್ತಿಕ ಕೆಲಸ ಮಾಡಿಕೊಂಡ ರೈತರಿಗೆ ಹಣ ಪಾವತಿ ವಿಳಂಬವಾಗುತ್ತಿದೆ ಎನ್ನುವ ಮಾತು ಕೇಳಿ ಬರುತ್ತಿವೆ. ಆರಂಭದಲ್ಲಿ ತೊಟ್ಟಿ ನಿರ್ಮಾಣಕ್ಕೆ ವೆಚ್ಚ ಮಾಡಿಕೊಂಡಿರುವ ರೈತರಿಗೆ ಹಣವೇ ಪಾವತಿಯಾಗದಿರುವ ಕಾರಣ ತೊಳಲಾಟ ಶುರುವಾಗಿದೆ. ಸರ್ಕಾರ, ಜಿಪಂ ಈ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಎನ್ನುವ ಆಪಾದನೆ ಕೇಳಿ ಬಂದಿದೆ.
ಜಿಪಂ ಸಿಇಒ ಫೌಜಿಯಾ ತರನ್ನುಮ್ ಅವರೇ ಆಸಕ್ತಿ ವಹಿಸಿ ಯೋಜನೆಗೆ ಉತ್ತೇಜನ ನೀಡಿದ್ದು, ಅವರು ಹಣ ಪಾವತಿ ವಿಳಂಬದ ಬಗ್ಗೆ ಕಾಳಜಿ ವಹಿಸಬೇಕಿದೆ. ಇಲ್ಲದಿದ್ದರೆ ಸರ್ಕಾರದ ಯೋಜನೆ ಬಗ್ಗೆ ರೈತರು ಆಸಕ್ತಿಯನ್ನೇ ಕಳೆದುಕೊಳ್ಳುವ ಸಾಧ್ಯತೆಯೂ ಇದೆ.
ಜಿಲ್ಲೆಯಲ್ಲಿ ಎರೆಹುಳು ತೊಟ್ಟಿ ನಿರ್ಮಾಣ ಮಾಡಿಕೊಂಡ ರೈತರಿಗೆ ಸಾಮಗ್ರಿ ವೆಚ್ಚದ ಹಣ ಬರಲಿದೆ. ಹಣ ಬಾಕಿಯಿರುವುದು ಕೇವಲ ಕೊಪ್ಪಳ ಜಿಲ್ಲೆಯದ್ದು ಅಷ್ಟೇ ಅಲ್ಲ. ರಾಷ್ಟ್ರಾದ್ಯಂತವೂ ಪಾವತಿಯಾಗಿಲ್ಲ. ನಾನು ಸಹ ನರೇಗಾ ಕಮಿಷನರ್ ಜೊತೆ ಮಾತನಾಡಿದ್ದೇನೆ. ಕೇಂದ್ರ ಸರ್ಕಾರವು ನರೇಗಾದಲ್ಲಿ ಹೊಸ ಸಾಫ್ಟವೇರ್ ಜಾರಿ ಮಾಡಿದ ಕಾರಣ ಕೆಲವು ತಾಂತ್ರಿಕ ತೊಂದರೆಯಾಗಿದೆ. ಹಂತ ಹಂತವಾಗಿ ಅದೆಲ್ಲ ಸರಿಯಾಗಲಿದೆ.
ಫೌಜಿಯಾ ತರನ್ನುಮ್, ಜಿಪಂ ಸಿಇಒ
ದತ್ತು ಕಮ್ಮಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kanguva: 10 ಸಾವಿರಕ್ಕೂ ಹೆಚ್ಚಿನ ಸ್ಕ್ರೀನ್‌ನಲ್ಲಿ ಅದ್ಧೂರಿಯಾಗಿ ರಿಲೀಸ್ ಆಗಲಿದೆ ʼಕಂಗುವʼ
Urwa: ಬಾಯ್ದೆರೆದ ಕಾಂಕ್ರೀಟ್ ಚೇಂಬರ್‌ಗಳಿಗೆ ಬಿತ್ತು ಮುಚ್ಚಳ
Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್: ಸಿದ್ದರಾಮಯ್ಯ
Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ
Karkala: ದುರ್ಗಾ ಗ್ರಾಮ ಪಂಚಾಯತ್; ರಸ್ತೆ ಸಂಪೂರ್ಣ ದುರವಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.