2000 ಆಶ್ರಯ ಮನೆಗಳಿಗೆ ಶೀಘ್ರ ಮುಕ್ತಿ
ದಶಕದಿಂದ ನನೆಗುದಿಗೆ ಬಿದ್ದಿರುವ ಮನೆಗಳು
Team Udayavani, May 27, 2022, 4:19 PM IST
ಕೊಪ್ಪಳ: ಜಿಲ್ಲೆಯಲ್ಲಿ ಭಾರಿ ಸದ್ದು ಮಾಡಿದ್ದ ನಗರಸಭೆ ವ್ಯಾಪ್ತಿಯಲ್ಲಿನ ಹಿರೇಸಿಂದೋಗಿ ರಸ್ತೆಯಲ್ಲಿನ 2000 ಸಾವಿರ ಆಶ್ರಯ ಮನೆ ಹಂಚಿಕೆಯ ಪ್ರಕ್ರಿಯೆ ಅಂತೂ ಇಂತು ಕೊನೆಯ ಹಂತಕ್ಕೆ ಬಂದಿದೆ. ದಶಕಗಳಿಂದ ಮನೆಗೆ ಅರ್ಜಿ ಸಲ್ಲಿಸಿದ್ದ ಫಲಾನುಭವಿಗಳಲ್ಲಿ ಕಮರಿ ಹೋಗಿದ್ದ ಆಸೆ ಮತ್ತೆ ಚಿಗುರೊಡೆದಿದೆ.
ಹೌದು. ನಗರಸಭೆ ವ್ಯಾಪ್ತಿಯಲ್ಲಿ ಬಡವರಿಗೆ ಸೂರು ಕಲ್ಪಿಸಬೇಕೆಂದು ಈ ಹಿಂದೆ ಕೊಪ್ಪಳ ಶಾಸಕರಾಗಿದ್ದ ಸಂಗಣ್ಣ ಕರಡಿ ಅವರು ತಾಲೂಕಿನ ಹಿರೇಸಿಂದೋಗಿಯ ರಸ್ತೆಯಲ್ಲಿ 2000 ಆಶ್ರಯ ಮನೆಗಳನ್ನು ನಿರ್ಮಾಣ ಮಾಡಿ ಫಲಾನುಭವಿಗಳ ಹಂಚಿಕೆಗೆ ವ್ಯವಸ್ಥೆ ಮಾಡಿದ್ದರು. ಆದರೆ ರಾಜಕೀಯ ಕಾರಣಕ್ಕೆ, ಸರ್ಕಾರದ ನಿರ್ಲಕ್ಷ್ಯ ಧೋರಣೆಗೆ ದಶಕದಿಂದಲೂ ಫಲಾನುಭವಿಗಳಿಗೆ ಮನೆ, ನಿವೇಶನ ಹಂಚಿಕೆಯ ಆಗಿರಲಿಲ್ಲ. ಈಗ ಹಂಚಿಕೆ ಕೊನೆ ಹಂತ ತಲುಪುತ್ತಿದೆ.
ಈ ಹಿಂದೆ ನಗರದ ನಿವಾಸಿಗಳು ನಮಗೆ ಕಡಿಮೆ ದರದಲ್ಲಿ ಸರ್ಕಾರದಿಂದ ನಿವೇಶನ ಅಥವಾ ಮನೆ ದೊರೆಯಲಿದೆ ಎನ್ನುವ ಕನಸು ಕಟ್ಟಿಕೊಂಡು ಸಾಲ ಸೂಲ ಮಾಡಿ, ದಿನವೂ ದುಡಿದ ಕೂಲಿ ಹಣ ಕೂಡಿಟ್ಟು ನಗರಸಭೆಗೆ ತಮ್ಮ ಪಾಲಿನ ವಂತಿಗೆ ಕಟ್ಟಿದ್ದರು. ಫಲಾನುಭವಿಗಳ ವಂತಿಗೆ ಪಡೆದಿದ್ದ ನಗರಸಭೆಯು ಸಿಂದೋಗಿ ರಸ್ತೆಯಲ್ಲಿ ಜಮೀನು ಖರೀದಿ ಮಾಡಿ ಮನೆ ಹಂಚುವ ಪ್ರಕ್ರಿಯೆ ಆರಂಭಿಸಿತ್ತು.
ಆದರೆ ಆರಂಭದಲ್ಲಿ ಸರ್ಕಾರಕ್ಕೆ ಇದ್ದ ಇಚ್ಚಾಶಕ್ತಿ ಕ್ರಮೇಣ ಕಡಿಮೆಯಾಯಿತು. ಬದಲಾದ ರಾಜಕೀಯ ವಿದ್ಯಮಾನಗಳಲ್ಲಿ ಸರ್ಕಾರ ಸಹ ಆಶ್ರಯ ಮನೆಗಳತ್ತ ಕಾಳಜಿಯನ್ನೇ ಕೊಡದೇ ನಿರ್ಲಕ್ಷ್ಯ ಧೋರಣೆ ತಾಳಿತು. ಆರಂಭದಲ್ಲಿ ಮನೆಗಳ ನಿರ್ಮಾಣಕ್ಕೆ ಸರ್ಕಾರ ಸ್ವಲ್ಪ ಹಣ ಬಿಡುಗಡೆ ಮಾಡಿ ಬಳಿಕ ಅನುದಾನವನ್ನೇ ಕೊಡಲಿಲ್ಲ. ಇದರಿಂದ ನಿರ್ಮಿತಿ ಕೇಂದ್ರ ಸಹ ಸರ್ಕಾರ ಕೊಟ್ಟ ಅನುದಾನದಲ್ಲಿ ಅರೆಬರೆ ಮನೆ ನಿರ್ಮಾಣ ಮಾಡಿ ಕೈ ಚೆಲ್ಲಿತು. ಸರ್ಕಾರ ಅನುದಾನ ಕೊಟ್ಟರೆ ಉಳಿದ ಕಾರ್ಯ ಪೂರೈಸುವ ಭರವಸೆ ನೀಡಿ ಜಾರಿಕೊಂಡಿತು. ಹೀಗಾಗಿ ಫಲಾನುಭವಿಗಳು ಮನೆಗಳು ಸಿಗಲಿವೆ. ನಮಗೊಂದು ಸೂರು ದೊರೆಯಲಿದೆ ಎಂಬ ಕನಸು ಕಂಡಿದ್ದವರಿಗೆ ಭಾರಿ ನಿರಾಶೆ ಮೂಡಿಸಿತು. ಇದರಿಂದ ನೊಂದು ಬೆಂದು ಹೋಗಿದ್ದರು. ಮನೆ ಅಥವಾ ನಿವೇಶನ ಹಂಚಿಕೆ ಮಾಡಿ ಎಂದು ನಗರಸಭೆ, ಜಿಲ್ಲಾಧಿಕಾರಿ ಕಚೇರಿ ಮುಂದೆ ಅರ್ಜಿ ಸಲ್ಲಿಸಿದ ಫಲಾನುಭವಿಗಳು ಹೋರಾಟ ಮಾಡಿಯೂ ಸುಸ್ತಾಗಿದ್ದರು.
ಒಂದೆಡೆ ಫಲಾನುಭವಿಗಳ ಆಯ್ಕೆಯೂ ನಡೆದಿತ್ತು. ಫಲಾನುಭವಿಗಳ ಆಯ್ಕೆ ಸರಿಯಿಲ್ಲ ಎನ್ನುವ ಆಪಾದನೆಯೂ ಕೇಳಿ ಕೋರ್ಟ್ ಹಂತದಲ್ಲಿಯೂ ಕೆಲವೊಂದು ಪ್ರಕರಣ ದಾಖಲಾಗಿ ವರ್ಷಗಳ ಕಾಲ ವಿಚಾರಣೆ ನಡೆಯಿತು. ಮನೆಯ ಕನಸು ಕಂಡಿದ್ದ ಫಲಾನುಭವಿಗಳ ಕನಸೇ ಕಮರಿ ಹೋಗಿತ್ತು. ಏಕೆಂದರೆ ಬರೊಬ್ಬರಿ 10 ವರ್ಷಗಳೇ ಗತಿಸಿದೆ. ಆದರೆ ಇಲ್ಲಿವರೆಗೂ ಮನೆಗಳ ಹಂಚಿಕೆ ಪ್ರಕ್ರಿಯೆ ನಡೆದಿಲ್ಲ.
ಈಗ ನಗರಸಭೆ, ಜಿಲ್ಲಾಡಳಿತ, ನಗರಾಭಿವೃದ್ಧಿ ಕೋಶದ ಸಹಯೋಗದಲ್ಲಿ ಅಧಿಕಾರಿಗಳ ಶ್ರಮ ಹಾಗೂ ಜನಪ್ರತಿನಿಧಿಗಳ ನಿರಂತರ ಪ್ರಯತ್ನದಿಂದ ಪ್ರಸ್ತುತ ಹಿರೇಸಿಂದೋಗಿ ರಸ್ತೆಯಲ್ಲಿ ಸದ್ಯ ಯಾವ ಸ್ಥಿತಿಯಲ್ಲಿ ಮನೆಗಳು ನಿರ್ಮಾಣವಾಗಿವೆಯೋ ಅದೇ ಸ್ಥಿತಿಯಲ್ಲೇ ಹಂಚಿಕೆಯಾಗಿರುವ ಮನೆಗಳ ಹಕ್ಕುಪತ್ರಗಳನ್ನು ಫಲಾನುಭವಿಗಳಿಗೆ ವಿತರಣೆ ಮಾಡಲು ನಗರಾಭಿವೃದ್ಧಿ ಕೋಶವು ನಿರ್ಧರಿಸಿದೆ. ಈ ಹಿಂದೆ ನಗರಸಭೆಯ ಸಾಮಾನ್ಯ ಸಭೆಯಲ್ಲೂ ಇದು ಸದ್ದು ಮಾಡಿ ಮನೆ ಹಂಚಿಕೆಗೆ ಒತ್ತಾಯವೂ ಕೇಳಿ ಬಂದಿದ್ದವು.
ಪ್ರಸ್ತುತ 2000 ಮನೆಗಳ ಜಮೀನನ್ನು ಜಿಲ್ಲಾಡಳಿತವೇ ಕೆಜೆಪಿ ಮಾಡಿ ಸರ್ಕಾರದ ದಾಖಲೆಗಳ ಪ್ರಕಾರ ಲೆಔಟ್ ಸಿದ್ಧಪಡಿಸಿ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಮಾಡಲು ಸಿದ್ಧತೆಯಲ್ಲಿ ತೊಡಗಿದೆ. 2000 ಮನೆಗಳ ಪೈಕಿ ಮೊದಲ ಹಂತದಲ್ಲಿ 1600 ಮನೆ ಅಥವಾ ನಿವೇಶನಗಳ ಹಂಚಿಕೆಗೆ ಯೋಜಿಸಿದೆ. ಇದರಿಂದಾಗಿ ಅರ್ಜಿ ಸಲ್ಲಿಸಿ ಫಲಾನುಭವಿಯಾಗಿ ಆಯ್ಕೆಯಾಗಿರುವ ಜನತೆಗೆ ಎಲ್ಲಿಲ್ಲದ ಖುಷಿ ತರಿಸಿದೆ. ಕೊನೆಗೂ 10 ವರ್ಷಗಳ ಹೋರಾಟದ ಫಲವಾಗಿ ನಮ್ಮ ಕನಸಿನ ಗೂಡು ಕೈ ಸೇರಲಿದೆ ಎನ್ನುವ ಆಸೆ ಚಿಗುರಿದೆ.
ನಗರಸಭೆ ವ್ಯಾಪ್ತಿಯ ಹಿರೇಸಿಂದೋಗಿ ರಸ್ತೆಯಲ್ಲಿನ 2000 ಮನೆಗಳ ಹಕ್ಕುಪತ್ರಗಳ ಹಂಚಿಕೆ ಪ್ರಕ್ರಿಯೆ ಇನ್ನು 15 ದಿನಗಳಲ್ಲೇ ನಡೆಯಲಿದೆ. ಮೊದಲು 1600 ಹಕ್ಕುಪತ್ರ ವಿತರಣೆ ಮಾಡಲಿದ್ದೇವೆ. ಈಗಿರುವ ಸ್ಥಿತಿಯಲ್ಲೇ ಅವುಗಳ ಹಂಚಿಕೆ ನಡೆಯಲಿದೆ. ಕೆಲವೊಂದು ವ್ಯಾಜ್ಯ ಕೋರ್ಟ್ ಹಂತದಲ್ಲಿವೆ. ಜಿಲ್ಲಾಡಳಿತದ ನಿರಂತರ ಪ್ರಯತ್ನದ ಫಲವಾಗಿ ಆಶ್ರಯ ಪ್ಲಾಟಿನ ಎಲ್ಲ ಸಮಸ್ಯೆ ಇತ್ಯರ್ಥವಾಗಿದೆ. ಶೀರ್ಘ ಫಲಾನುಭವಿಗಳ ಕೈಗೆ ಹಕ್ಕುಪತ್ರ ಸೇರಲಿದೆ. ಗಂಗಪ್ಪ, ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ, ಕೊಪ್ಪಳ
-ದತ್ತು ಕಮ್ಮಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
Koppala: ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಿಲ್ಲದು: ಕೂಡಲಸಂಗಮ ಶ್ರೀ
Vijayanagara ಕಾಲುವೆಗೆ ಬಿದ್ದು ಮತ್ತೊಬ್ಬ ಬೈಕ್ ಸವಾರ ಸಾವು
Anjanadri ಬೆಟ್ಟದಲ್ಲಿ ಬೆಳಗಿನ ಜಾವದಿಂದಲೇ ಮಾಲಾಧಾರಿಗಳಿಂದ ಮಾಲೆ ವಿಸರ್ಜನೆ
ಹನುಮಮಾಲಾ ವಿಸರ್ಜನೆ: ಕಿಷ್ಕಿಂಧಾ ಅಂಜನಾದ್ರಿಗೆ ಜಗಮಗಿಸುವ ವಿದ್ಯುತ್ ದೀಪಗಳಿಂದ ಅಲಂಕಾರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.