ರಾಜ್ಯದಲ್ಲಿ ಬೇಡಿಕೆಗೆ ತಕ್ಕಂತೆ ಮರಳು ಸಿಗುತ್ತಿಲ್ಲ: ಪಾಟೀಲ
• ಅಕ್ರಮ ಮರಳು, ಗಣಿಗಾರಿಕೆಯ 25 ಸಾವಿರ ಕೇಸ್ • ತಪ್ಪೆಸಗಿದ ಅಧಿಕಾರಿಗಳಿಗೆ ಅಮಾನತು ಶಿಕ್ಷೆ • ಗ್ರಾನೈಟ್ ಲೀಸ್ ಅರ್ಜಿ ವಿಲೇವಾರಿಗೆ ಕ್ರಮ
Team Udayavani, Jul 6, 2019, 11:46 AM IST
ಕೊಪ್ಪಳ: ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಪ್ರಗತಿ ಪರಿಶೀಲನೆ ಸಭೆಯಲ್ಲಿ ಸಚಿವ ರಾಜಶೇಖರ ಪಾಟೀಲ್ ಮಾತನಾಡಿದರು.
ಕೊಪ್ಪಳ: ರಾಜ್ಯದಲ್ಲಿ ನಮಗೆ ಬೇಡಿಕೆಗೆ ತಕ್ಕಂತೆ ಮರಳು ಸಿಗುತ್ತಿಲ್ಲ. ಸಾಮಾನ್ಯ ಮರಳಿಗಿಂತ ಎಂ. ಸ್ಯಾಂಡ್ ಮರಳು ಹೆಚ್ಚು ಬಳಕೆಯಾಗುತ್ತಿದೆ. ಆದರೆ ನದಿಪಾತ್ರ, ಹಳ್ಳಗಳ ಭಾಗದಲ್ಲಿ ಸಾಮಾನ್ಯ ಮರಳು ದೊರೆಯುತ್ತಿದ್ದು, ಅದೇ ಈಗ ದೊಡ್ಡ ದಂಧೆಯಾಗಿದೆ. ಇದಕ್ಕೆ ಕಡಿವಾಣ ಹಾಕಲು ಮರಳು ನೀತಿಗೆ ಕೆಲವೊಂದು ಮಾರ್ಪಾಡು ಮಾಡಿ ಹೊಸರೂಪ ಕೊಡಲಿದ್ದೇವೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಸಚಿವ ರಾಜಶೇಖರ ಪಾಟೀಲ್ ಅವರು ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದರು. ಕೆಲವೊಂದು ಜಿಲ್ಲೆಗಳಲ್ಲಿ ಮರಳೇ ಇಲ್ಲ. ಅಂತಹ ಜಿಲ್ಲೆಯಲ್ಲಿ ಎಂ. ಸ್ಯಾಂಡ್ ಬಳಕೆಗೆ ನಾವು ಒತ್ತು ನೀಡುತ್ತಿದ್ದೇವೆ. ಮರಳು ಲಭ್ಯ ಇರುವ ಜಿಲ್ಲೆಗಳಲ್ಲಿ ಮಾತ್ರ ಸಾಮಾನ್ಯ ಮರಳು ಬಳಕೆಗೆ ಒತ್ತು ನೀಡಿದ್ದೇವೆ. ಎಂ.ಸ್ಯಾಂಡ್‌ಗಿಂತ ಸಾಮಾನ್ಯ ಮರಳು ಅಕ್ರಮವೇ ರಾಜ್ಯದಲ್ಲಿ ಭಾರಿ ಸದ್ದು ಮಾಡುತ್ತಿದೆ. ಪೊಲೀಸರು, ಮಧ್ಯವರ್ತಿಗಳಿಂದ ಜನತೆಗೆ ಸುಲಭವಾಗಿ ಮರಳು ಸಿಗುತ್ತಿಲ್ಲ. ಹಲವು ಶಾಸಕರು ತಮ್ಮ ಸಮಸ್ಯೆಗಳನ್ನು ನಮ್ಮ ಮುಂದೆ ಪ್ರಸ್ತಾಪ ಮಾಡಿದ್ದಾರೆ. ಮರಳು ನೀತಿಗೆ ನಾವು ಹೊಸ ರೂಪ ಕೊಡಲಿದ್ದೇವೆ ಎಂದರು.
ಜನತೆಗೆ ಕಡಿಮೆ ದರದಲ್ಲಿ ಮರಳು ದೊರೆಯುವಂತಾಗಬೇಕು. ಮರಳು ಸಂಗ್ರಹಣಾ ಘಟಕದಿಂದ ಜನರು ಮರಳು ಪರ್ಮಿಟ್ ಪಡೆದುಕೊಳ್ಳುವ ವ್ಯವಸ್ಥೆಯಾಗಬೇಕು. ಕೆಲವೊಂದು ನಿಯಮಗಳಿಂದ ಅವರಿಗೆ ಸಡಿಲಿಕೆ ನೀಡುವುದು ಸೇರಿದಂತೆ ಅನ್ಯರಾಜ್ಯಗಳ ಮಾದರಿಯಲ್ಲಿ ಮರಳು ನೀತಿಗೆ ಮಾರ್ಪಾಡು ಮಾಡುತ್ತಿದ್ದೇವೆ. ಇನ್ನೊಂದು ಸಭೆ ನಡೆದ ಬಳಿಕ ಅಂತಿಮ ರೂಪ ಸಿಗಲಿದೆ ಎಂದು ಹೇಳಿದರು.
ಜಿಲ್ಲೆಯ ಕುಷ್ಟಗಿ, ಕುಕನೂರು, ಬಾಗಲಕೋಟೆ ಜಿಲ್ಲೆಯ ಇಲಕಲ್ನಲ್ಲಿನ ಗ್ರಾನೈಟ್‌ಗೆ ಉತ್ತಮ ಬೇಡಿಕೆ ಇದೆ. ಗ್ರಾನೈಟ್ ಕ್ವಾರಿಲೀಸ್, ಕ್ರಷರ್‌ಗಳಿಗೆ ಅನುಮತಿ ಹಾಗೂ ನವೀಕರಣಕ್ಕೆ ಸಲ್ಲಿಸಿದ ಅರ್ಜಿಗಳ ವಿಲೇವಾರಿಯಲ್ಲಿ ಸಾಕಷ್ಟು ವಿಳಂಬವಾಗುತ್ತಿದೆ. ಇದಕ್ಕೆ ಕ್ರಮ ಕೈಗೊಳ್ಳಲಾಗುವುದು.
ಬಡವರು ಮನೆ ಕಟ್ಟಿಸಿಕೊಳ್ಳಲು ಸುಲಭವಾಗಿ ಮರಳು ಲಭ್ಯವಾಗುವಂತೆ ಮಾಡಲು ಶೀಘ್ರವೇ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಮರಳು ಪೂರೈಕೆ ಬಗ್ಗೆ ಇಡೀ ರಾಜ್ಯದಲ್ಲಿ ಸಮಸ್ಯೆ ತಲೆದೋರಿದೆ. ಅಕ್ರಮ ಮರಳು ಗಣಿಗಾರಿಕೆ ಮತ್ತು ಸಾಗಾಣಿಕೆ ಸಂಬಂಧ 25 ಸಾವಿರ ಪ್ರಕರಣ ದಾಖಲಿಸಿದ್ದೇವೆ. ವಿವಿಧ ಜಿಲ್ಲೆಗಳಿಗೆ ಭೇಟಿ ನೀಡಿ, ಮರಳು ಸೇರಿದಂತೆ ವಿವಿಧ ಗಣಿಗಾರಿಕೆ ಉದ್ಯಮದಲ್ಲಿ ಇರುವ ಸಮಸ್ಯೆಗಳ ಕುರಿತು ಮಾಹಿತಿ ಪಡೆಯುತ್ತಿದ್ದು, ಮರಳು ಗಣಿಗಾರಿಕೆ ಸುಗಮಗೊಳಿಸಲು ಹಾಗೂ ಜನತೆಗೆ ಆಗುತ್ತಿರುವ ತೊಂದರೆ ತಪ್ಪಿಸಲು ಪ್ರಯತ್ನ ಮಾಡುತ್ತಿದ್ದೇವೆ ಎಂದರು.
ಜಿಲ್ಲೆಯಲ್ಲಿ 133 ಗ್ರಾನೈಟ್, 33 ಕಲ್ಲು ಗಣಿಗಾರಿಕೆಗಳಿವೆ. ಆದರೆ ಉತ್ಪಾದನೆಯಲ್ಲಿ ಕಡಿಮೆ ಇದ್ದು ಹೆಚ್ಚಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಾಗಿದೆ. ಈ ಹಿಂದೆ ಇದ್ದ ರೀತಿ ಅಕ್ರಮ ಕಂಡು ಬಂದಾಗ ದಂಡ ವಿಧಿಸದೇ ಪ್ರಕರಣ ದಾಖಲಿಸಲಾಗುತ್ತದೆ. ಹಾಗಾಗಿ ಪರಿಸರಕ್ಕೆ ಹಾನಿಯಾಗದ ರೀತಿ ಹಾಗೂ ವೈಜ್ಞಾನಿಕವಾಗಿ ಗಣಿಗಾರಿಕೆ ಮಾಡಬೇಕಿದ್ದು, ಈ ಬಗ್ಗೆ ಪರಿಸರ ಇಲಾಖೆಯ ಅಧಿಕಾರಿಗಳು ಮತ್ತು ಬ್ಲಾಸ್ಟಿಂಗ್ ಬಗ್ಗೆ ರಕ್ಷಣಾಧಿಕಾರಿಗಳು ನಿಗಾವಹಿಸಬೇಕು ಎಂದು ಸಚಿವರು ಸೂಚಿಸಿದರು.
ನದಿ, ಹಳ್ಳ, ಖಾಸಗಿ ಪಟ್ಟಾ ಭೂಮಿಗಳಲ್ಲಿ ಮರಳು ಲಭ್ಯವಿದ್ದರೆ ಮರಳು ಗಣಿಗಾರಿಕೆ ಮಾಡಲು ಅನುಮತಿ ನೀಡಲಾಗುತ್ತದೆ. ಜಿಲ್ಲಾಧಿಕಾರಿ ಮೂಲಕ ಎಲ್ಲಾ ನಿಯಮಾವಳಿ ಮತ್ತು ಷರತ್ತುಗಳನ್ನು ಪೂರೈಸಿದರೆ ಈ ಬಗ್ಗೆ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಬೇಕು. ಇದನ್ನು ಅಧಿಕಾರಿಗಳು ಯಾವುದೇ ವಿಳಂಬವಿಲ್ಲದೇ 3-4 ತಿಂಗಳೊಳಗಾಗಿ ಅನುಮತಿ ನೀಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಸಭೆಯಲ್ಲಿ ಶಾಸಕರಾದ ಅಮರೇಗೌಡ ಬಯ್ನಾಪುರ, ಹಾಲಪ್ಪ ಆಚಾರ್, ಪರಣ್ಣ ಮುನವಳ್ಳಿ, ಬಸವರಾಜ ದಢೇಸುಗೂರು, ಎನ್‌ಎಂಡಿಸಿ ನಿರ್ದೇಶಕ ಪ್ರಸನ್ನ ಕುಮಾರ, ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್, ಉಪವಿಭಾಗಾಧಿಕಾರಿ ಸಿ.ಡಿ. ಗೀತಾ, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿ ಎಸ್.ಆರ್. ರಾವಳ ಇತರರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.