ಹೊಗೆ ಪ್ರಮಾಣ ತಪಾಸಣೆ ವಿರಳ
Team Udayavani, Sep 14, 2019, 12:03 PM IST
ಕೊಪ್ಪಳ: ನಗರದ ಆರ್‌ಟಿಒ ಕಚೇರಿ ಬಳಿಯ ವಾಹನ ಮಾಲಿನ್ಯ ತಪಾಸಣಾ ಕೇಂದ್ರದಲ್ಲಿ ಹೊಗೆ ತಪಾಸಣೆ ಮಾಡುತ್ತಿರುವುದು.
ಕೊಪ್ಪಳ: ಕೇಂದ್ರ ಸರ್ಕಾರ ಹೊಸ ಮೋಟಾರು ವಾಹನ ಕಾಯ್ದೆ ಜಾರಿ ಮಾಡಿ ಪ್ರಯಾಣಿಕರಿಗೆ ಭಾರಿ ದಂಡ ಹಾಕುತ್ತಿದೆ. ಜನತೆಗೆ ವಾಹನ ಚಲಾವಣೆಯ ನಿಯಮಗಳೇ ಸರಿಯಾಗಿ ಗೊತ್ತಿಲ್ಲ. ಅದರಲ್ಲೂ ಕೊಪ್ಪಳ ಜಿಲ್ಲೆಯಲ್ಲಿ 2,99,616 ವಾಹನಗಳಿದ್ದು, ಬಹುಪಾಲು ವಾಹನ ಮಾಲೀಕರು ತಮ್ಮ ವಾಹನಗಳ ಮಾಲಿನ್ಯ ತಪಾಸಣೆ ಮಾಡಿಸುವುದೇ ಗೊತ್ತಿಲ್ಲ. ಟೆಸ್ಟಿಂಗ್ ಕೇಂದ್ರಗಳ ಬಗ್ಗೆ ಜಾಗೃತಿಯಿಲ್ಲ. ಆರ್‌ಟಿಒಗಳು ದಂಡ ಹಾಕುತ್ತಿದ್ದಾರೆಯೇ ವಿನಃ ಮಾಲಿನ್ಯ ತಪಾಸಣಾ ಕೇಂದ್ರಕ್ಕೆ ತೆರಳಿ ವಾಹನ ಹೊಗೆ ಉಗುಳುವ ಪ್ರಮಾಣ ತಪಾಸಣೆ ಮಾಡಿಸಿ ಎಂದು ಹೇಳುವುದು ಅಪರೂಪ.
ಹೌದು.. ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡುವ ವಾಹನ ಸವಾರರಿಗೆ ಭಾರಿ ಪ್ರಮಾಣದ ದಂಡ ಹಾಕಲಾಗುತ್ತಿದೆ. ಇದರಿಂದ ಬಹುಪಾಲು ಪ್ರಯಾಣಿಕರು ವಾಹನಗಳಲ್ಲಿ ಸಂಚಾರ ಮಾಡಲು ಹಿಂದೂ, ಮುಂದು ನೋಡುತ್ತಿದ್ದಾರೆ. ಮಾತೆತ್ತಿದರೆ ಪೊಲೀಸರು, ಆರ್‌ಟಿಒಗಳು ದಂಡದ ಮಾತನ್ನಾಡಿ ನಮ್ಮಲ್ಲಿ ಆತಂಕ ಮೂಡಿಸುತ್ತಿದ್ದಾರೆ ಎನ್ನುತ್ತಿದ್ದಾರೆ ಜನತೆ.
ಪ್ರತಿ ವಾಹನ ಸವಾರರಿಗೆ ರಸ್ತೆ ನಿಯಮ, ಸಂಚಾರಿ ನಿಯಮಗಳ ಕುರಿತು ಸರಿಯಾಗಿ ಮಾಹಿತಿಯಿಲ್ಲ. ಇತ್ತ ಇಲಾಖೆಗಳೂ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿಲ್ಲ. ಮೊದಲೆಲ್ಲ ನಿಯಮದ ಬಗ್ಗೆ ಪರಿವೇ ಇಲ್ಲದ ಪ್ರಯಾಣಿಕರು ನಿರ್ಭಯವಾಗಿ ಸಂಚಾರ ನಡೆಸುತ್ತಿದ್ದರು. ಇದಕ್ಕೆ ಆರ್‌ಟಿಒ ಸೇರಿ ಪೊಲೀಸರು ದಂಡ ವಿಧಿಸಿ ಕೈ ತೊಳೆದುಕೊಳ್ಳುತ್ತಿದ್ದರು. ಕೆಲವರಿಗೆ ದಂಡದ ಬಿಸಿ ಮುಟ್ಟಿಸಿ ವಾರ್ಷಿಕ ಗುರಿ ತಲುಪುವಷ್ಟು ದಂಡ ಹಾಕುತ್ತಿದ್ದರು.
ಬಹುತೇಕ ದ್ವಿಚಕ್ರ ವಾಹನ ಸೇರಿದಂತೆ ಲಾರಿ ಮಾಲೀಕರಿಗು ಸಹ ಪ್ರತಿ ಆರು ತಿಂಗಳು, ವರ್ಷಕ್ಕೊಮ್ಮೆ ಮಾಲಿನ್ಯ ಪ್ರಮಾಣ ತಪಾಸಣೆ ಮಾಡಿಸಬೇಕು ಎನ್ನುವ ನಿಯಮವೇ ಗೊತ್ತಿಲ್ಲ. ಪೊಲೀಸರು, ಆರ್‌ಟಿಒ ವಾಹನದ ಮಾಲಿನ್ಯ ತಪಾಸಣೆ ಮಾಡಿಸಿಲ್ಲವೇ ಎಂದು ಪ್ರಶ್ನೆ ಮಾಡಿದಾಗಲಷ್ಟೇ ಜನತೆಗೆ ಅದರ ಪರಿಕಲ್ಪನೆ ಬರುತ್ತಿದೆ.
ಜಿಲ್ಲೆಯಲ್ಲಿ 2,99,616 ವಾಹನ: ಜಿಲ್ಲೆಯಲ್ಲಿ ಕೃಷಿ ಸಂಬಂಧಿತ ಟ್ರ್ಯಾಕ್ಟರ್ 20496, ಆ್ಯಂಬುಲೆನ್ಸ್ 107, ಬಸ್ 1147, ಕಾಮಗಾರಿ ನಿರ್ವಹಣಾ ವಾಹನ-722, ಗೂಡ್ಸ್-10851, ಮ್ಯಾಕ್ಸಿ ಕ್ಯಾಬ್ 1185, ದ್ವಿಚಕ್ರ ವಾಹನ 2,19,058, ಮೊಟರ್ ಕಾರ್-18856, ತ್ರಿಚಕ್ರ ವಾಹನ 5104, ಶಿಕ್ಷಣ ಸಂಸ್ಥೆಗಳ 79 ವಾಹನಗಳು ಸೇರಿದಂತೆ ವಿವಿಧ ಪ್ರಕಾರದ 2,99,616 ವಾಹನಗಳು ಜಿಲ್ಲೆಯಲ್ಲಿವೆ. ಈ ಎಲ್ಲ ವಾಹನಗಳಿಗೆ ಆಯಾ ವಾಹನ ತಯಾರಿಕಾ ವರ್ಷದ ಆಧಾರದಡಿ ಪ್ರತಿ 6 ತಿಂಗಳು ಇಲ್ಲವೇ ಒಂದು ವರ್ಷಕ್ಕೊಮ್ಮೆ ಮಾಲಿನ್ಯ ಪ್ರಮಾಣದ ಬಗ್ಗೆ ನಿಯಮದ ಪ್ರಕಾರ ತಪಾಸಣೆ ಮಾಡಿಸಲೇಬೇಕು. ಆದರೆ ವಾಹನಗಳನ್ನು ಖರೀದಿ ಮಾಡಿದ ಒಂದೆರಡು ವರ್ಷ ಬಿಟ್ಟರೆ ನಂತರದ ವರ್ಷದಲ್ಲಿ ತಪಾಸಣೆ ಮಾಡಿಸುವುದೇ ಅಪರೂಪ ಎನ್ನುವಂತ ಸ್ಥಿತಿ ಜಿಲ್ಲೆಯಲ್ಲಿದೆ.
ನಾಲ್ಕು ತಪಾಸಣಾ ಕೇಂದ್ರ: ಜಿಲ್ಲೆಯಲ್ಲಿ ಸರ್ಕಾರದಿಂದ ಅನುಮತಿ ಪಡೆದ 4 ವಾಹನಗಳ ಮಾಲಿನ್ಯ ತಪಾಸಣಾ ಕೇಂದ್ರ ಕಾರ್ಯ ನಿರ್ವಹಿಸುತ್ತಿವೆ. ಇದರಲ್ಲಿ ಕೆಲವು ಸುಸ್ಥಿತಿಯಲ್ಲಿದ್ದರೆ, ಕೆಲವು ನಿಧಾನಗತಿಯಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಡಿಪ್ಲೋಮಾ ಇನ್ ಕಂಪ್ಯೂಟರ್ ಸೈನ್ಸ್ ಅಥವಾ ತಾಂತ್ರಿಕ ಪರಿಣಿತಿ ಪಡೆದ ವ್ಯಕ್ತಿಗಳು ವಾಹನ ತಪಾಸಣೆ ಮಾಡಲು ಅರ್ಹರು. ಆದರೆ ಕೆಲವರಿಗೆ ವಾಹನದ ಮಾಲಿನ್ಯವನ್ನು ಹೇಗೆ ತಪಾಸಣೆ ಮಾಡಬೇಕೆಂಬುದೇ ಗೊತ್ತಿಲ್ಲ. ಪ್ರಸ್ತುತ ಆರ್‌ಟಿಒ ಕಚೇರಿ ಮುಂಭಾಗದಲ್ಲಿನ ಎಮಿಷನ್ ಟೆಸ್ಟ್ ಸೆಂಟರ್ ಸುಸ್ಥಿತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ.
ತಪಾಸಣಾ ಕೇಂದ್ರದ ಕಾರ್ಯವೇನು?: ವಾಹನ ಮಾಲೀಕ ತನ್ನ ವಾಹನ ಖರೀದಿಯ ಒಂದು ವರ್ಷದ ಬಳಿಕ ವಾಹನ ಎಷ್ಟು ಪ್ರಮಾಣದಲ್ಲಿ ಹೊಗೆ ಹೊರ ಸೂಸುತ್ತಿದೆ. ಅದರಲ್ಲೂ ಪೆಟ್ರೋಲ್ ವಾಹನಗಳಲ್ಲಿ ಹೈಡ್ರೋ ಕಾರ್ಬನ್, ಕಾರ್ಬನ್ ಮೋನಾಕ್ಸೈಡ್ ಹೆಚ್ಚಿನ ಪ್ರಮಾಣ ಹೊರ ಬರುತ್ತಿದೆಯೋ ಅಥವಾ ಡಿಸೇಲ್ ವಾಹನದಲ್ಲಿ ಹೊಗೆ ದಟ್ಟಣೆ ಪ್ರಮಾಣ ಹೆಚ್ಚಿದೆಯೋ ಅಥವಾ ಮಿತ ಪ್ರಮಾಣದಲ್ಲಿ ಹೊಗೆ ಹೊರ ಸೂಸುತ್ತಿದೆಯೋ ಎನ್ನುವುದನ್ನು ಪರೀಕ್ಷೆ ಮಾಡಿಸಲೇಬೇಕು. ವಾಹನದ ಹೊಗೆ ಪರೀಕ್ಷೆ ನಡೆಸಿದಾಗ ಪ್ರಮಾಣ ಪತ್ರದಲ್ಲಿ ದಾಖಲಾಗುವ ಅಂಕಿ-ಅಂಶಗಳ ಆಧಾರದಡಿ ವಾಹನದ ಸ್ಥಿತಿಗತಿ ಹೇಗಿದೆ ಎನ್ನುವುದು ತಿಳಿಯಲು ಸಾಧ್ಯವಿದೆ. ಕೇಂದ್ರಗಳಲ್ಲಿ ಪೆಟ್ರೋಲ್ ದ್ವಿಚಕ್ರ ವಾಹನಕ್ಕೆ ಸರ್ಕಾರ ನಿಗಪಡಿಸಿದ 50 ರೂ., ಕಾರುಗಳಿಗೆ 90 ರೂ, ಬಸ್, ಲಾರಿ ಸೇರಿ ಡಿಸೇಲ್ ಬಳಕೆಯ ವಾಹನಕ್ಕೆ 125 ರೂ. ಹಾಗೂ ಆಟೋ ರಿಕ್ಷಾಗಳಿಗೆ 60 ರೂ. ಪಾವತಿಸಿ ಮಾಲಿನ್ಯ ತಪಾಸಣೆ ಮಾಡಿಸಬಹುದು. ಅವರು ನೀಡುವ ಪ್ರಮಾಣ ಪತ್ರ ಪಡೆದರೆ ಆ ವಾಹನವು ಸಂಚಾರಕ್ಕೆ ಯೋಗ್ಯ ಹಾಗೂ ಹೊಗೆ ಬಿಡುವ ಪ್ರಮಾಣ ಮಿತಿಯಲ್ಲಿದೆ ಎನ್ನುವುದು ತಾಂತ್ರಿಕ ವರದಿಯಿಂದ ತಿಳಿಯಲಿದೆ.
ಪ್ರಮಾಣ ಪತ್ರದಲ್ಲಿ ಈ ಅಂಶಗಳಿರಬೇಕು: ಎಮಿಷನ್ ಕೇಂದ್ರದ ಸಿಬ್ಬಂದಿ ವಾಹನಗಳ ತಪಾಸಣೆ ಮಾಡುವ ಮುನ್ನ ವಾಹನದ ನೋಂದಣಿ ಸಂಖ್ಯೆ, ನೋಂದಣಿಯಾದ ವರ್ಷ, ಯಾವ ಕಂಪನಿಗೆ ಸೇರಿದ ವಾಹನ, ಯಾವ ಮಾದರಿಯ ವಾಹನ ಎನ್ನುವ ಮಾಹಿತಿ ಜೊತೆಗೆ ವಾಹನದ ಫೋಟೋ ಅಪ್‌ಲೋಡ್ ಮಾಡಬೇಕು. ಆಗ ಆನ್‌ಲೈನ್‌ನಲ್ಲಿ ಪರಿಶೀಲನೆ ನಡೆದ ಬಳಿಕ ವಾಹನದ ಹೊಗೆ ಮಾಲಿನ್ಯ ತಪಾಸಣೆಗೆ ಅನುಮತಿ ದೊರೆಯಲಿದೆ. ಇದರಲ್ಲಿ ಪೆಟ್ರೋಲ್ ವಾಹನಗಳಲ್ಲಿ ಬಿಎಸ್-4 ವಾಹನಕ್ಕೆ ಹೈಡ್ರೋ ಕಾರ್ಬನ್ ಪ್ರಮಾಣ 750 ಪಿಪಿಎಂ ಇರಬೇಕು. ಡಿಸೇಲ್ ವಾಹನಗಳಲ್ಲಿ ಬಿಎಸ್-3 ಹಾಗೂ ಅದರ ಕೆಳಗಿನ ವಾಹನಗಳಿಗೆ 65 ಪಿಪಿಎಂ ಮಿತಿ, ಬಿಎಸ್-4 ವಾಹನಕ್ಕೆ 50 ಪಿಪಿಎಂ ಮಿತಿಯೊಳಗೆ ಹೊಗೆ ಇರಬೇಕು. ಇವೆರೆಡು ಮಿತಿಯೊಳಗೆ ವಾಹನದ ಹೊಗೆ ಪ್ರಮಾಣದಲ್ಲಿನ ಅಂಶ ಕಡಿಮೆಯಿದ್ದರೆ ಪ್ರಮಾಣಪತ್ರ ಆನ್‌ಲೈನ್‌ನಲ್ಲಿ ತಕ್ಷಣ ಮಾಲೀಕನ ಕೈ ಸೇರಲಿದೆ. ಮಿತಿ ದಾಟಿದ್ದರೆ ಆ ವಾಹನಕ್ಕೆ ಆನ್‌ಲೈನ್‌ನಲ್ಲಿ ಪ್ರಮಾಣಪತ್ರವೇ ಬರಲ್ಲ. ಇದನ್ನು ಕೇಂದ್ರದ ಸಿಬ್ಬಂದಿಯೇ ವಾಹನ ಮಾಲೀಕರಿಗೆ ಖಚಿತ ಪಡಿಸುತ್ತಾರೆ.
ಪೆಟ್ರೋಲ್ ವಾಹನಗಳೇ ಹೆಚ್ಚಿವೆ: ಜಿಲ್ಲೆಯಲ್ಲಿ ಪೆಟ್ರೋಲ್ ವಾಹನಗಳೇ ಹೆಚ್ಚಿವೆ. ಪೆಟ್ರೋಲ್ ವಾಹನಗಳು ನಗರ, ಗ್ರಾಮೀಣದಲ್ಲಿ ಹೆಚ್ಚು ಸಂಚಾರಿಸುತ್ತವೆ. ಪೊಲೀಸರು, ಆರ್‌ಟಿಒ ಅವರು ಇಂತಹ ವಾಹನಗಳ ತಡೆಯುವುದು ತುಂಬ ಕಡಿಮೆ. ಡಿಸೇಲ್ ವಾಹನಗಳು ದೂರದ ಪ್ರಯಾಣ ಮಾಡುತ್ತವೆ. ಆ ವೇಳೆ ಹೊರ ಭಾಗದ ಆರ್‌ಟಿಒ, ಪೊಲೀಸರು ಮಾಲಿನ್ಯ ಪ್ರಮಾಣ ಪತ್ರ ಕೇಳಿದರೆ ದಂಡ ಬೀಳುತ್ತೆ ಎನ್ನುವ ಕಾರಣಕ್ಕಷ್ಟೇ ವಾಹನ ಮಾಲೀಕರು ಹೊಗೆ ಪ್ರಮಾಣದ ತಪಾಸಣೆ ಮಾಡಿಸುತ್ತಿದ್ದಾರೆ.
2 ಸಾವಿರ ದಂಡ: ವಾಹನ ಮಾಲೀಕರು ಪ್ರತಿ 6 ಹಾಗೂ ವರ್ಷಕ್ಕೊಮ್ಮೆ ವಾಹನಗಳ ತಪಾಸಣೆ ಮಾಡಿಸದಿದ್ದರೆ ಪೊಲೀಸ್ ಸೇರಿ ಆರ್‌ಟಿಒ ಅಧಿಕಾರಿಗಳು ಮೊದಲ ಬಾರಿ ಸಾವಿರ ರೂ. ದಂಡ, 2ನೇ ಬಾರಿಗೆ 1500-2000 ರೂ. ವರೆಗೂ ದಂಡ ಹಾಕಲು ಅಧಿಕಾರವಿದೆ. ಅಚ್ಚರಿಯಂದರೆ ಹೊಗೆ ತಪಾಸಣೆಗೆ 50-100 ರೂ. ಮಿತಿಯಿದೆ. ಆದರೂ ಜನತೆ ಇದರ ಗೋಜಿಗೆ ಹೋಗಲ್ಲ. ಪೊಲೀಸರು ವಾಹನ ತಡೆದು ದಂಡ ಹಾಕಿದಾಗ ಎಚ್ಚೆತ್ತು ಪ್ರಮಾಣ ಪತ್ರಕ್ಕೆ ಓಡಾಡುತ್ತಾರೆ. ಇನ್ನೂ ಹಲವರಿಗೆ ಹೊಗೆ ತಪಾಸಣೆ ಮಾಡಿಸಬೇಕು ಎಂಬುದೇ ಗೊತ್ತಿಲ್ಲ. ಕಳೆದ ತಿಂಗಳು ರೋಹಿತ್ ಎಮಿಷನ್ ಕೇಂದ್ರದಲ್ಲಿ 475 ಪೆಟ್ರೋಲ್ ವಾಹನಗಳಷ್ಟೇ ತಪಾಸಣೆ ಮಾಡಿಸಿಕೊಂಡಿವೆ. ಉಳಿದ ಕೇಂದ್ರಗಳಲ್ಲಿನ ಸ್ಥಿತಿಯೂ ಅಷ್ಟಕ್ಕಷ್ಟೇ ಎನ್ನುತ್ತಿದ್ದಾರೆ ಕೇಂದ್ರದ ಸಿಬ್ಬಂದಿ. ಆದರೆ ಆರ್‌ಟಿಒಗಳು ಪ್ರಮಾಣಪತ್ರ ತಗೆದುಕೊಂಡು ಬನ್ನಿ ಎನ್ನುವ ಬದಲು 2 ಸಾವಿರ ದಂಡ ಹಾಕೋದೇ ಅವರ ಕೆಲಸವಾಗಿದೆ.
ಒಟ್ಟಿನಲ್ಲಿ ಜಿಲ್ಲೆಯ ಜನರಲ್ಲಿ ವಾಹನಗಳ ಮಾಲಿನ್ಯ ತಪಾಸಣೆ ಮಾಡಿಸುವುದೇ ಗೊತ್ತಿಲ್ಲ. ಸರ್ಕಾರಿ ಇಲಾಖೆ ವಾಹನ ಹೊರತುಪಡಿಸಿದರೆ ದೂರದ ಪ್ರದೇಶಕ್ಕೆ ಪ್ರಯಾಣ ಮಾಡುವ ಬೆರಳೆಣಿಕೆ ವಾಹನಗಳ ತಪಾಸಣೆ ನಡೆಯುತ್ತವೆ.
•ದತ್ತು ಕಮ್ಮಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
By Election: ಕೊಪ್ಪಳ ನಗರಸಭೆ ಉಪಚುನಾವಣೆ… ಕಮಲಕ್ಕೊಂದು ಕೈಗೊಂದು ಗೆಲುವು
Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ
Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್
ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Belthangady: ಈ ಪುಟ್ಟ ಪೋರನಿಗಿದೆ 300 ವಿದೇಶಿ ಹಣ್ಣಿನ ಗಿಡ ಪರಿಚಯ!
Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್
26/11 Te*rror Attack: ಕರಾಳ ನೆನಪಿಗೆ 16 ವರ್ಷ-ಆರು ಧೀರ ಹೀರೋಗಳು..ಹುತಾತ್ಮರಿಗೆ ಗೌರವ
Census: ಇರಾಕ್‌ನಲ್ಲಿ 37 ವರ್ಷಗಳ ಬಳಿಕ ಗಣತಿ… 4.54 ಕೋಟಿ ಜನಸಂಖ್ಯೆ
Dharmasthala: ಲಕ್ಷದೀಪಗಳ ಜಗಮಗ; ವಿದ್ಯುತ್ ದೀಪಗಳಿಂದ ಶೃಂಗಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.