Koppala; ಹಿಂಗಾರು ಮಳೆಯೂ ಮಾಯ! ಬಿತ್ತನೆ ಗುರಿ 1.64 ಲಕ್ಷ ಹೆಕ್ಟೇರ್…
Team Udayavani, Nov 6, 2023, 6:24 PM IST
ಕೊಪ್ಪಳ: ಮುಂಗಾರು ಹಂಗಾಮಿನ ಮಳೆಗಳು ಮಾಯವಾದಂತೆ ಈಗ ಮತ್ತೆ ಹಿಂಗಾರು ಮಳೆಗಳೂ ಬಹುಪಾಲು ಮಾಯವಾಗಿವೆ. ಇದರಿಂದ ರೈತರ ಗೋಳು ಹೇಳ ತೀರದಾಗಿದೆ. ಹಿಂಗಾರಿನಲ್ಲಿ 1.64 ಲಕ್ಷ ಹೆಕ್ಟೇರ್ ಬಿತ್ತನೆಯ ಗುರಿ ಪೈಕಿ ಕೇವಲ 60 ಸಾವಿರ ಹೆಕ್ಟೇರ್ ಬಿತ್ತನೆಯಾಗಿದ್ದು, ಬಿತ್ತಿದ ಬೆಳೆಗಳನ್ನು ರಕ್ಷಣೆ ಮಾಡಿಕೊಳ್ಳಲು ರೈತರು ಹರಸಾಹಸ ಮಾಡುವಂತಾಗಿದೆ.
ಹೌದು.. ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲೀ ಭಾರಿ ನಿರೀಕ್ಷೆಯಲ್ಲಿದ್ದ ಅನ್ನದಾತನಿಗೆ ವರುಣದೇವ ಕಣ್ಣೀರು ಇಡುವಂತೆ ಮಾಡಿದ್ದಾನೆ. ಮುಂಗಾರಿನಲ್ಲಿ ಬಿತ್ತನೆ ಮಾಡಿದ್ದ ರೈತರ ಬಹುಪಾಲು ಬೆಳೆಯು ಮಳೆಯಿಲ್ಲದೇ ಹಾನಿಗೊಳಗಾಗಿದೆ. ಸರ್ಕಾರವು ಈಗಾಗಲೇ ಜಿಲ್ಲೆಯ ಎಲ್ಲ ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಣೆ ಮಾಡಿದೆ.
ಮುಂಗಾರು ಮಳೆಗಳು ಕೈ ಕೊಟ್ಟರೂ ನಮಗೆ ಹಿಂಗಾರು ಮಳೆಗಳಾದರೂ ಕೈ ಹಿಡಿಯಲಿವೆ ಎನ್ನುವ ಬಹು ನಿರೀಕ್ಷೆಯಲ್ಲಿಯೇ ಯರೇ ಭಾಗದಲ್ಲಿ ಬಹುಪಾಲು ರೈತರು ಬಿತ್ತನೆಗೆ ಸಿದ್ಧತೆ ಮಾಡಿಕೊಂಡಿದ್ದರು. ಮಳೆಗಾಗಿ ಜಾತಕ ಪಕ್ಷಿಯಂತೆ ಕಾಯುತ್ತಿದ್ದರು. ಆದರೆ ಮುಂಗಾರಿನಂತೆ ಹಿಂಗಾರು ಮಳೆಗಳೂ ಈ ಬಾರಿ ಕೈ ಕೊಟ್ಟಿವೆ.
ಬಿತ್ತನೆ ಮಾಡಲು ಸಿದ್ಧತೆಯಲ್ಲಿದ್ದ ರೈತ ಬಿತ್ತನೆಯನ್ನೂ ಮಾಡದೇ ಕೈ ಬಿಟ್ಟಿದ್ದಾನೆ. ಇನ್ನು ಕೆಲವರು ಮಳೆಯ ನಿರೀಕ್ಷೆಯಲ್ಲಿಯೇ ಬಿತ್ತನೆ ಮಾಡಿ ಬೆಳೆಯ ಉಳಿವಿಗೆ ಹರಸಾಹಸ ಪಡುವ ಸ್ಥಿತಿ ಬಂದೊದಗಿದೆ.
ಹಿಂಗಾರು 1.64 ಲಕ್ಷ ಹೆಕ್ಟೇರ್ ಗುರಿ: ಜಿಲ್ಲೆಯಲ್ಲಿ ಕೃಷಿ ಇಲಾಖೆಯ ಲೆಕ್ಕಾಚಾರದ ಪ್ರಕಾರ, 1.64 ಲಕ್ಷ ಹೆಕ್ಟೇರ್ ಪ್ರದೇಶ ಹಿಂಗಾರು ಬಿತ್ತನೆಯ ಗುರಿಯಿದೆ. ಆದರೆ ಮಳೆಯ ಬಹುಪಾಲು ಕೊರತೆಯಾದ ಹಿನ್ನೆಲೆಯಲ್ಲಿ ಈ ವರೆಗೂ 60 ಸಾವಿರ ಹೆಕ್ಟೇರ್ ಪ್ರದೇಶವು ಬಿತ್ತನೆಯಾಗಿದೆ.
ಬಿತ್ತನೆ ಮಾಡಿದ ರೈತ ಚಿಂತೆ ಮಾಡಿದರೆ, ಬಿತ್ತನೆ ಮಾಡದೇ ಇರುವ ರೈತರು ಹೇಗಪ್ಪಾ ಮಳೆರಾಯ ನಮ್ಮ ಪರಿಸ್ಥಿತಿ ಮುಂದೇನು ಎಂದು ತಲೆಯ ಮೇಲೆ ಕೈಹೊತ್ತು ಕುಳಿತುಕೊಳ್ಳುವಂತಾಗಿದೆ. ಮುಂಗಾರು ಇಲ್ಲದಂತಾಯಿತು, ಈಗ ಹಿಂಗಾರೂ ನಮ್ಮ ಕೈ ಹಿಡಿಯುತ್ತಿಲ್ಲವಲ್ಲ ಎಂದು ದೇವರಲ್ಲಿ ಮೊರೆಯಿಡುವಂತಾಗಿದೆ.
ಶೇ. 94 ಕೊರತೆ: ಜಿಲ್ಲೆಯಲ್ಲಿ ಅಕ್ಟೋಬರ್‌ನಿಂದ ಹಿಂಗಾರು ಬಿತ್ತನೆ ನಡೆಯಲಿದ್ದು, ಸರಿಸುಮಾರು ನವೆಂಬರ್ ಅಂತ್ಯದವರೆಗೂ ಮಳೆಯ ನಿರೀಕ್ಷೆಯಿರುತ್ತವೆ. ಜಿಲ್ಲೆಯಲ್ಲಿ ಅಕ್ಟೋಬರ್ ತಿಂಗಳಲ್ಲಿ 110 ಮಿ.ಮೀ. ವಾಡಿಕೆಯಂತೆ ಮಳೆಯಾಗಬೇಕಿತ್ತು.
ಆದರೆ ಕಳೆದ ತಿಂಗಳು ಕೇವಲ 7 ಮಿ.ಮೀ. ಮಳೆಯಾಗಿ ಶೇ. 94ರಷ್ಟು ಮಳೆಯ ಕೊರತೆ ಎದುರಿಸುತ್ತಿದೆ. ಇನ್ನು ನ. 5ರವರೆಗೂ ವಾಡಿಕೆಯಂತೆ 12 ಮಿ.ಮೀ. ಮಳೆಯಾಗಬೇಕು ಆದರೆ ಸರಿಯಾಗಿ ಮಳೆಯೇ ಆಗಿಲ್ಲ. ಇದರಿಂದ ಮುಂಗಾರಿಗಿಂತ ಈ ಬಾರಿ ಹಿಂಗಾರು ಮಳೆ ತುಂಬಾ ಸಮಸ್ಯೆ ತಂದಿಟ್ಟಿದೆ ಎಂದೆನ್ನುತ್ತಿದೆ ರೈತಾಪಿ ವಲಯ.
ಬೆಳೆ ಉಳಿವಿಗೆ ಸಾಹಸ
ಯರೇ ಭಾಗದಲ್ಲಿ ಮೆಣಸಿನಕಾಯಿ ಹಾಗೂ ಇತರೆ ಬೆಳೆ ಬಿತ್ತನೆ ಮಾಡಿರುವ ರೈತರು ಮಳೆಯ ಕೊರತೆ ಹಿನ್ನೆಲೆಯಲ್ಲಿ ಇರುವ ಬೆಳೆಯನ್ನಾದರೂ ಉಳಿಸಿಕೊಳ್ಳೋಣ. ಬಿತ್ತನೆ ಮಾಡಿದ ಖರ್ಚಾದರೂ ತೆಗೆಯೋಣ ಎಂದು ಟ್ಯಾಂಕರ್‌ಗಳ ಮೂಲಕ, ಕೆರೆಗಳಲ್ಲಿನ ನೀರು ಹೊತ್ತು ತಂದು ಗಿಡಗಳಿಗೆ ಹಾಕಿ ಬೆಳೆ ಉಳಿಸಿಕೊಳ್ಳುತ್ತಿದ್ದಾರೆ. ವರುಣ ದೇವನ ಮುನಿರು ರೈತನ ಕರುಳು ಹಿಂಡುಂತಾಗಿದೆ.
ಮುಂಗಾರು ಮಳೆಯ ಕೊರತೆಯ ಮಧ್ಯೆಯೂ ಹಿಂಗಾರು ಮಳೆಗಳ ನಿರೀಕ್ಷೆಯಲ್ಲಿದ್ದೆವು. ಆದರೆ ಅವೂ ಸಹಿತ ಕೈ ಕೊಟ್ಟಿವೆ. ಬಹುಪಾಲು ನಮ್ಮ ಭಾಗದಲ್ಲಿ ಬಿತ್ತನೆಯೇ ಆಗಿಲ್ಲ. ಒಣ ಭೂಮಿ ಹಾಗೆಯೇ ಇದೆ. ಅಲ್ಲಲ್ಲಿ ಅಲ್ಪಸ್ವಲ್ಪ ಬಿತ್ತನೆ ಮಾಡಿದ ರೈತನು ಆ ಬೆಳೆಯನ್ನು ಟ್ಯಾಂಕರ್ ನೀರು ಹರಿಸಿ ಉಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ಹಿಂಗಾರು ಬರವೂ ನಮ್ಮನ್ನು ಕಾಡುತ್ತಿದೆ.
*ಏಳುಕೋಟೇಶ ಕೋಮಲಾಪುರ, ಬೆಟಗೇರಿ ರೈತ
ಜಿಲ್ಲೆಯಲ್ಲಿ ಹಿಂಗಾರು ಮಳೆಗಳು ನಿರೀಕ್ಷೆಯಿತ್ತು. ಆದರೆ ಈ ವರ್ಷ ಹಿಂಗಾರು ಮಳೆಗಳು ಆಗುತ್ತಿಲ್ಲ. ಬಹುಪಾಲು ಮಳೆಗಳು ಮುಗಿಯುತ್ತಾ ಬಂದಿವೆ. ಕಳೆದ ತಿಂಗಳಂತೂ ಮಳೆಯೇ ಆಗಿಲ್ಲ. ಹಿಂಗಾರು ಬರದ ಸ್ಥಿತಿ ಆವರಿಸುವ ಹಂತವನ್ನೂ ತಲುಪುತ್ತಿದೆ. ಜಿಲ್ಲೆಯಲ್ಲಿ ಹಿಂಗಾರು 1.64 ಲಕ್ಷ ಹೆಕ್ಟೇರ್ ಬಿತ್ತನೆ ಗುರಿಯಿದ್ದು, ಈ ಪೈಕಿ 60 ಸಾವಿರ ಹೆಕ್ಟೇರ್ ಮಾತ್ರ ಬಿತ್ತನೆಯಾಗಿದೆ. ಈ ಬಾರಿ ನಮಗೆ ಹೆಸರು ಹಾಗೂ ಹುಳಿಗಡಲೆ ಇಳುವರಿಗೆ ದೊಡ್ಡ ಹೊಡೆತ ಬಿದ್ದಿದೆ.
*ರುದ್ರೇಶಪ್ಪ, ಜಂಟಿ ಕೃಷಿ ನಿರ್ದೇಶಕ, ಕೊಪ್ಪಳ
*ದತ್ತು ಕಮ್ಮಾರ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.