ಬಹುಗ್ರಾಮ ಯೋಜನೆಗೆ ಹಲವು ವಿಘ್ನ
84 ಹಳ್ಳಿಗಳಿಗೆ ಕೊಟ್ಟಿಲ್ಲ ಕುಡಿಯುವ ನೀರು•ಯೋಜನೆಗೆ ಖರ್ಚಾಗಿದ್ದು 58 ಕೋಟಿ
Team Udayavani, Jun 27, 2019, 2:55 PM IST
ಕೊಪ್ಪಳ: ಮುಂಡರಗಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ನಕ್ಷೆ.
ದತ್ತು ಕಮ್ಮಾರ
ಕೊಪ್ಪಳ: ತಾಲೂಕಿನ ಬಹುನಿರೀಕ್ಷಿತ ರಾಜೀವಗಾಂಧಿ ಸಬ್ ಮಿಷನ್ ಯೋಜನೆಯಡಿ 2008-09ರಲ್ಲಿ ರೂಪಿಸಿದ್ದ 84 ಹಳ್ಳಿಗಳ ಬಹುಗ್ರಾಮ ಕುಡಿವ ನೀರಿನ ಯೋಜನೆಗೆ ಇಲ್ಲಿವರೆಗೂ ಬರೊಬ್ಬರಿ 58 ಕೋಟಿ ರೂ. ಖರ್ಚು ಮಾಡಲಾಗಿದೆ. ಆದರೆ ತಾಲೂಕಿನ ಜನರಿಗೆ ಹನಿ ನೀರು ಕೂಡ ಸಿಗದೇ ಇರುವುದು ದುರಂತ ಎಂದರೂ ತಪ್ಪಾಗಲಾರದು.
ತುಂಗಭದ್ರಾ ಜಲಾಶಯ ಪಕ್ಕದಲ್ಲೇ ಇದ್ದರೂ ತಾಲೂಕಿನ ನೂರಾರು ಹಳ್ಳಿಗಳು ಇಂದಿಗೂ ಕುಡಿಯುವ ನೀರಿಗಾಗಿ ಬಿಕ್ಕುವ ಪರಿಸ್ಥಿತಿಯಿದೆ. ಮಳೆಗಾಲದಲ್ಲಿಯೇ ನೀರಿಗೆ ಎಲ್ಲೆಡೆ ತೊಂದರೆ ಎದುರಿಸುವಂತ ಪರಿಸ್ಥಿತಿ ಇದೆ. ಅಧಿಕಾರಿಗಳ ವೈಜ್ಞಾನಿಕ ಕಾರ್ಯ ವೈಖರಿ, ಗುತ್ತಿಗೆದಾರರ ಲಾಭದ ಲೆಕ್ಕಾಚಾರ, ಸರ್ಕಾರದ ನಿಧಾನಗತಿ ಕೆಲಸಗಳಿಗೆ ಜನರು ಮಾತ್ರ ನೂರೆಂಟು ನರಳಾಟ ಅನುಭವಿಸುವುದು ಇಂದಿಗೂ ತಪ್ಪುತ್ತಿಲ್ಲ.
ಹೌದು. ಇದಕ್ಕೆ ತಾಜಾ ಸಾಕ್ಷಿ ಎಂಬಂತೆ, ತಾಲೂಕಿನ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಅರಿತು 2008-09ನೇ ಸಾಲಿನಲ್ಲಿ ಸರ್ಕಾರ 84 ಹಳ್ಳಿಗಳನ್ನು ಒಳಗೊಂಡ ಮುಂಡರಗಿ ಹಾಗೂ ಇತರೆ ಬಹುಗ್ರಾಮ ಕುಡಿವ ನೀರಿನ ಯೋಜನೆ ರೂಪಿಸಿ ಮೊದಲ ಹಂತದಲ್ಲಿ 46 ಕೋಟಿಗೆ ಕಾಮಗಾರಿ ಆರಂಭಿಸಿತ್ತು. ತುಂಗಭದ್ರಾ ಡ್ಯಾಂನಿಂದ ಹಳ್ಳಿಗಳಿಗೆ ನೀರು ಹರಿಸುವ ಬೃಹತ್ ಯೋಜನೆ ಇದಾಗಿದೆ. ಹಲವೆಡೆ ಕಾಮಗಾರಿ ನಡೆದರೂ ಮುಖ್ಯ ನೀರು ಶೇಖರಣಾ ಸ್ಥಳದಲ್ಲಿಯೇ ಪೈಪ್‌ಗ್ಳು ಒಡೆಯುತ್ತಿರುವುದರಿಂದ ಈಗಲೂ ಜನತೆಗೆ ನೀರು ಕೊಡಲಾಗಿಲ್ಲ. ಮೊದಲ ಹಂತಕ್ಕೆ ಸರ್ಕಾರ 46 ಕೋಟಿ ಅನುದಾನ ಮೀಸಲಿಟ್ಟಿದ್ದರೆ, 2ನೇ ಹಂತಕ್ಕೆ 17 ಕೋಟಿ ರೂ. ಮೀಸಲಿಟ್ಟಿತ್ತು. ಎರಡೂ ಸೇರಿ 58 ಕೋಟಿ ರೂ. ಯೋಜನೆ ಇದಾಗಿದೆ.
ಮೊದಲ ಹಂತದ ಸ್ಥಿತಿ ಏನಾಗಿದೆ?: ಸರ್ಕಾರ ಮೊದಲ ಹಂತದಲ್ಲಿ 47 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಕೆಗೆ ಯೋಜನೆ ಸಿದ್ಧಪಡಿಸಿತ್ತು. ಅದಕ್ಕೆ 2008-09ರಲ್ಲಿ 21 ಕೋಟಿ ರೂ. ಯೋಜನೆ ಸಿದ್ಧವಾಗಿತ್ತು. ಆದರೆ ಕ್ರಮೇಣ ವೆಚ್ಚದ ಮಿತಿಯನ್ನು 46 ಕೋಟಿಗೆ ಹೆಚ್ಚಳ ಮಾಡಲಾಗಿದೆ. 2011, ಮಾ. 1ರಂದು ಕಾಮಗಾರಿ ಆರಂಭಕ್ಕೆ ಅನುಮೋದನೆಯೂ ಸಿಕ್ಕಿದೆ. 18 ತಿಂಗಳಲ್ಲಿ ಕಾಮಗಾರಿ ಪೂರೈಸುವಂತೆ ಸೂಚನೆ ನೀಡಲಾಗಿತ್ತು. ಕಾಮಗಾರಿ ಕೆಲವೆಡೆ ನಡೆದಿದ್ದು, ಮೊದಲ ಹಂತದಲ್ಲಿ 43 ಕೋಟಿ ರೂ. ಈ ಯೋಜನೆಗೆ ಖರ್ಚು ಮಾಡಲಾಗಿದೆ. ಇನ್ನೂ 3 ಕೋಟಿ ಬಿಡುಗಡೆ ಮಾಡುವುದು ಬಾಕಿ ಇದೆ. ಕಾಮಗಾರಿಗೆ ದಿನಾಂಕ ವಿಸ್ತರಿಸಿ 2016ಕ್ಕೆ ಗಡುವು ನೀಡಲಾಗಿತ್ತು. ಮೊದಲ ಹಂತವೇ ಇನ್ನೂ ಪೂರ್ಣಗೊಂಡಿಲ್ಲ.
2ನೇ ಹಂತದ ಸ್ಥಿತಿ ಏನಾಗಿದೆ?: ಇನ್ನೂ ಸರ್ಕಾರ 2ನೇ ಹಂತದಲ್ಲಿ 37 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸಲು ಸರ್ಕಾರ 2008-09ರಲ್ಲಿ ಯೋಜನೆ ರೂಪಿಸಿ 17 ಕೋಟಿ ರೂ.ಗೆ ಒಪ್ಪಿಗೆ ನೀಡಿತ್ತು. 2011ರಲ್ಲಿ 2ನೇ ಹಂತದ ಕಾಮಗಾರಿ ಆರಂಭಕ್ಕೆ ಕಾರ್ಯಾದೇಶ ನೀಡಲಾಗಿದೆ. 2013ರ ಒಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಗಡುವು ನೀಡಲಾಗಿತ್ತು. ಇಲ್ಲಿವರೆಗೂ 2ನೇ ಹಂತಕ್ಕೆ 14 ಕೋಟಿ ರೂ. ವೆಚ್ಚ ಮಾಡಲಾಗಿದೆ. ಆದರೂ ಕಾಮಗಾರಿ ಪೂರ್ಣಗೊಂಡಿಲ್ಲ.
ಯೋಜನೆ ನನೆಗುದಿಗೆ: ಮೊದಲ ಹಾಗೂ ಎರಡನೇ ಹಂತದ ಯೋಜನೆ ಸೇರಿ 84 ಹಳ್ಳಿಗಳಿಗೆ 64 ಕೋಟಿ ರೂ. ವೆಚ್ಚದ ಯೋಜನೆಯಡಿ ಕುಡಿವ ನೀರಿನ ಯೋಜನೆ ಆರಂಭವಾಗಿದೆ. ಆದರೆ ಕಾಮಗಾರಿ ಆರಂಭ ಮಾಡಿ ಬರೊಬ್ಬರಿ 8-9 ವರ್ಷಗತಿಸಿದರೂ ಪೂರ್ಣಗೊಂಡಿಲ್ಲ. ಇಲ್ಲಿ ಅನುದಾನ ನೀರಿನಂತೆ ವ್ಯಯವಾಗಿದೆಯೇ ವಿನಃ ಜನರ ದಾಹ ನೀಗಿಸಲು ಸಾಧ್ಯವಾಗಿಲ್ಲ.
ಯೋಜನೆಗೆ ಏನಾಗಿದೆ ಸಮಸ್ಯೆ?: ಈ ಯೋಜನೆಯಡಿ ತುಂಗಭದ್ರಾ ಡ್ಯಾಂನಿಂದ ನೀರನ್ನು ಕಾಸನಕಂಡಿ ಸಮೀಪ ಗುಡ್ಡದ ಮಾರ್ಗವಾಗಿ 84 ಹಳ್ಳಿಗಳಿಗೆ ನೀರು ಪೂರೈಕೆಗೆ ನೀಲನಕ್ಷೆ ಸಿದ್ದಪಡಿಸಿದೆ. ಆದರೆ ಮುಖ್ಯ ಸಂಪ್‌ನಿಂದ ನೀರು ಪೂರೈಕೆ ಮಾಡಿದಾಕ್ಷಣ ಎಲ್ಲೆಂದರಲ್ಲಿ ಪೈಪ್‌ಗ್ಳು ಒಡೆಯುತ್ತಿದ್ದು ಹಳ್ಳಿಗಳಿಗೆ ನೀರು ಪೂರೈಕೆಯಾಗುತ್ತಿಲ್ಲ. ಇದು ಡಿಸೈನ್ ಫೇಲ್ ಆಗಿದೆ. ನೀಲನಕ್ಷೆ ಮಾಡುವಲ್ಲಿ ಅಧಿಕಾರಿಗಳು, ಕಂಪನಿ ಎಡವಿದೆ ಎಂದು ಸ್ವತಃ ತಾಂತ್ರಿಕ ವರದಿಯೇ ಹೇಳುತ್ತಿದೆ. ಇದಕ್ಕೆ ಹಲವು ಬಾರಿ ಸಭೆಗಳು ನಡೆದರೂ ಯೋಜನೆ ಇನ್ನೂ ತಾರ್ತಿಕ ಅಂತ್ಯ ಕಂಡಿಲ್ಲ.
ಹೊಸ ಡಿಸೈನ್‌ಗೆ ವರದಿ: ಮುಖ್ಯ ಸಂಪ್ ಬಳಿಯೇ ಪೈಪ್‌ಗ್ಳು ನೀರಿನ ರಭಸಕ್ಕೆ ಒಡೆಯುತ್ತಿದ್ದು, ಅಲ್ಲಿನ ಡಿಸೈನ್ ಬದಲಾವಣೆ ಮಾಡುವ ಕುರಿತಂತೆ ಸ್ವತಃ ಬೆಂಗಳೂರಿನ ಇಂಜನಿಯಿರ್ ತಂಡವೇ ಬಂದು ತಪಾಸಣೆ ನಡೆಸಿ ವರದಿ ಮಾಡಿಕೊಂಡು ತೆರಳಿದೆ. ಇಲ್ಲಿನ ಅಧಿಕಾರಿಗಳು ಹೊಸ ಮೂರು ಡಿಸೈನ್ ಕಳಿಸಿದ್ದಾರೆ. ಆದರೆ ರಾಜ್ಯಮಟ್ಟದಲ್ಲಿ ಈ ತೊಂದರೆ ಇನ್ನು ಇತ್ಯರ್ಥವಾಗಿಲ್ಲ. ಈ ಯೋಜನೆಗೆ ಮತ್ತೆ 20 ಕೋಟಿ ರೂ. ಬೇಕು ಎಂದೇಳಲಾಗುತ್ತಿದೆ.
ಸರ್ಕಾರದ ಹಣವನ್ನು ಅಧಿಕಾರಿಗಳು, ಗುತ್ತಿಗೆದಾರರು ಸೇರಿಕೊಂಡು ಮಣ್ಣಲ್ಲಿ ಇಟ್ಟಂತಾಗಿದೆ. ಜನರಿಗೆ ನೀರು ಪೂರೈಸುವ ಕೆಲಸವಂತೂ ನಡೆದಿಲ್ಲ. ಈ ಯೋಜನೆ ವಿಫಲಕ್ಕೆ ಯಾರು ಹೊಣೆ ಎನ್ನುವುದೇ ಯಕ್ಷ ಪ್ರಶ್ನೆಯಾಗಿದೆ. ಯೋಜನೆಗೆ ಹಣ ಖರ್ಚಾಯಿತೇ ವಿನಃ 8 ವರ್ಷದಿಂದ ಹನಿ ನೀರು ಹರಿದಿಲ್ಲ. ಇದೊಂದು ತಾಲೂಕಿನ ಜನರ ದುರ್ದೈವ.
ಸಚಿವರೇ ಇದನ್ನೊಮ್ಮೆ ಗಮನಿಸಿ
8-9 ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಈ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಬಗ್ಗೆ ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣಭೈರೇಗೌಡ ಅವರು ಸ್ವಲ್ಪ ಗಮನಿಸಬೇಕಿದೆ. ಅನುದಾನ ಹೊಳೆಯಂತೆ ಹರಿದರೂ ಹನಿ ನೀರು ಹರದಿಲ್ಲ. ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಈ ಯೋಜನೆಗೆ ಮತ್ತೆ ಜೀವ ಕೊಡಬೇಕು. ಇಲ್ಲವೇ ತಪ್ಪಿತಸ್ಥ ಅಧಿಕಾರಿಗಳು, ಗುತ್ತಿಗೆ ಪಡೆದ ಕಂಪನಿ ಮೇಲೆ ಕ್ರಮಕೈಗೊಳ್ಳಬೇಕು. ಇಲ್ಲವೇ ಹಣ ವಸೂಲಿ ಮಾಡಿ ಜನರ ತೆರಿಗೆ ಹಣಕ್ಕೆ ಕಾವಲಾಗಬೇಕಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಯಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Director Guruprasad: ಗುರುಪ್ರಸಾದ್‌ಗೆ ಸಾಲ ಕೊಟ್ಟವರ ತನಿಖೆಗೆ ಸಿದ್ಧತೆ
Drunk & Drive Case: ಅತಿ ವೇಗದ ಚಾಲನೆ: 522 ಕೇಸ್, 1.29 ಲಕ್ಷ ದಂಡ
Bengaluru: ನಿಲ್ಲದ ಪಟಾಕಿ ಅವಘಡ: ಮತ್ತೆ 10 ಮಂದಿ ಕಣ್ಣಿಗೆ ತೊಂದರೆ
Sandalwood: ಕರಾವಳಿ ಸಂಸ್ಕೃತಿ ಸುತ್ತ ದಿಂಸೋಲ್
Puttur: ವಿದ್ಯುತ್ ಕಂಬ ಏರುವ ತರಬೇತಿ!; ಪವರ್‌ಮನ್ ಉದ್ಯೋಗಕ್ಕೆ ಸ್ಥಳೀಯರಿಗೆ ಪ್ರೋತ್ಸಾಹ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.